ಗಂಜಿ ಕೇಂದ್ರಕ್ಕೂ ಕೋಟಿ ಗಿಂಜಿ
ಕನ್ನಡಪ್ರಭ ವಾರ್ತೆ ಬೆಂಗಳೂರು ಜೂ.11
ಸರ್ಕಾರದ ನಿಗಮ ಮಂಡಳಿಗಳ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗಳು ಮಾರಾಟಕ್ಕಿವೆ..!
ಕೇಂದ್ರ ಸರ್ಕಾರದ ನಿಗಮ-ಮಂಡಳಿಗಳ ಸದಸ್ಯತ್ವಕ್ಕೆ 50 ಲಕ್ಷ, ರಾಜ್ಯದ ಲಾಭದಾಯಕ ನಿಗಮ-ಮಂಡಳಿಗಳ ಅಧ್ಯಕ್ಷ ಹುದ್ದೆಗಳಿಗೆ 1 ಕೋಟಿ ದರ ನಿಗದಿಯಾಗಿದೆ.
ಅಶ್ಚರ್ಯವೇ ? ಇದು ಸರ್ಕಾರ ನಿಗದಿಪಡಿಸಿರುವ ದರವಲ್ಲ. ನಿಮಗ-ಮಂಡಳಿಗಳ ಅಧ್ಯಕ್ಷ, ಸದಸ್ಯ ಸ್ಥಾನದ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿಗಳಿಂದ ಹಣ ಕೀಳಲು ಕೆಲವರು ನಡೆಸಿರುವ ಹುನ್ನಾರ. ಇಂಥದೊಂದು ಜಾಲವೇ ಈಗ ವಿಧಾನಸೌಧದ ಸುತ್ತಮುತ್ತ ಠಳಾಯಿಸುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನದ ಮೇಲೆ ಹಲವರ ಕಣ್ಣು ಬಿದ್ದಿದೆ. ಅದರಲ್ಲೂ ಕಾಂಗ್ರೆಸ್ ಪಾಳಯದಲ್ಲಿ ಆಕಾಂಕ್ಷಿಗಳ ಭಾರಿ ಪಟ್ಟಿಯೇ ಇದೆ. ಅವರನ್ನು ಗುರಿಯಾಗಿ ಮಾಡಿಕೊಂಟು ಜಾಲವೊಂದು ಹುಟ್ಟಿಕೊಂಡಿದೆ.
ಆರ್ಟಿಐ ಕಾರ್ಯಕರ್ತ ಸಾಯಿದತ್ತ ಎಂಬುವರು ನಿಗಮ, ಮಂಡಳಿ ಅಧ್ಯಕ್ಷ, ಸದಸ್ಯ ಹುದ್ದೆಗಳನ್ನು ಕೊಡಿಸುವುದಾಗಿ ಹೇಳಿ ಹಣ ಎತ್ತಲು ಹೊರಟಿರುವ ಜಾಲವನ್ನು ಪತ್ತೆ ಹಚ್ಚಿದ್ದಾರೆ. ಬುಕ್ಕಿಯೊಬ್ಬರ ಜತೆ ನಡೆಸಿದ ಸಂಭಾಷಣೆ ಪೂರ್ಣ ವಿವರವನ್ನು ಅವರು 'ಕನ್ನಡಪ್ರಭ'ಕ್ಕೆ ನೀಡಿದ್ದಾರೆ. ಈ ಜಾಲ ಬೆಂಗಳೂರು, ಮೈಸೂರು ಹಾಗೂ ಹುಬ್ಬಳಿಯಲ್ಲಿ ಹೆಚ್ಚು ಸಕ್ರಿಯವಾಗಿದ್ದು, ಆಕಾಂಕ್ಷಿಗಳಿಗೆ ಬಲೆ ಹಾಕಿ ವ್ಯಾಪಾರ ಕುದುರಿಸುತ್ತಿದ್ದಾರೆ.
ಯಾವ ನಿಗಮ ಸದಸ್ಯತ್ವಕ್ಕೆ ಎಷ್ಟು?: ಬುಕ್ಕಿಗಳ ಮಾಹಿತಿ ಪ್ರಕಾರ, ಕೇಂದ್ರ ಸರ್ಕಾರದ ಕಾರ್ಮಿಕ ಇಲಾಖೆಗೆ ಸಂಬಂಧಿಸಿದ ಸಮಿತಿಗಳು ಹಾಗೂ ಮಂಡಳಿಗಳು ವ್ಯಾಪಾರಕ್ಕೆ ಹೆಚ್ಚು ಬಳಕೆಯಾಗುತ್ತದೆ. ಏಕೆಂದರೆ, ಇಲ್ಲಿ ಕಾರ್ಮಿಕ ಸಂಘಟನೆಗಳು ಮತ್ತು ಸರ್ಕಾರ ನಡುವಿನ ವಿವಾದಗಳನ್ನು ಇತ್ಯರ್ಥ ಪಡಿಸುವಲ್ಲಿ ಇಲಾಖೆಯ ವಿವಿಧ ನಿಗಮಗಳು ಹೆಚ್ಚು ಮಹತ್ವ ವಹಿಸುತ್ತವೆ. ಹಾಗೆಯೇ ಪರಿಸರ, ಆರೋಗ್ಯಕ್ಕೆ ಸಂಬಂಧಿಸಿದ ಇಲಾಖೆಗಳಲ್ಲೂ ನಿಗಮದ ಸದಸ್ಯತ್ವ ಮಾರಾಟವಾಗುವುದುಂಟು. ಸದಸ್ಯತ್ವಕ್ಕೆ ಸಿಗುವ ಲಾಭವನ್ನಾಧರಿಸಿ ಅದಕ್ಕೆ ಬೆಲೆ ನಿಗದಿ ಮಾಡುತ್ತಿದ್ದಾರೆ ಬುಕ್ಕಿಗಳು. ಸದಸ್ಯರಿಗೆ ಇರುವ ಸೌಕರ್ಯ, ಭತ್ಯೆಗಳು, ಪ್ರವಾಸ ಭತ್ಯೆಗಳು ಹೆಚ್ಚಾಗಿದ್ದರೆ ಅಥವಾ ಸದಸ್ಯತ್ವದಿಂದ 'ಕೈ ಬೆಚ್ಚಗಾಗುವ' ಅವಕಾಶಗಳು ಹೆಚ್ಚಾಗಿದ್ದರೆ ಆ ಹುದ್ದೆಗಳಿಗೆ 50ಲಕ್ಷದ ವರೆಗೂ ನೀಡಬೇಕಾಗುತ್ತದೆ.
ಹೀಗಿತ್ತು ಕುಟುಕು ಕಾರ್ಯಾಚರಣೆ
-ಸಾಯಿದತ್ತ: ಸರ್ ನಮಸ್ತೆ. ನಾನು ದತ್ತ ಅಂತ. ಕಾಂಗ್ರೆಸ್ ನಾಯಕರೊಬ್ಬರು ನಿಮ್ಮ ನಂಬರ್ ಕೊಟ್ಟರು. ಆದಕ್ಕೆ ಕರೆ ಮಾಡಿದೆ.
-ನಾಗೇಂದ್ರ: ಏನು ಹೇಳಿ.
- ಸಾಯಿದತ್ತ: ಏನಿಲ್ಲ. ನಾನು ಚುನಾವಣೆಯಲ್ಲಿ ಪಕ್ಷೇತರನಾಗಿ ನಿಂತು ಸೋತೆ. ಹಣವೂ ಹೋಯ್ತು. ಈಗ ಯಾವದೇ ಫೊಷಿಸನ್ ಸಿಗುತ್ತಿಲ್ಲ. ನಿಮ್ಮಿಂದ ಏನಾದರೂ ಸಲಹೆ, ಅನೂಕೂಲ ಆಗಬಹುದಾ ಅಂತ.
- ನಾಗೇಂದ್ರ: ಪರವಾಗಿಲ್ಲ ಹೇಳಿ.
ಸಾಯಿದತ್ತ: ನನಗೆ ಮಂಡಳಿಗಳ ಮೆಂಬರ್ಶಿಫ್ ಏನಾದರೂ ಸಿಗುತ್ತಾ ? ಪ್ರಯತ್ನ ಮಾಡಬಹುದಾ? ಕೇಂದ್ರ ಅಥವಾ ರಾಜ್ಯ ಯಾವುದಾದರೂ ಸರಿ. ರೇಷ್ಮೆ ಮಂಡಳಿ, ಸೆನ್ಸಾರ್ ಮಂಡಳಿ ಯಾವುದಾದರೂ ಸರಿ.
-ನಾಗೇಂದ್ರ: ನಿಮ್ಮ ಮೊಬೈಲ್ಗೆ ಒಂದು ಇ-ಮೇಲ್ಐಡಿ ಕಳುಹಿಸುತ್ತೇನೆ. ಅದಕ್ಕೆ ಬಯೋಡೆಟಾ ಕಳುಹಿಸಿ. ಅದನ್ನು ನೋಡಿ ಕೇಂದ್ರ ನಾಯಕರಿಗೆ ಮಾತನಾಡಿ ನಂತರ ತಿಳಿಸುತ್ತೇನೆ. ನೀವು ಅದಕ್ಕೆ ಒಪ್ಪಿದರೆ ಮುಂದುವರಿಯುತ್ತೇನೆ.
-ಸಾಯಿದತ್ತ: ಸಾರ್ ಸುಮ್ನೇ ಕೇಳ್ತಾ ಇದ್ದಿನಿ. ಅಂದಾಜು ಎಷ್ಟಾಗಬಹುದು?
- ನಾಗೇಂದ್ರ: ನಿಮಗೆ ಸ್ಟೇಟ್ದೋ ಅಥವಾ ಸೆಂಟ್ರಲ್ದು ಬೇಕಾ ?
- ಸಾಯಿದತ್ತ: ಕೇಂದ್ರದ್ದಾದರೇ ಒಳ್ಳೆಯದು.
-ನಾಗೇಂದ್ರ: ಸರಿ ಯಾವುದು ಖಾಲಿ ಇದೆ. ಅದರ ಕಾರ್ಯ ಹೇಗಿರುತ್ತದೆ. ಅದಕ್ಕೆ ಎಷ್ಟಾಗುತ್ತದೆ ಎನ್ನುವುದನ್ನು ವಿಚಾರಿಸಿ ನಿಮಗೆ ಹೇಳುತ್ತೇನೆ.
- ಸಾಯಿದತ್ತ: ಒಂದು 50ಲಕ್ಷದ ಒಳಗೆ ಆಗುತ್ತಾ ?
- ನಾಗೇಂದ್ರ: ಆಗುತ್ತೆ. ಕೇಂದ್ರದ್ದು ಅಷ್ಟೇ ಆಗುತ್ತದೆ. ಇಲ್ಲ ರಾಜ್ಯದ್ದು ಬೇಕು ಅಂದರೆ ಇನ್ನೂ ಹೆಚ್ಚಾಗುತ್ತದೆ. ಏಕೆಂದರೆ, ಈಗ ರಾಜ್ಯದ ನಿಗಮ-ಮಂಡಳಿಗೆ ತುಂಬಾ ಬೇಡಿಕೆ ಇದೆ. ಅದು ಒಂದು ಕೋಟಿವರೆಗೂ ಆಗುತ್ತದೆ.
- ಶಿವಕುಮಾರ್ ಬೆಳ್ಳಿತಟ್ಟೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

