ಪ್ರಧಾನ ಸುದ್ದಿ

ಕಿರದಳ್ಳಿಗೆ ಜೀವ ಜಲ ತಂದಿದೆ ಜೀವ ಭಯ

Published On :

ಕನ್ನಡಪ್ರಭ ವಾರ್ತೆ ಯಾದಗಿರಿ  ಜೂ.16
ಹೊಟ್ಟೆಗೆ ಆಹಾರ ಇಲ್ಲದಿದ್ದರೂ ತೊಟ್ಟು ನೀರು ಜೀವ ಉಳಿಸುತ್ತದೆ. ಆದರೆ, ಸುರಪುರ ತಾಲೂಕಿನ ಕಿರದಳ್ಳಿ ತಾಂಡಾದಲ್ಲಿ ಮಾತ್ರ ಆ ಜೀವಜಲ ಜನರ ಜೀವವನ್ನೇ ತೆಗೆಯುತ್ತಿದೆ. ಅಂಥ ವಿಷಕಾರಿ ಆರ್ಸೆನಿಕ್‌ಯುಕ್ತ ನೀರು ಇದುವರೆಗೆ ಈ ಗ್ರಾಮದ 9 ಜನರನ್ನು ಬಲಿ ತೆಗೆದುಕೊಂಡಿದೆ.
ಬಡ ಲಂಬಾಣಿಗಳು ವಾಸಿಸುತ್ತಿರುವ ಈ ತಾಂಡಾದಲ್ಲಿ ಕುಡಿಯಲು ಶುದ್ಧ ನೀರು ಸಿಗುತ್ತಿಲ್ಲ. ಈ ತಾಂಡಾದ ಜನರು ಬಳಸುತ್ತಿರುವ ಬೋರ್‌ವೆಲ್ ನೀರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆರ್ಸೆನಿಕ್ ಅಂಶವಿದ್ದು, ಇದನ್ನು ಕುಡಿದರೆ ಮರಣಕ್ಕೆ ನೇರ ದಾರಿಯಾಗುತ್ತಿದೆ. ಈ ವಿಷಕಾರಿ ರಾಸಾಯನಿಕ ಅಂಶದ ನೀರು ಕುಡಿದು ಚರ್ಮದ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ. ಆರಂಭದಲ್ಲಿ ಚರ್ಮರೋಗ ಆರಂಭವಾಗಿ ನಂತರ ಅದೇ ಕ್ಯಾನ್ಸರ್ ಆಗಿ ಮಾರ್ಪಡುತ್ತಿದೆ.
ಹೀಗೆ ಇದುವರೆಗೆ ತಾಂಡಾದ 9 ಜನರು ಮೃತಪಟ್ಟಿದ್ದರೆ, ಸುಮಾರು 60ಕ್ಕೂ ಹೆಚ್ಚು ಜನರು ಚರ್ಮ ರೋಗದಿಂದ ಬಳಲುತ್ತಿದ್ದಾರೆ. ಆದ್ದರಿಂದ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜನರಿರುವ ತಾಂಡಾ ನಿವಾಸಿಗಳು ನಿತ್ಯವೂ ಜೀವ ಭಯದಿಂದಲೇ ಕಾಲ ಕಳೆಯುತ್ತಿದ್ದಾರೆ. ಇತ್ತೀಚೆಗೆ ಕಿರದಳ್ಳಿ ತಾಂಡಾದ ಚಾಂದಬಾಯಿ ರಾಠೋಡ್ ಚರ್ಮ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾರೆ.         

ರುಕ್ಮಿಣಿಬಾಯಿ ರಾಠೋಡ್, ಮಂಗ್ಲಿಬಾಯಿ ಜಾಧವ್, ಸೋಮಬಾಯಿ ರಾಠೋಡ್, ಸೀತಾಬಾಯಿ ಚಂದೂಲಾಲ್ ಹೀಗೆ ಸಾಗುತ್ತದೆ ನೀರು ಕುಡಿದು ಮೃತಪಟ್ಟವರ ಹೆಸರಿನ ಪಟ್ಟಿ. ಜಿಲ್ಲೆಯಲ್ಲಿ ಆರ್ಸೆನಿಕ್‌ಯುಕ್ತ ನೀರು ಬರುವ ಅನೇಕ ಗ್ರಾಮಗಳಿದ್ದರೂ ಕಿರದಳ್ಳಿಯಲ್ಲಿ ಈ ಪ್ರಮಾಣ ಹೆಚ್ಚು. ಗ್ರಾಮದಲ್ಲಿನ ಎಲ್ಲ ಬೋರ್‌ವೆಲ್‌ಗಳಲ್ಲಿ ಆರ್ಸೆನಿಕ್‌ಯುಕ್ತ ನೀರೇ ಬರುತ್ತಿದೆ. ಇದರ ಅರಿವಿಲ್ಲದೆ ಅನೇಕ ವರ್ಷಗಳಿಂದ ನೀರು ಕುಡಿದು ಮಾರಣಾಂತಿಕ ಕಾಯಿಲೆಗೆ ಅನೇಕರು ಒಳಗಾಗಿದ್ದಾರೆ.
ಕೋಟಿ ಸುರಿದರೂ ಶುದ್ಧ ನೀರಿಲ್ಲ: ಸುರಪುರ ತಾಲೂಕಿನ ಹಾಗೂ ಶಹಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಕಿರದಳ್ಳಿ ತಾಂಡಾದಲ್ಲಿ ಬಡ ಲಮಾಣಿ ಜನಾಂಗದ ಸಾವಿರಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ. ಕಳೆದ 3 ವರ್ಷಗಳ ಹಿಂದಷ್ಟೇ ತಾಂಡಾ ನಿವಾಸಿಗಳು ನೀರು ಕುಡಿದೇ ಮೃತಪಟ್ಟಿರುವುದು ದೃಢವಾಗಿದೆ. ಅಲ್ಲಿಯವರೆಗೆ ಇವರ ಸಾವಿಗೆ ನಿಖರ ಕಾರಣಗಳು ತಿಳಿದು ಬಂದಿರಲಿಲ್ಲ. ನಂತರ ವಿಷಯ ವಿಧಾನಸಭೆಯಲ್ಲೂ ಪ್ರಸ್ತಾಪವಾಗಿ, ನಂತರ ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ರೇವುನಾಯಕ ಬೆಳಮಗಿ ತಾಂಡಾಕ್ಕೆ ಭೇಟಿ ನೀಡಿದ್ದರು. ಅನೇಕ ಹಿರಿಯ ಅಧಿಕಾರಿಗಳೂ ಭೇಟಿ ನೀಡಿ ಹೋಗಿದ್ದಾರೆ. ನಂತರ ಜಿಲ್ಲಾಡಳಿತದಿಂದ ಆರ್ಸೆನಿಕ್ ಅಂಶ ತೆಗೆಯುವ ಯಂತ್ರವನ್ನು ತಾಂಡಾದಲ್ಲಿ ಅಳವಡಿಸಲಾಗಿದೆ. ಬೇರೆ ಜಲಮೂಲವೇ ಇಲ್ಲದ್ದರಿಂದ ತಾಂಡಾದ ಆರ್ಸೆನಿಕ್‌ಯುಕ್ತ ನೀರನ್ನೇ ಶುದ್ಧೀಕರಿಸಿ ನಿವಾಸಿಗಳಿಗೆ ಪೂರೈಸಲಾಗುತ್ತಿದೆ. ಹೀಗೆ ಇದುವರೆಗೆ ಕೋಟ್ಯಂತರ ರು. ಖರ್ಚು ಮಾಡಿದ್ದರೂ ಶುದ್ಧ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ವರ್ಷದ ಹಿಂದೆ ಈ ಯಂತ್ರವೂ ಸ್ಥಗಿತಗೊಂಡು ತಾಂಡಾ ನಿವಾಸಿಗಳು ಮೊದಲಿನಂತೆ ಅಶುದ್ಧ ನೀರನ್ನೇ ಕುಡಿದಿದ್ದಾರೆ.
ಗುಣಮುಖವಾಗದ ಕಾಯಿಲೆ: ಚರ್ಮ ಕ್ಯಾನ್ಸರ್‌ನಿಂದ ಮೃತಪಟ್ಟ ಚಾಂದಬಾಯಿಯ ಪತಿ ಮೇರೂಲಾಲ್ ರಾಠೋಡ್ ಅವರನ್ನು 'ಕನ್ನಡಪ್ರಭ' ಮಾತನಾಡಿಸಿದಾಗ, 'ಮೊದಲು ಪತ್ನಿಯ ಕೈಕಾಲು ಸೇರಿದಂತೆ ದೇಹದ ಎಲ್ಲಾ ಕಡೆಯ ಚರ್ಮ ಸುಕ್ಕುಗಟ್ಟಿತು. ನಂತರ ಯಾವ ಆಸ್ಪತ್ರೆಗೆ ಹೋದರೂ ಗುಣವಾಗಲಿಲ್ಲ. ನಂತರ ಅದು ಉಲ್ಬಣಗೊಂಡು ಕೆಲವು ತಿಂಗಳ ಹಿಂತೆ ಪತ್ನಿ ಮೃತಪಟ್ಟಳು. ಈಗ ನನ್ನ ಕಾಲಿಗೂ ಕೂಡಾ ಅದೇ ರೋಗ ಕಾಣಿಸಿಕೊಂಡಿದೆ. ಶುದ್ಧ ಕುಡಿವ ನೀರನ್ನು ಬಿಟ್ಟು ನಾವು ಮತ್ತೇನೂ ಕೇಳುತ್ತಿಲ್ಲ. ಆದರೆ ಬರುವ ಅಧಿಕಾರಿಗಳೆಲ್ಲ ಭರವಸೆ ನೀಡಿ ಹೋಗುತ್ತಾರೆಯೇ ಹೊರತು ಮತ್ತೆ ಬರುವುದಿಲ್ಲ. ಮೃತಪಟ್ಟವರ ಕುಟುಂಬಕ್ಕೆ ಪರಿಹಾರವೂ ಕೊಡುತ್ತಿಲ್ಲ' ಎಂದು ಅಳಲನ್ನು ತೋಡಿಕೊಂಡರು.
ಕಟಕಟೆಗೆ ಹತ್ತಿದರು: ತಾಂಡಾ ನಿವಾಸಿಗಳ ಗೋಳಿಗೆ ಇಲ್ಲಿಯ ಅಧಿಕಾರಿಗಳ ಬೇಜವಾಬ್ದಾರಿತನವೂ ಕಾರಣವಾಗಿದೆ. ತಾಂಡಾಕ್ಕೆ ಹಿಂದಿನ ಜಿಲ್ಲಾ ನ್ಯಾಯಾಧೀಶರು ಭೇಟಿ ನೀಡಿ, ಶುದ್ಧ ಕುಡಿವ ನೀರು ಪೂರೈಸಲು ಅಧಿಕಾರಿಗಳು ವಿಫಲರಾದ ಹಿನ್ನೆಲೆಯಲ್ಲಿ ಅವರ ಮೇಲೆ ಸ್ವಯಂಪ್ರೇರಿತ ದೂರು ದಾಖಲಿಸಿದ್ದರು. ಕಾನೂನು ಪ್ರಾಧಿಕಾರದಿಂದ ರಾಜ್ಯದ ಮುಖ್ಯ ಕಾರ್ಯದರ್ಶಿ, ಜಿಪಂ ಸಿಇಒ, ಜಿಲ್ಲಾಧಿಕಾರಿಗಳ ಮೇಲೆ ದೂರು ದಾಖಲಿಸಿದ್ದರು. ಆದರೂ ವ್ಯವಸ್ಥೆ ಮಾತ್ರ ಸುಧಾರಣೆಯಾಗಲಿಲ್ಲ. ದಾಖಲೆಯಲ್ಲೇ ಎಲ್ಲವನ್ನೂ ತೋರಿಸಿ ತಾಂಡಾ ನಿವಾಸಿಗಳ ಪಾಲಿಗೆ ಅಧಿಕಾರಿಗಳು ಯಮಸ್ವರೂಪಿಗಳಾದರು. ಎರಡು ವರ್ಷಗಳಿಂದ ಕಿರದಳ್ಳಿ ತಾಂಡಾ ಆರ್ಸೆನಿಕ್‌ಯುಕ್ತ ವಿಷದ ನೀರಿನಿಂದ ಸದ್ದು ಮಾಡುತ್ತಿದೆ. ಈಗ ಸರ್ಕಾರ ಬದಲಾದ್ದರಿಂದ ಏನಾದರೂ ಸುಧಾರಣೆಯಾಗಬಹುದು ಎಂಬ ಆಸೆ ಚಿಗುರಿದೆ.
ತಾಂಡಾ ಸಮಸ್ಯೆ ಬಗ್ಗೆ ಈಗಾಗಲೇ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದೇನೆ. ಪರ್ಯಾಯ ಶಾಶ್ವತ ಯೋಜನೆ ಕೈಗೊಳ್ಳಬೇಕಿದೆ. ಅದಕ್ಕಾಗಿ ಕೆಬಿಜೆಎಎನ್ನೆಲ್ ಸ್ವಾಧೀನದಲ್ಲಿರುವ ಸುಮಾರು 32 ಎಕರೆ ಜಮೀನನ್ನು ಪಡೆದು ಅಲ್ಲಿ ತಾಂಡಾವನ್ನು ಸ್ಥಳಾಂತರಿಸಿ ಶಾಶ್ವತ ಪುನಾವಸತಿ ಕಲ್ಪಿಸಲು ಪ್ರಯತ್ನಿಸುತ್ತಿದ್ದೇನೆ.
- ಗುರುಪಾಟೀಲ ಶಿರವಾಳ, ಶಾಸಕ

ನೀರಿನಿಂದ ಕ್ಯಾನ್ಸರ್ ಬರುವುದು ದೃಢಪಟ್ಟಿದೆ. 2007-08ರಲ್ಲಿ ಕಿರದಳ್ಳಿಯ 5 ಪ್ರಕರಣಗಳಲ್ಲಿ ಕ್ಯಾನ್ಸರ್ ಅಂಶ ಕಂಡುಬಂದಿದೆ. ಅವರಲ್ಲಿ ಇಬ್ಬರು ಅಸುನೀಗಿದ್ದಾರೆ. ಚಿಕಿತ್ಸೆ ಪಡೆದರೆ ಸಾಯುತ್ತೇವೆ ಎಂಬ ನಂಬಿಕೆ ಜನರಲ್ಲಿ ಇದೆ. ಸದ್ಯ ಗಂಭೀರ ಪ್ರಕರಣ ಕಡಿಮೆಯಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದೆ.
- ಡಾ.ಮಲ್ಲಿಕಾರ್ಜುನ ಮುಕ್ಕಾ,
ಯಾದಗಿರಿ ಜಿಲ್ಲಾ ಆರೋಗ್ಯಾಧಿಕಾರಿ

- ನಾರಾಯಣ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.