ಪ್ರಧಾನ ಸುದ್ದಿ

ಅವಳಿ ನಗರದ ಮಧ್ಯೆ ಮೋನೋ ರೈಲು ಓಡುತ್ತಾ?

Published On :

ಕ.ಪ್ರ. ವಾರ್ತೆ, ಬೆಂಗಳೂರು, ಜು.1-
ರೇಲ್ವೆ ಸೌಕರ್ಯ ಕಲ್ಪಿಸುವ ವಿಚಾರದಲ್ಲಿ ಪ್ರತಿ ಬಾರಿಯೂ ಕರ್ನಾಟಕದ ಪಾಲಿಗೆ 'ರೈಲು' ಹತ್ತಿಸುವ ಕೆಲಸವೇ ಆಗುತ್ತದೆ. ವಿಶೇಷವಾಗಿ ಉತ್ತರ ಕರ್ನಾಟಕದ ಭಾಗದಲ್ಲಿ ಈ ವಿಷಯದಲ್ಲಿ ತಾರತಮ್ಯ ಎದ್ದು ಕಾಣುತ್ತದೆ.
ನಾವು ಕೇಳಿದ ಹಾಗೂ ನಮಗೆ ಅನುಕೂಲವಾಗುವ ಒಂದೇ ಒಂದು ಯೋಜನೆಯೂ ದಕ್ಕುವುದಿಲ್ಲ. ಹುಬ್ಬಳ್ಳಿ, ಕಾರವಾರ, ಗದಗ, ಕೊಪ್ಪಳ, ಬಳ್ಳಾರಿ ವ್ಯಾಪ್ತಿಯಲ್ಲಿ ಸಮರ್ಪಕ ರೈಲು ವ್ಯವಸ್ಥೆ ಇದ್ದರೂ ಇನ್ನಷ್ಟು ಅನುಕೂಲಕತೆಗಾಗಿ ಮುಂದಿಟ್ಟ ಬೇಡಿಕೆ ಈಡೇರುತ್ತಲೇ ಇಲ್ಲ.
1995-96ರಲ್ಲಿ ಕೇಂದ್ರ ರೇಲ್ವೆ ಮಂಡಳಿಯಿಂದ ಅನುಮೋದನೆ ಪಡೆದ 167 ಕಿ.ಮೀ. ಉದ್ದದ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಪೈಕಿ ಕಲಘಟಗಿವರೆಗೆ ಮಾರ್ಗ ನಿರ್ಮಿಸಿದ್ದು ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯ ಪರವಾನಗಿ ತಿಕ್ಕಾಟದಲ್ಲಿ ಸ್ಥಗಿತವಾಗಿದೆ. ಬೆಂಗಳೂರಲ್ಲಿ ಮೆಟ್ರೋ ರೈಲು ಮಾರ್ಗ ವಿಸ್ತರಿಸುವಲ್ಲಿ ಗಮನಹರಿಸಿರುವ ಸರ್ಕಾರ ಧಾರವಾಡ ಮತ್ತು ಹುಬ್ಬಳ್ಳಿ ಮಧ್ಯೆ ಮೋನೋ ಆರಂಭಿಸಬೇಕೆಂಬ ಬೇಡಿಕೆಗೆ ಕಿವಿಗೊಡುತ್ತಿಲ್ಲ. ಈ ಅವಳಿ ನಗರದ ಮಧ್ಯ ಪ್ರತಿ ದಿನ ಒಂದು ಲಕ್ಷ ಜನರು ಸಂಚರಿಸುತ್ತಾರೆ!
ಧಾರವಾಡದಿಂದ ಕಿತ್ತೂರು ಮಾರ್ಗವಾಗಿ ಬೆಳಗಾವಿಗೆ ಹೊಸ ರೇಲ್ವೆ ಮಾರ್ಗ ಆರಂಭಿಸಬೇಕೆಂಬ ಬೇಡಿಕೆಯಿದೆ. ಪ್ರಸ್ತುತ ಧಾರವಾಡದಿಂದ ಬೆಳಗಾವಿಗೆ ಸಾಗಬೇಕಾದರೆ, ಅಳ್ನಾವರ ಮೂಲಕ ಲೋಂಡಾ, ಖಾನಾಪುರ ಮಾರ್ಗವಾಗಿ ಸುತ್ತಾಯಿಸಿಕೊಂಡು ಹೋಗಬೇಕಿದೆ. ಈಗಾಗಲೇ ಈ ಮಾರ್ಗ ರಚನೆ ಹಿನ್ನೆಲೆಯಲ್ಲಿ ಸರ್ವೆ ಕಾರ್ಯ ನಡೆದಿದೆಯಾದರೂ ಮುಂದಿನ ಯಾವುದೇ ಪ್ರಕ್ರಿಯೆ ನಡೆದಿಲ್ಲ.

ಆಗಬೇಕಾದ ಕೆಲಸಗಳು?
1. ಪ್ರತಿದಿನ 1 ಲಕ್ಷ ಮಂದಿ ಸಂಚರಿಸುವ ಹುಬ್ಬಳ್ಳಿ-ಧಾರವಾಡ ನಡುವೆ ನಿರಂತರವಾಗಿ ಓಡಾಡುವ ಮೋನೋ ರೈಲು ಆರಂಭಿಸಬೇಕು. ಹುಬ್ಬಳ್ಳಿ-ಬೆಂಗಳೂರು ಮಧ್ಯೆ ಜೋಡು ರೈಲು ಮಾರ್ಗ, ಈ ಮಾರ್ಗದಲ್ಲಿ ಎಲೆಕ್ಟ್ರಿಕಲ್ ರೈಲುಗಳು ಓಡಾಡಬೇಕು.
2. ರೇಲ್ವೆ ಬಿಡಿ ಭಾಗಗಳ ತಯಾರಿಕೆ ಹಾಗೂ ಬೋಗಿಗಳ ತಯಾರಿಕಾ ಘಟಕ ಹುಬ್ಬಳ್ಳಿಯಲ್ಲಿ ಆರಂಭವಾಗಬೇಕು. ಇದರಿಂದಾಗಿ ಸ್ಥಳೀಯ ಉದ್ಯೋಗಾವಕಾಶ ಸೃಷ್ಟಿಯಾಗುತ್ತದೆ.
3. ನೈಋತ್ಯ ರೇಲ್ವೆ ಕೇಂದ್ರ ಕಚೇರಿ ಹೊಂದಿರುವ ಹುಬ್ಬಳ್ಳಿಯಲ್ಲಿಯೇ ರೇಲ್ವೆ ನೇಮಕಾತಿ ಮಂಡಳಿ(ಆರ್‌ಆರ್‌ಬಿ) ಕಚೇರಿ ಇರಬೇಕೆಂಬ ನಿಯಮವಿದ್ದರೂ, ಈ ಕಚೇರಿ ಇನ್ನೂ ಬೆಂಗಳೂರಿನಲ್ಲಿಯೇ ಕಾರ್ಯನಿರ್ವಹಿಸುತ್ತಿದೆ. ಅದು ಸ್ಥಳಾಂತರವಾಗಬೇಕು.
4. ತಾಳಗುಪ್ಪ-ಹೊನ್ನಾವರ ರೈಲು ಮಾರ್ಗದ ಬೇಡಿಕೆಯೂ ಬಹು ಹಿಂದಿನಿಂದ ಇದೆ. ಕೊಂಕಣ ರೈಲು ಕರಾವಳಿಯಲ್ಲಿ ಓಡುತ್ತಿದ್ದರೂ ದೆಹಲಿಗೆ ಹೋಗಬೇಕೆಂದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಿಲುಗಡೆ ಇಲ್ಲ. ಗೋವಾದ ಮಡಗಾಂವಗೆ ಹೋಗಿ ರೈಲನ್ನೇರಬೇಕಾಗಿದೆ.
5. ಗದಗ-ಹರಪನಹಳ್ಳಿ - ಮುಂಡರಗಿ - ಹೂವಿನಹಡಗಲಿ ರೇಲ್ವೆ ಮಾರ್ಗ ನಿರ್ಮಾಣಕ್ಕೆ ಸರ್ವೇ ನಡೆಯಬೇಕಾಗಿದೆ.
6. ರಾಷ್ಟ್ರೀಯ ಹೆದ್ದಾರಿ 13ಕ್ಕೆ ಸಮಾನಾಂತರವಾಗಿ ಹೊಸಪೇಟೆಯಿಂದ ಚಿತ್ರದುರ್ಗಕ್ಕೆ ರೈಲು ಮಾರ್ಗ ನಿರ್ಮಾಣಕ್ಕೆ ಸರ್ವೇ ಮಾಡಬೇಕು. ಬಳ್ಳಾರಿ ಜಿಲ್ಲೆಯ ಸ್ವಾಮಿಹಳ್ಳಿಯಿಂದ ಹೊಸಪೇಟೆ ಸಿಂಗಲ್ ಲೈನ್ ಇದೆ, ಡಬಲ್ ಟ್ರ್ಯಾಕ್ ಮಾಡುವುದಕ್ಕೆ ಪ್ರಸ್ತಾವನೆ ಇತ್ತು. ಆದರೂ ಈಡೇರಿಲ್ಲ. ಈ ಎಲ್ಲ ಯೋಜನೆಗಳ ಸರ್ವೇ ನಡೆಯಬೇಕು.
7. ಹೊಸಪೇಟೆಯಿಂದ ಬೆಂಗಳೂರಿಗೆ ಹಗಲು ಹೊತ್ತಿನಲ್ಲಿ ರೈಲು ಬಿಡಬೇಕು. ಹೊಸಪೇಟೆಯಿಂದ ಅರಸೀಕೆರೆ ಮಾರ್ಗವಾಗಿ ಮೈಸೂರಿಗೆ ರೈಲು ಸೌಲಭ್ಯ ಕಲ್ಪಿಸಬೇಕು.
8. ಮೈಸೂರು ಸಿಟಿಯಿಂದ ಶಿರಡಿ ಹಾಗೂ ಯಶವಂತಪುರದಿಂದ ಜೋಧಪುರ, ಯಶವಂತಪುರದಿಂದ ಅಜ್ಮೀರ್ ರೈಲು ವಾರಕ್ಕೆ ಒಮ್ಮೆ ಮಾತ್ರ ಓಡುತ್ತವೆ. ಈ ಮೂರು ರೈಲುಗಳನ್ನು ನಿರಂತರವಾಗಿ ಓಡಿಸಬೇಕು.
9. ಸುಮಾರು 30 ವರ್ಷಗಳಿಂದ ಕುಂಟುತ್ತ ಸಾಗಿರುವ ಕೊಪ್ಪಳ ತಾಲೂಕಿನ ಗಿಣಿಗೇರಾ ಹಾಗೂ ಆಂಧ್ರದ ಗದ್ವಾಲ್ ನಡುವಿನ ರೈಲು ಮಾರ್ಗ ಪೂರ್ಣಗೊಳಿಸಬೇಕು. ಕೊಪ್ಪಳ-ಆಲಮಟ್ಟಿ ರೈಲು ಮಾರ್ಗದ ಸರ್ವೇ ಆಗಿದ್ದು, ಮುಂದಿನ ಪ್ರಕ್ರಿಯೆ ಪ್ರಾರಂಭವಾಗಬೇಕು. ಅನುಮೋದನೆ ಸಿಕ್ಕಿರುವ ಗದಗ-ವಾಡಿ ಕೊಪ್ಪಳ ಜಿಲ್ಲೆಯ ಮಾರ್ಗದ ಯೋಜನೆ ಕಾರ್ಯಗತವಾಗಬೇಕಿದೆ.
10. ಹೊಸಪೇಟೆ ಮತ್ತು ಹುಬ್ಬಳ್ಳಿ ದ್ವಿಪಥ ಟ್ರ್ಯಾಕ್ ಕಾಮಗಾರಿ ತ್ವರಿತಗೊಳಿಸಬೇಕು. ಗದಗ-ಸೊಲ್ಲಾಪುರ ರೇಲ್ವೆ ಮಾರ್ಗವನ್ನು ದ್ವಿಪಥವನ್ನಾಗಿ ಪರಿವರ್ತಿಸಬೇಕು.
11. ಗದಗ-ಹಾವೇರಿ ನೂತನ ರೇಲ್ವೆ ಮಾರ್ಗಕ್ಕೆ ಕ್ರಮಕೈಗೊಳ್ಳಬೇಕು. ಗದಗ ರೇಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಿಬೇಕಾದ ಅಗತ್ಯವಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.