ಸೋರುತಿಹುದು ಮನ್ಸೂರ್ ಮನೆ!
ಕನ್ನಡಪ್ರಭ ವಾರ್ತೆ, ಧಾರವಾಡ, ಜು. 31-
60 ವರ್ಷಗಳಿಗಿಂತ ಹೆಚ್ಚು ಕಾಲ ದೇಶ-ವಿದೇಶಗಳಲ್ಲಿ ಸಂಗೀತ ಸುಧೆ ಹರಿಸಿದ ಮಹಾನ್ ಸಂಗೀತಗಾರ ಪಂ. ಮಲ್ಲಿಕಾರ್ಜುನ ಮನ್ಸೂರ್ ಅವರ ಸ್ವಗ್ರಾಮ ಧಾರವಾಡ ಜಿಲ್ಲೆಯ ಮನ್ಸೂರ್ ಗ್ರಾಮದ ಅಭಿವೃದ್ಧಿ ಹಾಗೂ ಅವರು ಜನಿಸಿದ ಮನೆಯನ್ನು ಸ್ಮಾರಕ ಮಾಡುವ ಯೋಜನೆಯನ್ನು ರಾಜ್ಯ ಸರ್ಕಾರ ಬಹುಶಃ ಮರೆತಂತಿದೆ.
2009-10ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ಮಲ್ಲಿಕಾರ್ಜುನ ಮನ್ಸೂರ್ ಸ್ವಗ್ರಾಮದ ಅಭಿವೃದ್ಧಿ ಹಾಗೂ ಅವರು ಜನಿಸಿದ ಮನೆಯನ್ನು ಸ್ಮಾರಕ ಮಾಡಲು 3 ಕೋಟಿ ಅನುದಾನ ನೀಡಿ ಹಂತ ಹಂತವಾಗಿ ಅಭಿವೃದ್ಧಿ ಮಾಡುವುದಾಗಿ ಹೇಳಿದ್ದರು. ಅಂತೆಯೇ ಮೊದಲ ಹಂತದಲ್ಲಿ 1ಕೋಟಿ ಬಿಡುಗಡೆಯಾಗಿದ್ದು, ಈ ಹಣದಲ್ಲಿ ಗ್ರಾಮದ ಐದು ಬೀದಿಗಳಿಗೆ ಕಾಂಕ್ರಿಟ್ ರಸ್ತೆ, ಪಕ್ಕಾ ಗಟಾರು ಹಾಗೂ ಸಿಡಿ ಕೆಲಸ ಹೊರತುಪಡಿಸಿ ಗ್ರಾಮದಲ್ಲಿ ಸರ್ಕಾರ ಯೋಜಿಸಿದ ಮತ್ತಾವ ಅಭಿವೃದ್ಧಿ ಕಾರ್ಯಗಳೂ ಚಾಲ್ತಿಯಲ್ಲಿಲ್ಲ. ಈಗ ಮಲ್ಲಿಕಾರ್ಜುನ ಮನ್ಸೂರ್ ಜನಿಸಿದ ಮನೆಯ ಸ್ಥಿತಿಯಂತೂ ಕೇಳುವ ಹಾಗಿಲ್ಲ. ಪ್ರಸ್ತುತ ಮಳೆಗಾಲವಿದ್ದು, ಮನೆ ನಿತ್ಯವೂ ಸೋರುತ್ತಿದೆ.
ಈ ಹಿಂದಿನ ಜಿಲ್ಲಾಧಿಕಾರಿ ದರ್ಪಣ ಜೈನ್ ಅವರು ಈ ಕಾರ್ಯವನ್ನು ಮುತುವರ್ಜಿ ವಹಿಸಿ ಆರಂಭಿಸಿದ್ದರು. ಆದರೆ, ಪ್ರಸ್ತುತ ಜಿಲ್ಲಾಧಿಕಾರಿ ಸಮೀರ ಶುಕ್ಲ ಡಾ. ಮಲ್ಲಿಕಾರ್ಜುನ ಮನ್ಸೂರ್ ಟ್ರಸ್ಟ್ ಅಧ್ಯಕ್ಷರಾಗಿದ್ದು, 2ನೇ ಹಂತದಲ್ಲಿ ಹಣ ಬಿಡುಗಡೆ ಮಾಡಿಸಿಕೊಂಡು ಯೋಜನೆಯಂತೆ ಕೆಲಸ ಆರಂಭಿಸುತ್ತಿಲ್ಲ.
ಗ್ರಾಮದಲ್ಲಿ ಇನ್ನೂ ಎಂಟು ಬೀದಿಗಳಿಗೆ ಕಾಂಕ್ರಿಟ್ ರಸ್ತೆ, ಪಕ್ಕಾ ಗಟಾರು ಮಾಡಬೇಕಿದೆ. ಮನ್ಸೂರ್ ಗ್ರಾಮದ ದ್ವಾರ ಹಾಗೂ ಗ್ರಾಮದ ಅಗಸಿಯಲ್ಲಿ ಮಲ್ಲಿಕಾರ್ಜುನ ಮನ್ಸೂರ್ ಅವರ ಮೂರ್ತಿ ಸ್ಥಾಪಿಸುವ ಕಾರ್ಯ, ಸಾಂಸ್ಕೃತಿಕ ಭವನ ಹಾಗೂ ಕೆರೆ ಅಭಿವೃದ್ಧಿ ಕಾರ್ಯ ಬಾಕಿ ಇದೆ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಸದಸ್ಯ ಬಸವರಾಜ ಅಮರಗೋಳ.
ಮತ್ತೆ ಅಭಿವೃದ್ಧಿ ಕಾರ್ಯ ಮಾಡಲಿ: ಹುಬ್ಬಳ್ಳಿ ಕೆಂಬಾವಿ ಆರ್ಕಿಟೆಕ್ಚರ್ ಎಂಬವರು ಗ್ರಾಮದ ಸಮಗ್ರ ಅಭಿವೃದ್ಧಿ ಕುರಿತು ಯೋಜನೆಯ ನಕ್ಷೆ ರೂಪಿಸಿದ್ದರು. ಹಂತ ಹಂತವಾಗಿ ಅಭಿವೃದ್ಧಿ ಮಾಡಲಾಗುತ್ತದೆ ಎಂದು ಸುಮ್ಮನಾಗಿದ್ದೇವು. 2011ರಿಂದ ಇಲ್ಲಿಯವರೆಗೆ 2ನೇ ಹಂತದ 1 ಕೋಟಿ ಬಿಡುಗಡೆಯಾಗಿಲ್ಲ. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು 2013ರ ತಮ್ಮ ಬಜೆಟ್ನಲ್ಲಿ ಈ ಯೋಜನೆಗೆ 5 ಕೋಟಿ ಘೋಷಿಸಿದ್ದರು. ಆದರೆ, ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಜೆಟ್ನಲ್ಲಿ ಈ ಯೋಜನೆಗೆ ಒಂದೂ ರುಪಾಯಿ ತೆಗೆದಿರಿಸಿಲ್ಲ. ಎರಡು ವರ್ಷಗಳಿಂದ ಈ ಯೋಜನೆ ನಿಂತ ನೀರಾಗಿದ್ದು, ಆರು ತಿಂಗಳ ಹಿಂದೆಯೇ ಗ್ರಾಪಂ ನಿಯೋಗ ಜಿಲ್ಲಾಧಿಕಾರಿ ಸಮೀರ ಶುಕ್ಲ ಅವರನ್ನು ಭೇಟಿ ಮಾಡಿ ಗ್ರಾಮಕ್ಕೆ ಬಂದು ವಸ್ತುಸ್ಥಿತಿ ನೋಡಿ ಅಭಿವೃದ್ಧಿ ಕಾರ್ಯ ಮತ್ತೆ ಶುರು ಮಾಡಲು ಮನವಿ ಮಾಡಲಾಗಿತ್ತು. ಆದರೆ, ಜಿಲ್ಲಾಧಿಕಾರಿಯಿಂದ ಸ್ಪಂದನೆ ದೊರೆತಿಲ್ಲ ಎನ್ನುತ್ತಾರೆ ಬಸವರಾಜ ಅಮರಗೋಳ. ತಮ್ಮ ಸಂಗೀತ ಪ್ರತಿಭೆ ಮೂಲಕವೇ ಜಾಗತಿಕ ಮಟ್ಟದಲ್ಲಿ ಧಾರವಾಡಕ್ಕೊಂದು ಸಾಂಸ್ಕೃತಿಕ ಅಸ್ಮಿತೆ ತಂದುಕೊಟ್ಟ ಡಾ. ಮಲ್ಲಿಕಾರ್ಜುನ ಮನ್ಸೂರ್ ಅವರಂಥ ಗಾಯಕರನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ, ಸಾಂಸ್ಕೃತಿಕ ಪರಂಪರೆ ಉಳಿಸುವ ಜವಾಬ್ದಾರಿ ಸರ್ಕಾರದ್ದು. ಆದರೆ, ಜವಾಬ್ದಾರಿ ಮರೆತಿರುವ ರಾಜ್ಯ ಸರ್ಕಾರಗಳು ಇನ್ನಾದರೂ ಮನ್ಸೂರ್ ಸಮಗ್ರ ಅಭಿವೃದ್ಧಿ ಕುರಿತು ಗಂಭೀರವಾಗಿ ಸ್ಪಂದಿಸಬೇಕಿದೆ.
ಮಾವ ಮಲ್ಲಿಕಾರ್ಜುನ ಅವರು ಜನಿಸಿದ ಮನೆಯನ್ನು ಸ್ಮಾರಕ ಮಾಡ್ತೇವಿ ಅಂತಾ ಹೇಳಿದ್ರು. ನಮಗೂ ಖುಷಿ ಆಗಿತ್ತು. ಇದನ್ನು ಹೇಳಿ ಮೂರು ವರ್ಷ ಆಗೈತಿ. ಈಗ ಮೇಲ್ಛಾವಣಿ ಪೂರ್ತಿ ಹಾಳಾಗಿದ್ದು ಮನಿ ಸೋರತೈತಿ. ನಾವ್ ಬ್ಯಾಂಕ್ ಲೋನ್ ತಗಿಸಿ ಎಪ್ಪತ್ ಸಾವಿರ ಖರ್ಚ ಮಾಡಿ ಸೋರದಂಗ್ ಮಾಡಕೊಂಡೇವಿ. ಸರ್ಕಾರದವರ ಯಾವಾಗ ಸ್ಮಾರಕ ಮಾಡ್ತಾರೋ ಗೊತ್ತಿಲ್ಲ.
- ಈರಮ್ಮ ಮನ್ಸೂರ್, ಮಲ್ಲಿಕಾರ್ಜುನ ಮನ್ಸೂರ್ ಅವರ ಸೊಸೆ
ಮಲ್ಲಿಕಾರ್ಜುನ ಮನ್ಸೂರ್ ಗ್ರಾಮ ಅಭಿವೃದ್ಧಿ ಹಾಗೂ ಮನೆ ಅಭಿವೃದ್ಧಿ ಕಾರ್ಯಕ್ಕೆ 2ನೇ ಹಂತದ 1 ಕೋಟಿ ಅನುದಾನದ ಬಿಡುಗಡೆಗೆ ಸರ್ಕಾರಕ್ಕೆ 2011ರಲ್ಲಿಯೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ಅನುದಾನ ಬಂದಿಲ್ಲ. ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಲಾಗುವುದು.
- ಸಮೀರ ಶುಕ್ಲ, ಧಾರವಾಡ ಜಿಲ್ಲಾಧಿಕಾರಿ, ಡಾ. ಮಲ್ಲಿಕಾರ್ಜುನ ಮನ್ಸೂರ್ ಟ್ರಸ್ಟ್ ಅಧ್ಯಕ್ಷ
- ಬಸವರಾಜ ಹಿರೇಮಠ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

