ಪ್ರಧಾನ ಸುದ್ದಿ

'ಯಲ್ಲೋ'ಕಾಟ; ವಿದೇಶಕ್ಕಿಲ್ಲ ಹಾರಾಟ!

'ಯಲ್ಲೋ'ಕಾಟ; ವಿದೇಶಕ್ಕಿಲ್ಲ ಹಾರಾಟ!
Published On :

ಕ.ಪ್ರ.ವಾರ್ತೆ,  ಬೆಂಗಳೂರು,  ಜು. 25-
ಭವ್ಯ ಭವಿಷ್ಯ ರೂಪಿಸಿಕೊಳ್ಳಲು ಪರದೇಶಕ್ಕೆ ತೆರಳುವ ಕನಸು ಕಾಣುತ್ತಿರುವ ರಾಜ್ಯದ ನೂರಾರು ಜನರಿಗೆ ಈಗ ಹಳದಿ ಜ್ವರ ನಿರೋಧಕ ಲಸಿಕೆ ಅಡ್ಡಿಯಾಗಿದೆ..!
ಏಕೆಂದರೆ, ಪಾಸ್‌ಪೋರ್ಟ್, ವೀಸಾ, ಉದ್ಯೋಗ ನೇಮಕಾದೇಶ ಎಲ್ಲಾ ಜತೆಗಿದ್ದರೂ 'ಯಲ್ಲೋ ಫೀವರ್‌' (ಹಳದಿ ಜ್ವರ) ನಿರೋಧಕ ಲಸಿಕೆ ಕೊರತೆ ಅವರನ್ನು ಮುಂದಡಿ ಇಡದಂತೆ ಮಾಡಿದೆ.
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗಬೇಕಿದ್ದ ಹಳದಿ ಜ್ವರ ನಿರೋಧಕ ಲಸಿಕೆ ಪೂರೈಕೆ ಕಳೆದ 5 ತಿಂಗಳಿನಿಂದ ಸ್ಥಗಿತಗೊಂಡಿದ್ದೇ ಇದಕ್ಕೆ ಕಾರಣ. ಕೇಂದ್ರ- ರಾಜ್ಯ ಎರಡೂ ಕಡೆ ಕಾಂಗ್ರೆಸ್ ಸರ್ಕಾರವಿದೆ. ರಾಜ್ಯ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದರೆ ತಮ್ಮ ಭವಿಷ್ಯ ಹಸನಾಗುತ್ತದೆ ಎಂಬ ನಿರೀಕ್ಷೆಯಲ್ಲಿ ಅವರೆಲ್ಲ ಚಾತಕಪಕ್ಷಿಗಳಂತೆ ಕಾಯುತ್ತಿದ್ದಾರೆ.

ಪೀಡಿತ ಪ್ರದೇಶ: ಮಧ್ಯ ಹಾಗೂ ದಕ್ಷಿಣ ಅಮೆರಿಕ ಮತ್ತು ಆಫ್ರಿಕಾದ ಹಲವು ದೇಶಗಳಲ್ಲಿ ಹಳದಿ ಜ್ವರ ವ್ಯಾಪಕವಾಗಿದೆ. ಹಾಗಾಗಿ, ಆ ಭಾಗದ ಘಾನಾ, ಕೀನ್ಯಾ, ರವಾಂಡ, ಉಗಾಂಡ, ಬ್ರೆಜಿಲ್, ಅರ್ಜೆಂಟೀನಾ, ಕೊಲಂಬಿಯಾ, ಗಿನಿಯಾ ಮುಂತಾದೆಡೆಗೆ ತೆರಳುವವರು ನಗರದ ಸಾರ್ವಜನಿಕ ಆರೋಗ್ಯ ಸಂಸ್ಥೆ(ಪಿಎಚ್‌ಐ)ಯಲ್ಲಿ ಹಳದಿ ರೋಗ ನಿರೋಧಕ ಲಸಿಕೆ ಕಡ್ಡಾಯ ಹಾಕಿಸಿಕೊಳ್ಳಬೇಕು. ಹಾಗೆ ಹಾಕಿಸಿಕೊಂಡಿದ್ದಕ್ಕೆ ಪಿಎಚ್‌ಐ ನೀಡುವ 'ಅಂತಾರಾಷ್ಟ್ರೀಯ ಲಸಿಕೆ ಪ್ರಮಾಣಪತ್ರ' ಇದ್ದರೆ ಮಾತ್ರ ಅಲ್ಲಿಗೆ ತೆರಳುವ ವೈಮಾನಿಕ ಟಿಕೆಟ್ ಸಿಗುತ್ತದೆ.

ಸಿಆರ್‌ಐ ಪೂರೈಕೆ ಸ್ಥಗಿತ: ಹಿಮಾಚಲ ಪ್ರದೇಶದ ಕಸೌಲಿಯಲ್ಲಿರುವ ಕೇಂದ್ರೀಯ ಸಂಶೋಧನಾ ಸಂಸ್ಥೆ(ಸಿಆರ್‌ಐ) ರಷ್ಯಾದಲ್ಲಿ ತಯಾರಿತ ಹಳದಿ ಜ್ವರ ನಿರೋಧಕ ಲಸಿಕೆಯನ್ನು ದೃಢೀಕರಿಸಿ ದೇಶಾದ್ಯಂತ ಪೂರೈಸುತ್ತದೆ. ಹಾಗೆ ಸಿಆರ್‌ಐನಿಂದ ಬರುವ ಲಸಿಕೆಯನ್ನು ಪಿಎಚ್‌ಐ ರಿಯಾಯಿತಿ ದರದಲ್ಲಿ (1ಕ್ಕೆ ರು. 265ರಂತೆ)ಹಾಕಿಸಿ ಪ್ರಮಾಣ ಪತ್ರ ನೀಡುತ್ತದೆ. ವಾರಕ್ಕೊಮ್ಮೆ ನೀಡುತ್ತಿದ್ದ ಲಸಿಕೆಗಾಗಿ ತಿಂಗಳಲ್ಲಿ 300ಕ್ಕೂ ಅಧಿಕ ಜನ ಪಿಎಚ್‌ಐಗೆ ಬರುತ್ತಿದ್ದರು. ಆದರೆ, ರಷ್ಯಾದಲ್ಲಿ ಲಸಿಕೆ ತಯಾರಿಕೆ ಸ್ಥಗಿತಗೊಂಡ ಕಾರಣ ರಾಜ್ಯಕ್ಕೆ ಆಗುತ್ತಿದ್ದ ಪೂರೈಕೆ ಫೆಬ್ರವರಿಯಿಂದ ಸ್ಥಗಿತವಾಗಿದೆ. ಈ ನಡುವೆ ಫ್ರಾನ್ಸ್ ಮೂಲದ ಕಂಪನಿಯಿಂದ ಬರುತ್ತಿದ್ದ ಇದೇ ಔಷಧ ಕೆಲ ಕಡೆ ಖಾಸಗಿಯಾಗಿ ಸಿಗುತ್ತಿತ್ತು. ದುಬಾರಿಯಾಗಿದ್ದರೂ (1ಕ್ಕೆ ರು. 1535ರಂತೆ) ಸಾರ್ವಜನಿಕರು ಇದನ್ನು ಖಾಸಗಿಯಾಗಿ ಖರೀದಿಸಿ ಪಿಎಚ್‌ಐಗೆ ಬಂದು ಹಾಕಿಸಿಕೊಂಡು ಪ್ರಮಾಣಪತ್ರ ಪಡೆಯುತ್ತಿದ್ದರು. ಈಗ ಖಾಸಗಿಯಾಗಿಯೂ ಲಸಿಕೆ ಸಿಗುತ್ತಿಲ್ಲ. ಹಾಗಾಗಿ, ನೂರಾರು ಜನ ಕೇವಲ 1 ಲಸಿಕೆ ಕೊರತೆಯಿಂದ ವಿದೇಶದಲ್ಲಿ ತಮಗೆ ಲಭಿಸಿರುವ ಉದ್ಯೋಗ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.

ಜ್ವರ ಹರಡುವ ವೈರಾಣು:
ಇದು ವೈರಸ್‌ನಿಂದ ಬರುವ ಜ್ವರ. ಫ್ಲೇವಿವೈರಿಡೇ ಎಂಬ ಪ್ರಭೇದಕ್ಕೆ ಸೇರಿದ ಈ ಜ್ವರ ಹರಡುವ ವೈರಾಣುಗಳಿಗೆ 'ಯಲ್ಲೋ ಫೀವರ್ ವೈರಸ್‌'ಗಳೆಂದೇ ಹೆಸರು. ಡೆಂಘೀ, ಚಿಕೂನ್‌ಗುನ್ಯಾ ರೋಗಲಕ್ಷಣಗಳಿಗೂ ಹಳದಿ ಜ್ವರದ ರೋಗಲಕ್ಷಣಗಳಿಗೂ ಸಾಮ್ಯತೆ ಇದೆ. ವಿಶೇಷವೆಂದರೆ, ಹಳದಿ ಜ್ವರಕ್ಕೆ ಕಾರಣ ಬೇರೆ ವೈರಸ್ ಆದರೂ ಹಳದಿ ಜ್ವರವನ್ನು ಹರಡುವುದು ಡೆಂಘೀ, ಚಿಕೂನ್‌ಗುನ್ಯಾ ರೋಗಕ್ಕೆ ಕಾರಣವಾಗುವ ಈಡಿಸ್ ಈಜಿಪ್ಟೈ ವೈರಸ್. 

ಪ್ರತಿ ತಿಂಗಳು ರಾಜ್ಯಾದ್ಯಂತ 300ಕ್ಕೂ ಅಧಿಕ ಜನ ಹಳದಿ ಜ್ವರ ನಿರೋಧಕ ಲಸಿಕೆಗಾಗಿ ಬರುತ್ತಿದ್ದರು. ಆದರೆ, ಕೇಂದ್ರ ಸರ್ಕಾರದಿಂದ ಬರುತ್ತಿದ್ದ ಲಸಿಕೆ ಪೂರೈಕೆ ಫೆಬ್ರವರಿಯಿಂದ ಸ್ಥಗಿತಗೊಂಡಿದೆ. ಕಳೆದ 1 ತಿಂಗಳಿನಿಂದ ಲಸಿಕೆಯ ಖಾಸಗಿ ಪೂರೈಕೆ ಕೂಡ ನಿಂತಿದೆ. ಆ ಬಗ್ಗೆ ಸಿಆರ್‌ಐ ಗಮನಕ್ಕೆ ತರಲಾಗಿದೆ. ಅಲ್ಲಿ ಸದ್ಯ ಅದರ ದಾಸ್ತಾನು ಇಲ್ಲ ಎಂಬುದಾಗಿ ಸಿಆರ್‌ಐ ತಿಳಿಸಿದೆ.
- ಭಕ್ತವತ್ಸಲ, ಜಂಟಿ ನಿರ್ದೇಶಕ,  ಸಾರ್ವಜನಿಕ ಆರೋಗ್ಯ ಸಂಸ್ಥೆ

ದಕ್ಷಿಣ ಆಫ್ರಿಕಾದಲ್ಲಿ ಕೆಲಸ ಸಿಕ್ಕಿದೆ. ಆ.12ಕ್ಕೆ ಕೆಲಸಕ್ಕೆ ಹಾಜರಾಗಬೇಕು. ಆದರೆ, ಹಳದಿ ಜ್ವರ ನಿರೋಧಕ ಲಸಿಕೆ ಹಾಕಿಸಿಕೊಳ್ಳದ ಕಾರಣ ವೈಮಾನಿಕ ಟಿಕೆಟ್ ಸಿಗುತ್ತಿಲ್ಲ. ಶೀಘ್ರದಲ್ಲಿ ಲಸಿಕೆ ಸಿಗದಿದ್ದರೆ, ವಿದೇಶಕ್ಕೆ ಹೋಗಲಾಗದೆ ಕೆಲಸ ಕೈತಪ್ಪುವ ಸಾಧ್ಯತೆ ಇದೆ.
- ವೆಂಕಟೇಶ್, ಖಾಸಗಿ ಉದ್ಯೋಗಿ

- ರವಿಕಾಂತ ಕುಂದಾಪುರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.