ಯೌವನದಲ್ಲಿ ದಾಸಿ ಮುಪ್ಪಿನಲ್ಲಿ ದೇವದಾಸಿ

ಕನ್ನಡಪ್ರಭ ವಾರ್ತೆ ಬಾಗಲಕೋಟೆ ಫೆ.2
ಸಾಮಾಜಿಕ ಅನಿಷ್ಟಗಳಲ್ಲಿ ಮುಂಚೂಣಿಯಲ್ಲಿರುವ ದೇವದಾಸಿ ಪದ್ಧತಿ ಇನ್ನೂ ಜೀವಂತವಾಗಿದೆ. ಆದರೆ, ಇದರಲ್ಲಿ ಕೊಂಚ ಬದಲಾವಣೆಯಾಗಿದ್ದು ಯೌವ್ವನದಲ್ಲಿ ಮಾರಾಟವಾಗಿ ವೇಶ್ಯಾವಾಟಿಕೆ ಗೃಹ ಸೇರುವ ಯುವತಿಯರಿಗೆ ಮುಪ್ಪಿನಲ್ಲಿ ಮಾತ್ರ ದೇವದಾಸಿ ಪಟ್ಟ ಕಟ್ಟಲಾಗುತ್ತಿದೆ!
ಹೌದು. ಕಾನೂನು ಬಿಗಿಯಾಗಿದ್ದರಿಂದ ಮುತ್ತು ಕಟ್ಟುವ ಕಾರ್ಯ ತಗ್ಗಿದ್ದರೂ ಯುವತಿಯರ ಮಾರಾಟ ಹೆಚ್ಚಳವಾಗಿದೆ. ಯೌವ್ವನದಲ್ಲಿ ದುಷ್ಟರ ಕೈಗೆ ಸಿಕ್ಕು ವೇಶ್ಯಾವಾಟಿಕೆ ದಂಧೆಗೆ ತಳ್ಳಲ್ಪಡುವ ಯುವತಿಯರಿಗೆ 35ರಿಂದ 40 ಮೀರುತ್ತಿದ್ದಂತೆ ಬೇಡಿಕೆ ಕುಗ್ಗುತ್ತದೆ. ವೇಶ್ಯಾವಾಟಿಕೆ ಕೇಂದ್ರಗಳಲ್ಲಿ ಸಲ್ಲದಾದಾಗ ರಾಜ್ಯಕ್ಕೆ ಕರೆ ತಂದು ದೇವದಾಸಿ ಪಟ್ಟ ಕಟ್ಟಿ ಸರ್ಕಾರಿ ಸೌಲಭ್ಯ ಪಡೆಯಲು ಅಣಿ ಮಾಡಲಾಗುತ್ತಿದೆ. ಇದರಲ್ಲಿ ಮಧ್ಯವರ್ತಿಗಳ ಹಾವಳಿ ಕೂಡ ಕೆಲಸ ಮಾಡುತ್ತಿದೆ.
ಹಿಂದೆ ಸವದತ್ತಿಯ ಎಲ್ಲಮ್ಮ, ಚಂದ್ರಗುತ್ತಿಯ ಗುತ್ತೆಮ್ಮ, ಬಳ್ಳಾರಿಯ ಹನುಮಂತ ದೇವರು, ಚಿಂಚಣಿ ಮಾಯಮ್ಮ ಹೀಗೆ ರಾಜ್ಯದ ಪ್ರಮುಖ ದೇವರುಗಳ ಹೆಸರಲ್ಲಿ ದಲಿತ ಯುವತಿಯರಿಗೆ ಮುತ್ತು ಕಟ್ಟಿ ದೇವದಾಸಿಯರನ್ನಾಗಿ ಮಾಡಲಾಗುತ್ತಿತ್ತು. ಆದರೆ, ಈಗ ಯುವತಿಯರಿಗೆ ಮುತ್ತು ಕಟ್ಟುವ ಬದಲು ಮುಂಬೈ, ಪುಣೆ, ಕೋಲ್ಕತಾ, ರಾಜಸ್ಥಾನ ಹಾಗೂ ದೆಹಲಿಗೆ ಮಾರಾಟ ಮಾಡಲಾಗುತ್ತಿದೆ. ಲಕ್ಷ ಲಕ್ಷಕ್ಕೆ ಮಾರಾಟವಾಗಿ, ಕಿಲುಬುಗಾಸಿಗೆ ಮೈ ಸವೆಸುವ ಈ ಯುವತಿಯರು ಸುಮಾರು 35ರ ಹರೆಯದವರೆಗೆ ಮಾರಾಟದ ಸರಕಾಗುತ್ತಾರೆ. ಮೈಯಲ್ಲಿ ಶಕ್ತಿ ಕಮ್ಮಿಯಾಗುತ್ತಿದ್ದಂತೆ ಸರ್ಕಾರಿ ಪಿಂಚಣಿ, ಸೌಲಭ್ಯಕ್ಕಾಗಿ ಹೆಸರು ನೋಂದಾಯಿಸಿಕೊಳ್ಳಲು ಮುಂದಾಗುತ್ತಿದ್ದಾರೆ.
ದೇವದಾಸಿ ಪದ್ಧತಿಗೆ ಪ್ರಚೋದನೆ ನೀಡುವವರಿಗೆ ಕಾನೂನು ಪ್ರಕಾರ 5 ಸಾವಿರ ದಂಡ, 5 ವರ್ಷ ಜೈಲು ಶಿಕ್ಷೆ ಇದೆ. ಆದರೆ, ಅದ್ಯಾವುದೂ ಇಲ್ಲಿ ಜಾರಿಯಾಗುತ್ತಿಲ್ಲ. ಯುವತಿಯರ ಮಾರಾಟ ಜಾಲ ಎಗ್ಗಿಲ್ಲದೆ ಸಾಗಿದೆ. 40 ಪ್ರಾಯದಲ್ಲಿ ಮುತ್ತು ಕಟ್ಟಿಸಿಕೊಂಡವಳು ಇದುವರೆಗೆ ಎಲ್ಲಿದ್ದಳು ಎಂಬ ಮೂಲ ಹುಡುಕುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.
ಬಾಗಲಕೋಟೆ ಜಿಲ್ಲೆಯಲ್ಲೇ ಹೆಚ್ಚು
ರಾಜ್ಯದಲ್ಲಿ 1984ರಲ್ಲಿ ದೇವದಾಸಿ ನಿರ್ಮೂಲನೆ ಕಾನೂನು ಜಾರಿಯಾದ ಬಳಿಕ ನಡೆದ ಸಮೀಕ್ಷೆಯಲ್ಲಿ 22,873 ಇದ್ದ ದೇವದಾಸಿಯರ ಸಂಖ್ಯೆ 2007-08ನೇ ಸಾಲಿನಲ್ಲಿ ಮತ್ತೆ ಸಮೀಕ್ಷೆ ನಡೆಸಿದಾಗ 23,787 ಮಂದಿ ಹೊಸದಾಗಿ ಸೇರ್ಪಡೆಯಾಗಿದ್ದು, ಒಟ್ಟು 46,660 ದೇವದಾಸಿಯರಿದ್ದಾರೆ. ರಾಜ್ಯದಲ್ಲಿಯೇ ಅತಿ ಹೆಚ್ಚು ದೇವದಾಸಿಯರಿರುವುದು ಬಾಗಲಕೋಟೆ ಜಿಲ್ಲೆಯ ಜಮಖಂಡಿ (1692), ಮುಧೋಳ (1389), ಧಾರವಾಡ ಜಿಲ್ಲೆಯ ಕಲಘಟಗಿ (1273) ತಾಲೂಕುಗಳಲ್ಲಿ. ದೇವದಾಸಿ ಪದ್ಧತಿ ನಿರ್ಮೂಲನೆ ಮತ್ತು ಪುನರ್ವಸತಿಗಾಗಿ ಬಾಗಲಕೋಟೆ, ಬಿಜಾಪುರ ಸೇರಿದಂತೆ 10 ಜಿಲ್ಲೆಗಳನ್ನು ಗುರುತಿಸಿದ್ದ ರಾಜ್ಯ ಸರ್ಕಾರ ಈಗ ದಾವಣಗೆರೆ ಸೇರಿದಂತೆ ಹೊಸದಾಗಿ 4 ಜಿಲ್ಲೆಗಳನ್ನು ದೇವದಾಸಿ ಪುನರ್ವಸತಿ ಯೋಜನೆಯಡಿ ಸೇರಿಸಿದೆ. ಸರ್ಕಾರ ಸಮೀಕ್ಷೆ ಎದುರಿಗಿಟ್ಟು ನೋಡಿದರೂ ಈಗಿರುವ ಕಾನೂನು ಪೊಲೀಸ್ ವ್ಯವಸ್ಥೆ, ಜಾಗೃತಿ ಕಾರ್ಯಕ್ರಮಗಳಿಂದ ಈ ಸಂಖ್ಯೆ ಇಳಿಮುಖವಾಗಬೇಕಿತ್ತು. ಆದರೆ, ದ್ವಿಗುಣಗೊಂಡಿದೆ. ಈ ಜಾಲದ ಕಬಂದ ಬಾಹುಗಳನ್ನು ಎದುರಿಸಲಾಗದೇ ಕಾನೂನು ಮತ್ತು ಜಾಗೃತಿ ಅಸ್ತ್ರಗಳು ಶರಣಾಗಿವೆ ಎನ್ನದೇ ವಿಧಿಯಿಲ್ಲ.
-ಮಲ್ಲಿಕಾರ್ಜುನ ಸಿದ್ದಣ್ಣವರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


