ಡೈವೋರ್ಸ್ ವಿಚಾರಣೆಗೆ ಮುನ್ನವೇ 7.7 ಕೋಟಿ ವೆಚ್ಚ!
ಲಂಡನ್: ಇದು ಅಂತಿಂಥ ಕೇಸ್ ಅಲ್ಲ. ಎಲ್ಲ ಡೈವೋರ್ಸ್ ಕೇಸ್ಗಳಲ್ಲೂ ಪತಿಯಿಂದ ಜೀವನಾಂಶ ಸಿಗಲಿ ಎಂದು ಪತ್ನಿ ಬಯಸಿದರೆ, ಕೇಸ್ ಬೇಗ ಇತ್ಯರ್ಥವಾದರೆ ಸಾಕು ಎಂದು ಪತಿ ಯೋಚಿಸುತ್ತಿರುತ್ತಾನೆ. ಆದರೆ ಇಲ್ಲಿ ಮಾತ್ರ ಕೇಸ್ ಉಲ್ಟಾ. ಇಲ್ಲಿ 'ವಿಚ್ಛೇದನ ಎಲ್ಲಿ ನಡೆಯಬೇಕು' ಎಂಬ ವಿಚಾರದಲ್ಲೇ ಪತಿ-ಪತ್ನಿ ನಡುವೆ ಭಾರಿ ಪೈಪೋಟಿ ನಡೆಯುತ್ತಿದೆ. ಪ್ರಕರಣದ ವಿಚಾರಣೆ ಯಾವ ಕೋರ್ಟ್ನಲ್ಲಿ ನಡೆಸಬೇಕು ಎಂಬ ಹೋರಾಟಕ್ಕಾಗಿ ಇವರಿಬ್ಬರೂ ಖರ್ಚು ಮಾಡಿದ ಒಟ್ಟು ಮೊತ್ತ ಬರೋಬ್ಬರಿ 7.72 ಕೋಟಿ!
ಪತಿ ವಕೀಲ, ಪತ್ನಿ ವೈದ್ಯೆ: ಈ ದಂಪತಿ ಭಾರತೀಯ ಮೂಲದವರು. ಅಲೋಕ್ ರಾಯ್(41) ಹಾಗೂ ಚಾರೂ ಸೇಖ್ರಿ(39) ಇಂಟರ್ನೆಟ್ ಡೇಟಿಂಗ್ ಏಜೆನ್ಸಿ ಮೂಲಕ ಭೇಟಿ ಯಾಗಿ, 2009ರಲ್ಲಿ ವಿವಾಹವಾದರು. ಒಂದು ವರ್ಷದಲ್ಲೇ ಪುತ್ರನನ್ನೂ ಪಡೆದರು. ಮಗ ಹುಟ್ಟಿದ ಒಂದೆರಡು ತಿಂಗಳಲ್ಲೇ ಇವರ ನಡುವೆ ಮನಸ್ತಾಪ ಮೂಡಿತು. ತಮ್ಮ ದಾಂಪತ್ಯಕ್ಕೆ ಕೊನೆ ಹಾಡಲು ಬಯಸಿದರು. ರಾಯ್ ಕಾನೂನು ಸಂಸ್ಥೆ ವೈಟ್ ಆ್ಯಂಡ್ ಕೇಸ್ನ ಪಾಲುದಾರ ಹಾಗೂ ವಕೀಲ. ಈತನಿಗೆ ಉತ್ತರ ಲಂಡನ್ನ ಹ್ಯಾಂಪ್ಸ್ಟೆಟ್, ಕಾಲಿಂಡೇಲ್ನಲ್ಲಿ ಆಸ್ತಿಪಾಸ್ತಿಯೂ ಇದೆ. ಚಾರೂ ಸೇಖ್ರಿಯೇನೂ ಕಮ್ಮಿಯಿಲ್ಲ. ಈಕೆ ಮಕ್ಕಳ ತಜ್ಞೆ.
ಬ್ರಿಟನ್ನಲ್ಲೇ ನಡೆಯಬೇಕೆಂಬ ಹಠ: ಇವರ ಒಟ್ಟು ಆಸ್ತಿ 36.30 ಕೋಟಿ. ಇವರು ಬ್ರಿಟನ್ನ ಕಾಯಂ ವಾಸಿಗಳು. 'ವಿಶ್ವದ ಡೈವೋರ್ಸ್ ರಾಜಧಾನಿ' ಎಂದೇ ಹೆಸರಾದ ಬ್ರಿಟನ್ನ ಕೋರ್ಟ್ನಲ್ಲಿ ವಿಚ್ಛೇದನ ವಿಚಾರಣೆ ನಡೆಯಬೇಕು ಎಂಬುದು ಸೇಖ್ರಿ ಬಯಕೆ. ಅಲ್ಲಿ ವಿಚ್ಛೇದನ ಸಿಕ್ಕಿದರೆ ಪತ್ನಿಗೆ ಹೆಚ್ಚಿನ ಜೀವನಾಂಶ ದೊರೆಯುತ್ತದೆ ಎಂಬುದು ಮಹಿಳೆಯರ ಭಾವನೆ. ಅದರಂತೆ ಅಲ್ಲೇ ನಡೆಯಬೇಕೆಂದು ಸೇಖ್ರಿ ಪಟ್ಟುಹಿಡಿದರೆ, ಆಗಲ್ಲ ಎನ್ನುವುದು ರಾಯ್ ಹಠ. ಹಠ ಸಾಧಿಸುವ ಸಲುವಾಗಿ ಮನಬಂದಂತೆ ಹಣ ಖರ್ಚು ಮಾಡುತ್ತಿದ್ದಾರೆ ಈ ದಂಪತಿ. ಇನ್ನೂ ಪ್ರಕರಣದ ವಿಚಾರಣೆಯೇ ಆರಂಭವಾಗಿಲ್ಲ. ಆದರೂ ಅದಾಗಲೇ ಇವರ ಆಸ್ತಿಯ ಕಾಲು ಭಾಗ ನೀರಿನಂತೆ ಖರ್ಚಾಗಿ ಹೋಗಿದೆ.
ಸಾಕು ಎಂದ ಜಡ್ಜ್
ಇವರ ಕಥೆ ಕೇಳಿ ಬ್ರಿಟನ್ನ ಹೈಕೋರ್ಟ್ ಜಡ್ಜ್ವೊಬ್ಬರು ದಂಗಾಗಿದ್ದಾರೆ. ವೃತ್ತಿಪರರಾದ ನೀವು ನಿಮ್ಮ ಆಸ್ತಿಯ ಕಾಲು ಭಾಗವನ್ನು ಕಾನೂನು ಹೋರಾಟಕ್ಕಾಗಿಯೇ ವ್ಯರ್ಥ ಮಾಡಿದ್ದೀರಿ. ಇನ್ನಾದರೂ ಈ ಹೋರಾಟ ಬಿಟ್ಟು ಒಂದಾಗಿ. ಇಲ್ಲದಿದ್ರೆ ನೀವು ಆರ್ಥಿಕವಾಗಿ ದಿವಾಳಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. 'ನನಗೆ ಇವರ ಹೋರಾಟ ನೋಡಿ ಅಯ್ಯೋ ಎಂದೆನಿಸುತ್ತಿದೆ. ಪತಿ- ಪತ್ನಿ ಇಬ್ಬರೂ ಬುದ್ಧಿವಂತರು. ಉತ್ತಮ ಕೆಲಸದಲ್ಲಿದ್ದಾರೆ. ವೃತ್ತಿಯಲ್ಲೂ ಯಶಸ್ಸು ಸಾಧಿಸಿದ್ದಾರೆ. ಆದರೆ ಇವರ್ಯಾಕೆ ಈ ರೀತಿ ಮಾಡುತ್ತಿದ್ದಾರೆ ಎಂದೇ ಅರ್ಥವಾಗುತ್ತಿಲ್ಲ' ಎಂದು ನುಡಿದಿದ್ದಾರೆ ಜಡ್ಜ್ ಹೋಲ್ಮನ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

