ಪ್ರಧಾನ ಸುದ್ದಿ

ಚಾಮುಂಡಿಬೆಟ್ಟ ತಪ್ಪಲ 2000 ಎಕ್ರೆ ಸರ್ಕಾರದ್ದೇ

ಚಾಮುಂಡಿಬೆಟ್ಟ ತಪ್ಪಲ 2000 ಎಕ್ರೆ ಸರ್ಕಾರದ್ದೇ
Published On :

ಬೆಂಗಳೂರು: ಮೈಸೂರು ಚಾಮುಂಡಿಬೆಟ್ಟ ತಪ್ಪಲಿನ 2000 ಎಕರೆ ಜಮೀನು ಸರ್ಕಾರದ್ದು ಎಂದು ಪ್ರಾದೇಶಿಕ ಆಯುಕ್ತರ ವರದಿ ಹೇಳಿದೆ.
ಅಷ್ಟೇ ಅಲ್ಲ, ಇಷ್ಟು ದೊಡ್ಡ ಪ್ರಮಾಣದ ಜಾಗ ಸರ್ಕಾರದ್ದಲ್ಲ, ಖಾಸಗಿಯವರದ್ದು ಎಂದು ದಾಖಲೆ ಮಾಡಲು ಮುಂದಾಗಿದ್ದವರಲ್ಲಿ ಹಿಂದಿನ ಜಿಲ್ಲಾಧಿಕಾರಿ ಸೇರಿದಂತೆ 38 ಐಎಎಸ್ ಮತ್ತು ಕೆಎಎಸ್ ಅಧಿಕಾರಿಗಳು ಭಾಗಿಯಾಗಿದ್ದಾರೆಂದು ತಿಳಿಸಿದೆ.
ರಾಜ್ಯದ ಗಮನ ಸೆಳೆದಿದ್ದ ಈ ವಿವಾದ ಕುರಿತು ತನಿಖೆ ನಡೆಸಿರುವ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತೆ ಜಯಂತಿ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ ಜಿಲ್ಲಾಧಿಕಾರಿಗಳು ಯಾವುದೇ ಸ್ಪಷ್ಟ ಆದೇಶಗಳಿಲ್ಲದೆ ಮೂರು ಗ್ರಾಮಗಳನ್ನು ಗುಂಪಾಗಿಸಲು ಆದೇಶಿಸಿದ್ದು, ಈ ಮೂಲಕ ಅವರು ತಮಗಿಲ್ಲದ ಅಧಿಕಾರ ಚಲಾಯಿಸಿದ್ದಾರೆ. ಅಲ್ಲದೆ, ಇಷ್ಟು ದೊಡ್ಡ ಪ್ರದೇಶವನ್ನು ಸರ್ಕಾರಿ ಜಮೀನು ಅಲ್ಲ ಎಂದು ತೀರ್ಮಾನಿಸಿ ಖಾಸಗಿಯವರಿಗೆ ಖಾತೆ ಮಾಡಲು ನಿರ್ದೇಶಿಸಿರುವುದು ಸರಿಯಲ್ಲ.
ಈ ಜಮೀನಿಗೆ ಸಂಬಂಧಿಸಿದವರ ವಿಚಾರಣೆ ನಡೆಸಿ ನಂತರ ಆದೇಶ ಹೊರಡಿಸಬೇಕಿತ್ತು. ಎಲ್ಲಾ ಜಮೀನು ಬಿ.ಖರಾಬು ಅಲ್ಲ, ಖಾಸಗಿಯವರ ಸ್ವತ್ತು ಎಂದು ತೀರ್ಮಾನಿಸಿರುವುದು ಕಾನೂನು ಬಾಹಿರ ಎಂದೂ ಆಯುಕ್ತರ ವರದಿ ಹೇಳಿದೆ.
ಯಾವ ಡಿಸಿ ಏನು ಮಾಡಿದರು?: ಮೈಸೂರು ತಾಲೂಕು ಕಸಬಾ ಹೋಬಳಿ ಕುರಬಾರಹಳ್ಳಿ ಗ್ರಾಮದ ಸ.ನಂ.4, ಚೌಡಹಳ್ಳಿ ಗ್ರಾಮ ಸ.ನಂ. 39 ಮತ್ತು ಅಲನಹಳ್ಳಿ ಸ.ನಂ.4ರಲ್ಲಿರುವ ಜಮೀನನ್ನು ಸರ್ವೆ ಮಾಡಿಸಿದ್ದ ಹಿಂದಿನ ಡಿಸಿ ಹರ್ಷಗುಪ್ತ ಈ ಜಾಗ ಸರ್ಕಾರಿ ಬಿ ಖರಾಬು ಎಂದು ಆದೇಶಿಸಿದ್ದರು.             
ನಂತರ ಬಂದ ಜಿಲ್ಲಾಧಿಕಾರಿ ವಸ್ತ್ರದ್ ಎ ಖರಾಬು ಜಮೀನಾಗಿ ಪರಿವರ್ತನೆ ಮಾಡಿ ಆದೇಶ ಮಾಡಿದ್ದರು ಎಂದು ಕರ್ನಾಟಕ ಕ್ರಾಂತಿಪಡೆ ಹಾಗೂ ವಿಧಾನಪರಿಷತ್ ಸದಸ್ಯ ಗೋ.ಮಧುಸೂದನ್ ಜಿಲ್ಲಾಧಿಕಾರಿ ವಿರುದ್ಧ ಆರೋಪಿಸಿದ್ದರು. ಅಲ್ಲದೆ, ಜಿಲ್ಲಾಧಿಕಾರಿಗಳ ಈ ಆದೇಶವನ್ನು ಹಿಂಪಡೆಯಬೇಕೆಂದೂ ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಅಂದಿನ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಈ ಬಗ್ಗೆ ಪ್ರಾದೇಶಿಕ ಆಯುಕ್ತರ ತನಿಖೆಗೆ ಆದೇಶಿಸಿದ್ದರು.
ವರದಿಯಲ್ಲಿ ಏನೆಲ್ಲಾ ಇದೆ?: ಹಿಂದಿನ ಜಿಲ್ಲಾಧಿಕಾರಿಗಳು ಕುರಬಾರಹಳ್ಳಿ ಗ್ರಾಮದ ಸ.ನಂ.4, ಚೌಡಹಳ್ಳಿ ಗ್ರಾಮ ಸ.ನಂ. 39 ಮತ್ತು ಅಲನಹಳ್ಳಿ ಸ.ನಂ.41ರಲ್ಲಿರುವ ಜಮೀನುಗಳಲ್ಲಿ ಯಾವುದೇ ಸಾರ್ವಜನಿಕ ರಸ್ತೆ, ಕೆರೆ, ಓಣಿ ಇತ್ಯಾದಿ ಬರುವುದಿಲ್ಲ ಎಂಬ ಅರ್ಥದಲ್ಲಿ ಹೇಳಿದ್ದರು. ಆದರೆ, ದಾಖಲೆಗಳನ್ನು ಪರಿಶೀಲಿಸಿದಾಗ ಇಲ್ಲಿ ಸರ್ಕಾರಿ ಕೆರೆ, ಸಾರ್ವಜನಿಕ ರಸ್ತೆ ಹಾಗೂ ಓಣಿಗಳು ಕಂಡುಬರುತ್ತವೆ. ಅಲ್ಲದೆ, ಆಕಾರ್‌ಬಂದ್‌ನಲ್ಲಿ ಈ ಜಮೀನುಗಳು ಬಿ ಖರಾಬು ಜಮೀನಾಗಿದ್ದು, ಸಾರ್ವಜನಿಕ ಉದ್ದೇಶಕ್ಕೆ ಕಾಯ್ದಿರಿಸಲಾಗಿದೆ ಎಂದು ವರದಿ ತಿಳಿಸಿದೆ.
ಅರ್ಜಿಗಳೇ ನಾಪತ್ತೆ: 2012 ಜೂನ್ 20ರಂದು ಅಂದಿನ ಜಿಲ್ಲಾಧಿಕಾರಿ ನೀಡಿದ್ದ ಆದೇಶದಲ್ಲಿ 12 ವಿಚಾರಣೆ ನೋಟಿಸ್‌ಗಳ ಪೈಕಿ 10ರಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರನ್ನು ಅರ್ಜಿದಾರರು ಎಂದು ನಮೂದಿಸಲಾಗಿತ್ತು.
ಆದರೆ, ಇದೇ ಜಿಲ್ಲಾಧಿಕಾರಿಗಳು ಹೊರಡಿಸಿರುವ ಅಂತಿಮ ಆದೇಶದಲ್ಲಿ ಎಲ್ಲಾ 12 ಪ್ರಕರಣಗಳಲ್ಲೂ ತಹಸೀಲ್ದಾರ್ ಅವರೇ ಅರ್ಜಿದಾರರು ಎಂದು ನಮೂದಿಸಲಾಗಿದೆ.
ವಿಚಿತ್ರವೆಂದರೆ, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅರ್ಜಿದಾರರು ಎಂದು ಸೂಚಿಸಿದ್ದ ಕಡತಗಳಲ್ಲಿ ಒಡೆಯರ್ ಅರ್ಜಿಗಳೇ ನಾಪತ್ತೆಯಾಗಿವೆ ವರದಿಯಲ್ಲಿ ತಿಳಿಸಲಾಗಿದೆ.

-ಶಿವಕುಮಾರ್ ಬೆಳ್ಳಿತಟ್ಟೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.