ಪ್ರಧಾನ ಸುದ್ದಿ

ನನ್ನ ಪಾಡಿಗೆ ಬಿಟ್ಬಿಡಿ ಪ್ಲೀಸ್

ನನ್ನ ಪಾಡಿಗೆ ಬಿಟ್ಬಿಡಿ ಪ್ಲೀಸ್
Published On :

ಕನ್ನಡಪ್ರಭ ವಾರ್ತೆ ,   ಬೆಂಗಳೂರು ,   ಜೂ. 7
ಹಿಂದೆ ನಾನು ಇದ್ದ ಪಕ್ಷದ ಮುಖಂಡರು ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದರು. ಈಗಲೂ ಅದೇ ಕೆಲಸ ಮಾಡುತ್ತಿದ್ದಾರೆ. ಅಂಥವರೊಂದಿಗೆ ಯಾವುದೇ ಕಾರಣಕ್ಕೂ ಮತ್ತೆ ಸ್ನೇಹ ಬೆಳೆಸಲು ಇಷ್ಟಪಡುವುದಿಲ್ಲ. ಆದ್ದರಿಂದ ಇನ್ನು ಮುಂದಾದರೂ ನನ್ನದೇ ಆದ ಪಕ್ಷ ಕಟ್ಟಿ ಗೌರವದ ಬದುಕು ಸಾಗಿಸಲು ಅವಕಾಶ ಮಾಡಿಕೊಡಿ.
ವಿಧಾನಸಭೆಯೊಳಗೇ ಬಿಜೆಪಿ ಮುಖಂಡರಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಾಡಿಕೊಂಡ ಮನವಿ ಇದು. ತಾವು ಮತ್ತೆ ಬಿಜೆಪಿ ಸೇರುವುದಿಲ್ಲ ಎಂಬುದನ್ನೂ ಸ್ಪಷ್ಟಪಡಿಸಿದ ಅವರು, ತೃತೀಯರಂಗ ಬಲಪಡಿಸುವ ತಮ್ಮ ಕನಸನ್ನೂ ಹೇಳಿಕೊಂಡರು.
ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯನ್ನು ತಮ್ಮ 'ಕರ್ಮಕಥೆ' ಹೇಳಲು ಬಳಸಿಕೊಂಡ ಯಡಿಯೂರಪ್ಪ ಅವರು, ಇದೇ ವೇಳೆ ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮಾಡಿದ ಕೆಲಸವನ್ನೂ ವಿಶ್ಲೇಷಿಸಿದರು. ತಪ್ಪು ಸರಿಪಡಿಸಲು ಹೋಗಿ ಅಪರಾಧಿ ಸ್ಥಾನದಲ್ಲಿ ನಿಂತೆ ಎಂದು ಬೇಸರಪಟ್ಟುಕೊಂಡರು.
ಸಿಎಂ ಸ್ಥಾನದಿಂದ ಇಳಿದ ಬಳಿಕ ಇದೇ ಮೊದಲ ಬಾರಿಗೆ ಸದನದಲ್ಲಿ ತಮ್ಮ ವೈಯಕ್ತಿಕ ವಿಚಾರಗಳನ್ನು ಪ್ರಸ್ತಾಪಿಸಿದ ಅವರು, ತಪ್ಪು ಮಾಡದೇ ಇದ್ದರೂ ನಾನು ಅಪರಾಧಿ ಸ್ಥಾನದಲ್ಲಿ ನಿಂತಿದ್ದೇನೆ. ನನ್ನ ಅಳಲು ಹೇಳಿಕೊಳ್ಳಬೇಕಾಗಿದೆ. ಆದ್ದರಿಂದ ನನ್ನ ಕರ್ಮಕಥೆ ಹೇಳಲು ಈ ವೇದಿಕೆಯನ್ನು ಬಳಸಿಕೊಳ್ಳುತ್ತಿದ್ದೇನೆ ಎಂದರು.
ಯಡಿಯೂರಪ್ಪ ಅವರು ಒಟ್ಟಾರೆ ಹೇಳಿದ್ದು ಇಷ್ಟು: ನನ್ನನ್ನು ದುರುದ್ದೇಶದಿಂದ ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದ ಮೇಲೆ ಕೆಜೆಪಿ ಕಟ್ಟಬೇಕಾಯಿತು.     
ಹೊಸ ಪಕ್ಷ ಕಟ್ಟಿ ವಿಧಾನಸಭೆ ಚುನಾವಣೆಯಲ್ಲಿ ಸೋಲಿನಲ್ಲೂ ಗೆಲವು ಕಂಡವನು ನಾನು. ತಾತ್ವಿಕ ನೆಲೆಯಲ್ಲಿ ಪ್ರಾದೇಶಿಕ ಪಕ್ಷ ಕಟ್ಟಿದವನು ನಾನು. ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ನಿರಾಶನಾಗದೆ ಕೆಜೆಪಿಯನ್ನು ಕಟ್ಟುತ್ತೇನೆ. ನನ್ನ ವಿಚಾರದಲ್ಲಿ ಎಷ್ಟೇ ಗೊಂದಲ ಮೂಡಿಸುವ ತಂತ್ರಗಳನ್ನು ಮಾಡಿದರೂ, ಪಿತೂರಿ ನಡೆಸಿದರೂ ನನ್ನದೇ ಆದ ರೀತಿಯಲ್ಲಿ ರಾಜಕಾರಣ ಮುಂದುವರಿಸುತ್ತೇನೆ.
ಪಾಕಿಸ್ತಾನದಲ್ಲೂ ಇಲ್ಲ: ದೇಶದ ಇತಿಹಾಸದಲ್ಲೇ ಮೊದಲ ಬಾರಿ ಯಾವುದೇ ತನಿಖೆ ಪೂರ್ಣವಾಗದೆ 24 ದಿನ ಜೈಲಿನಲ್ಲಿದ್ದವನು ನಾನು. ಬೇರೆಯವರಲ್ಲ, ನಮ್ಮವರೇ ಏನೇನೋ ಪ್ರಯತ್ನಗಳನ್ನು ಮಾಡಿ, ನೆಪಗಳನ್ನು ಮುಂದಿಟ್ಟು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಪಡೆದರು.
 ಪಾಕಿಸ್ತಾನದಂತಹ ದೇಶದಲ್ಲೂ ತನಿಖೆ ಇಲ್ಲದೆ ಜೈಲಿಗೆ ಹೋಗುವ ಪರಿಸ್ಥಿತಿ ಇಲ್ಲ. ಆದರೆ, ಇಲ್ಲಿ ನನ್ನವರೇ ನನ್ನನ್ನು ಜೈಲಿಗೆ ಹೋಗುವಂತೆ ನೋಡಿಕೊಂಡರು. ನನಗೆ ಜಾಮೀನು ನೀಡುವ ಸಂದರ್ಭದಲ್ಲಿ, ಖಾಸಗಿ ದೂರಿನ ಆಧಾರದ ಮೇಲೆ ಯಾವುದೇ ವಿಚಾರಣೆ, ತನಿಖೆ ಇಲ್ಲದೆ ಒಬ್ಬರನ್ನು ಜೈಲಿಗೆ ಕಳುಹಿಸಿರುವುದು ಇದೇ ಪ್ರಥಮ. ಇಂಥ ಅನ್ಯಾಯಕ್ಕೆ ಯಡಿಯೂರಪ್ಪ ಗುರಿಯಾಗಿದ್ದಾರೆ ಎಂದು ಹೈಕೋರ್ಟ್ ಕೂಡ ಹೇಳಿತ್ತು.
ಈಶ್ವರಪ್ಪರಿಂದ ಅವಮಾನ: ಆದರೆ, ನಾನು ಹಿಂದೆ ಇದ್ದ ಪಕ್ಷದ ನಾಯಕರಾದ ಕೆ.ಎಸ್. ಈಶ್ವರಪ್ಪ ಅವರು, ಬಿ.ಎಸ್. ಯಡಿಯೂರಪ್ಪ ಅವರ ಸ್ಥಾನದಲ್ಲಿ ನಾನಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆ ಎಂದು ಹೇಳಿ ಮತ್ತಷ್ಟು ಅವಮಾನ ಮಾಡಿದರು. ಅಕ್ರಮ ಗಣಿಗಾರಿಕೆ ಕುರಿತ ತಮ್ಮ ವರದಿಯಲ್ಲಿ ಲೋಕಾಯುಕ್ತರೂ ತಮ್ಮನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದರು.
  ಈ ಸಂದರ್ಭದಲ್ಲಿ ಕನಿಷ್ಠ ತಮ್ಮಿಂದ ವಿವರಣೆಯನ್ನೂ ಕೇಳಲಿಲ್ಲ. ಇದನ್ನೇ ಮುಂದಿಟ್ಟುಕೊಂಡು ನನ್ನ ಸ್ನೇಹಿತರು ಸುಳ್ಳು ಹೇಳಿ ನನ್ನನ್ನು ಅಧಿಕಾರದಿಂದ ಕೆಳಗಿಳಿಸಿದರು.
ಸರ್ಕಾರಕ್ಕೆ ಮನವಿ: ಅಷ್ಟೇ ಅಲ್ಲ, ತಪ್ಪಿತಸ್ಥ ಎನ್ನುವಂತೆ ಮಾಡಿದರು. ಆದ್ದರಿಂದ ನೀವಾದರೂ ಲೋಕಾಯುಕ್ತ ವರದಿಯನ್ನು ಸದನದಲ್ಲಿ ಮಂಡಿಸಿ. ಈ ಕುರಿತು ಚರ್ಚೆ ನಡೆದು ಯಾರು ತಪ್ಪಿತಸ್ಥ ಎನ್ನುವುದು ಬಹಿರಂಗವಾಗಲಿ ಎಂದು ಕಾಂಗ್ರೆಸ್ ಸರ್ಕಾರವನ್ನು ಮನವಿ ಮಾಡಿಕೊಂಡರು.
ಒಂದೊಂದು ಸಮಾಜಕ್ಕೆ ಒಬ್ಬೊಬ್ಬ ಗೃಹ ಸಚಿವ ಸಾಧ್ಯವಿಲ್ಲ: ಬಿಎಸ್‌ವೈ
ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವರನ್ನು ಗೃಹಮಂತ್ರಿ ಮಾಡುವ ಮೂಲಕ ಸಿದ್ದರಾಮಯ್ಯ ಒಳ್ಳೆಯ ಕೆಲಸ ಮಾಡಿದ್ದಾರೆ. ಆದರೆ, ಒಂದೊಂದು ಸಮಾಜಕ್ಕೆ ಒಬ್ಬೊಬ್ಬ ಗೃಹಮಂತ್ರಿ ಸಾಧ್ಯವಿಲ್ಲ ಎಂಬುದನ್ನು ಅವರು ತಿಳಿದುಕೊಳ್ಳಬೇಕು ಎಂದು ಯಡಿಯೂರಪ್ಪ ಹೇಳಿದ್ದಾರೆ.
ಬಿಜೆಪಿ ಅವಧಿಯಲ್ಲಿ ಅಲ್ಪಸಂಖ್ಯಾತರಿಗೆ ರಕ್ಷಣೆ ಇರಲಿಲ್ಲ. ಸಾಕಷ್ಟು ದೌರ್ಜನ್ಯ ನಡೆಯುತ್ತಿದ್ದವು. ಇದು ಮರುಕಳಿಸಬಾರದು. ಅಲ್ಪಸಂಖ್ಯಾತರಿಗೆ ರಕ್ಷಣೆ ಸಿಗಬೇಕು ಎಂಬ ಉದ್ದೇಶದಿಂದ ಆ ವರ್ಗಕ್ಕೆ ಸೇರಿದ ಜಾರ್ಜ್ ಅವರನ್ನು ಗೃಹ ಸಚಿವರನ್ನಾಗಿ ಮಾಡಿದ್ದೇನೆ ಎಂದು ಇತ್ತೀಚೆಗೆ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಯಡಿಯೂರಪ್ಪ ಅವರು ಪ್ರತಿಕ್ರಿಯಿಸಿದ್ದು ಹೀಗೆ. ಅಲ್ಪಸಂಖ್ಯಾತರಿಗೆ ಧೈರ್ಯ ತುಂಬುವುದಕ್ಕಾಗಿ ಜಾರ್ಜ್‌ರನ್ನು ಗೃಹಮಂತ್ರಿ ಮಾಡಿದ್ದು ಸರಿಯಾದರೂ ಒಬ್ಬ ಸಿಎಂ ಬಾಯಲ್ಲಿ ಇಂತಹ ಮಾತು ಬರಬಾರದಿತ್ತು. ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡಲು ಆ ವರ್ಗದವರಿಗೆ ಗೃಹ ಸಚಿವ ಸ್ಥಾನ ನೀಡಲಾಗಿದೆ ಎಂದರೆ ಬಹುಸಂಖ್ಯಾತರ ರಕ್ಷಣೆಗೆ ಯಾರಿದ್ದಾರೆ. ಮುಂದಾದರೂ ಇಂತಹ ಹೇಳಿಕೆ ನೀಡುವುದನ್ನು ನಿಲ್ಲಿಸಿ ಎಂದು ಮನವಿ ಮಾಡಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.