ಪ್ರಧಾನ ಸುದ್ದಿ

ಸಮ್ಮೇಳನಕ್ಕೆ ಒಒಡಿ ಕಪ್ಪುಚುಕ್ಕೆ

Published On :

ಶಿವಮೊಗ್ಗ: ಬಿಜಾಪುರದಲ್ಲಿ ಮುಕ್ತಾಯವಾದ 79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಪ್ಪುಚುಕ್ಕಿಯಾಗಿದ್ದು ಒಒಡಿಗಾಗಿ ಸರ್ಕಾರಿ ನೌಕರರು ಮಾಡಿದ ಪ್ರತಿಭಟನೆ. ಲಕ್ಷಾಂತರ ಜನರು ಭಾಗವಹಿಸಿದ್ದ ಸಮ್ಮೇಳನದಲ್ಲಿ ಒಒಡಿಗಾಗಿ ಮುಖ್ಯ ವೇದಿಕೆ ಎದುರೇ ಪ್ರತಿಭಟಿಸಿ, ಕಸಾಪ ರಾಜ್ಯಾಧ್ಯಕ್ಷ ಹಾಲಂಬಿ ಅವರನ್ನು ತಳ್ಳಾಡಿ ಸರ್ಕಾರಿ ನೌಕರರು ಸಮ್ಮೇಳನದ ಯಶಸ್ಸಿಗೆ ಮಸಿ ಬಳಿದರು.
ಆದರೆ, ವಾಸ್ತವವೇ ಬೇರೆ. ಸಮ್ಮೇಳನ ಪ್ರತಿನಿಧಿ ಶುಲ್ಕ ಕಟ್ಟದಿದ್ದರೂ, ಬಿಜಾಪುರಕ್ಕೆ ಹೋಗದಿದ್ದರೂ ಒಒಡಿ ಪಡೆದ ಸಾವಿರಾರು ಸರ್ಕಾರಿ ನೌಕರರು ರಾಜ್ಯ ಸರ್ಕಾರವನ್ನು, ಜತೆಗೆ ಸಾಹಿತ್ಯ ಪ್ರೇಮಿಗಳನ್ನು ಅವಮಾನಿಸಿದ್ದಾರೆ. ಹೆಸರು ಬರೆಯದೇ ನೀಡಿದ ಒಒಡಿ ಪತ್ರವನ್ನು ಕಲರ್ ಜೆರಾಕ್ಸ್ ಮಾಡಿಸಿ, ತಮ್ಮ ಹೆಸರು ಬರೆದುಕೊಂಡು ಅದನ್ನೇ ಇಲಾಖೆಗೆ ಸಲ್ಲಿಸಿ ಐದು ದಿನ ಪುಕ್ಕಟೆ ರಜೆ ಅನುಭವಿಸಿದ್ದಾರೆ. ಶಿವಮೊಗ್ಗ ಸೇರಿದಂತೆ ಎಲ್ಲೆಡೆ ಈ ರೀತಿಯ ಪ್ರಕರಣಗಳು ಕಂಡುಬಂದಿದ್ದು, ಅಧಿಕಾರಿಗಳು ಮಾನ ಮರ್ಯಾದೆಗೆ ಅಂಜಿ ಸುಮ್ಮನಿದ್ದಾರೆ. ಹೆಸರು ತಿಳಿಸಲಿಚ್ಛಿಸದ ಅಧಿಕಾರಿಯೊಬ್ಬರು, ಹೇಗೆ ಪ್ರಶ್ನೆ ಮಾಡುವುದು ಏನಾದರೂ ಮಾತನಾಡಿದರೆ ಅವರ ಸಂಘದ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂದು ಅಲವತ್ತುಕೊಳ್ಳುತ್ತಾರೆ.
ಆಗಿದ್ದೇನು?: ನೌಕರರು ಸಮ್ಮೇಳನದಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ರಾಜ್ಯ ಸರ್ಕಾರ ಸಂಬಳ ಸಹಿತ ರಜೆ ಘೋಷಿಸುತ್ತದೆ.           
ಇದಕ್ಕಾಗಿ ನೌಕರರು ತಾವು ಕೆಲಸ ಮಾಡುತ್ತಿರುವ ಇಲಾಖೆಗೆ ಒಒಡಿ ಸಲ್ಲಿಸಬೇಕು. ಇದು ಅವರು ಸಮ್ಮೇಳನದಲ್ಲಿ ಭಾಗವಹಿಸಿದ್ದಕ್ಕಾಗಿ ನೀಡುವ ಹಾಜರಿ ಪತ್ರ. ಮೂರು ದಿನ ಸಮ್ಮೇಳನ, ಎರಡು ದಿನ ಪ್ರಯಾಣ ದಿನ ಸೇರಿ ಒಟ್ಟು ಐದು ದಿನಕ್ಕೆ ಸಂಬಳ ಸಹಿತ ರಜೆ ದೊರೆಯುತ್ತದೆ.
ಬಿಜಾಪುರ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಪ್ರಾಮಾಣಿಕವಾಗಿ 250 ಪ್ರತಿನಿಧಿ ಶುಲ್ಕ ನೀಡಿದವರು 3,500 ಮಂದಿ ಮಾತ್ರ. ಇದು ಎಲ್ಲ ಜಿಲ್ಲೆಗಳಲ್ಲೂ ಆಯಾ ಜಿಲ್ಲಾ ಘಟಕಗಳು ಸ್ಥಳದಲ್ಲೇ ನೋಂದಾಯಿಸಿದ ಪ್ರತಿನಿಧಿಗಳ ಸಂಖ್ಯೆ. ಜತೆಗೆ ಒಂದು ದಿನದ ಸಂಬಳವನ್ನೂ ಸಮ್ಮೇಳನಕ್ಕಾಗಿ ನೀಡಿದ ಬಿಜಾಪುರ ಜಿಲ್ಲೆಯ ಸರ್ಕಾರಿ ನೌಕರರ ಸಂಖ್ಯೆ ಸುಮಾರು 25 ಸಾವಿರ.
ಸಾಮಾನ್ಯವಾಗಿ ಸಮ್ಮೇಳನದ ಕೊನೆಯ ದಿನ ಒಒಡಿ ವಿತರಿಸಲಾಗುತ್ತದೆ. ಆದರೆ, ಬಿಜಾಪುರದಲ್ಲಿ ಸಮ್ಮೇಳನದ ಮೊದಲ ದಿನವೇ ಸರ್ಕಾರಿ ನೌಕರರ ಒತ್ತಡ ತಾಳಲಾದರೇ 25,000 ಒಒಡಿ ವಿತರಿಸಲಾಯಿತು. ಮತ್ತೆ ಪ್ರತಿಭಟಿಸಿದ ನಂತರ ಇನ್ನೂ 25,000 ಒಒಡಿಗಳನ್ನು ಮುದ್ರಿಸಿ ಹಂಚಲಾಯಿತು. ಆದರೂ ಬೇಡಿಕೆ ಸಂಪೂರ್ಣ ಈಡೇರಿಸಲಾಗಲಿಲ್ಲ.
ನೋಂದಾಯಿಸಿದವರು 3,500 ಮಾತ್ರ, ಜತೆಗೆ ಬಿಜಾಪುರ ಜಿಲ್ಲೆಯ ನೌಕರರನ್ನು ಬಿಟ್ಟರೆ ಒಒಡಿ ಪಡೆದ ಇತರರು ಯಾರು ಎಂಬ ಪ್ರಶ್ನೆ ಈಗ ಉದ್ಭವವಾಗಿದೆ.
ಬಹಳಷ್ಟು ನಕಲಿ: ಒಒಡಿಗಳನ್ನು ನಕಲಿ ಮಾಡಲು ಮೂರು ಮಾರ್ಗಗಳನ್ನು ಸರ್ಕಾರಿ ನೌಕರರು ಅನುಸರಿಸಿದ್ದಾರೆ. ಸಮ್ಮೇಳನ ಪ್ರತಿನಿಧಿ ಶುಲ್ಕ ನೀಡಿ, ಸಮ್ಮೇಳನದಲ್ಲಿ ಭಾಗವಹಿಸದೇ ಅಲ್ಲಿಗೆ ಹೋಗುವವರ ಕೈಯಲ್ಲಿ ರಶೀದಿ ನೀಡಿ ಅವರಿಂದ ಒಒಡಿ ತರಿಸಿಕೊಳ್ಳುವವರದ್ದು ಒಂದು ಗುಂಪು. ಇನ್ನು ಪ್ರತಿನಿಧಿ ಶುಲ್ಕ ಕಟ್ಟದೇ ಪ್ರತಿಭಟನೆ ಇತ್ಯಾದಿ ದಬ್ಬಾಳಿಕೆ ಮೇಲೆ ಸಾಹಿತ್ಯ ಪರಿಷತ್ತಿನಿಂದ ಒಒಡಿ ಪಡೆದವರದ್ದು ಎರಡನೇ ಗುಂಪು.
ಆದರೆ, ಮೂರನೇ ಗುಂಪೊಂದು ಖಾಲಿ ಒಒಡಿ ಪತ್ರಗಳನ್ನು ಕಲರ್ ಜೆರಾಕ್ಸ್ ಮಾಡಿಸಿಕೊಂಡು ಇಲಾಖೆಗೆ ಸಲ್ಲಿಸಿದ್ದಾರೆ. ಸಮ್ಮೇಳನಕ್ಕೆ ಹೋಗಿಬಂದವರ ಅನುಭವದಂತೆ ಮೊದಲ ದಿನ 50ಕ್ಕೆ ದೊರೆಯುತ್ತಿದ್ದ ಒಒಡಿ ಕಲರ್ ಜೆರಾಕ್ಸ್, ನಂತರ ಬೇಡಿಕೆ ಹೆಚ್ಚಾಗಿ 300ಕ್ಕೂ ಮಾರಾಟವಾಗಿವೆ. ಪರಿಷತ್ತಿನ ಪ್ರಮುಖರು, ಸಮ್ಮೇಳನ ಆಯೋಜಕರ ಗಮನಕ್ಕೆ ಬಂದರೂ ಏನು ಮಾಡಲಾಗಲಿಲ್ಲ.
ಅಂದಹಾಗೆ ಒಒಡಿಯಲ್ಲಿ ಆಯಾ ನೌಕರರ ಹೆಸರು ಬರೆದು, ಕವರ್‌ನಲ್ಲಿ ಹಾಕಿ, ಸೀಲ್ ಮಾಡಿ ಕೊಟ್ಟಿದ್ದು ಮೂಡಬಿದಿರೆ ಸಮ್ಮೇಳನದಲ್ಲಿ ಮಾತ್ರ. ಇದು ಮುಂಬರುವ ಮಡಿಕೇರಿ ಸಮ್ಮೇಳನದಲ್ಲಾದರೂ ಆಗಲಿ ಎಂಬ ಆಶಯ ಸಾಹಿತ್ಯ ಪ್ರೇಮಿಗಳದ್ದು.

ಏನಿದು ಒಒಡಿ?
'ಆನ್ ಆಫೀಸ್ ಡ್ಯೂಟಿ(ಒಒಡಿ)' ಎಂದರೆ 'ಕಚೇರಿ ಕೆಲಸದ ನಿಮಿತ್ತ ರಜೆ'. ಸಾಹಿತ್ಯ ಸಮ್ಮೇಳನ, ತರಬೇತಿ ಸೇರಿದಂತೆ ಇತರೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ತೆರಳುವ ನೌಕಕರಿಗೆ ಸಂಬಳ ಸಹಿತ ರಜೆ ನೀಡುವ ಸೌಲಭ್ಯ ಒದಗಿಸುತ್ತದೆ. ಇದಕ್ಕಾಗಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಗ್ಗೆ ಹಾಜರಾತಿ ಪತ್ರ ಸಲ್ಲಿಸಬೇಕು.

- ಹೊನ್ನಾಳಿ ಚಂದ್ರಶೇಖರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.