ಪ್ರಧಾನ ಸುದ್ದಿ

2338 ಉಪನ್ಯಾಸಕರಿಗೆ ಬಿಎಡ್ ಆಗಿಲ್ಲ!

Published On :

ಕನ್ನಡಪ್ರಭ ವಾರ್ತೆ,  ಬೆಂಗಳೂರು,  ಜು.1-
ರಾಜ್ಯದ 1202 ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 11,550 ಉಪನ್ಯಾಸಕರ ಪೈಕಿ 2338 ಮಂದಿಗೆ ಬಿಎಡ್ ಪದವಿ ಇಲ್ಲ..!
ನೇಮಕಾತಿ ಹೊಂದಿದ ಬಳಿಕ ಐದು ವರ್ಷಗಳ ಒಳಗೆ ಬಿಎಡ್ ಪದವಿ ಪಡೆದುಕೊಳ್ಳಬೇಕು ಇಲ್ಲವಾದರೆ, ಕರ್ನಾಟಕ ನಾಗರಿಕ ಸೇವಾ ಕಾಯ್ದೆ ಪ್ರಕಾರ ಸೇವೆಯಿಂದ ವಜಾಗೊಳಿಸಲಾಗುವುದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ. ಆದರೆ, 2009ರಲ್ಲಿ ಉಪನ್ಯಾಸಕರಾಗಿ ನೇಮಕರಾಗಿರುವರಿಗೆ ಬಿಎಡ್ ಪದವಿ ಪಡೆದುಕೊಳ್ಳಲು 2014ರ ವೇಳೆಗೆ ಒಂದು ವರ್ಷ ಬಾಕಿ ಉಳಿಯುವುದರಿಂದ ಸರ್ಕಾರ ಈ ಕೂಡಲೇ ಇದರ ಬಗ್ಗೆ ಗಮನಹರಿಸಬೇಕಿದೆ. ಈ ಮಧ್ಯೆ 2338 ಉಪನ್ಯಾಸಕರಿಗೆ ಬಿಎಡ್ ಶಿಕ್ಷಣ ಕೊಡಿಸುವ ಉದ್ದೇಶದಿಂದ ಇಲಾಖೆ ರಾಷ್ಟ್ರೀಯ ಶಿಕ್ಷಣ ಶಿಕ್ಷಕರ ಪರಿಷತ್ತಿಗೆ (ಎನ್‌ಸಿಟಿಇ) ಪತ್ರ ಬರೆದು ಪ್ರವೇಶ ಪರೀಕ್ಷೆ ನಡೆಸದೆ ಅಭ್ಯರ್ಥಿಗಳಿಗೆ ಪ್ರವೇಶ ನೀಡಿ ಎಂದು ಮನವಿ ಮಾಡಿದೆ.
ಇದರಿಂದಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ ದೂರ ಶಿಕ್ಷಣದ ಮೂಲಕ ಉಪನ್ಯಾಸಕರಿಗೆ ಬಿಎಡ್ ಪದವಿ ದೊರಕಿಸಿಕೊಡಲು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಹಾಗೂ ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾಲಯದೊಂದಿಗೆ ಒಪ್ಪಂದ ಮಾಡಿಕೊಂಡಿದ್ದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಬಿಎಡ್ ಪದವಿ ಹೊಂದಿರದ ಉಪನ್ಯಾಸಕರನ್ನು ಸೇವೆಯಿಂದ ವಜಾಗೊಳಿಸುವ ನಿರ್ಧಾರ ಸಹ ಸ್ಥಗಿತಕೊಂಡಿದೆ.
2008ರ ಮಾರ್ಚ್‌ನಲ್ಲಿ 2578 ಹುದ್ದೆಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಅರ್ಜಿ ಆಹ್ವಾನಿಸಿತ್ತು. ಕರ್ನಾಟಕ ಲೋಕಸೇವಾ ಆಯೋಗದ ಮೂಲಕ 2009ರ ಜೂನ್ 6ರಂದು 2298 ಉಪನ್ಯಾಸಕರ ನೇಮಕವಾಯಿತು. ಈ ಪೈಕಿ 839 ಉಪನ್ಯಾಸಕರು ಮಾತ್ರವೇ ಬಿಎಡ್ ಪದವಿ ಹೊಂದಿದ್ದರು. ಉಳಿದ 1459 ಉಪನ್ಯಾಸಕರಿಗೆ ಕಾಲಾವಕಾಶ ನೀಡಿದ್ದರಿಂದ ಅದರಲ್ಲಿ 112 ಉಪನ್ಯಾಸಕರು ಬಿಎಡ್ ಪಡೆದುಕೊಂಡರು. 1347 ಮಂದಿ ಇದುವರೆಗೂ ಬಿಎಡ್ ಪದವಿ ಪೂರೈಸಿಲ್ಲ.
ಅಲ್ಲದೆ, 2012ರಲ್ಲಿ 1764 ಉಪನ್ಯಾಸಕರ ಹುದ್ದೆಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಅರ್ಜಿ ಆಹ್ವಾನಿಸಿ ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ನೇಮಕಾತಿ ನಡೆಸಿತು. ಈ ಪೈಕಿ 991 ಉಪನ್ಯಾಸಕರು ಬಿಎಡ್ ಪದವಿ ಪಡೆದುಕೊಂಡಿಲ್ಲ.
ಪತ್ರ ವ್ಯವಹಾರ: ಉಪನ್ಯಾಸಕರಿಗೆ ಬಿಎಡ್ ಪದವಿ ಕಲ್ಪಿಸುವ ಉದ್ದೇಶದಿಂದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿರುವ ಕುಮಾರ್ ನಾಯಕ್ ಅವರು 2013 ಏಪ್ರಿಲ್ ತಿಂಗಳಲ್ಲಿ ರಾಷ್ಟ್ರೀಯ ಶಿಕ್ಷಣ ಶಿಕ್ಷಕರ ಪರಿಷತ್ತಿಗೆ ಪತ್ರ ಬರೆದು ಪ್ರವೇಶ ಪರೀಕ್ಷೆ ನಡೆಸದೆ ಕೋರ್ಸ್‌ಗೆ ಸೇರಿಸಿಕೊಳ್ಳಲು ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.
ಉಪನ್ಯಾಸಕರು ಬಿಎಡ್ ಪದವಿ ಹೊಂದಿರುವುದು ಈ ಮೊದಲು ಕಡ್ಡಾಯವಾಗಿರಲಿಲ್ಲ. ಆದರೆ, 4.2.2008ರಲ್ಲಿ ಕರ್ನಾಟಕ ನಾಗರಿಕ ಸೇವಾ ಕಾಯ್ದೆ ಅನ್ವಯ ಎಲ್ಲಾ ಉಪನ್ಯಾಸಕರು ಬಿಎಡ್ ಪದವಿ ಪಡೆದುಕೊಳ್ಳುವುದು ಕಡ್ಡಾಯ ಎಂದಾಗಿದೆ. ನಂತರದ ದಿನಗಳಲ್ಲಿ ಇಲಾಖೆ ಆಯುಕ್ತರಾಗಿದ್ದ ರಶ್ಮಿ ಅವರು ಸಕಲ ಸಿದ್ದತೆಯೊಂದಿಗೆ ಬಿಎಡ್ ಪದವಿ ಪಡೆದುಕೊಳ್ಳಲು ಉಪನ್ಯಾಸಕರಿಗೆ ಸೂಚಿಸಿ ಈ ಸಂಬಂಧ ಮುಕ್ತ ವಿಶ್ವವಿದ್ಯಾಲಯಗಳಿಗೆ ಪತ್ರ ಬರೆದು ಮನವಿ ಮಾಡಿದ್ದರು.

- ದೇವರಾಜ್ ಎಲ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.