ಕನ್ನಡಿಗರ ರಕ್ಷಣೆಗೆ ಧಾವಿಸಿದ ಸರ್ಕಾರ
ಕನ್ನಡಪ್ರಭ ವಾರ್ತೆ, ಬೆಂಗಳೂರು, ಜೂ.18-
ಬದರಿನಾಥ, ಕೇದಾರನಾಥ, ಹೃಷಿಕೇಶಕ್ಕೆ ಹೋಗಿರುವ ರಾಜ್ಯದ ನೂರಾರು ಯಾತ್ರಾರ್ಥಿಗಳು ಭಾರಿ ಮಳೆಯಿಂದಾಗಿ ಉಂಟಾಗಿರುವ ಪ್ರವಾಹದಲ್ಲಿ ಸಿಲುಕಿದ್ದು, ಅವರ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಿದೆ.
ಸಮಾಜ ಕಲ್ಯಾಣ ಇಲಾಖೆ ಆಯುಕ್ತ ನವೀನ್ರಾಜ್ ಸಿಂಗ್ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಆಯುಕ್ತ ಕರಿಗೌಡ ಅವರನ್ನು ಕನ್ನಡಿಗರ ರಕ್ಷಣೆ ಕಾರ್ಯಕ್ಕೆ ನಿಯೋಜಿಸಲಾಗಿದೆ. ಈ ಅಧಿಕಾರಿಗಳು ಬುಧವಾರ ಬೆಳಗ್ಗೆ ಉತ್ತರಾಖಂಡಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಸರ್ಕಾರ ತಿಳಿಸಿದೆ.
ಉತ್ತರ ಭಾರತ ಅದರಲ್ಲೂ ವಿಶೇಷವಾಗಿ ಉತ್ತರಾಖಂಡದ ಪ್ರಮುಖ ಯಾತ್ರಾ ಸ್ಥಳಗಳ ಮಾರ್ಗ ಮಧ್ಯೆ ಭಾರಿ ಮಳೆಯಿಂದ ಗಂಗಾ ನದಿ ಹಾಗೂ ಅದರ ಉಪ ನದಿಗಳು ಉಕ್ಕಿ ಹರಿಯುತ್ತಿವೆ. ಇದರಿಂದಾಗಿ ರಸ್ತೆಗಳು ನದಿ ಸ್ವರೂಪ ಪಡೆದಿದ್ದು, ಭೂಕುಸಿತದ ಪರಿಣಾಮ ಯಾತ್ರಿಗಳು ಸುರಕ್ಷಿತ ಪ್ರದೇಶಗಳಿಗೆ ಬರಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ.
ಕರ್ನಾಟಕದ ನೂರಾರು ಯಾತ್ರಾರ್ಥಿಗಳು ಅರಣ್ಯ, ಗುಡ್ಡ, ರಸ್ತೆ, ಸಣ್ಣ ಹಳ್ಳಿಗಳಲ್ಲಿ ಉಳಿದುಕೊಂಡಿದ್ದು ತಿನ್ನಲು ಆಹಾರ, ಕುಡಿಯಲು ನೀರು ಇಲ್ಲದೇ ಸಂಕಷ್ಟ ಅನುಭವಿಸುತ್ತಿದ್ದಾರೆ. ಕೆಲವರು ಅನಾರೋಗ್ಯಪೀಡಿತರಾಗಿದ್ದು ಅವರಿಗೆ ಔಷಧೋಪಚಾರವೂ ದೊರಕುತ್ತಿಲ್ಲ.
ಶ್ರೀಗಳ ನೇತೃತ್ವದ ತಂಡ: ರಾಮಚಂದ್ರಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಅವರ ನೇತೃತ್ವದ 84 ಜನರ ತಂಡ ಹೃಷಿಕೇಶಕ್ಕೆ ತೆರಳಿತ್ತು. ಹೃಷಿಕೇಷದಿಂದ ಉತ್ತರಾಖಂಡ್ಗೆ ಹೋಗುವ ಉದ್ದೇಶವಿತ್ತು.
ಆದರೆ ಮಳೆಯಿಂದ ಭೂ ಕುಸಿತ ಉಂಟಾಗಿ ಯಾತ್ರೆಯನ್ನು ರದ್ದುಗೊಳಿಸಿದ್ದಾರೆ. ಸದ್ಯ ಹೃಷಿಕೇಶದ ಪರಮಾರ್ಥ ನಿಕೇತನ ಆಶ್ರಮದಲ್ಲಿ ಸುರಕ್ಷಿತವಾಗಿದ್ದೇವೆ ಎಂದು ಶ್ರೀಗಳ ಭಕ್ತರಾದ ಕೆ.ಜಿ. ಭಟ್ ಅವರು 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯಾಧಿಕಾರಿಯಾಗಿರುವ ಭಟ್ಕಳದ ವಿ.ಡಿ. ಮೊಗೇರ, ಹೊನ್ನಾವರದ ನಿತಿನ್ ಶಿರಸಾಟ್, ಜಗದೀಶ ಮೇಸ್ತಾ, ಕೃಷ್ಣಾ ಕರ್ಕಿ, ಯಲ್ಲಾಪುರ ಸಮೀಪದ ಶಿವಪುರದ ಕೃಷ್ಣಾ ಹಾಗೂ ಅವರ ಸಹೋದರ, ಮಾವಿನಕುರ್ವಾದ ರಾಘವೇಂದ್ರ ಭಟ್ ಸೇರಿದಂತೆ 9 ಜನರು ಉತ್ತರದ ಪ್ರವಾಹದಿಂದ ತತ್ತರಿಸಿದ್ದಾರೆ.
ಉಕ್ಕಿ ಹರಿದ ಮಂದಾಕಿನಿ: ಹರಿದ್ವಾರದಿಂದ ವಾಹನದಲ್ಲಿ ಮರಳುತ್ತಿರುವಾಗ ಸೋಮವಾರ ಬೆಳಗ್ಗೆ ಉತ್ತರಾಖಂಡ ರಾಜ್ಯದ ಸೋನ ಪ್ರಯಾಗ ಬಳಿ ಬರುತ್ತಿದ್ದಂತೆ ಹಠಾತ್ತಾಗಿ ಭಾಸುಕಿ ಹಾಗೂ ಮಂದಾಕಿನಿ ನದಿ ಉಕ್ಕೇರಿತು. ಮುಂದೆ ಹೋಗಲು ದಾರಿಯೇ ಇರಲಿಲ್ಲ. ಹಿಂದಕ್ಕೆ ಹೋಗೋಣ ಎಂದರೆ ಬಂದ ದಾರಿಯಲ್ಲೂ ನೀರೇ ನೀರು. ಬದುಕಿದೆಯಾ ಬಡ ಜೀವವೇ ಎಂದು ರಸ್ತೆಯ ಪಕ್ಕದ ಗುಡ್ಡವನ್ನೇರಿದರು. ಗುಡ್ಡದ ಸುತ್ತಲೂ ನೀರು ತುಂಬಿ ಗುಡ್ಡ ನಡುಗಡ್ಡೆಯಾಯಿತು. ಇವರ ಜೊತೆ ಇನ್ನೂ ಸುಮಾರು 130 ಜನರು ಗುಡ್ಡದಲ್ಲಿ ಆಶ್ರಯ ಪಡೆದಿದ್ದಾರೆ. ಬಿರುಗಾಳಿ, ಭಾರಿ ಮಳೆಯಲ್ಲೇ ನೆನೆಯುತ್ತ ರಾತ್ರಿ ಕಳೆದಿದ್ದಾರೆ. ಮೇಲಾಗಿ ಹಿಮ ಸುರಿಯುತ್ತಿರುವುದರಿಂದ ಚಳಿಯಿಂದ ಎಲ್ಲರೂ ನಡುಗುವಂತಾಗಿದೆ. ಸೋಮವಾರ ಬೆಳಗ್ಗೆಯಿಂದ ಮಂಗಳವಾರ ಸಂಜೆ ತನಕ ಮಳೆ ನೀರು ಬಿಟ್ಟರೆ ಬೇರೇನೂ ಆಹಾರ ಲಭಿಸಿಲ್ಲ.
ಸ್ಥಳೀಯರಿಂದಾಗಿ ಧೈರ್ಯ: 'ಕನ್ನಡಪ್ರಭ' ದೂರವಾಣಿ ಮೂಲಕ ವಿ.ಡಿ. ಮೊಗೇರ ಅವರನ್ನು ಸಂಪರ್ಕಿಸಿದಾಗ, ಮಂಗಳವಾರ ಸಂಜೆ ಸೇನಾಪಡೆಯ ಹೆಲಿಕಾಪ್ಟರ್ ಬಂದು ಆಹಾರದ ಪೊಟ್ಟಣಗಳನ್ನು ಬೀಳಿಸಿ ಹೋಗಿದೆ. ಎಲ್ಲರೂ ಸ್ವಲ್ಪ ಸ್ವಲ್ಪ ತಿಂಡಿ ತಿಂದಿದ್ದೇವೆ. ಹೆಲಿಕಾಪ್ಟರ್ ಮೂಲಕ ನಮ್ಮನ್ನೆಲ್ಲ ಪಾರು ಮಾಡಬೇಕು ಇಲ್ಲದಿದ್ದರೆ. ರಾತ್ರಿ ಕಳೆಯಲು ಸಾಧ್ಯವೇ ಇಲ್ಲ ಎಂದು ಉತ್ತರಿಸಿದರು. ಸ್ಥಳೀಯರು ನೂರಾರು ಸಂಖ್ಯೆಯಲ್ಲಿ ಇರುವುದು ಇವರಿಗೆ ಸ್ವಲ್ಪ ಮಟ್ಟಿಗೆ ಧೈರ್ಯ ತಂದಿದೆ.
ಮರೆಯಾದ ಆತಂಕ: ಬದರೀನಾಥ್ ಯಾತ್ರೆಗೆ ತೆರಳಿದ್ದ ರಾಯಚೂರು ಮೂಲದ 8 ಜನ ಯಾತ್ರಿಗಳು ಸುರಕ್ಷಿತವಾಗಿದ್ದಾರೆಂದು ಮಂಗಳವಾರ ಸಂಜೆ ಗೊತ್ತಾಗಿದ್ದು, ಇವರ ಸಂಬಂಧಿಕರಲ್ಲಿ ಈ ನಿಟ್ಟಿನಲ್ಲಿ ಉಂಟಾಗಿದ್ದ ಆತಂಕ ಮರೆಯಾಗಿದೆ.
ಕಳೆದ ವಾರವಷ್ಟೇ ನಗರದ 8 ಜನ ಯಾತ್ರಿಗಳು ಬದರೀನಾಥ್ ಯಾತ್ರೆಗೆ ತೆರಳಿದ್ದರು. ಆದರೆ ಬದರೀನಾಥ್ ಸುತ್ತಮುತ್ತಲಿನ ಪ್ರದೇಶದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯಿಂದ ಸಂಬಂಧಿಕರಲ್ಲಿ ಆತಂಕ ಮೂಡಿತ್ತು. ಶುಕ್ರವಾರದಂದು ಯಾತ್ರಿಗಳು ಇಲ್ಲಿನ ತಮ್ಮ ಸಂಬಂಧಿಗಳಿಗೆ ದೂರವಾಣಿ ಮೂಲಕ ಬದರೀನಾಥಕ್ಕೆ ತೆರಳುತ್ತಿರುವುದಾಗಿ ತಿಳಿಸಿದ್ದರು.
ಆದರೆ ಆನಂತರದಲ್ಲಿ ಅವರನ್ನು ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ. ಮಂಗಳವಾರ ಸಂಜೆ ಬದರೀನಾಥ್ ನಲ್ಲಿರುವ ಸಂಬಂಧಿಗಳಲ್ಲೊಬ್ಬರು ದೂರವಾಣಿ ಮೂಲಕ ಮಾತನಾಡಿ, ಸುರಕ್ಷಿತವಾಗಿರುವುದಾಗಿ ತಿಳಿಸುವ ಮೂಲಕ ಸ್ಥಳೀಯರಲ್ಲಿದ್ದ ಆತಂಕ ದೂರವಾಗಿದೆ.
ಶೋಭಾ ಅಸಮಾಧಾನ: ಪ್ರವಾಹದಲ್ಲಿ ಸಿಲುಕಿರುವ ಜನರ ರಕ್ಷಣೆ ಮಾಡುವ ಬದಲು ಉತ್ತರಾಖಂಡ್ ಸ್ಥಳೀಯ ಆಡಳಿತ ಸಾವಿರಾರು ಯಾತ್ರಿಗಳ ದಾರಿ ತಪ್ಪಿಸುತ್ತಿದೆ ಎಂದು ಮಾಜಿ ಸಚಿವೆ ಶೋಭ ಕರಂದ್ಲಾಜೆ ಹೇಳಿದ್ದಾರೆ. ಚಾರ್ದಾಮ್ ಪ್ರವಾಸದಲ್ಲಿರುವ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಕೇದರನಾಥ ತೆರಳುವ ಮಾರ್ಗ ಮಧ್ಯೆ ಮಣ್ಣು ಕುಸಿತ ಉಂಟಾಗಿ ರುದ್ರಪ್ರಯಾಗ ಕಾಡಿನ ಹಳ್ಳಿಯೊಂದರಲ್ಲಿ ಉಳಿದುಕೊಂಡಿದ್ದಾರೆ. ಅಲ್ಲಿನ ಸ್ಥಿತಿಯ ಬಗ್ಗೆ 'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಅವರು, ಕಳೆದ ಎರಡು ದಿನಗಳಿಂದ ಸಾವಿರಾರು ಪ್ರವಾಸಿಗರ ಅತಂತ್ರ ಸ್ಥಿತಿಯಲ್ಲಿದ್ದಾರೆ. ಕುಡಿಯಲು ನೀರಿಲ್ಲ, ತಿನ್ನಲು ಆಹಾರವಿಲ್ಲ, ಉಳಿದುಕೊಳ್ಳಲು ಸ್ಥಳವಿಲ್ಲ. ಹೀಗಾಗಿ ಸಾವಿರಾರು ಜನರು ಚಳಿ, ಮಳೆಯಲ್ಲಿ ರಸ್ತೆಯಲ್ಲಿ ನಿಂತಿದ್ದಾರೆ. ಸ್ಥಳೀಯ ಆಡಳಿತ ಪ್ರವಾಸಿಗರು, ಯಾತ್ರಾರ್ಥಿಗಳ ದಾರಿ ತಪ್ಪಿಸುತ್ತಿದೆ. ಯಾವ ರಸ್ತೆಗಳಲ್ಲಿ ಹೋದರೆ ಸೂಕ್ತ ಎಂಬ ಬಗ್ಗೆ ಮಾಹಿತಿಯನ್ನು ನೀಡುತ್ತಿಲ್ಲ. ಸ್ಥಳೀಯ ಪೊಲೀಸರು ಎಲ್ಲಾ ಪ್ರವಾಸಿಗರ ದಾರಿ ತಪ್ಪಿಸುತ್ತಿದ್ದಾರೆ ಎಂದು ಹೇಳಿದರು.
'ಮಂಗಳವಾರ ಬೆಳಿಗ್ಗೆವರೆಗೂ ರುದ್ರಪ್ರಯಾಗ ಜಿಲ್ಲೆಯ ದಟ್ಟ ಅರಣ್ಯದಲ್ಲಿ ಇದ್ದೆವು. ಊಟ ಹಾಗೂ ನೀರಿನ ಸಮಸ್ಯೆ ಇದ್ದರೂ ಉಳಿದುಕೊಳ್ಳಲು ಬೆಟ್ಟದಂತಹ ಪ್ರದೇಶವಿತ್ತು. ಆದರೆ ಅಲ್ಲಿನ ಪೊಲೀಸ್ ಒಬ್ಬ ಉತ್ತಮ ರಸ್ತೆ ಇದೆ ಎಂದು ಹೇಳಿದ. ಆತನ ಮಾತನ್ನು ನಂಬಿ 15 ಕಿಲೋ ಮೀಟರ್ ಬಂದ ನಮಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಮಣ್ಣು ಕುಸಿತವಾಗಿರುವ ಕಾರಣ ಮುಂದಕ್ಕೆ ಹೋಗಲು ದಾರಿ ಇಲ್ಲ. ಇಲ್ಲಿ ಕುಡಿಯಲು ನೀರಿಲ್ಲ, ಊಟವಿಲ್ಲದೇ ಸಾವಿರಾರು ಜನರು ಸಂಕಷ್ಟ ಸ್ಥಿತಿಯಲ್ಲಿದ್ದಾರೆ ಎಂದು ಅವರು ಹೇಳಿದರು. ಸಹಾಯಕ್ಕೆ ಧಾವಿಸದಬೇಕಾದ ಸರ್ಕಾರ ಸಹಾಯವಿರಲಿ, ಜನರು ಸಂಕಷ್ಟದಿಂದ ಪಾರಾಗಲು ಕನಿಷ್ಠ ಸರಿಯಾದ ಮಾರ್ಗದರ್ಶನವನ್ನು ನೀಡುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

