ಅಬ್ಬರಿಸಿದ ತುಂಗಭದ್ರಾ; ಮಂತ್ರಾಲಯಕ್ಕೆ ಪ್ರವಾಹ ಭೀತಿ
ಬೆಂಗಳೂರು: ರಾಜ್ಯದಲ್ಲಿ ಮಳೆ ತಗ್ಗಿದ್ದರೂ ಕೃಷ್ಣಾ, ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿದ್ದು, ಉಭಯ ನದಿಗಳ ತೀರ ಪ್ರದೇಶ ಸೇರಿದಂತೆ ಮಂತ್ರಾಲಯಕ್ಕೂ ಪ್ರವಾಹ ಭೀತಿ ಎದುರಾಗಿದೆ. ರಾಣಿಬೆನ್ನೂರು ತಾಲೂಕಿನಲ್ಲಿ ಸತತ ಮಳೆಗೆ ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ರೈತನೊಬ್ಬ ಮೃತಪಟ್ಟಿದ್ದರೆ, ಸೊರಬ ತಾಲೂಕಿನಲ್ಲಿ ಪ್ರವಾಹಕ್ಕೆ ವ್ಯಕ್ತಿಯೊಬ್ಬ ಕೊಚ್ಚಿ ಹೋಗಿದ್ದಾನೆ. ಬೆಳಗಾವಿ ಜಿಲ್ಲೆಯಲ್ಲಿ ಇನ್ನೂ 23 ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿಲ್ಲ. ಹಂಪಿ ಸುತ್ತಮುತ್ತ ನೀರಿನ ಮಟ್ಟ ಏರುಮುಖವಾಗಿದೆ.
ತುಂಗಭದ್ರಾ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದ್ದರಿಂದ 33 ಗೇಟ್ಗಳ ಮೂಲಕ ನದಿಗೆ 1,47,098 ಕ್ಯುಸೆಕ್ ನೀರು ಬಿಡಲಾಗುತ್ತಿದ್ದು, ಕ್ರಿ.ಶ. 1336ರಲ್ಲಿ ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣಗೊಂಡಿದ್ದ ಸೇತುವೆಗೆ ನೀರು ನುಗ್ಗಿದ್ದು ಕುಸಿಯುವ ಭೀತಿ ಎದುರಾಗಿದೆ. ಗಂಗಾವತಿ-ಕಂಪ್ಲಿ ಸೇತುವೆ ಇನ್ನೂ ಸಂಚಾರಕ್ಕೆ ಮುಕ್ತವಾಗಿಲ್ಲ. ತೀರ ಪ್ರದೇಶದ ಜಮೀನಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿಯಾಗಿದೆ.
ತಂಗಭದ್ರಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಕಡತಿ, ಹಲುವಾಗಲು, ತಾವರಗೊಂದಿ, ಗರ್ಭಗುಡಿ, ಎನ್. ಬಸಾಪುರ, ನಂದ್ಯಾಲ, ನಿಟ್ಟೂರು ಗ್ರಾಮಗಳಿಗೆ ಮುಳುಗಡೆ ಭೀತಿ ಎದುರಾಗಿದೆ. ಹಲುವಾಗಲು ಹಾಗೂ ಗರ್ಭಗುಡಿ ಗ್ರಾಮಗಳಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ಭದ್ರಾ ನದಿ ತೀರದ ಕವಲುಗುಂದಿ, ಏಕೆಂಶಾ ಕಾಲೋನಿ, ಮೂಪಾ ಕಾಂಪೌಂಡ್ ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರಿದಿದ್ದು ದತ್ತಪೀಠ ರಸ್ತೆಯಲ್ಲಿ ಭೂ ಕುಸಿತ ಉಂಟಾಗಿದೆ.
ಇಬ್ಬರು ಬಲಿ: ಸತತ ಮಳೆಯಿಂದ ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ರಾಣಿಬೆನ್ನೂರು ತಾಲೂಕಿನ ಬೆನಕನಗೊಂಡ ಗ್ರಾಮದ ರೈತ ಮಲ್ಲಿಕಾರ್ಜುನಗೌಡ ಬಸನಗೌಡ ಗುರುಲಿಂಗಪ್ಪಗೌಡ್ರ (42) ಮೃತಪಟ್ಟಿದ್ದಾನೆ. ಸೊರಬ ತಾಲೂಕಿನ ಕಮರೂರು ಗ್ರಾಮದ ಮನ್ನಪ್ಪ (50) ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದು ಸೋಮವಾರ ಶವ ಪತ್ತೆಯಾಗಿದೆ. ಮಹಾರಾಷ್ಟ್ರದಲ್ಲಿ ಮಳೆ ಕಡಿಮೆಯಾಗಿದ್ದರೂ ಕೃಷ್ಣಾ ನದಿ ಪ್ರವಾಹ ಮಾತ್ರ ತಗ್ಗಿಲ್ಲ. ಬೆಳಗಾವಿ ಜಿಲ್ಲೆಯಲ್ಲಿ ಇನ್ನೂ 23 ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿಲ್ಲ. ಕಲ್ಲೋಳ ಗ್ರಾಮದ ನದಿ ದಡದಲ್ಲಿನ 424, ಇಂಗಳಿ ಗ್ರಾಮದ 159, ಬಣಜವಾಡಾ ಗ್ರಾಮದ 100 ಜನರನ್ನು ಸ್ಥಳಾಂತರಿಸಲಾಗಿದೆ.
ಮಂತ್ರಾಲಯಕ್ಕೆ ಪ್ರವಾಹ ಭೀತಿ: ತುಂಗಭದ್ರಾ ಜಲಾಶಯದಿಂದ ಹೆಚ್ಚಿನ ನೀರು ಬಿಡುತ್ತಿರುವುದರಿಂದ ಮಂತ್ರಾಲಯಕ್ಕೆ ಪ್ರವಾಹ ಭೀತಿ ಎದುರಾಗಿದೆ. ರಾಯರ ಮಠದ ಹಿಂಭಾಗದಲ್ಲಿರುವ ಕಾಂಕ್ರೀಟ್ ಹಾಸಿನವರೆಗೆ ನೀರು ನುಗ್ಗಿದೆ. ಕೃಷ್ಣಾ ತೀರದ ರಾಯಚೂರು ಜಿಲ್ಲೆಯ ಅರಷಿಣಗಿ, ಗುರ್ಜಾಪುರ, ಕಾಡ್ಲೂರು, ಕರೇಕಲ್, ಅತ್ಕೂರು, ಬುರ್ದಿಪಾಡ ಗ್ರಾಮಗಳಲ್ಲಿ ಅಪಾರ ಪ್ರಮಾಣದ ಹಾನಿಯಾಗಿದೆ. ಶಕ್ತಿನಗರ- ಗುರ್ಜಾಪುರ ನಡುವಿನ ಸಂಪರ್ಕ ಕಡಿತಗೊಂಡಿದೆ. ಸಿಂಧನೂರು ತಾಲೂಕಿನ ಮುಕ್ಕುಂದಾ ಗ್ರಾಮದ ಖಾದರ್ ಪಾಷಾ ನಡುಗಡ್ಡೆ ಜಲಾವೃತವಾಗಿದೆ. ಜುರಾಲಾ ಹಿನ್ನೀರ ಭೀತಿ ಇನ್ನೂ ತಗ್ಗಿಲ್ಲ. ಉಜನಿ ಜಲಾಶಯ ಭರ್ತಿಯಾಗದ ಕಾರಣ ಭೀಮಾ ನದಿಯಲ್ಲಿ ನೀರಿಲ್ಲದೇ ಭಣಗುಡುತ್ತಿದೆ.
ಬೆಳಗಾವಿ ಜಿಲ್ಲೆಯಲ್ಲಿ ಪ್ರತಿ ವರ್ಷ ಪ್ರವಾಹಕ್ಕೆ ತುತ್ತಾಗಿ ತೊಂದರೆ ಅನುಭವಿಸುವ 39 ಗ್ರಾಮಗಳನ್ನು ಶಾಶ್ವತ ಪುನರ್ವಸತಿ ಕಲ್ಪಿಸುವ ಕುರಿತು ವಿಶೇಷ ಸಭೆ ನಡೆಸಿ ಯೋಜನೆ ಸಿದ್ಧಪಡಿಸಲಾಗುವುದು. ಚಿಕ್ಕೋಡಿ, ಅಥಣಿ ಹಾಗೂ ರಾಯಬಾಗ ತಾಲೂಕಿನ 17 ಬ್ಯಾರೇಜ್ ಹಾಗೂ ರಸ್ತೆಗಳನ್ನು ಮೇಲ್ದರ್ಗೆಗೇರಿಸಲು ಕ್ರಮ ಕೈಗೊಳ್ಳಲಾಗುವುದು.
- ಸತೀಶ ಜಾರಕಿಹೊಳಿ, ಅಬಕಾರಿ ಸಚಿವ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

