ಪ್ರಧಾನ ಸುದ್ದಿ

ಆಸಿಡ್‌ಗೆ ಅಂಕೆ

ಆಸಿಡ್‌ಗೆ ಅಂಕೆ
Published On :

ನವದೆಹಲಿ: ದೇಶದಲ್ಲಿ ಮಹಿಳೆಯರ ಮೇಲೆ ಹೆಚ್ಚುತ್ತಿರುವ ಆಸಿಡ್ ದಾಳಿ ಪ್ರಕರಣಗಳಿಗೆ ಕಡಿವಾಣ ಹಾಕಲು ಸುಪ್ರೀಂಕೋರ್ಟ್ ಮುಂದಾಗಿದೆ. ಆಸಿಡ್ ಮತ್ತು ಅಂಗಾಂಗಗಳಿಗೆ ಹಾನಿ ಮಾಡುವ ರಾಸಾಯನಿಕಗಳ ಮಾರಾಟ ನಿಯಂತ್ರಣಕ್ಕೆ ಸಂಬಂಧಿಸಿ ಮೂರು ತಿಂಗಳೊಳಗೆ ನಿಯಮಾವಳಿ ರೂಪಿಸುವಂತೆ ಗುರುವಾರ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ.
ಜತೆಗೆ, ಮಹಿಳೆಯರ ಮೇಲಿನ ಆಸಿಡ್ ದಾಳಿಯನ್ನು ಜಾಮೀನು ರಹಿತ ಅಪರಾಧವಾಗಿ ಪರಿಗಣಿಸಬೇಕು, ದಾಳಿಗೊಳಗಾದವರ ಪುನರ್ವಸತಿ ಮತ್ತು ಚಿಕಿತ್ಸೆ ವೆಚ್ಚವಾಗಿ ರಾಜ್ಯ ಸರ್ಕಾರಗಳು 3 ಲಕ್ಷ ಪರಿಹಾರ ನೀಡಬೇಕು ಎಂದೂ ನ್ಯಾಯಾಲಯ ಸೂಚಿಸಿದೆ.
ಆಸಿಡ್ ಮಾರಾಟಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ರೂಪಿಸಿದ ಮಾದರಿ ಕರಡಿನಂತೆ ನಿಯಮಾವಳಿ ರೂಪಿಸುವಂತೆ ನ್ಯಾ. ಆರ್.ಎಂ. ಲೋಧಾ ಅವರಿದ್ದ ಪೀಠವು ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ಕೇಂದ್ರಾಡಳಿತ ಪ್ರದೇಶದ ಆಡಳಿತಾಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಇದೇ ವೇಳೆ, ಆ್ಯಸಿಡ್ ದಾಳಿಯನ್ನು 1919ರ ವಿಷವಸ್ತು ಕಾಯ್ದೆಯಡಿ ಜಾಮೀನುರಹಿತ ಅಪರಾಧವಾಗಿ ಪರಿಗಣಿಸಲು ನಿಯಮಾವಳಿ ರೂಪಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜತೆಯಾಗಿ ಕೆಲಸ ಮಾಡಬೇಕು ಎಂದು ಪೀಠ ಹೇಳಿದೆ.
ಅಪ್ರಾಪ್ತ ವಯಸ್ಸಿನಲ್ಲಿ ಆಸಿಡ್ ದಾಳಿಗೆ ಗುರಿಯಾಗಿದ್ದ ದೆಹಲಿ ಮೂಲದ ಲಕ್ಷ್ಮಿ ಎಂಬಾಕೆ 2006ರಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಈ ನಿಯಂತ್ರಣ ಕ್ರಮಗಳನ್ನು ಸೂಚಿಸಿದೆ. ವಿಚಾರಣೆ ವೇಳೆ ಸಾಲಿಸಿಟರ್ ಜನರಲ್ ಮೋಹನ್ ಪರಾಸರನ್ ಅವರು ಪಂಜಾಬ್, ಮಹಾರಾಷ್ಟ್ರ, ಕರ್ನಾಟಕ, ಕೇರಳ, ಹರ್ಯಾಣ, ಸಿಕ್ಕಿಂ, ಅರುಣಾಚಲ ಪ್ರದೇಶ, ಮೇಘಾಲಯ ರಾಜ್ಯಗಳು ಈಗಾಗಲೇ ಆ್ಯಸಿಡ್ ಮಾರಾಟ ನಿಯಂತ್ರಣಕ್ಕೆ ಸಂಬಂಧಿಸಿ ನಿಯಮಾವಳಿಗಳನ್ನು ರೂಪಿಸಿವೆ ಎಂದು ಮಾಹಿತಿ ನೀಡಿದರು.

ಪರಿಹಾರ ಪಾವತಿ ಹೇಗೆ?
ಆಸಿಡ್ ದಾಳಿಗೊಳಗಾದವರು ಪ್ಲಾಸ್ಟಿಕ್ ಸರ್ಜರಿಗಳಿಗೆ ಒಳಗಾಗಬೇಕಿರುವುದರಿಂದ ಸರ್ಕಾರಗಳು ಈಗ ನೀಡುತ್ತಿರುವ ಪರಿಹಾರ ಯಾವುದಕ್ಕೂ ಸಾಲದು. ಸಾಲಿಸಿಟರ್ ಜನರಲ್ ಅವರು ಪರಿಹಾರವನ್ನು 3 ಲಕ್ಷಕ್ಕೆ ಏರಿಸುವಂತೆ ಸಲಹೆ ನೀಡಿದ್ದಾರೆ. ಇದು ಉತ್ತಮ ಸಲಹೆ. ಈ ಹಿನ್ನೆಲೆಯಲ್ಲಿ ಎಲ್ಲ ರಾಜ್ಯ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಪರಿಹಾರವನ್ನು 3ಲಕ್ಷಕ್ಕೆ ಏರಿಸಬೇಕು ಎಂದು ನಾವು ನಿರ್ದೇಶನ ನೀಡುತ್ತಿದ್ದೇವೆ. ಈ 3 ಲಕ್ಷದಲ್ಲಿ 1ಲಕ್ಷವನ್ನು ದಾಳಿಯ ಕುರಿತು ಮಾಹಿತಿ ಸಿಕ್ಕ 15 ದಿನದೊಳಗೆ ಸರ್ಕಾರ ವಿತರಿಸಬೇಕು. ಉಳಿದ 2 ಲಕ್ಷವನ್ನು ಎರಡು ತಿಂಗಳೊಳಗೆ ವಿತರಿಸಬೇಕು ಎಂದೂ ಹೇಳಿದೆ. ಸದ್ಯ 5 ಸಾವಿರದಿಂದ 1.5 ಲಕ್ಷದ ವರೆಗೆ ಪರಿಹಾರ ವಿತರಿಸಲು ಅವಕಾಶ ಇದೆ.
ಮಾರಾಟಕ್ಕೆ 18ರ ಮಿತಿ
ಹದಿನೆಂಟು ವರ್ಷ ಕೆಳಗಿನವರಿಗೆ ಯಾವುದೇ ಕಾರಣಕ್ಕೂ ಆ್ಯಸಿಡ್ ಮಾರಾಟ ಮಾಡಬಾರದು. ಮನೆಯ ವಿಳಾಸ ಇರುವ ಫೋಟೋ ಗುರುತುಪತ್ರ ಹೊಂದಿರುವವರಿಗಷ್ಟೇ ಮಾರಾಟ ಮಾಡಬಹುದು. ಅಲ್ಲದೆ, ಚಿಲ್ಲರೆ ಮಾರಾಟಗಾರರು ರಿಜಿಸ್ಟರ್ ಪುಸ್ತಕ ಇಟ್ಟುಕೊಳ್ಳಬೇಕು. ಅದರಲ್ಲಿ ಗ್ರಾಹಕನ ವಿವರ, ಆ್ಯಸಿಡ್ ಖರೀದಿಸುತ್ತಿರುವ ಉದ್ದೇಶ ಮತ್ತಿತರ ಮಾಹಿತಿಗಳನ್ನು ಬರೆದಿಟ್ಟುಕೊಳ್ಳಬೇಕು. ಒಂದು ವೇಳೆ ಈ ನಿಯಮಾವಳಿ ಉಲ್ಲಂಘಿಸಿದರೆ ಮಾರಾಟಗಾರನಿಗೆ 50 ಸಾವಿರದ ವರೆಗೆ ದಂಡ ವಿಧಿಸಬಹುದು ಎಂದು ನ್ಯಾಯಾಲಯ ಹೇಳಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.