ನಮೋಶಿ ಮನೆ, ಶಿಕ್ಷಣ ಸಂಸ್ಥೆ ಮೇಲೆ ಐಟಿ ದಾಳಿ
ಕ.ಪ್ರ.ವಾರ್ತೆ ಗುಲ್ಬರ್ಗ ಜು. 18
ಆದಾಯ ತೆರಿಗೆ (ಐಟಿ) ಇಲಾಖೆಯ ಅಧಿಕಾರಿಗಳು ಗುರುವಾರ ಇಲ್ಲಿನ ಪ್ರತಿಷ್ಠಿತ ಹೈದರಾಬಾದ್-ಕರ್ನಾಟಕ ಶಿಕ್ಷಣ ಸಂಸ್ಥೆ (ಎಚ್‌ಕೆಇಐ)ಯ ಕೇಂದ್ರ ಕಚೇರಿ, ಸಂಸ್ಥೆ ಅಧ್ಯಕ್ಷ ಹಾಗೂ ಮಾಜಿ ಎಂಎಸ್‌ಸಿ ಶಶಿಲ್ ನಮೋಶಿ, ಮಾಜಿ ಸಿಎಂ ಯಡಿಯೂರಪ್ಪ ಬೀಗರಾದ ಶಿವಾನಂದ ಮಾನ್ಕರ್, ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಡಾ. ಸಂಪತ್‌ಕುಮಾರ್ ಲೋಯಾ, ಶಿವರಾಜ ನಿಗ್ಗುಡಗಿ ನಿವಾಸಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. 5 ದಶಕಗಳಷ್ಟು ಹಳೆಯದಾಗಿರುವ ಸಂಸ್ಥೆಯ ಕಚೇರಿ ಸೇರಿ ಸಂಬಂಧಪಟ್ಟವರ ಮೇಲೆ ಐಟಿ ಅಧಿಕಾರಿಗಳು ಇದೇ ಮೊದಲ ಬಾರಿಗೆ ದಾಳಿ ನಡೆಸಿದ್ದು, ಹೈ- ಕ ಪ್ರಾಂತದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಬೆಳಗಾವಿ, ಹುಬ್ಬಳ್ಳಿಯ ಐಟಿ ಇಲಾಖೆಗೆ ಸೇರಿರುವ 60 ಅಧಿಕಾರಿಗಳು 5 ತಂಡಗಳಲ್ಲಿ ಗುಲ್ಬರ್ಗಕ್ಕೆ ಬಂದಿಳಿದಿದ್ದು ಗುರುವಾರ ಬೆಳಗ್ಗೆಯಿಂದಲೇ ತಪಾಸಣೆ ಆರಂಭಿಸಿದ್ದಾರೆ. ನಮೋಶಿಯವರ ನಿವಾಸಕ್ಕೆ ಬೆಳಗ್ಗೆ 10 ಗಂಟೆಗೆ ಒಳಗೆ ಹೋದವರು ರಾತ್ರಿಯವರೆಗೂ ದಾಖಲೆಗಳ ತಪಾಸಣೆ ಮುಂದುವರಿಸಿದ್ದಾರೆ.
ಅಲ್ಲದೆ ಐಟಿ ಅಧಿಕಾರಿಗಳು ಹಲವು ತಂಡಗಳಲ್ಲಿ ಪ್ರತ್ಯೇಕವಾಗಿ ಸಂಚರಿಸಿ, ಪಿಡಿಎ ಕಾಲೇಜು ಕ್ಯಾಂಪಸ್‌ನಲ್ಲಿರುವ ಸಂಸ್ಥೆಯ ಕೇಂದ್ರ ಕಚೇರಿ ಮೇಲೂ ದಾಳಿ ನಡೆಸಿದ್ದು ದಾಖಲೆಗಳನ್ನು ತಡ ರಾತ್ರಿಯರೆಗೂ ಮುಂದುವರಿಸಿದ್ದಾರೆ. ನಮೋಶಿಯವರ ನಿಕಟವರ್ತಿ, ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಡಾ. ಸಂಪತ್‌ಕುಮಾರ್ ಲೋಯಾ ಹಾಗೂ ನಮೋಶಿ ಬೀಗರಾಗಿರುವ ಶಿವರಾಜ ನಿಗ್ಗುಡಗಿ ಅವರ ನಿವಾಸಗಳ ಮೇಲೂ ಅಧಿಕಾರಿಗಳ ತಂಡ ದಾಳಿ ನಡೆಸಿ, ಅಲ್ಲಿಯೂ ಹಲವು ದಾಖಲೆಗಳನ್ನು ಪರಿಶೀಲಿಸಿದ್ದಾರೆ.
ಯಡಿಯೂರಪ್ಪ ಬೀಗರ ಮನೆ ಮೇಲೂ ದಾಳಿ: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರ ಮಗ ವಿಜಯೇಂದ್ರ ಪತ್ನಿ ತಂದೆ, ಉದ್ದಿಮೆದಾರ ಶಿವಾನಂದ ಮಾನ್ಕರ್ ಅವರ ಇಲ್ಲಿನ ಆನಂದ ನಗರದಲ್ಲಿನ ನಿವಾಸದ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ಮುಂದುವರಿಸಿದ್ದಾರೆ.
ಈಗಲೇ ಯಾವುದೇ ಮಾಹಿತಿ ನೀಡಲಾಗುವುದಿಲ್ಲ ಎಂದು 'ಕನ್ನಡಪ್ರಭ'ದೊಂದಿಗೆ ಮಾತನಾಡಿರುವ ಐಟಿ ಅಧಿಕಾರಿಗಳು ತಿಳಿಸಿದ್ದಾರೆ. ಮೂಲಗಳ ಪ್ರಕಾರ ಶಿವಾನಂದ ಮಾನ್ಕರ್ ಸದ್ಯ ವಿದೇಶ ಪ್ರವಾಸದಲ್ಲಿದ್ದು, ನಾಳೆ,ನಾಡಿದ್ದು ಬೆಂಗಳೂರಿಗೆ ಮರಳುವ ಸಾಧ್ಯತೆಗಳಿವೆ.
ಮಾಹಿತಿ ಲಭ್ಯ: ಹಿರಿಯ ಅಧಿಕಾರಿಗಳನ್ನೊಳಗೊಂಡ ಐಟಿ ಅಧಿಕಾರಿಗಳ ತಂಡ ಸಂಸ್ಥೆ ಬಗ್ಗೆ ಕಳೆದ ಅನೇಕ ವರ್ಷಗಳಿಂದ ದೂರು ನೀಡುತ್ತಿರುವ, ದಾಖಲೆಗಳ ಸಮೇತ ನ್ಯಾಯಾಲಯ ಮೊರೆ ಹೊಕ್ಕು ಹೋರಾಡಿದವರು, ದೂರು ಸಲ್ಲಿಸಿ ನ್ಯಾಯಕ್ಕಾಗಿ ಆಗ್ರಹಿಸಿರುವವರನ್ನೂ ಸಂಪರ್ಕಿಸಿ ದಾಖಲೆಗಳನ್ನು ಸಂಗ್ರಹಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

