ಪ್ರಧಾನ ಸುದ್ದಿ

ವೈಯಕ್ತಿಕ ಹಿತಾಸಕ್ತಿ ನೆರಳಲ್ಲಿ ಧೋನಿ

Published On :

ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡ 'ಹಿತಾಸಕ್ತಿ ಸಂಘರ್ಷ'ದ ಅನುಮಾನಗಳಿಗೆ ಈಡಾಗಿದ್ದಾರೆ.
ಭಾರತ ಕ್ರಿಕೆಟ್ ತಂಡ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಾಯಕನಾಗಿ, ತನ್ನ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿ ತನ್ನ ವೈಯಕ್ತಿಕ ಹಿತಾಸಕ್ತಿಯನ್ನು ಪೂರೈಸಿಕೊಂಡಿರುವ ಬಗ್ಗೆ ಪತ್ರಿಕೆಯೊಂದರಲ್ಲಿ ವರದಿಯಾಗಿದೆ.
ಏನು ಆರೋಪ?: ಮಹೇಂದ್ರ ಸಿಂಗ್ ಧೋನಿ ರಿತಿ ಮಾರ್ಕೆಟಿಂಗ್ ಕಂಪನಿಯಲ್ಲಿ ಶೇ.15 ರಷ್ಟು ಷೇರು ಹೊಂದಿದ್ದಾರೆ ಎಂದು ಆಂಗ್ಲ ದೈನಿಕ ಆರೋಪಿಸಿದೆ. ಈ ಕಂಪನಿ ಭಾರತ ಕ್ರಿಕೆಟ್ ತಂಡದ ಆಟಗಾರರಾದ ಸುರೇಶ್ ರೈನಾ, ರವೀಂದ್ರ ಜಡೇಜಾ, ಆರ್.ಪಿ. ಸಿಂಗ್ ಮತ್ತು ಪ್ರಜ್ಞಾನ್ ಓಜಾ ಅವರನ್ನು ನಿರ್ವಹಿಸುತ್ತಿದೆ. ಈ ಕಂಪನಿಯಲ್ಲಿ ಷೇರು ಹೊಂದುವ ಮೂಲಕ ಈ ನಾಲ್ವರು ಆಟಗಾರರ ಆಯ್ಕೆಯಲ್ಲಿ ಧೋನಿ ಪಾತ್ರ ನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಅಂದರೆ ತಂಡದ ಆಯ್ಕೆ ಸಂದರ್ಭದಲ್ಲಿ ತನ್ನ ಪ್ರಭಾವ ಬಳಸಿ, ಆಯ್ಕೆಯಾಗುವಂತೆ ಮಾಡುವುದು. ಈ ಮೂಲಕ ಈ ಆಟಗಾರರ ಮೌಲ್ಯ ಕಡಿಮೆಯಾಗದಂತೆ ನೋಡಿಕೊಳ್ಳುವುದನ್ನು ಧೋನಿ ಮಾಡಿದ್ದಾರೆ ಎಂದು ಹೇಳಲಾಗಿದೆ.
ಇದು ಧೋನಿ ವಿರುದ್ಧದ ಮೊದಲನೇ ಅನುಮಾನವಾದರೆ, ಎರಡನೇ ಅನುಮಾನ ಚೆನ್ನೈ ಸೂಪರ್ ಕಿಂಗ್ಸ್ ಕುರಿತಾದದ್ದು. ಈ ತಂಡದಲ್ಲೂ ರಿತಿ ನಿರ್ವಹಿಸುತ್ತಿರುವ ಇಬ್ಬರು ಆಟಗಾರರಿದ್ದಾರೆ. ಇವರನ್ನು ಉಳಿಸುವ ಸಲುವಾಗಿ ಧೋನಿ, ತಂಡದ ಮಾಲೀಕ ಮೇಯಪ್ಪನ್ ಅವರೇ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಸಿಲುಕಿಕೊಂಡರೂ ಸಹ ಒಂದೇ ಒಂದು ಮಾತನಾಡಿಲ್ಲ ಎಂದು ಆರೋಪಿಸಲಾಗಿದೆ.
ಇಂಡಿಯಾ ಸಿಮೆಂಟ್ಸ್‌ನ ಉಪಾಧ್ಯಕ್ಷರೂ ಆಗಿರುವ ಧೋನಿಯನ್ನು ಉಳಿಸುವ ಸಲುವಾಗಿ ಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್ ಈ ಹಿಂದೆಯೇ ತಮಗಿರುವ ವಿಟೋ ಪವರ್ ಬಳಸಿದ್ದರು. ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸೋತ ಸಂದರ್ಭದಲ್ಲಿ ಧೋನಿಯನ್ನು ನಾಯಕ ಸ್ಥಾನದಿಂದ ಇಳಿಸಲೇಬೇಕು ಎಂಬ ಸಂದರ್ಭದಲ್ಲಿ ಧೋನಿಯನ್ನು ಅವರು ಕಾಪಾಡಿದ್ದರು. ಇದು ಕೂಡ ಹಿತಾಸಕ್ತಿ ಸಂಘರ್ಷದ ಅನುಮಾನದೊಳಗೆ ಬರುತ್ತದೆ ಎಂದು ಹಲವಾರು ಮಾಜಿ ಕ್ರೀಡಾಪಟುಗಳು ಆರೋಪಿಸಿದ್ದಾರೆ.
ಷೇರು ಇಲ್ಲವೇ ಇಲ್ಲ
ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ರಿತಿ ಮಾರ್ಕೆಟಿಂಗ್ ಸಂಸ್ಥೆಯಲ್ಲಿ ಯಾವುದೇ ಷೇರು ಹೊಂದಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ. ಅಲ್ಪ ಸಮಯದ ವರೆಗೆ ಧೋನಿ ಷೇರು ಹೊಂದಿದ್ದು ನಿಜ. ಆದರೆ ಈಗಲ್ಲ ಎಂದು ಅದು ಸ್ಪಷ್ಟನೆ ನೀಡಿ ಹೇಳಿಕೆ ಬಿಡುಗಡೆ ಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.