ಪ್ರಧಾನ ಸುದ್ದಿ

ಕಡೇ ಕಲಾಪ

ಹಲವು ಆತಂಕ, ಅನಿಶ್ಚಿತ ಸ್ಥಿತಿಗಳ ನಡುವೆ 2013ನೇ ಸಾಲಿನ ಅಧಿವೇಶನ ಸೋಮವಾರದಿಂದ ಆರಂಭವಾಗಲಿದೆ.

ಕಡೇ ಕಲಾಪ
Published On :

ಕನ್ನಡಪ್ರಭ ವಾರ್ತೆ ಬೆಂಗಳೂರು ಫೆ.2
ಹಲವು ಅನುಮಾನ, ಆತಂಕ, ಅನಿಶ್ಚಿತ ಸ್ಥಿತಿಗಳ ನಡುವೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಬಜೆಟ್ ಮಂಡಿಸಲಿದ್ದಾರೆ ಎಂಬ ಭರವಸೆಯೊಂದಿಗೆ 2013ನೇ ಸಾಲಿನ ಅಧಿವೇಶನ ಸೋಮವಾರದಿಂದ ಆರಂಭವಾಗಲಿದೆ.
ವರ್ಷದ ಈ ಮೊದಲ ಅಧಿವೇಶನ ಅಂತೂ ಇಂತು ಅವಧಿ ಪೂರೈಸಲು ಹೆಣಗಾಡುತ್ತಿರುವ ಬಿಜೆಪಿ ಸರ್ಕಾರದ ಪಾಲಿಗೆ ಕೊನೆಯ ಅಧಿವೇಶನವೂ ಹೌದು. ಹೀಗಾಗಿ ರಾಜಕೀಯವಾಗಿ ತೀವ್ರ ಕುತೂಹಲ ಕೆರಳಿಸಿದೆ.
ಸೋಮವಾರ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡಿದ ನಂತರ ನಡೆಯುವ ಕಲಾಪಗಳು ಸರ್ಕಾರದ ಅಳಿವು- ಉಳಿವು ನಿರ್ಧರಿಸುತ್ತದೆ. ಫೆ. 8ರ ಶುಕ್ರವಾರ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ತಮ್ಮ ಮೊಟ್ಟ ಮೊದಲ ಮತ್ತು ಈ ಅವಧಿಯ ಕೊನೆಯ ಬಜೆಟ್ ಮಂಡಿಸಲಿದ್ದಾರೆ.
ಆರಂಭದಲ್ಲೇನೂ ಸಮಸ್ಯೆ ಇಲ್ಲ: ಸೋಮವಾರ ಕಲಾಪ ಆರಂಭಿಸಲು ಯಾವುದೇ ಸಮಸ್ಯೆಯಿಲ್ಲ. ಏಕೆಂದರೆ, ಮೊದಲ ದಿನ ರಾಜ್ಯಪಾಲರು ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಲಿದ್ದು, ಇದಕ್ಕೆ ಯಾರೂ ಅಡ್ಡಿಪಡಿಸುವುದಿಲ್ಲ.
ಏಕೆಂದರೆ, ಕಲಾಪಕ್ಕೆ ಅಡ್ಡಿಪಡಿಸಿದರೆ ಅದು ರಾಜ್ಯಪಾಲರಿಗೆ ಅಗೌರವ ಸೂಚಿಸಿದಂತೆ. ಮೇಲಾಗಿ ಅವರು ಕೇಂದ್ರ ಸರ್ಕಾರದಿಂದ ನೇಮಕಗೊಂಡವರಾಗಿರುವುದರಿಂದ ಕಾಂಗ್ರೆಸ್ ಮೌನವಹಿಸುತ್ತದೆ.                        
ಇನ್ನು ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯುವ ಸಂದರ್ಭದಲ್ಲಿ ಪ್ರತಿಪಕ್ಷಗಳು ಸರ್ಕಾರವನ್ನು ಟೀಕಿಸಬಹುದಾದರೂ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಅಂಗೀಕಾರವಾಗುವವರೆಗೆ ಕಲಾಪ ಮುಂದುವರಿಯಲು ಸಹಕರಿಸುತ್ತವೆ. ಹೀಗಾಗಿ ಮೊದಲ ನಾಲ್ಕು ದಿನದ ಅಧಿವೇಶನ ಸುಸೂತ್ರವಾಗಿ ನಡೆಯಲಿದೆ.
ಕುತೂಹಲ ಕೆರಳಿಸಿದ ಕಾಂಗ್ರೆಸ್ ನಡೆ: ಕೆಜೆಪಿ ಸೇರಿರುವ ಶಾಸಕರ ರಾಜಿನಾಮೆಯಿಂದ ಆಡಳಿತ ಪಕ್ಷದ ಬಲ ಕುಸಿದಿದೆ. ಈ ಅವಕಾಶವನ್ನು ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಯಾವ ರೀತಿ ಬಳಸಿಕೊಳ್ಳುತ್ತದೆ ಎನ್ನುವುದೇ ಸದ್ಯಕ್ಕೆ ಉಳಿದಿರುವ ಕುತೂಹಲ.
ಆದರೆ, ಈಗ ಸ್ಪೀಕರ್ ಕೈಯಲ್ಲಿರುವ ಎರಡು ರಾಜಿನಾಮೆ ಅಂಗೀಕಾರವಾದರೂ ಸರ್ಕಾರದ ಬಹುಮತಕ್ಕೆ ಅಡ್ಡಿಯಾಗುವುದಿಲ್ಲ. ರಾಜಿನಾಮೆ ನೀಡುವ ಶಾಸಕರ ಸಂಖ್ಯೆ 18 ದಾಟದೇ ಇದ್ದರೆ ಸರ್ಕಾರಕ್ಕೆ ಯಾವುದೇ ಅಪಾಯ ಇಲ್ಲ. ಇದನ್ನು ಮನಗಂಡಿರುವ ಕಾಂಗ್ರೆಸ್ ಬಜೆಟ್ ಮಂಡನೆಯ ಕೊನೇ ಕ್ಷಣದವರೆಗೂ ಕಾದು ನೋಡುವ ನಿರ್ಧಾರಕ್ಕೆ ಬಂದಿದೆ.
ಇದರ ಬದಲಾಗಿ ಬಜೆಟ್ ಮಂಡನೆಯಾದ ಮೇಲೆ ಅದರ ಮೇಲಿನ ಚರ್ಚೆಗಿಂತ ಬರ ಪರಿಸ್ಥಿತಿ, ನೀರಿನ ಸಮಸ್ಯೆ, ವಿದ್ಯುತ್ ಸಮಸ್ಯೆ, ನೀರಾವರಿ ಸಮಸ್ಯೆ, ಗ್ರಾಮೀಣ ಸಮಸ್ಯೆಗಳ ಕುರಿತು ಚರ್ಚಿಸಲು ಕಾಂಗ್ರೆಸ್ ಸಿದ್ಧವಾಗಿದೆ. ಅವಿಶ್ವಾಸ ನಿರ್ಣಯ ಮಂಡಿಸುವ ಬಗ್ಗೆ ಇದುವರೆಗೂ ಯೋಚಿಸಿಯೇ ಇಲ್ಲ. ಸರ್ಕಾರ ಅಲ್ಪಮತಕ್ಕೆ ಕುಸಿದರೂ ತಾನಾಗಿಯೇ ವಿಧಾನಸಭೆ ವಿಸರ್ಜಿಸಬೇಕು ಎಂಬುದು ಅದರ ಉದ್ದೇಶ.
ಅದರ ಬದಲಾಗಿ ವಿನಾಕಾರಣ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರಯತ್ನಿಸಿದರೆ ಅದರ ಲಾಭವನ್ನು ಬಿಜೆಪಿ ಬಳಸಿಕೊಳ್ಳಬಹುದು. ಸರ್ಕಾರ ಬಹುಮತ ಹೊಂದಿದ್ದರೂ ವಿನಾಕಾರಣ ಕಿರುಕುಳ ನೀಡಿದೆ ಎಂದು ಕಾಂಗ್ರೆಸ್ ವಿರುದ್ಧ ಆರೋಪ ಮಾಡಬಹುದು. ಚುನಾವಣೆ ಸಮೀಪಿಸುತ್ತಿರುವುದರಿಂದ ಸದ್ಯಕ್ಕೆ ಪಕ್ಷದ ಬಗ್ಗೆ ಯಾವುದೇ ಆರೋಪ, ಟೀಕೆಗಳು ಬಾರದಂತೆ ನೋಡಿಕೊಂಡು ಅದರ ಲಾಭವನ್ನೇ ಪಡೆದುಕೊಳ್ಳಲು ಕಾಂಗ್ರೆಸ್ ಮುಂದಾಗಿದೆ.
ಇನ್ನು ಜೆಡಿಎಸ್ ಕೂಡ ಅಪಾಯ ಮೈಮೇಲೆ ಎಳೆದುಕೊಳ್ಳಲು ಸಿದ್ಧವಿಲ್ಲ. ಅದಕ್ಕೆ ಬಿಜೆಪಿಗಿಂತ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ಮೊದಲ ವೈರಿಯಾಗಿರುವುದರಿಂದ ಅಧಿವೇಶನಕ್ಕೆ ಅಡ್ಡಿಪಡಿಸುವ ಸಾಧ್ಯತೆ ಇಲ್ಲ. ಹೀಗಾಗಿ ನಿರೀಕ್ಷೆಗಳನ್ನೆಲ್ಲಾ ಹುಸಿಗೊಳಿಸಿ ಈ ಸರ್ಕಾರದ ಕೊನೆಯ ಅಧಿವೇಶನವನ್ನು ಯಶಸ್ವಿಯಾಗಿ ನಡೆಸಿ, ಜನಪ್ರಿಯ ಬಜೆಟ್ ಮಂಡಿಸುವುದರತ್ತ ಬಿಜೆಪಿ ಅಂತಿಮ ಹಂತದ ಸಿದ್ಧತೆ ನಡೆಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.