ಗೊಬ್ಬರ ಬಲು ಭಾರ

ಕನ್ನಡಪ್ರಭ ವಾರ್ತೆ, ಬೆಂಗಳೂರು , ಜು.29-
ರಾಜ್ಯದಲ್ಲಿ ರಸಗೊಬ್ಬರದ ಬೆಲೆ ಸದ್ದಿಲ್ಲದೆ ಗಗನಕ್ಕೇರಿದೆ. ಅಂದಹಾಗೆ ಇದು ಅಧಿಕೃತ ಏರಿಕೆಯಲ್ಲ. ಗೊಬ್ಬರ ತಯಾರಿಕೆ ಕಂಪನಿಗಳು ತೆರೆಮರೆಯಲ್ಲೇ ಬೆಲೆ ಏರಿಸಿ ರೈತರಿಂದ ದುಪ್ಪಟ್ಟು ದರ ಕೀಳುತ್ತಿವೆ.
ಎರಡು ಗೊಬ್ಬರ ಕಂಪನಿಗಳನ್ನು ಬಿಟ್ಟರೆ ಬಹುತೇಕ ಕಂಪನಿಗಳು ಬೆಲೆ ಏರಿಕೆ ಬಗ್ಗೆ ಸರ್ಕಾರಕ್ಕೆ ಮಾಹಿತಿಯನ್ನೇ ನೀಡಿಲ್ಲ. ಹೀಗಾಗಿ ಸರ್ಕಾರ ಸಹಕಾರ ಸಂಘಗಳ ಮೂಲಕ ನೀಡುತ್ತಿರುವ ಗೊಬ್ಬರ ಬೆಲೆ ದಿಢೀರ್ ಏರಿಕೆಯಾಗಿದ್ದು, ರೈತರು ಮತ್ತು ವಿತರಕರ ನಡುವಿನ ಜಗಳಕ್ಕೆ ಕಾರಣವಾಗುತ್ತಿದೆ.
ಕಂಪನಿಗಳು ಗೊಬ್ಬರ ಬೆಲೆ ಹೆಚ್ಚಿಸಿವೆ ಎನ್ನುವುದನ್ನೇ ನೆಪ ಮಾಡಿಕೊಂಡು ಇನ್ನು ಖಾಸಗಿ ಮಾರಾಟಗಾರರು ಎಲ್ಲಾ ರೀತಿಯ ಗೊಬ್ಬರದ ಮೇಲೂ ಕನಿಷ್ಠ 100 ಹೆಚ್ಚುವರಿ ಹಣ ಪಡೆಯುತ್ತಿದ್ದಾರೆ. ಈ ಮಧ್ಯೆ, ಎಲ್ಲಾ ಬೆಳೆಗಳಿಗೂ ಬೇಕಿರುವ ಯೂರಿಯಾ ಗೊಬ್ಬರದ ಬೇಡಿಕೆ ಹೆಚ್ಚಾಗಿದ್ದು, ರೈತರು ಈಗಲೇ ಪರದಾಡುವಂತಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಅಭಾವ ಹೆಚ್ಚಾಗುವ ಸಾಧ್ಯತೆ ಇದೆ. ಬೇಡಿಕೆ ಹೆಚ್ಚುತ್ತಿರುವುದರಿಂದ ಕೆಲವೆಡೆ ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದೂ ಉಂಟು.
ವಿಚಿತ್ರವೆಂದರೆ, ಖಾಸಗಿ ಮಾರಾಟಗಾರರು ತಮಗಿಚ್ಚಿಸಿದ ಬೆಲೆಯಂತೆ ಗೊಬ್ಬರ ಮಾರಾಟ ಮಾಡುತ್ತಿದ್ದರೂ ಕೃಷಿ ಇಲಾಖೆಯ ವಿಚಕ್ಷಣಾ ದಳ ಅಧಿಕಾರಿಗಳು ಕೇಳುತ್ತಿಲ್ಲ. ರೈತ ಸಂಘಟನೆಗಳು ಮಾತ್ರ ಪ್ರಶ್ನಿಸುತ್ತಿವೆ. ಆದರೆ, ರೈತ ಸಂಘಟನೆಗಳ ಹೋರಾಟವನ್ನು ರೈತರೇ ವಿರೋಧಿಸುತ್ತಿದ್ದಾರೆ. ಹೆಚ್ಚಿನ ಬೆಲೆಗಾದರೂ ಗೊಬ್ಬರ ಸಿಗುತ್ತಿದೆ. ಗಲಾಟೆ ಮಾಡಿದರೆ ಅದೂ ಸಿಗದೇ ಹೋದೀತು ಎಂಬುದು ಅವರ ಆತಂಕ.
ಎರ್ರಾಬಿರ್ರಿ ಬೆಲೆ, ಬಿಲ್ ಇಲ್ಲ !
ಸಹಕಾರ ಸಂಘಗಳಲ್ಲಿ ರಸಗೊಬ್ಬರಕ್ಕಾಗಿ ದಿನವಿಡೀ ಸರದಿಯಲ್ಲಿ ನಿಂತರೂ ಕೇಳಿದಷ್ಟು ಸಿಗುತ್ತಿಲ್ಲ. 10 ಚೀಲ ಕೇಳಿದರೆ ಒಂದೇ ಚೀಲ ಸಿಗುತ್ತದೆ. ಇನ್ನು ಯೂರಿಯಾ ಎಲ್ಲ ಬೆಳೆಗಳಿಗೂ ಮೇಲು ಗೊಬ್ಬರವಾಗಿ ಹಾಕಲು ಬೇಕಿದ್ದು, ರೈತರು ಇದಕ್ಕಾಗಿ ಮುಗಿ ಬೀಳುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಯೂರಿಯಾ ಅಭಾವ ಉಂಟಾಗಬಹುದು ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಖಾಸಗಿ ಮಾರಾಟಗಾರರು ದುಪ್ಪಟ್ಟು ಬೆಲೆಗೆ ಗೊಬ್ಬರ ಮಾರುತ್ತಿದ್ದರೂ ಬಿಲ್ ನೀಡುತ್ತಿಲ್ಲ. ಬಿಲ್ಗಾಗಿ ಒತ್ತಾಯಿಸಿದರೆ ಗೊಬ್ಬರವೇ ಇಲ್ಲ ಎನ್ನುತ್ತಿದ್ದಾರೆ ಎಂದು ರೈತರು ದೂರಿದ್ದಾರೆ.
ರುಪಾಯಿ ಮೌಲ್ಯ ಕುಸಿತ ಕಾರಣವಂತೆ?
ರಾಜ್ಯಕ್ಕೆ ಎಂ.ಸಿಎಫ್, ಕೋರಮಂಡಲ್, ಇಫ್ಕೋ, ನಾಗಾರ್ಜುನ, ಜುವಾರಿ, ಆರ್ಸಿಎಫ್ ಸೇರಿದಂತೆ 20ಕ್ಕೂ ಹೆಚ್ಚಿನ ಕಂಪನಿಗಳು ರಸಗೊಬ್ಬರ ಪೂರೈಸುತ್ತವೆ. ಸರ್ಕಾರ ಈ ಕಂಪನಿಗಳಿಂದ ಗೊಬ್ಬರ ಪಡೆದು ಸಹಕಾರ ಸಂಘಗಳ ಮೂಲಕ ಮಾರಾಟ ಮಾಡುತ್ತದೆ. ಖಾಸಗಿ ಮಾರಾಟಗಾರರು ಕೂಡ ನಿಗದಿತ ಬೆಲೆಗೆ ಮಾರಾಟ ಮಾಡಬೇಕು. ಆದರೆ, ಪರಿಸ್ಥಿತಿ ಬೇರೆಯೇ ಇದೆ. ರಾಜ್ಯದಲ್ಲಿ ಶೇ.75ರಷ್ಟು ಗೊಬ್ಬರವನ್ನು ಮಾರಾಟ ಮಾಡುತ್ತಿರುವ ಖಾಸಗಿ ಮಾರಾಟಗಾರರು ತಮಗಿಚ್ಛಿಸಿದ ಬೆಲೆಯಲ್ಲೇ ಗೊಬ್ಬರ ಮಾರುತ್ತಿದ್ದಾರೆ. ಕೇಂದ್ರ ಸರ್ಕಾರ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಗೊಬ್ಬರ ಮೇಲಿನ ಸಬ್ಸಿಡಿ ಹೆಚ್ಚಿಸಿತ್ತು. ಇದರಿಂದ ಗೊಬ್ಬರ ಕಂಪನಿಗಳು ಕಡಿಮೆಗೆ ಪೂರೈಸುತ್ತಿದ್ದವು. ಆದರೆ, ಕಂಪನಿಗಳು ಇದ್ದಕ್ಕಿದ್ದಂತೆ ಎಲ್ಲಾ ರೀತಿಯ ಗೊಬ್ಬರದ ಬೆಲೆಯನ್ನು ಶೇ. 5ರಷ್ಟು ಹೆಚ್ಚಿಸಿವೆ. ಇದಕ್ಕೆ ರುಪಾಯಿಯ ಮೌಲ್ಯ ಕುಸಿತ ಕಾರಣ ಎಂಬ ನೆಪ ನೀಡುತ್ತಿವೆ. ಆದರೆ, ಬೆಲೆ ಏರಿಕೆ ಬಗ್ಗೆ ಎಂಸಿಎಫ್ ಮತ್ತು ಕೋರಮಂಡಲ್ ಬಿಟ್ಟರೆ ಉಳಿದ ಯಾವುದೇ ಕಂಪನಿಗಳೂ ಸರ್ಕಾರಕ್ಕೆ ಮಾಹಿತಿ ನೀಡಿಲ್ಲ. ಗೊಬ್ಬರ ಬೆಲೆ ಏಕಾಏಕಿ ಏರಿಕೆಯಾಗಿರುವುದು ಕೆಲವು ಕಡೆ ಕೃಷಿ ಇಲಾಖೆಗೂ ಗೊತ್ತಿಲ್ಲ.
ಎಲ್ಲ ಗೊಬ್ಬರಗಳು ಕನಿಷ್ಠ 100 ಹೆಚ್ಚುವರಿ ಬೆಲೆಯಲ್ಲಿ ಮಾರಾಟವಾಗುತ್ತಿದೆ. ಈ ಬಗ್ಗೆ ಕೃಷಿ ಇಲಾಖೆಗೆ ದೂರು ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ. ಕೃಷಿ ಇಲಾಖೆ ಸೀಮಿತ ಪ್ರಮಾಣದ ಗೊಬ್ಬರ ವಿತರಿಸಿ ಕೈತೊಳೆದುಕೊಳ್ಳುತ್ತದೆ. ಇದರಿಂದ ಖಾಸಗಿಯವರು ಆಡಿದ್ದೇ ಆಟವಾಗಿದೆ.
- ಸಿದ್ದೇಶ್, ಪ್ರಗತಿಪರ ರೈತ
ಲಭ್ಯ ಗೊಬ್ಬರ
ಯೂರಿಯಾ
1,28,400
ಡಿಎಪಿ
1,01,000
ಕಾಂಪ್ಲೆಕ್ಸ್
1,80,000
ಪೊಟ್ಯಾಷ್
44,000
ಸೂಪರ್ ಪಾಸ್ಪೇಟ್
8,000
ಇತರ ಗೊಬ್ಬರ
1,000
ಗೊಬ್ಬರ 50ಕೆ.ಜಿ.ಗೆ ಹಿಂದಿನ ದರ ಹೊಸ ದರ ಹೆಚ್ಚಾದ ದರ
ಡಿಎಪಿ 1,192 1,277 85
ಪೊಟ್ಯಾಷ್ 844 897 53
20-20-20 932 960 23
ಯೂರಿಯಾ 285 300 15
- ಶಿವಕುಮಾರ್ ಬೆಳ್ಳಿತಟ್ಟೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


