ನಿಮ್ಮೂರಿನ ಶಾಲೆಗೆ ಸೂರು ಕೊಡು ಸಿದ್ದಣ್ಣ!
ರಾಜೀವ ಹೆಗಡೆ
ಕನ್ನಡಪ್ರಭ ವಾರ್ತೆ ಬೆಂಗಳೂರು ಜು.19
ರಾಜ್ಯ ಸರ್ಕಾರದಲ್ಲಿ ಒಂದು ಇಲಾಖೆಗೆ ಮತ್ತೊಂದು ಇಲಾಖೆಯೇ ಶತ್ರು..!
ಇದಕ್ಕೆ ತಾಜಾ ಉದಾಹರಣೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿ 8 ಸರ್ಕಾರಿ ಶಾಲೆಗಳ ಕಟ್ಟಡ ನಿರ್ಮಾಣಕ್ಕೆ ಭೂಮಿ ನೀಡದೇ ಅರಣ್ಯ ಇಲಾಖೆಯ ಅಧಿಕಾರಿಗಳು ಸತಾಯಿಸುತ್ತಿದ್ದಾರೆ.
ಶಿಕ್ಷಣ ಇಲಾಖೆಯಿಂದ ಹತ್ತಾರು ಬಾರಿ ಪ್ರಸ್ತಾವನೆ ಸಲ್ಲಿಸಿದ್ದರೂ ಅರಣ್ಯ ಇಲಾಖೆ ಉತ್ತರ ನೀಡಿಲ್ಲ. ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ಅರಣ್ಯ ಪ್ರದೇಶದಲ್ಲಿ ಈ ಶಾಲೆಗಳು ಬರುತ್ತವೆ. ಸೂರಿಲ್ಲದ ಈ 8 ಶಾಲೆಗಳಲ್ಲಿ 250ಕ್ಕೂ ಅಧಿಕ ಗಿರಿಜನ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಇದು ಕೇವಲ ಮೈಸೂರು ಜಿಲ್ಲೆಯ ಸಮಸ್ಯೆಯಾಗಿರದೆ ಚಾಮರಾಜನಗರದಲ್ಲಿಯೂ ವ್ಯಾಪಕವಾಗಿದೆ. ಇನ್ನು ಮಲೆನಾಡಿನ ಉತ್ತರಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿಯೂ ಶಾಲೆಗಳಿಗೆ ಭೂಮಿ ಹಕ್ಕುಪತ್ರ ನೀಡುವ ಕುರಿತಂತೆ ಅರಣ್ಯ ಇಲಾಖೆ ಗಲಾಟೆ ಮಾಡುತ್ತಿದೆ. ರೆಸಾರ್ಟ್ ಹಾಗೂ ಇನ್ನಿತರ ಚಟುವಟಿಕೆಗಳಿಗೆ ಅನುಮತಿ ನೀಡುವ ಅರಣ್ಯ ಇಲಾಖೆ ವಿದ್ಯಾರ್ಥಿಗಳಿಗೆ ಶಿಕ್ಷಣ ಹಕ್ಕು ನೀಡಲು ಹಿಂದೇಟು ಹಾಕುತ್ತಿದೆ.
ಹತಾಶ ಪ್ರಯತ್ನ: ಎಚ್.ಡಿ. ಕೋಟೆ ಅರಣ್ಯಪ್ರದೇಶ ವ್ಯಾಪ್ತಿಯ 8 ಹಾಡಿಗಳಲ್ಲಿ ಸರ್ಕಾರಿ ಶಾಲೆಗಳ ಕಟ್ಟಡ ನಿರ್ಮಿಸುವ ಉದ್ದೇಶದಿಂದ 2 ವರ್ಷಗಳಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಅರಣ್ಯ ಇಲಾಖೆಗೆ ಸರಣಿ ಪತ್ರಗಳನ್ನು ಬರೆಯುತ್ತಿದ್ದಾರೆ. ಹಿಂದಿನ ಶಿಕ್ಷಣ ಸಚಿವರು ಕೂಡ ಪತ್ರ ಬರೆದಿದ್ದರೂ ಪ್ರಯೋಜನವಾಗಿಲ್ಲ. ಸರ್ವಶಿಕ್ಷಣ ಅಭಿಯಾನ ಉಪನಿರ್ದೇಶಕರು ಕಳೆದ 2012ರ ಅ. 21ರಂದು ಗಿರಿಜನ ಅಭಿವೃದ್ಧಿ ಯೋಜನಾಧಿಕಾರಿ ಹಾಗೂ ಅರಣ್ಯ ಇಲಾಖೆಗೆ ಪತ್ರ ಬರೆದಿದ್ದಾರೆ.
ಆದರೆ ಸೌಜನ್ಯಕ್ಕೂ ಅರಣ್ಯ ಇಲಾಖೆಯ ಅಧಿಕಾರಿಗಳು ಹಿಂಬರಹ ನೀಡಿಲ್ಲ.
ಎಚ್.ಡಿ. ಕೋಟೆ ಭಾಗದ 18 ಹಾಡಿಗಳಲ್ಲಿ 8 ಶಾಲೆಗಳಿಗಾಗಿ 15 ಕೊಠಡಿಗಳ ನಿರ್ಮಾಣಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶಹೊರಡಿಸಿದೆ. ಇದಲ್ಲದೇ ಕಳೆದ 2 ವರ್ಷದಿಂದ ಈ ಶಾಲೆಗಳ ಮುಖ್ಯೋಪಾಧ್ಯಾಯರ ಖಾತೆಯಲ್ಲಿ ಪ್ರತಿ ಕೊಠಡಿಗೆ 4.18 ಲಕ್ಷ ಹಣ ತೆಗೆದಿರಿಸಲಾಗಿದೆ. ಒಟ್ಟು ಈ ಶಾಲೆಗಳಿಗಾಗಿ 62.70 ಲಕ್ಷ ಅನುದಾನವನ್ನು ರಾಜ್ಯ ಸರ್ಕಾರ ಮೀಸಲಿರಿಸಿದೆ.
ರಾಜ್ಯದ ಸಾಕಷ್ಟು ಯೋಜನೆಗಳಿಗೆ ಅನುದಾನವೇ ಇರದ ಪರಿಸ್ಥಿತಿಯಿದೆ. ಆದರೆ ಈ ಶಾಲೆಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರದ ಪ್ರಮುಖ ಅಂಗವಾದ ಶಿಕ್ಷಣ ಇಲಾಖೆ ಮುಂದಾಗಿದೆ. ಸರ್ಕಾರದ ಮತ್ತೊಂದು ಭಾಗವಾದ ಅರಣ್ಯ ಇಲಾಖೆ ಯೋಜನೆಗೆ ಸಂಪೂರ್ಣ ಕೊಕ್ಕೆ ಹಾಕುತ್ತದೆ.ವಿಚಿತ್ರವೆಂದರೆ ರಾಜ್ಯ ಸರ್ಕಾರವು ಮಧ್ಯಪ್ರವೇಶಿಸಿ ಸಮಸ್ಯೆ ಪರಿಹರಿಸಲು ಮುಂದಾಗುತ್ತಿಲ್ಲ. ಇದು ಕೇವಲ ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ಅರಣ್ಯ ವಲಯಕ್ಕೆ ಸೀಮಿತವಾಗಿಲ್ಲ. ಚಾಮರಾಜನಗರ ಜಿಲ್ಲೆಯ ಹನೂರು ಹಾಗೂ ಪಾಲಾರ್ ಅರಣ್ಯ ಪ್ರದೇಶಗಳಲ್ಲಿಯೂ ಇದೇ ಪರಿಸ್ಥಿತಿಯಿದೆ. ಪಾಲಾರ್ ಶಾಲೆಯ ಕುರಿತಂತೆ 'ಕನ್ನಡಪ್ರಭ'ದಲ್ಲಿ ವಿಶೇಷ ವರದಿ ಪ್ರಕಟವಾದ ಮೇಲೆ ಅರಣ್ಯ ಇಲಾಖೆಗೆ ಜ್ಞಾನೋದಯವಾಗಿತ್ತು. ಇದೇ ಅರಣ್ಯ ಪ್ರದೇಶದಲ್ಲಿ ಇನ್ನು 3 ಶಾಲೆಗಳಿಗೆ ಅರಣ್ಯ ಭೂಮಿ ನೀಡುವ ಕುರಿತಂತೆ ಅಂತಿಮ ನಿರ್ಣಯವಾಗಿಲ್ಲ. ಅರಣ್ಯ ಇಲಾಖೆ ಮೀನಮೇಷ ಎಣಿಸುತ್ತಿದೆ.
ವರಸೆಯೇನು?: ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಯಾವುದೆ ಅಭಿವೃದ್ಧಿ ಚಟುವಟಿಕೆ ಹಾಗೂ ಕಟ್ಟಡ ನಿರ್ಮಾಣ ಮಾಡುವಂತಿಲ್ಲ ಎಂಬ ಸಿದ್ದ ಹೇಳಿಕೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ತೋರಿಸುತ್ತಾರೆ. ಈ ಅರಣ್ಯ ಪ್ರದೇಶದಲ್ಲಿ ಶಾಲೆಗಳನ್ನು ನಿರ್ಮಿಸಿದರೆ ಗಿರಿಜನರನ್ನು ಒಕ್ಕಲೆಬ್ಬಿಸುವ ಆಲೋಚನೆಯಲ್ಲಿರುವ ಇಲಾಖೆಯ ಯೋಜನೆಗೆ ಹಿನ್ನಡೆಯಾಗುತ್ತದೆ. ಗಿರಿಜನರಿಗೆ ಆಧುನಿಕ ಜಗತ್ತು ಅನುಭವಿಸುತ್ತಿರುವ ಯಾವುದೇ ಸವಲತ್ತುಗಳು ಸಿಗದಿರುವಾಗ ತಾವಾಗಿಯೇ ವಲಸೆ ಹೋಗುತ್ತಾರೆ ಎನ್ನುವುದು ಇಲಾಖೆಯ ಚಿಂತನೆಯಾಗಿದೆ.
ಗಿರಿಜನರಿಗೂ ಮೂಲ ಹಕ್ಕುಗಳಿವೆ
ಅರಣ್ಯ ರಕ್ಷಣೆ ಬಗ್ಗೆ ಮಾತನಾಡುವ ಅಧಿಕಾರಿಗಳು ಗಿರಿಜನರ ಹಕ್ಕುಗಳ ಬಗೆಗೂ ಚಿಂತಿಸಬೇಕಿದೆ. ರಕ್ಷಿತ ಅರಣ್ಯ ವಲಯಗಳಲ್ಲಿ ಕಟ್ಟಡ ನಿರ್ಮಿಸಬೇಡಿ ಎಂದಿರುವ ಇದೇ ಸುಪ್ರೀಂ ಕೋರ್ಟ್, ದೇಶದಲ್ಲಿನ ಪ್ರತಿಯೊಬ್ಬ ಮಗುವು ಉಚಿತ ಪ್ರಾಥಮಿಕ ಶಿಕ್ಷಣ ಪಡೆಯುವ ಹಕ್ಕು ಹೊಂದಿದೆ ಎಂದು ತೀರ್ಪು ನೀಡಿದೆ. ಇದಲ್ಲದೇ ಗಿರಿಜನರ ಹಕ್ಕುಗಳ ಕಾಯಿದೆ ಪ್ರಕಾರಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ವಾಸವಾಗಿದ್ದರೂ ಮೂಲಸೌಕರ್ಯಗಳಾದ ಆರೋಗ್ಯ, ಶಿಕ್ಷಣ ಹಾಗೂ ಸಂಪರ್ಕ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಬೇಕಿದೆ.
ಸೂರಿಲ್ಲದ ಶಾಲೆಗಳು
ಶಾಲೆ ವಿದ್ಯಾರ್ಥಿಗಳು
ಸಿ.ಬಿ.ಕುಪ್ಪೆ 61
ಬಳ್ಳೇಹಾಡಿ 52
ಗೋಳೂರು ಹಾಡಿ 50
ಗೋಳೂರು 41
ಆನೆಮಾಳದ ಹಾಡಿ 26
ಬಾವಲಿ ಹಾಡಿ 24
ಮಾಳದಹಾಡಿ 10
ಬೋಗಾಪುರ ಹಾಡಿ 37
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

