ನಾಡಿನ ಚರಿತ್ರೆ ಹೇಳುವವರ ಬದುಕು ಚಿಂತಾಜನಕ
ಕ.ಪ್ರ.ವಾರ್ತೆ. ಬಾಗಲಕೋಟೆ .,ಜೂ. 12-
ನಾಡಿನ ಶಿಲ್ಪಸೌಧ, ಹಿರಿಮೆ, ಸಂಸ್ಕೃತಿ ವಿವರಿಸುವುದನ್ನೇ ವೃತ್ತಿ ಮಾಡಿಕೊಂಡ 'ಪ್ರವಾಸಿ ಮಾರ್ಗದರ್ಶಿ'ಗಳ ಬದುಕು ನಿಜಕ್ಕೂ ಶೋಚನೀಯ.
ವಿಶ್ವ ಪರಂಪರೆ ಸಮಿತಿ, ದೇಶ, ರಾಜ್ಯ, ಜಿಲ್ಲೆಗಳ ಪ್ರತ್ಯೇಕ ಅಂತರ್ಜಾಲ ಮಾಹಿತಿ ತಾಣ (ವೆಬ್‌ಸೈಟ್)ಗಳು ಪೈಪೋಟಿಗೆ ಬಿದ್ದು, ಸಚಿತ್ರ ಸಹಿತ ಭರಪೂರ ಮಾಹಿತಿ ಮತ್ತು ಅವುಗಳ ಬಗೆಗಿನ ತಜ್ಞರ ವಿಶ್ಲೇಷಣೆಯನ್ನು ವಿಸ್ತೃತವಾಗಿ ನೀಡುತ್ತಿದ್ದರಿಂದ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಈ ಮಾರ್ಗದರ್ಶಿಗಳ ಸಹಾಯ ಪಡೆಯುವುದಿಲ್ಲ. ಅದೇ ಕಾಲಕ್ಕೆ ಇಷ್ಟು ವರ್ಷಗಳ ಕಾಲ ನಾಡಿನ ಹೆಮ್ಮೆ ಎನಿಸಿರುವ ಪ್ರವಾಸಿ ತಾಣಗಳ ಚರಿತ್ರೆಯನ್ನು ಮನಃಪೂರ್ವಕವಾಗಿ ಹೇಳುತ್ತ ಬಂದಿರುವ ಇವರ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ಧೋರಣೆ ತಾಳಿದೆ. ಇವರ ಅಲ್ಪ ಬೇಡಿಕೆಯಾದ ಗೌರವಧನ ನೀಡಿಕೆಗೂ ಸ್ಪಂದಿಸಿಲ್ಲ. ಕೇಂದ್ರ ಸರ್ಕಾರದ ಭಾರತೀಯ ಪ್ರವಾಸಿ ನಿಗಮ ಅರ್ಧ ದಿನಕ್ಕೆ 750 (ನಾಲ್ವರು ಪ್ರವಾಸಿಗರಿಗೆ ನಾಲ್ಕು ಗಂಟೆಗಳ ವಿವರಣೆ), ಪೂರ್ತಿ ದಿನಕ್ಕೆ 950 (ನಾಲ್ವರು ಪ್ರವಾಸಿಗರಿಗೆ ಐದು ಗಂಟೆಗಳಿಗಿಂತ ಹೆಚ್ಚು ವಿವರಣೆ), ಅದೇ ನಾಲ್ಕಕ್ಕಿಂತ ಹೆಚ್ಚು- ಮೂವತ್ತಕ್ಕಿಂತ ಕಡಿಮೆ ಜನರಿಗೆ ಮಾರ್ಗದರ್ಶನ ನೀಡಿದರೆ ಈ ಮೊತ್ತ ದ್ವಿಗುಣ ಎಂದು ಶುಲ್ಕ ನಿಗದಿ ಮಾಡಿದೆ. ಆದರೆ, ಈ ಮೊತ್ತಕ್ಕೆ ಯಾರೂ ಒಪ್ಪುವುದಿಲ್ಲ. ಚೌಕಾಸಿ ವ್ಯವಹಾರ, ಪರಸ್ಪರ ಒಪ್ಪಂದಕ್ಕೆ ಬಂದು ನೂರು, ಇನ್ನೂರು, ಮುನ್ನೂರು ಎಂದರೆ ಹೆಚ್ಚು ಎನ್ನುವ ರೀತಿಯಲ್ಲಿ ಈ ಮಾರ್ಗದರ್ಶಿಗಳಿಗೆ ಸಂಭಾವನೆ ಸಿಗುತ್ತದೆ. ಬಳ್ಳಾರಿ, ಬಾಗಲಕೋಟೆ, ಬಿಜಾಪುರ, ಮೈಸೂರು, ಹಾಸನ ಜಿಲ್ಲೆಗಳನ್ನು ಕೇಂದ್ರ ಸರ್ಕಾರ ಪ್ರಮುಖ ಪ್ರವಾಸಿ ತಾಣಗಳು ಎಂದು ಘೋಷಿಸಿದೆ. ರಾಜ್ಯ ಸರ್ಕಾರ ಇಲ್ಲಿನ ಪ್ರೇಕ್ಷಣೀಯ, ಐತಿಹಾಸಿಕ ಸ್ಥಳ ಮತ್ತು ಸ್ಮಾರಕಗಳ ಪರಿಚಯಕ್ಕಾಗಿ ಉತ್ತಮ ವ್ಯಾಸಂಗ ಮಾಡಿರುವ, ಮೂರ್ನಾಲ್ಕು ಭಾಷೆ ಬಲ್ಲ ಮತ್ತು ಉತ್ತಮ ಸಂವಹನ ಕಲೆ ಗೊತ್ತಿದ್ದ ಯುವಕರನ್ನು ಆಯ್ಕೆ ಮಾಡಿ, ಅವರಿಗೆ ತರಬೇತಿ ನೀಡಿ ಅಧಿಕೃತ ಪ್ರವಾಸಿ ಮಾರ್ಗದರ್ಶಿಗಳು ಎಂದು ಲೈಸನ್ಸ್ ನೀಡಿದೆ. ರಾಜ್ಯದಲ್ಲಿ ಹೀಗೆ ಲೈಸನ್ಸ್ ಪಡೆದ ಮಾರ್ಗದರ್ಶಿಗಳ ಸಂಖ್ಯೆ 600. ಚಳಿಗಾಲದಲ್ಲಿ ಮಾತ್ರ ಇವರಿಗೆ ಕೆಲಸ, ಉಳಿದ ಎಂಟು ತಿಂಗಳು ಆಯಾ ಸ್ಮಾರಕಗಳ ಬಳಿ ದಿನವಿಡೀ ಕುಳಿತು ಹೋಗುವ ಕಾಯಕ. ಹಾಸನ ಜಿಲ್ಲೆಯ ಬೇಲೂರು- ಹಳೆಬೀಡು ಸ್ಮಾರಕಗಳಲ್ಲಿ ಬರೋಬ್ಬರಿ 73 ಮಾರ್ಗದರ್ಶಿಗಳು ಇದ್ದಾರೆ. ಇವರೆಲ್ಲರನ್ನೂ ಸಂಭಾಳಿಸಲು ಅಲ್ಲಿನ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ನಿತ್ಯ 15 ಮಾರ್ಗದರ್ಶಿಗಳಂತೆ ಸರದಿಯ ಪಟ್ಟಿ ಹಾಕಿಕೊಟ್ಟಿದೆ. ಹಾಗಾಗಿ ಐದು ದಿನಕ್ಕೊಮ್ಮೆ ಮಾರ್ಗದರ್ಶಕರಾಗುವ ಇವರ ಪಾಡು ದೇವರಿಗೇ ಪ್ರೀತಿ.
2 ಸಾವಿರ ಗೌರವಧನಕ್ಕೂ ತತ್ವಾರ: ಇಂದಿಲ್ಲಾ ನಾಳೆ ತಮ್ಮತ್ತ ಸರ್ಕಾರಗಳು ಕರುಣೆಯಿಂದ ನೋಡಿಯಾವು ಎನ್ನುವ ನಂಬಿಕೆಯಿಂದ ಇವರು ಸೇವೆ ಮಾಡುತ್ತ ಬಂದಿದ್ದಾರೆ. ಕೆಲವರು ಈಗಾಗಲೇ ಮುದುಕರಾಗಿದ್ದಾರೆ. ಆದಾಗ್ಯೂ ಸರ್ಕಾರ ಇವರತ್ತ ನೋಡಿಲ್ಲ. ಇದರಿಂದ ಬೇಸತ್ತಿರುವ ಇವರು 2001ರಲ್ಲಿ 'ಕರ್ನಾಟಕ ಪ್ರವಾಸಿ ಮಾರ್ಗದರ್ಶಿಗಳ ಸಂಘ' ಕಟ್ಟಿಕೊಂಡು ಪ್ರತಿ ತಿಂಗಳು ರು. 2 ಸಾವಿರ ಗೌರವಧನ ಮತ್ತು ಗುಂಪು ವಿಮೆಯ ಬೇಡಿಕೆ ಇಟ್ಟಿದ್ದಾರೆ. ಶ್ರೀರಾಮುಲು ಪ್ರವಾಸೋದ್ಯಮ ಸಚಿವರಾಗಿದ್ದಾಗ ಈ ಮಾರ್ಗದರ್ಶಿಗಳ ಈ ಎರಡೂ ಬೇಡಿಕೆಗಳನ್ನು ಈಡೇರಿಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದರು. ಇನ್ನೇನು ಸಂಪುಟ ಸಭೆಯ ಮುದ್ರೆ ಬೀಳಬೇಕು ಎನ್ನುವ ಹೊತ್ತಿನಲ್ಲಿ ಅವರು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದರು. ಬಳಿಕ ಆ ಕಡತವನ್ನು ಯಾರೂ ಕಣ್ಣೆತ್ತಿ ನೋಡಿಲ್ಲ. 17 ಸಾವಿರ ದಿನಗೂಲಿ ನೌಕರರನ್ನು ಕಾಯಂ ಮಾಡಿದ ಮತ್ತು ಬಹುತೇಕ ಗೌರವಧನ ನೌಕರರ ಸಂಭಾವನೆ ಹೆಚ್ಚಿಸಿದ ಹಿಂದಿನ ಬಿಜೆಪಿ ಸರ್ಕಾರಕ್ಕೆ ಈ ಮಾರ್ಗದರ್ಶಿಗಳ ನೆನಪು ಬರಲೇ ಇಲ್ಲ.
- ಮಲ್ಲಿಕಾರ್ಜುನ ಸಿದ್ದಣ್ಣವರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

