ಗ್ಯಾಂಗ್‌ರೇಪ್: ಪತ್ತೆಗೆ 8 ಪೊಲೀಸ್ ತಂಡ ರಚನೆ
ಕನ್ನಡಪ್ರಭ ವಾರ್ತೆ ಮಣಿಪಾಲ ಜೂ.22
ವೈದ್ಯ ವಿದ್ಯಾರ್ಥಿನಿ ಮೇಲೆ ಗುರುವಾರ ಮಧ್ಯರಾತ್ರಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗೆ ಪೊಲೀಸರ 8 ತಂಡಗಳನ್ನು ರಚಿಸಲಾಗಿದೆ. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬೋರಲಿಂಗಯ್ಯ ಸ್ವತಃ ಈ ತಂಡಗಳ ನೇತೃತ್ವ ವಹಿಸಿದ್ದಾರೆ.
ಯುವತಿಯನ್ನು ಅಪಹರಿಸಿದ ಆಟೋ ರಿಕ್ಷಾ ಪತ್ತೆಯಾಗಿದ್ದು ತನಿಖೆ ಹಿನ್ನೆಲೆಯಲ್ಲಿ ಗೌಪ್ಯವಾಗಿಡಲಾಗಿದೆ. ಆಟೋ ಚಾಲಕ ಸೇರಿದಂತೆ ಅತ್ಯಾಚಾರ ನಡೆಸಿದ ಮೂವರೂ ಸ್ಥಳೀಯರೇ ಎಂಬುದನ್ನು ಪೊಲೀಸರು ದೃಢಪಡಿಸಿದ್ದಾರೆ. ಅತ್ಯಾಚಾರಕ್ಕೆ ಬಳಸಿದ್ದ ಆಟೋ ಸಂಚರಿಸಿದ್ದ ರಸ್ತೆಯಲ್ಲಿ ಎಲ್ಲಿಯೂ ಸಿಸಿಟಿವಿ ಕ್ಯಾಮೆರಾಗಳಿಲ್ಲ. ಆದ್ದರಿಂದ ಆರೋಪಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿಲ್ಲ. ಇದರಿಂದ ತನಿಖೆಗೆ ಕೊಂಚ ಹಿನ್ನಡೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸರ್ಕಾರ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಹಿನ್ನೆಲೆಯಲ್ಲಿ ಗೃಹ ಸಚಿವ ಕೆ.ಜೆ. ಜಾರ್ಜ್ ಭಾನುವಾರ ಮಣಿಪಾಲಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
ಬಲ್ಲವರಿಂದಲೇ ಕೃತ್ಯ: ಮಣಿಪಾಲ ವಿವಿ ಕ್ಯಾಂಪಸ್‌ನಲ್ಲಿ ಹಲವೆಡೆ ಗೇಟುಗಳಿವೆ. ಅಪರಿಚಿತ ಆಟೋ ಚಾಲಕರಿಗೆ ಈ ಗೇಟುಗಳನ್ನು ತಪ್ಪಿಸಿಕೊಂಡು ಹೋಗುವುದು ಕಷ್ಟ. ಆದರೆ, ಈ ಆಟೋ ಯಾವುದೇ ಗೇಟುಗಳಿರುವ ರಸ್ತೆಯಲ್ಲಿ ಹೋಗದೆ ನೇರವಾಗಿ ಆಸ್ಪತ್ರೆಯ ಹೊರಗಿನ ರಸ್ತೆಯ ಮೂಲಕ ವಿವಿ ಒಳಾಂಗಣ ಕ್ರೀಡಾಂಗಣ ಮರೆನಾ ಮತ್ತು ವ್ಯಾಲಿವ್ಯೂ ಹೊಟೇಲ್‌ನ ಮುಂಭಾಗದಿಂದ ಸಾಗಿ ನೇರವಾಗಿ ಅತ್ಯಾಚಾರ ನಡೆದ ಸ್ಥಳಕ್ಕೆ ತೆರಳಿದೆ. ಆದ್ದರಿಂದ ಈ ಆರೋಪಿಗಳು, ಮುಖ್ಯವಾಗಿ ಆಟೋ ಚಾಲಕ ಮಣಿಪಾಲ ವಿವಿಯ ಕ್ಯಾಂಪಿಸ್‌ನೊಳಗಿನ ಎಲ್ಲ ರಸ್ತೆಗಳನ್ನೂ ಚೆನ್ನಾಗಿ ಬಲ್ಲವನೇ ಆಗಿದ್ದಾನೆ ಎಂದು ಪಶ್ಚಿಮ ವಲಯ ಪೊಲೀಸ್ ನಿರೀಕ್ಷಕ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.
ಭುಗಿಲೆದ್ದ ಪ್ರತಿಭಟನೆ: ಅತ್ಯಾಚಾರ ಘಟನೆಗೆ ಜಿಲ್ಲಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಶನಿವಾರ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು ಜಾತಿ, ಮತ, ರಾಜಕೀಯ ಯಾವುದನ್ನೂ ನೋಡದೆ ಪೊಲೀಸರು ಆರೋಪಿಗಳನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂಬ ಆಗ್ರಹಿಸಿವೆ. ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಎಸ್‌ಪಿಗೆ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಮನವಿ ಸಲ್ಲಿಸಿದ್ದಾರೆ. ಎಬಿವಿಪಿ, ಹಿಂದೂ ಯುವಸೇನೆ, ಪಿಎಫ್‌ಐ, ಜಮಾತೆ ಇಸ್ಲಾಮಿಕ್ ಹಿಂದ್, ಅದರ ಸಹ ಸಂಸ್ಥೆ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಜೇಷನ್ ಆಫ್ ಕರ್ನಾಟಕ, ಸೈಂಟ್ ಸಿಸಿಲಿಸ್ ಸಂಯುಕ್ತ ಪಿಯು ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ, ಮೆರವಣಿಗೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

