ಪ್ರಧಾನ ಸುದ್ದಿ

ಎಸ್‌ಟಿಎಫ್ ಶೆಡ್‌ನಲ್ಲಿ ಕನ್ನಡ ಶಾಲೆ

ಎಸ್‌ಟಿಎಫ್ ಶೆಡ್‌ನಲ್ಲಿ ಕನ್ನಡ ಶಾಲೆ
Published On :

ಬೆಂಗಳೂರು: ಕಾಡುಗಳ್ಳ ವೀರಪ್ಪನ್ ವಿರುದ್ಧದ ಕಾರ್ಯಾಚರಣೆ ವೇಳೆ ರಾಜ್ಯದ ವಿಶೇಷ ಪಡೆ ಪೊಲೀಸರು ನಿರ್ಮಿಸಿಕೊಂಡಿದ್ದ ಶೆಡ್ ಇದೀಗ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ!
ಮಕ್ಕಳ ಸಂಖ್ಯೆ 10ಕ್ಕಿಂತ ಕಡಿಮೆ ಇರುವ ಶಾಲೆಗಳನ್ನು ಮುಚ್ಚಲಾಗುತ್ತದೆ ಎಂದು ಸರ್ಕಾರ ಹೇಳುತ್ತದೆ. ಆದರೆ, ಕೊಳ್ಳೇಗಾಲದ ಪಾಲಾರ್‌ನಲ್ಲಿರುವ ಈ ಶಾಲೆಯಲ್ಲಿ ಬುಡಕಟ್ಟು ಜನಾಂಗದ 61 ಮಕ್ಕಳು ಓದುತ್ತಿದ್ದರೂ ಕಟ್ಟಡವೇ ಇಲ್ಲ.
ಕರ್ನಾಟಕ-ತಮಿಳುನಾಡಿನ ಗಡಿಭಾಗದ ಕೊನೆಯ ಗುರುತಿನಂತಿರುವ ಈ ಶಾಲೆಯ ಶೆಡ್ ರಾಜ್ಯದ ಮರ್ಯಾದೆ ಹರಾಜು ಹಾಕುವಂತಿದೆ.
ಕಳೆದ 3 ಶೈಕ್ಷಣಿಕ ವರ್ಷದಿಂದ ಈ ಶೆಡ್‌ನಲ್ಲಿ ಶಾಲೆ ನಡೆಯುತ್ತಿದೆ. ಅರಣ್ಯ ಇಲಾಖೆಯ ಕಿರಿಕ್ ಹಾಗೂ ಶಿಕ್ಷಣ ಇಲಾಖೆಯ ಬೇಜವಾಬ್ದಾರಿಯಿಂದ ಕಾಡಿನಲ್ಲಿನ ಸೋಲಿಗ ಮಕ್ಕಳು ಇಲ್ಲಿ 'ನಲಿ ಕಲಿ'ಯುತ್ತಿದ್ದಾರೆ. ಜೋರಾಗಿ ಗಾಳಿ ಬೀಸಿದರೆ ಶಾಲೆಯೇ ಕಿತ್ತು ಹೋಗುತ್ತದೆ.           
ಮಳೆಗಾಲದಲ್ಲಂತೂ ಶಾಲೆಯನ್ನು ನಡೆಸಲು ಸಾಧ್ಯವೇ ಇಲ್ಲ.
ಇನ್ನು ಈ 61 ಮಕ್ಕಳಿಗೆ ಕೇವಲ ಒಬ್ಬ ಶಿಕ್ಷಕರು. ಆ ಶಾಲೆಗೆ ಇವರೇ ಮುಖ್ಯೋಪಾಧ್ಯಾಯ, ಗುಮಾಸ್ತ, ಸಹಾಯಕ ಹಾಗೂ ಜವಾನ, ಎಲ್ಲವೂ. ಇರುವ ಒಬ್ಬ ಶಿಕ್ಷಕ ರಜೆ ಹಾಕಿದರೆ ಅಂದು ಶಾಲೆಗೂ ಬಿಡುವು. ಒಟ್ಟಿನಲ್ಲಿ ಬುಡಕಟ್ಟು ಪ್ರದೇಶದಲ್ಲೂ ಶಾಲೆ ಪ್ರಾರಂಭಿಸಿದ್ದೇವೆ ಎಂದು ಬಡಾಯಿ ಕೊಚ್ಚಿಕೊಳ್ಳಲು ಶಿಕ್ಷಣ ಇಲಾಖೆ, ಪಾಲಾರ್‌ನಲ್ಲಿ ಕಿರಿಯ ಪ್ರಾಥಮಿಕ ಶಾಲೆಯ ನಾಮಫಲಕ ಹಾಕಿದಂತಿದೆ.

ಸೂರಿಲ್ಲದ ಎರಡನೇ ಕಟ್ಟಡವಿದು: ಸ್ಥಳೀಯ ಸೇವಾ ಸಂಸ್ಥೆಗಳ ಒತ್ತಡಕ್ಕೆ ಮಣಿದು 2010ರ ಜುಲೈ 7ರಂದು ಸರ್ಕಾರ ಪಾಲಾರ್‌ನಲ್ಲಿ ಕಿರಿಯ ಪ್ರಾಥಮಿಕ ಶಾಲೆ ಪ್ರಾರಂಭಿಸಿತು. ಗೋಡೆಯೇ ಇಲ್ಲದ ಹುಲ್ಲಿನ ಗುಡಿಸಲಿನಲ್ಲಿ ಶಾಲೆಯ ಪ್ರಾರಂಭೋತ್ಸವವಾಯಿತು. ಒಂದು ಮಳೆಗಾಲವನ್ನು ಸಹ ಅಲ್ಲಿ ಕಳೆಯಲಾಗಲಿಲ್ಲ. ಇದಾದ ಬಳಿಕ ಪಾಲಾರ್ ಸೇತುವೆ ಬಳಿ ಇರುವ ಎಸ್‌ಟಿಎಫ್ ಶೆಡ್‌ಗೆ ಶಾಲೆ ಸ್ಥಳಾಂತರಿಸಲಾಯಿತು.
ಸುಮಾರು 20 ವರ್ಷಗಳ ಹಿಂದೆ ವೀರಪ್ಪನ್ ವಿರುದ್ಧ ಕಾರ್ಯಾಚರಣೆಗೆ ಎಸ್‌ಟಿಎಫ್ ನಿರ್ಮಿಸಿದ್ದ ಈ ಶೆಡ್ ಬರೋಬ್ಬರಿ 20 ಅಡಿ ಅಗಲ, 40 ಅಡಿ ಉದ್ದವಿದೆ. 61 ಕುರಿಗಳನ್ನೂ ಈ ಜಾಗದಲ್ಲಿ ತುಂಬಲು ಸಾಧ್ಯವಿಲ್ಲ. ಆದರೆ 1ನೇ ತರಗತಿಯಿಂದ 5ನೇ ತರಗತಿವರೆಗೆ 61 ಮಕ್ಕಳು ಇಲ್ಲಿ ಓದುತ್ತಿದ್ದಾರೆ. ಶಾಲೆಗೆ ಕಟ್ಟಡವೇ ಇಲ್ಲದ್ದರಿಂದ ಶೌಚಾಲಯ, ಮೈದಾನ, ಕುಡಿಯುವ ನೀರಿನ ವ್ಯವಸ್ಥೆ ದೂರದ ಮಾತು.

ಕೈ ತೊಳೆದುಕೊಂಡ ಇಲಾಖೆ: ಶಿಕ್ಷಣ ಇಲಾಖೆ ತನ್ನ ಪಾಲಿನ ಕೆಲಸ ಮುಗಿಸಿದ್ದೇನೆ ಎಂದು ಹೇಳಿಕೊಳ್ಳಲು ಬೇಕಾದ ಕಾರ್ಯವಾಗಿದೆ. 2 ವರ್ಷಗಳ ಹಿಂದೆಯೇ ಶಾಲೆಯ ಕಟ್ಟಡಕ್ಕೆ 3.60 ಲಕ್ಷ, ಕುಡಿಯುವ ನೀರಿಗೆ 75 ಸಾವಿರ ಹಾಗೂ ಶೌಚಾಲಯಕ್ಕೆ 20 ಸಾವಿರ ಅನುದಾನ ಬಿಡುಗಡೆ ಮಾಡಿದೆ. ಆದರೆ ಕಟ್ಟಡ ನಿರ್ಮಿಸಲು ಅರಣ್ಯ ಇಲಾಖೆ ಸಮ್ಮತಿ ನೀಡುತ್ತಿಲ್ಲ. ಸಾವಿರಾರು ಎಕರೆ ಭೂಮಿಯನ್ನು ಲೂಟಿ ಹೊಡೆಯಲು ಬಿಟ್ಟು, 2 ಗುಂಟೆ ಜಾಗ ನೀಡಲು ನಿರಾಕರಿಸುತ್ತಿದೆ. ಮಲೆಮಹದೇಶ್ವರ ಬೆಟ್ಟದ ಸಮೀಪವೇ ಒಂದು ಜೆಲ್ಲಿ ಕ್ರಷರ್ ಸಂಗ್ರಹ ಘಟಕಕ್ಕೂ ಅನುಮತಿ ನೀಡಲಾಗಿದೆ. ವಿಚಿತ್ರವೆಂದರೆ ಮಲೆಮಹದೇಶ್ವರದಿಂದ ಪಾಲಾರ್‌ಗೆ ಬರುವ ಜಾಗದಲ್ಲಿ ಕುಡಿಯುವ ನೀರಿನ ಯೋಜನೆಗೆ 10ಕ್ಕೂ ಅಧಿಕ ಪಂಪ್‌ಹೌಸ್‌ಗಳನ್ನು ನಿರ್ಮಿಸಲಾಗಿದೆ. ಅರಣ್ಯ ಇಲಾಖೆಯ ಈ ಢೋಂಗಿತನಕ್ಕೆ ಕಾರಣವೇನು?

ಪಾಲಾರ್ ಎಂಬ ರಕ್ತಸಿಕ್ತ ಗ್ರಾಮ: ನರಹಂತಕ ವೀರಪ್ಪನ್‌ನ ರಕ್ತ ಚರಿತ್ರೆ ಪ್ರಾರಂಭವಾಗುವುದು ಇದೇ ಪಾಲಾರ್ ಗ್ರಾಮದಿಂದ. ಅರಣ್ಯ ಇಲಾಖೆಯ ಗಾರ್ಡ್ ಮೋಹನಯ್ಯ ಅವರನ್ನು ಇದೇ ಪಾಲಾರ್ ಸೇತುವೆ ಹತ್ತಿರ ಗುಂಡಿಕ್ಕಿ ಕೊಲ್ಲಲಾಗಿತ್ತು. ಈಗ ಗಲ್ಲು ಶಿಕ್ಷೆಗೆ ಗುರಿಯಾಗಿರುವ ನಾಲ್ವರು ಅಪರಾಧಿಗಳು ಇದೇ ಪಾಲಾರ್‌ನಲ್ಲಿ 22 ಪೊಲೀಸರನ್ನು ಸಾಯಿಸಿದ್ದರು. ಒಂದು ಕಾಲದಲ್ಲಿ ವೀರಪ್ಪನ್ ಹರಿಸಿದ್ದ ನೆತ್ತರ ಕರಿ ನೆರಳಿನಲ್ಲೇ ಬದುಕುತ್ತಿರುವ ಇಲ್ಲಿಯ ಸೋಲಿಗ ಜನಾಂಗದ ಶಿಕ್ಷಣವನ್ನು ಸರ್ಕಾರ ಸಂಪೂರ್ಣವಾಗಿ ಮರೆತಿದೆ. ಸರ್ಕಾರದ ಇಂತಹ ನಿರ್ಲಕ್ಷ್ಯವೇ ಇನ್ನಷ್ಟು ವೀರಪ್ಪನ್‌ಗಳ ಹುಟ್ಟಿಗೆ ಕಾರಣವಾಗುತ್ತದೆ.

ವಿದ್ಯಾರ್ಥಿಗಳ ಸಂಖ್ಯೆ
ಒಟ್ಟು ವಿದ್ಯಾರ್ಥಿಗಳು
61(ಹಾಜರಾತಿ 49)

ಹೈಯರ್ ಪ್ರೈಮರಿ ಎಂದರೆ ಇದು!
ಮಕ್ಕಳು ಹಿ.ಪ್ರಾ.ಶಾಲೆಗೆ ಹೋಗಬೇಕೆಂದರೆ ನೈಜ ಅರ್ಥದಲ್ಲಿ 'ಹೈಯರ್ ಪ್ರೈಮರಿ' ಕಲಿತಂತಾಗುತ್ತದೆ. ಪಾಲಾರ್‌ನಿಂದ 18 ಕಿ.ಮೀ ದೂರವಿರುವ ಮಲೆಮಹದೇಶ್ವರ ಬೆಟ್ಟ ಹತ್ತಿ ಶಾಲೆಗೆ ಹೋಗಬೇಕು. ಹೀಗಾಗಿ ಕೇವಲ 8 ಮಕ್ಕಳು ಹಿರಿಯ ಪ್ರಾಥಮಿಕ ಶಾಲೆಯ ಮೆಟ್ಟಿಲು ಹತ್ತಿದ್ದಾರೆ.

- ರಾಜೀವ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.