ಹಾಳುಬಿದ್ದ ಕಾಲುವೆಗೆ ನೀರು ಹರಿಸುವ ಯತ್ನ
ಬಾಗಲಕೋಟೆ: ಆಲಮಟ್ಟಿ ಅಣೆಕಟ್ಟೆಯ ಒಡಲು ತುಂಬ ನೀರಿದ್ದರೂ ಆ ನೀರನ್ನು ರೈತರ ಭೂಮಿಗೆ ಹರಿಸಲು ಕಾಲುವೆಗಳೇ ಇಲ್ಲ. 199 ಕಿಮೀ ಉದ್ದದ ಘಟಪ್ರಭಾ ಬಲದಂಡೆ ಕಾಲುವೆ (ಜಿಎಲ್ಬಿಸಿ) ನಿರ್ಮಾಣವಾಗಿ ಎರಡು ದಶಕಗಳೇ ಕಳೆದಿದ್ದರೂ ಈ ಕಾಲುವೆಗೆ ಹಿಡಕಲ್ ಜಲಾಶಯದಿಂದ ಈ ವರೆಗೆ ನೀರು ಹರಿದು ಬಂದಿಲ್ಲ.
ಆಲಮಟ್ಟಿ ಬಲದಂಡೆ ಕಾಲುವೆಯ ನೀರು ತಮ್ಮ ಭೂಮಿಯಲ್ಲಿ ಹಸಿರು ಚಿಗುರಿಸುತ್ತದೆ ಎಂದು ಕನಸು ಕಂಡ ರೈತರು ಗುಳೇ ಹೋಗುವುದೇ ಬದುಕಿಗೆ ಉಳಿದಿರುವ ದಾರಿ ಎಂದು ಗಟ್ಟಿಯಾಗಿ ನಂಬಿದ್ದಾರೆ. ಇದು ಬಾಗಲಕೋಟೆ ಜಿಲ್ಲೆಯ ರೈತರ ನೀರಾವರಿಯ ಕಣ್ಣೀರಗಾಥೆ.
ಇದರ ನಡುವೆ ಅಧಿಕಾರಿಗಳು ಮುಳ್ಳು ಕಂಟಿಗಳಿಂದ ಮುಚ್ಚಿ ಹೋಗಿರುವ, ಅಕ್ಷರಶಃ ಹಾಳು ಬಿದ್ದಿರುವ ಘಟಪ್ರಭಾ ಬಲದಂಡೆ ಕಾಲುವೆಗೆ ನೀರು ಹರಿಸಲು ಮುಂದಾಗಿದ್ದಾರೆ. ಈ ಸುದ್ದಿ ಕೇಳಿ ಬೀಳಗಿ, ಬಾಗಲಕೋಟೆ, ಬಾದಾಮಿ, ಹುನಗುಂದ ತಾಲೂಕುಗಳ ಜನತೆ ಸಂತಸ ಪಡಬೇಕಿತ್ತು. ಆದರೆ, ಪರಿಸ್ಥಿತಿ ಹಾಗಾಗಿಲ್ಲ. ನೀರಂತೂ ಹೊಲಗಳಿಗೆ ಬರುವುದಿಲ್ಲ. ಈ ನೀರು ಹರಿಸುವ ಹೆಸರಿನಲ್ಲಿ ಸರ್ಕಾರದ ಇನ್ನಷ್ಟು ಹಣ ಪೋಲಾಗುತ್ತದೆ ಎನ್ನುವುದು ಅವರ ಆತಂಕ.
ದಾಸನಾಳ ಸುರಂಗ ಮಾರ್ಗ: ಹಿಡಕಲ್ ಜಲಾಶಯ ಪೂರ್ಣಗೊಂಡು ಬರೋಬ್ಬರಿ ಮೂರು ದಶಕಗಳು ಕಳೆದಿವೆ. ಆಗಲೇ ಘಟಪ್ರಭಾ ಬಲ ಮತ್ತು ಎಡದಂಡೆ ಕಾಲುವೆಗಳ ನಿರ್ಮಾಣಕ್ಕೂ ಚಾಲನೆ ಲಭಿಸಿದೆ. ಎಡದಂಡೆ ಕಾಲುವೆ ನಿಗದಿತ ಅವಧಿಯಲ್ಲಿ ಪೂರ್ಣವಾಯಿತು. ಬಲದಂಡೆಗೆ ಮಾತ್ರ ಸವದತ್ತಿ ತಾಲೂಕು ದಾಸನಾಳ ಬಳಿ ಉದ್ದನೆಯ ಸುರಂಗ ಮಾರ್ಗ ಕೊರೆಯುವ ಕಾರ್ಯ ವಿಳಂಬವಾಗುತ್ತ ಬಂದಿದ್ದರಿಂದ ಈ ಕಾಲುವೆಗೆ ಎರಡು ದಶಕಗಳ ಬಳಿಕ ನೀರು ಹರಿಸಲಾಗಿದೆ. ಆದರೂ ಇನ್ನೂ ಅಂಚಿಗೆ (ಟೇಲ್ ಎಂಡ್) ನೀರು ತಲುಪಿಲ್ಲ.
ಹುಕ್ಕೇರಿ ತಾಲೂಕು ವ್ಯಾಪ್ತಿಯ ಹಿಡಕಲ್ ಬಳಿ ಘಟಪ್ರಭೆಗೆ ಅಡ್ಡಲಾಗಿ ಅಣೆಕಟ್ಟೆ ನಿರ್ಮಿಸಲಾಗಿದೆ. ಬಲದಂಡೆ ಕಾಲುವೆ ಗೋಕಾಕ, ರಾಮದುರ್ಗ, ಮುಧೋಳ, ಬಾದಾಮಿ, ಬಾಗಲಕೋಟೆ ಮತ್ತು ಹುನಗುಂದ ತಾಲೂಕುಗಳಲ್ಲಿ ಬರೋಬ್ಬರಿ 199 ಕಿಮೀ ಉದ್ದ ಸಾಗಿ ಬಂದಿದೆ. ಇದು 61,768 ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುವ ಸಾಮರ್ಥ್ಯ ಹೊಂದಿದೆ. ಇದರಲ್ಲಿ 2800 ಕ್ಯೂಸೆಕ್ ನೀರನ್ನು ಹರಿಸಬಹುದು.
ಆದರೆ, ಈವರೆಗೆ 145 ಕಿಮೀ ದಾಟಿ ನೀರು ಬಂದಿಲ್ಲ. ಅಬ್ಬಬ್ಬಾ ಎಂದರೆ 2000 ಕ್ಯೂಸೆಕ್ ನೀರನ್ನು ಹರಿಸಲಾಗಿದೆ ಅಷ್ಟೇ. ಯಾವಾಗ ದಾಸನಾಳ ಸುರಂಗ ಮಾರ್ಗ ವಿಳಂಬವಾಯಿತೋ ಅಧಿಕಾರಿಗಳು ಅದರ ಕೆಳಗೂ ಕಾಲುವೆ ಇದೆ ಎನ್ನುವುದನ್ನೇ ಮರೆತು ಮೇಲ್ಭಾಗ (ಗೋಕಾಕ, ರಾಮದುರ್ಗ ಸವದತ್ತಿ ತಾಲೂಕು)ದ ಭೂಮಿಗೆ ನೀರುಣಿಸಲು ಹೆಚ್ಚು ಆಸಕ್ತಿ ತೋರಿದರು. ಕೆಳಗಿನ ಭಾಗಕ್ಕೂ ನೀರು ಬಿಡಿ ಎಂದು ಗೋಗರೆದರೂ ಅವರು ಜಪ್ಪಯ್ಯ ಎನ್ನುತ್ತಿಲ್ಲ.
ಹಾಳುಬಿದ್ದ ಬಲದಂಡೆ ಕಾಲುವೆ: ಲೋಕಾಪುರದಿಂದ (140ನೇ ಕಿಮೀ) ಕೆಳಗಿನ ಭಾಗಕ್ಕೆ ನೀರು ಬಂದಿಲ್ಲ. ಕಾಲುವೆಯ ಸಮೀಪದ ಕೆರೆಗಳಲ್ಲಿ ನೀರು ತುಂಬಿಸಿ ಜನತೆಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ 2009ರಲ್ಲಿ ನೀರು ಹರಿಸುವ ಪ್ರಯತ್ನ ನಡೆದರೂ ಅದು ಸಾಧ್ಯವಾಗಲಿಲ್ಲ. ಅಂದೇ ಅದು ಒಡೆದು ಹಾಳಾಗಿತ್ತು. ಆನಂತರ ಈ ಕಾಲುವೆಯನ್ನು ಇಲಾಖೆ ತಿರುಗಿ ನೋಡಿಲ್ಲ. ಮುಳ್ಳುಕಂಟಿಗಳು ಹೇರಳವಾಗಿ ಬೆಳೆದು ಕಾಲುವೆಯನ್ನು ಮುಚ್ಚಿವೆ.
ಈ ಮುಖ್ಯ ಕಾಲುವೆಗೆ ಉಪ ಕಾಲುವೆ, ಹೊಲಗಾಲುವೆಗಳು ಇಲ್ಲದ್ದರಿಂದ ಈಗ ಹರಿಸುವ ನೀರು ಕೂಡ ಅಂಚು ಮುಟ್ಟುವ ಸಾಧ್ಯತೆಗಳು ಕಡಿಮೆ. ಮಧ್ಯದಲ್ಲಿಯೇ ಕಾಲುವೆ ಕಟ್ಟಿ ನೀರು ಹೊರಚೆಲ್ಲುವ ಅಥವಾ ಕಾಲುವೆ ಒಡೆದು ಹೋಗುವ ಅಪಾಯವಿದೆ.
ಆದರೂ ಛಲ ಬಿಡದೇ ನೀರು ಹರಿಸಲು ಅಧಿಕಾರಿಗಳು ಭಗೀರಥ ಯತ್ನ ನಡೆಸಿದ್ದಾರೆ. ಈ ಕಾಲುವೆಗಾಗಿ ಅದಾಗಲೇ ನೂರಾರು ಕೋಟಿ ಹೋಮ ಆಗಿದೆ. ಈಗ ಹಾಳುಬಿದ್ದ ಕಾಲುವೆಗೆ ನೀರು ಹರಿಸಲು ಇನ್ನಷ್ಟು ಹಣ ವ್ಯಯವಾಗಲಿದೆ. ಬೇಸಿಗೆಯಲ್ಲಿ ಕಾಲುವೆ ಸ್ವಚ್ಛತೆ ಮತ್ತು ದುರಸ್ತಿಗೊಳಿಸಿದ್ದರೆ ಅಧಿಕಾರಿಗಳ ಈ ಕಾಳಜಿಯನ್ನು ಸ್ವಾಗತಿಸಬಹುದಾಗಿತ್ತು. ದುರಸ್ತಿ ಇರುವ ಕಾಲುವೆಯಲ್ಲಿ ನೀರು ಹರಿಸುವ ಸಾಹಸದ ಹಿಂದೆ ಬೇರೆ ಹಿತಾಸಕ್ತಿ ಕೆಲಸ ಮಾಡುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಅಧಿಕಾರಿಗಳ ಅತಿಯಾದ ಭ್ರಷ್ಟಾಚಾರ ಮತ್ತು ನಿರ್ಲಕ್ಷ್ಯದಿಂದಾಗಿ ಬಾಗಲಕೋಟೆ ಜಿಲ್ಲೆಯ ರೈತರು ನೀರಾವರಿಯಿಂದ ವಂಚಿತರಾಗಿದ್ದು, ಆರಂಭದಿಂದ ಇಲ್ಲಿಯ ವರೆಗೆ ಆಗಿರುವ ಖರ್ಚು-ವೆಚ್ಚದ ಸಮಗ್ರ ತನಿಖೆಯಾಗಲಿ.
- ಎಸ್.ಎಫ್.ಹೊಸಗೌಡ್ರ
ಬರಗಾಲ ಪೀಡಿತ ಜನ ಈ ಕಾಲುವೆಯಿಂದ ತಮ್ಮ ಬಾಳು ಹಸನಾಗಬಹುದು ಎಂದು ಕನಸು ಕಂಡಿದ್ದರು. ಆದರೆ, ಅಧಿಕಾರಿಗಳ ಲಂಚಗುಳಿತನ ಈ ಭಾಗದ ರೈತರನ್ನು ನೀರಾವರಿಯಿಂದ ವಂಚಿತರನ್ನಾಗಿ ಮಾಡಿದೆ. ಈ ಹಗರಣದ ವಿರುದ್ಧ ಹೋರಾಡುತ್ತೇವೆ.
- ಹನುಮಂತ ಮಾವಿನಮರದ
ಮಲ್ಲಿಕಾರ್ಜುನ ಸಿದ್ದಣ್ಣವರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

