ವರ್ಗಕ್ಕೆ ವಿರೋಧ
ಬೆಂಗಳೂರು: ಗ್ರಾಮಾಂತರ ಪ್ರದೇಶದಲ್ಲಿ, ತಾಲೂಕು ಪ್ರದೇಶದಲ್ಲಿರುವ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಉಪನ್ಯಾಸಕರ ವಾರ್ಗಾವಣೆಗೆ ಕ್ರಮ ಕೈಗೊಳ್ಳುವುದು ಬಿಟ್ಟು, ಪದವಿ ಪೂರ್ವ ಶಿಕ್ಷಣ ಇಲಾಖೆ ಹೊಸ ಉಪನ್ಯಾಸಕರಿಗೆ ನಗರ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿಕೊಡುತ್ತಿರುವ ಕ್ರಮಕ್ಕೆ ಬಹುತೇಕ ಉಪನ್ಯಾಸಕರ ವಿರೋಧ ವ್ಯಕ್ತವಾಗಿದೆ.
ಅಲ್ಲದೆ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳು 2007ರ ಕರ್ನಾಟಕ ಸಿವಿಲ್ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಅಧಿನಿಯಮವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳದೆ ವರ್ಗಾವಣೆ ಮಾಡಲು ಮುಂದಾಗಿರುವುದು ಕಾನೂನು ಉಲ್ಲಂಘಿದಂತಾಗಿದೆ ಎಂಬ ದೂರುಗಳು ಸಹ ಉಪನ್ಯಾಸಕರಿಂದ ಕೇಳಿ ಬರುತ್ತಿದೆ. ಪ.ಪೂ. ವರ್ಗಾವಣೆ ಕ್ರಮ ಪ್ರಶ್ನಿಸಿ ಬಹುತೇಕ ಉಪನ್ಯಾಸಕರು ಹೈಕೋರ್ಟ್ ಮೆಟ್ಟಿಲು ಏರಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಹೊಸಬರ ನೇಮಕ: ಪ.ಪೂ. ಇಲಾಖೆ ಕೇಂದ್ರೀಕೃತ ದಾಖಲಾತಿ ಘಟಕದಿಂದ ನೇರ ನೇಮಕಾತಿ ಕೋಟಾದಡಿ 1764 ಉಪನ್ಯಾಸಕರ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಹಾಗೂ ವೃತ್ತಿ ಶಿಕ್ಷಣ ಇಲಾಖೆಯಿಂದ ವಿಲೀನಗೊಳ್ಳಲಿರುವ ಅಭ್ಯರ್ಥಿಗಳಿಗೆ ಪ್ರಾರಂಭಿಕ ನೇಮಕ ಮಾಡಲು ಪದವಿ ಪೂರ್ವ ಶಿಕ್ಷಣ ಇಲಾಖೆ ಮುಂದಾಗಿದೆ.
ಈ ಅಭ್ಯರ್ಥಿಗಳಿಗೆ 'ಸಿ' ವಲಯದಲ್ಲಿ ಅವಕಾಶ ನೀಡಬೇಕಾಗಿರುವುದರಿಂದ ರಾಜ್ಯ ಸಿವಿಲ್ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಅಧಿನಿಯಮ 2007ರ ಪ್ರಕರಣ 3ರಡಿಯಲ್ಲಿ ಹಾಗೂ ತಿದ್ದುಪಡಿ ಅಧಿನಿಯ 2011ರ ಅನ್ವಯ ಸಿ ವಲಯದಲ್ಲಿ ಉಪನ್ಯಾಸಕರ ಹುದ್ದೆಗಳನ್ನು ಸೃಜಿಸುವುದು ಅವಶ್ಯಕವಾಗಿದ್ದು, 'ಸಿ' ಮತ್ತು 'ಬಿ' ವಲಯದಲ್ಲಿ ಕನಿಷ್ಠ ಮೂರು ವರ್ಷ ಕತ್ಯರ್ವ ನಿರ್ವಹಿಸುತ್ತಿರುವ ಉಪನ್ಯಾಸಕರಿಗೆ 'ಬಿ' ಮತ್ತು 'ಎ' ವಲಯದಲ್ಲಿರುವ ಖಾಲಿ ಹುದ್ದೆಗಳಿಗೆ ವರ್ಗಾವಣೆ ಮಾಡಬೇಕಿದೆ ಎಂದು ಪ.ಪೂ. ಇಲಾಖೆ ಆದೇಶ ಹೊರಡಿಸಿದೆ. 2007ರ ಕರ್ನಾಟಕ ರಾಜ್ಯಪತ್ರ 3 ಪ್ರಕಾರ ನಗರ ಗ್ರಾಮೀಣ ಪ್ರದೇಶಗಳಿಗೆ ಶಿಕ್ಷಕರ ಕಡ್ಡಾಯ ನೇಮಕಾತಿ ಎಂದಿದೆ. ಈ ನಿಯಮ ಪ್ರಕಾರ ಯಾವುದೇ ಒಂದು ನಿರ್ದಿಷ್ಟ ವಲಯದಲ್ಲಿ ಪ್ರಾರಂಭಿಕ ನೇಮಕ ಅಥವಾ ವರ್ಗಾವಣೆಗೆ ಯಾವುದೇ ಖಾಲಿ ಹುದ್ದೆ ದೊರೆಯದಿದ್ದರೆ, ಕನಿಷ್ಠ ಸಂಖ್ಯೆ ಸೇವಾ ವರ್ಷಗಳನ್ನು ಪೂರ್ಣಗೊಳಿಸಿದ ಒಬ್ಬ ಶಿಕ್ಷಕನನ್ನು ಮತ್ತೊಂದು ವಲಯಕ್ಕೆ ಆದ್ಯತೆಯ ಕ್ರಮದಲ್ಲಿ 'ಸಿ' ವಲಯದಿಂದ 'ಬಿ' ವಲಯಕ್ಕೆ, 'ಬಿ' ವಲಯದಿಂದ 'ಎ' ವಲಯಕ್ಕೆ ಅಥವಾ 'ಎ' ವಲಯದಿಂದ ಅದೇ ಜೇಷ್ಠತಾ ಘಟಕದೊಳಗಿನ ನಗರ ಪ್ರದೇಶಕ್ಕೆ ವರ್ಗಾವಣೆ ಮಾಡುವ ಮೂಲಕ ಖಾಲಿ ಹುದ್ದೆ ಸೃಜಿಸಲು ಕಾನೂನಿನಲ್ಲಿ ಅವಕಾಶವಿದೆ.
ಆದರೆ, ಇಲಾಖೆಯು ಸರ್ಕಾರದ ವರ್ಗಾವಣೆ ನಿಯಮ ಉಲ್ಲಂಘಿಸಿ ವರ್ಗಾವಣೆಗೆ ಕ್ರಮಕೈಗೊಂಡಿದೆ ಎಂಬುವುದು ಉಪನ್ಯಾಸಕರ ದೂರು.
ಹೀಗಾಗಿ 'ಎ' ವಲಯದಲ್ಲಿ 10 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸುತ್ತಿರುವ ಉಪನ್ಯಾಸಕರಿಗೆ ಬೇರೆ ಪ್ರದೇಶಕ್ಕೆ ಹೋಗಿ ಸೇವೆ ಸಲ್ಲಿಸಲು ಭಾಗ್ಯ ದೊರೆಯುವುದಿಲ್ಲ.
-ದೇವರಾಜ್ ಎಲ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

