ಸಹಜ ಸ್ಥಿತಿಯತ್ತ ಚಿಕ್ಕಮಗಳೂರು

ಚಿಕ್ಕಮಗಳೂರು: ಕಿಡಿಗೇಡಿಗಳು ಶನಿವಾರ ಪ್ರಾರ್ಥನಾ ಮಂದಿರ ಅಪವಿತ್ರಗೊಳಿಸಿದ್ದರ ಪರಿಣಾಮ ಚಿಕ್ಕಮಗಳೂರು ನಗರ ಕೆಲಕಾಲ ಪ್ರಕ್ಷುಬ್ಧಗೊಂಡಿತ್ತು. ಎರಡೂ ಗುಂಪುಗಳು ನಡೆಸುತ್ತಿದ್ದ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದ್ದರಿಂದ ಪರಿಸ್ಥಿತಿ ಹತೋಟಿಗೆ ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಮಧ್ಯಾಹ್ನ 3 ಗಂಟೆ ಬಳಿಕ ಅಂಗಡಿ ಮುಂಗಟ್ಟುಗಳು ತೆರೆದಿದ್ದು, ಪರಿಸ್ಥಿತಿ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ.ಮುಂಜಾ ಗರೂಕತಾ ಕ್ರಮವಾಗಿ ಶನಿವಾರ ಮಧ್ಯಾಹ್ನ 12 ಗಂಟೆಯಿಂದ ಭಾನುವಾರ ಮಧ್ಯ ರಾತ್ರಿಯವರೆಗೂ ತಾಲೂಕಿನಾದ್ಯಂತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಶಾಸಕ ಸಿ.ಟಿ.ರವಿ, ಐಜಿಪಿ ಪ್ರತಾಪ್ ರೆಡ್ಡಿ, ಜಿಲ್ಲಾಧಿಕಾರಿ ಬಿ.ಎಸ್.ಶೇಖರಪ್ಪ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ, ಒಂದು ಗುಂಪಿನವರ ಪ್ರತಿಭಟನೆ ಹಿಂಪಡೆಯುವಂತೆ ಮನವೊಲಿಸಲು ಪ್ರಯತ್ನಿಸಿದರು. ಅಲ್ಲದೆ, ಪರಿಸ್ಥಿತಿ ನಿಯಂತ್ರಣಕ್ಕೆ ವಿಶೇಷ ದಂಡಾಧಿಕಾರಿಯನ್ನು ಸರ್ಕಾರ ನೇಮಕ ಮಾಡಿದೆ.
ಏನಾಗಿತ್ತು?: ನಗರದ ಎಂ.ಜಿ. ರಸ್ತೆಯಲ್ಲಿರುವ ಪ್ರಾರ್ಥನಾ ಮಂದಿರವನ್ನು ಶನಿವಾರ ಬೆಳಗಿನ ಜಾವ ಕಿಡಿಗೇಡಿಗಳು ಅಪವಿತ್ರಗೊಳಿಸಿದ್ದರು. ಈ ವಿಷಯ ಬೆಳಗಾಗುತ್ತಿದ್ದಂತೆ ನಗರದಾದ್ಯಂತ ದಟ್ಟವಾಗಿ ಹರಡಿತು. ಆಗ ಒಂದು ಗುಂಪಿನ ಜನರು ಸಾವಿರಾರು ಸಂಖ್ಯೆಯಲ್ಲಿ ಸ್ಥಳಕ್ಕೆ ಆಗಮಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಪ್ರತಿಭಟನೆ ನಡೆಸಿದರು. ಆಗ ಸ್ಥಳದಲ್ಲಿದ್ದ ಯುವಕರು ಗುಂಪು ಗುಂಪಾಗಿ ನಗರದ ಪ್ರಮುಖ ರಸ್ತೆಗಳಿಗೆ ತೆರಳಿ ಅಂಗಡಿ, ಮುಂಗಟ್ಟುಗಳನ್ನು ಮುಚ್ಚಿಸಿದರು. ಬಾಗಿಲು ಮುಚ್ಚಲು ನಿರಾಕರಿಸಿದವರ ಮೇಲೆ ಹಲ್ಲೆ ನಡೆಸಿದರು. ಇನ್ನು ಕೆಲವು ಅಂಗಡಿಗಳ ಮೇಲೆ ಕಲ್ಲು ತೂರಾಟ ನಡೆಸಿದರು. ಎಂ.ಜಿ. ರಸ್ತೆಯಲ್ಲಿರುವ ಪ್ರಾವಿಜನ್ ಸ್ಟೋರ್ನ ಬಾಗಿಲು ಒಂದು ಸಮುದಾಯದವರು ಮುಚ್ಚಿಸುವ ವೇಳೆಯಲ್ಲಿ ಮತ್ತೊಂದು ಸಮುದಾಯದವರು ಪ್ರವೇಶಿಸಿ ತಡೆಯುವ ಪ್ರಯತ್ನ ಮಾಡಿದರು. ಆಗ ಪರಿಸ್ಥಿತಿ ಬಿಗುವಿನ ಕೂಡಿತ್ತು. ಇದೇ ವೇಳೆಯಲ್ಲಿ ರಸ್ತೆಯ ಉದ್ದಕ್ಕೂ ಟೈರ್ಗಳನ್ನು ಇಟ್ಟು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಹನುಮಂತಪ್ಪ ವೃತ್ತಕ್ಕೆ ಆಗಮಿಸಿದ ಪ್ರತಿಭಟನಾಕಾರರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.
ಮನವೊಲಿಕೆಗೆ ಯತ್ನ: ಹನುಮಂತಪ್ಪ ವೃತ್ತಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳು ಪ್ರತಿಭಟನೆ ಕೈಬಿಡುವಂತೆ ಮತ್ತೆ ಮನವಿ ಮಾಡಿದರು. ಆದರೂ ಸಹ ಪ್ರತಿಭಟನಾಕಾರರು ಹಿಂದೆ ಸರಿಯಲಿಲ್ಲ. ಸಾವಿರಾರು ಸಂಖ್ಯೆಯಲ್ಲಿ ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರಿಂದ ಅವರ ಮನವೊಲಿಸಲು ಅಧಿಕಾರಿಗಳು ಹರಸಾಹಸಪಟ್ಟರು.
ಲಾಠಿ ಪ್ರಹಾರ: ಇಷ್ಟೆಲ್ಲಾ ಆಗೋ ಹೊತ್ತಿಗೆ ಮತ್ತೊಂದು ಗುಂಪಿನವರು ಆಜಾದ್ ಪಾರ್ಕ್ನಿಂದ ಘೋಷಣೆ ಕೂಗುತ್ತಾ ಹನುಮಂತಪ್ಪ ವೃತ್ತದ ಕಡೆಗೆ ಬರುತ್ತಿದ್ದರು. ಈ ಸಮಯದಲ್ಲಿ ಎರಡೂ ಗುಂಪಿನವರು ಮುಖಾಮುಖಿಯಾದರು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಪೊಲೀಸರು ಲಾಠಿ ಬೀಸಿ, ಗುಂಪುಗಳನ್ನು ಚದುರಿಸಿದರು. ಆಗ ಒಂದು ಗುಂಪಿನವರು ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿದ್ದರಿಂದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು. ಲಾಠಿ ಪ್ರಹಾರದ ಬಿಸಿ ತಾಗುತ್ತಿದ್ದಂತೆ ಜನರು ಮನ ಬಂದ ಕಡೆ ಓಡಲಾರಂಭಿಸಿದರು. ಈ ವೇಳೆ ಪ್ರತಿಭಟನಾಕಾರರೊಬ್ಬರಿಗೆ ಗಾಯವಾಗಿದೆ. ಕಲ್ಲು ತೂರಾಟದಲ್ಲಿ ಸರ್ಕಲ್ ಇನ್ಸ್ಪೆಕ್ಟರ್, ಪಿಎಸ್ಐ, ಮಹಿಳಾ ಎಎಸ್ಐ ಹಾಗೂ ಪೇದೆಯೊಬ್ಬರು ಗಾಯಗೊಂಡರು.
ಕೋಮುಗಲಭೆ ಗಮನಕ್ಕೆ ಬಂದಿದ್ದು, ಪರಿಸ್ಥಿತಿ ನಿಯಂತ್ರಿಸಲು ಸೆಕ್ಷನ್ 144 ಜಾರಿ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶಿಸಲಾಗಿದೆ. ದುಷ್ಕರ್ಮಿಗಳಿಂದಾಗಿ ಈ ಘಟನೆ ನಡೆದಿದ್ದು, ಅವರನ್ನು ಮಟ್ಟಹಾಕಲು ಬದ್ಧರಾಗಿದ್ದೇವೆ. ಅಲ್ಲಿಯವರೆಗೆ ಹಿಂದೂ ಮುಸ್ಲಿಮರು ದಯವಿಟ್ಟು ಸಾಮರಸ್ಯದಿಂದ ಇರಬೇಕು.
- ಸಿದ್ದರಾಮಯ್ಯ, ಮುಖ್ಯಮಂತ್ರಿ
ಶಾಂತಿಯನ್ನು ಹಾಳು ಮಾಡುವ ಉದ್ದೇಶದಿಂದ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ. ಈ ಕೃತ್ಯ ಎಸಗಿರುವವರು ಎಷ್ಟೇ ಪ್ರಭಾವಿಗಳಿದ್ದರೂ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಜಿಲ್ಲಾ ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ತಿಳಿಸಿದ್ದೇನೆ.
- ಸಿ.ಟಿ.ರವಿ, ಶಾಸಕ
ಕಿಡಿಗೇಡಿಗಳು ಮಾಡಿರುವ ಕೃತ್ಯಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಲಾಗಿದೆ. ಆದರೆ, ಈವರೆಗೆ ಯಾರನ್ನು ಸಹ ಬಂಧಿಸಿಲ್ಲ. ನಗರದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಎರಡೂ ಕಡೆಯ ದೂರುಗಳ ಬಗ್ಗೆ ತನಿಖೆ ನಡೆಸಲು ತನಿಖಾ ತಂಡವನ್ನು ರಚನೆ ಮಾಡಲಾಗಿದೆ.
- ಪ್ರತಾಪ್ ರೆಡ್ಡಿ, ಪಶ್ಚಿಮ ವಲಯ ಐಜಿಪಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


