ನೇರ ಬಂಡವಾಳಕ್ಕೆ ವಿದೇಶದಲ್ಲಿ ಹೆಲ್ಪ್ಡೆಸ್ಕ್
- ಏರೋಸ್ಪೇಸ್ ಪಾರ್ಕ್ ಕಾರ್ಯಗೊಳಿಸಲು 10 ಕೋಟಿ ನೇಕಾರರ ಪ್ಯಾಕೇಜ್ಗೆ 100 ಕೋಟ
- ಅಲ್ಪಾವಧಿ ಸಾಲ ಮನ್ನಾ / ಉತ್ಪಾದನಾ ಘಟಕಗಳಿಗೆ ಉತ್ತೇಜನ
ವಿದೇಶಿ ನೇರ ಬಂಡವಾಳ ಆಕರ್ಷಿಸುವ ಸಲುವಾಗಿ ಜಪಾನ್, ತೈವಾನ್, ಅಮೆರಿಕ ಸಂಯುಕ್ತ ಸಂಸ್ಥಾನ ಹಾಗೂ ಜರ್ಮನಿಗಳಲ್ಲಿ ನಾಲ್ಕು ಸಹಾಯ ಕೇಂದ್ರ (ಹೆಲ್ಪ್ ಡೆಸ್ಕ್) ಸ್ಥಾಪಿಸಲು ಉದ್ದೇಶಿಸಿರುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬಜೆಟ್ನಲ್ಲಿ ತಿಳಿಸಿದ್ದಾರೆ.
ಕೈಗಾರಿಕಾ ಸ್ನೇಹಿ ರಾಜ್ಯ: ಜಾಗತೀಕರಣದ ಹಿನ್ನೆಲೆಯಲ್ಲಿ ಕರ್ನಾಟಕವನ್ನು ಕೈಗಾರಿಕಾ ಸ್ನೇಹಿ ರಾಜ್ಯವನ್ನಾಗಿ ರೂಪಿಸುವ ಹೊಣೆಗಾರಿಕೆ ನಮ್ಮ ಮೇಲಿದೆ. ಈ ನಿಟ್ಟಿನಲ್ಲಿ ಕೈಗಾರಿಕಾ ಪ್ರದೇಶಗಳಲ್ಲಿ ಹಾಗೂ ಕೈಗಾರಿಕಾ ಎಸ್ಟೇಟ್ಗಳಲ್ಲಿ ಮೂಲ ಸೌಲಭ್ಯ ಕಲ್ಪಿಸಲು ವಿಶೇಷ ಒತ್ತು ನೀಡಲಾಗುವುದು. ಈ ಉದ್ದೇಶಕ್ಕಾಗಿ 30 ಕೋಟಿ ಒದಗಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದಿದ್ದಾರೆ.
ಸಂಶೋಧನಾ ಸಂಸ್ಥೆಗೆ ಒತ್ತು: ಉತ್ಪಾದನಾ ವಲಯವನ್ನು ಉತ್ತೇಜಿಸುವ ಯೋಜನೆಯುಳ್ಳ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳ ಸ್ಥಾಪನೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲು ಪ್ರಸ್ತಾಪಿಸಲಾಗಿದ್ದು, ಅದಕ್ಕಾಗಿ 5 ಕೋಟಿ ನಿಗದಿಪಡಿಸಲಾಗಿದೆ. 2013- 23ರ ಏರೋಸ್ಪೇಸ್ ನೀತಿಯಡಿಯಲ್ಲಿ ಏರೋಸ್ಪೇಸ್ ಪಾರ್ಕ್ ಕಾರ್ಯಶೀಲಗೊಳಿಸಲು 10 ಕೋಟಿ ಮೀಸಲಿಡಲಾಗುವುದು. ಹೊಸ ಹಾಗೂ ಆವಿಷ್ಕಾರ ಯೋಜನೆಗಳಿಗೆ ನೆರವಾಗಲು ಏಜೆಂಲ್ ನಿಧಿ ಮೂಲಕ ಹಣ ಒದಗಿಸಿ ಪ್ರೋತ್ಸಾಹಿಸಲು ಉದ್ದೇಶಿಸಲಾಗಿದೆ. ಅದಕ್ಕಾಗಿ 15 ಕೋಟಿ ಹಂಚಿಕೆ ಮಾಡಲಾಗುವುದು.
ಮಿನಿ ಟೂಲ್ ರೂಮ್: ಕೌಶಲ್ಯ ಅಭಿವೃದ್ಧಿಗಾಗಿ ಹರಿಹರ, ದೇವನಹಳ್ಳಿ ಮತ್ತು ಮಂಗಳೂರಿನಲ್ಲಿ ಮಿನಿ ಟೂಲ್ ರೂಮ್ಗಳನ್ನು ನಬಾರ್ಡ್ನ ಆರ್ಐಡಿಎಫ್ ಅಡಿ 22 ಕೋಟಿ ವೆಚ್ಚದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ. ಚಾಮರಾಜನಗರದಲ್ಲಿ ಗ್ರಾನೈಟ್ ಪಾರ್ಕ್ ನಿರ್ಮಾಣ ಮಾಡಲಾಗುವುದು ಎಂದರು.
ನೇಕಾರರಿಗೆ ಪ್ರೋತ್ಸಾಹ: ಹತ್ತಿ ಖಾದಿ, ರೇಷ್ಮೆ ಖಾದಿ ಹಾಗೂ ಉಣ್ಣೆ ಖಾದಿ ತಯಾರಿಕೆಯಲ್ಲಿ ತೊಡಗಿಕೊಂಡಿರುವ ಒಟ್ಟು 31,402 ಖಾದಿ ನೂಲುಗಾರರು, ನೇಕಾರರು, ರ್ಯಾಪರ್ಗಳು ಹಾಗೂ ಖಾದಿ ಕಾರ್ಮಿಕರುಗಳಿಗೆ ಪ್ರೋತ್ಸಾಹ ಧನವನ್ನು ಹೆಚ್ಚಿಸಲು 16 ಕೋಟಿ ಒದಗಿಸಲಾಗಿದೆ. ಇದರ ಜತೆಗೆ 2 ವರ್ಷಗಳಲ್ಲಿ ಅನುಷ್ಠಾನಗೊಳ್ಳಲಿರುವ ವಿವಿಧ ಖಾದಿ ಮತ್ತು ಸಂಘಸಂಸ್ಥೆಗಳ ಪುನಃಶ್ಚೇತನ ಯೋಜನೆ, 2 ರೇಷ್ಮೆ ಮತ್ತು 2 ಉಣ್ಣೆ ಕ್ಲಸ್ಟರ್ಗಳ ಸ್ಥಾಪನೆ, ಖಾದಿ ಹಾಗೂ ಗ್ರಾಮೋದ್ಯೋಗ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಯೋಜನೆಗಾಗಿ ಮತ್ತು 114 ಗ್ರಾಮ ಕೈಗಾರಿಕಾ ಘಟಕಗಳ ದುಡಿಯುವ ಬಂಡವಾಳ ಸಹಾಯ ಧನ ಯೋಜನೆಗಳಿಗಾಗಿ ಪ್ರಸಕ್ತ ಸಾಲಿನಲ್ಲಿ 11 ಕೋಟಿ ಒದಗಿಸಲಾಗುವುದು ಎಂದರು.
ವಿಶೇಷ ಪ್ಯಾಕೇಜ್: ನೇಕಾರರ ಪ್ಯಾಕೇಜ್ಗೆ 100 ಕೋಟಿ ಒದಗಿಸುತ್ತಿದ್ದು, ಇದರಿಂದ ವಿದ್ಯುತ್ ಸಹಾಯಧನದ 45 ಕೋಟಿಯ ಹಿಂದಿನ ಬಾಕಿ ಇತ್ಯರ್ಥವಾಗುತ್ತದೆ. ಉಣ್ಣೆ ವಲಯವನ್ನು ಪುನಃಶ್ಚೇತನಗೊಳಿಸಲು, ಮೂರು ವರ್ಷಗಳಲ್ಲಿ ಅನುಷ್ಠಾನಗೊಳ್ಳುವ 27 ಕೋಟಿ ವಿಶೇಷ ಪ್ಯಾಕೇಜ್ ಸೇರಿಸಲಾಗಿದೆ.
ಉತ್ಪಾದನಾ ಘಟಕಗಳಿಗೆ ಉತ್ತೇಜನ: ಈಗಿನ ಕೈಗಾರಿಕಾ ನೀತಿಯ ಅವಧಿಯು ಮಾರ್ಚ್ 2014ಕ್ಕೆ ಕೊನೆಗೊಳ್ಳುತ್ತದೆ. ಉತ್ಪಾದನಾ ಘಟಕಗಳಿಗೆ ಉತ್ತೇಜಿಸಲು ಅನುವಾಗುವಂತೆ ಎಲ್ಲಾ ಘಟಕಗಳನ್ನು ಒಳಗೊಂಡಿರುವ ಒಂದು ಹೊಸ ಕೈಗಾರಿಕಾ ನೀತಿ ಹೊರತರಲು ಪ್ರಸ್ತಾಪಿಸಲಾಗಿದೆ.
ಕರಕುಶಲ ಕರ್ಮಿಗಳ ಅಭಿವೃದ್ಧಿಗಾಗಿ 5 ವರ್ಷಗಳ ವಿಶೇಷ ಪ್ಯಾಕೇಜ್ ಪ್ರಸ್ತಾಪಿಸಲಾಗಿದ್ದು, ಅದನ್ನು ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಮೂಲಕ ಅನುಷ್ಠಾನಗೊಳಿಸಲಾಗುವುದು.
ನೇಕಾರರ ಸಾಲ ಮನ್ನಾ: ರೈತರು ಸಹಕಾರ ಸಂಸ್ಥೆಗಳಿಂದ ಪಡೆದ 25 ಸಾವಿರ ಅಲ್ಪಾವಧಿ ಸಾಲಮನ್ನಾ ಯೋಜನೆಯನ್ನು ನೇಕಾರರಿಗೂ ವಿಸ್ತರಿಸಲಾಗುವುದು. ಆ ಉದ್ದೇಶದಿಂದ ಪ್ರತ್ಯೇಕವಾಗಿ 41 ಕೋಟಿ ಒದಗಿಸಲಾಗಿದೆ. ವಾಣಿಜ್ಯ ಹಾಗೂ ಕೈಗಾರಿಕಾ ಕ್ಷೇತ್ರಕ್ಕೆ ಒಟ್ಟು 885 ಕೋಟಿ ಹಣ ಒದಗಿಸಲಾಗಿದೆ.
ಜವಳಿ ಪಾರ್ಕ್ ಸ್ಥಾಪನೆ
ಸ್ಥಳೀಯರಿಗೆ ಉದ್ಯೋಗಾವಕಾಶ ಒದಗಿಸಲು ಯಾದಗಿರಿಯಲ್ಲಿ ಸುಸಜ್ಜಿತ ಹಾಗೂ ಅಂತರಾಷ್ಟ್ರೀಯ ಗುಣಮಟ್ಟದ ಜವಳಿ ಪಾರ್ಕ್ ಸ್ಥಾಪಿಸಲು ಉದ್ದೇಶಿಸಲಾಗಿದೆ. ರಾಜ್ಯದ ಜವಳಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪೂರಕವಾಗುವಂತೆ ನೂತನ ಜವಳಿ ನೀತಿಯನ್ನು ಪ್ರಕಟಿಸಲಾಗುವುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

