ಪ್ರಧಾನ ಸುದ್ದಿ

ಮಳೆ ಬಿದ್ದರೆ ಕೆಡುತ್ತೆ ಕೆಲಸ

ಮಳೆ ಬಿದ್ದರೆ ಕೆಡುತ್ತೆ ಕೆಲಸ
Published On :

ಡೆಹ್ರಾಡೂನ್:  ಉತ್ತರಾಖಂಡದ ಪ್ರವಾಹ ಸಂತ್ರಸ್ತರ ಸಂಕಷ್ಟ ಇನ್ನೂ ಮುಗಿಯುವಂತೆ ಕಾಣುತ್ತಿಲ್ಲ. ಒಂದೆಡೆ ನಾಪತ್ತೆಯಾದವರ ಬಗ್ಗೆ ಯಾವುದೇ ನಿಖರ ಮಾಹಿತಿ ಸಿಗುತ್ತಿಲ್ಲ. ಅದಕ್ಕೆ ಪೂರಕವಾಗಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗೆ ಪ್ರಕೃತಿಯೇ ಅಡ್ಡಿಯಾಗಿ ಪರಿಣಮಿಸಿದೆ. ಹವಾಮಾನ ಇಲಾಖೆ ನೀಡಿದ ಮುನ್ಸೂಚನೆಯಂತೆ
ಜೂ.24ರಿಂದ ಧಾರಾಕಾರ ಮಳೆಯಾಗುವ ಎಚ್ಚರಿಕೆ ನೀಡಿದೆ. ಒಂದು ವೇಳೆ ಮಳೆ ಸುರಿದರೆ ಪರಿಹಾರ ಕಾರ್ಯಾಚರಣೆ ವ್ಯವಸ್ಥೆಯೇ ಸಂಪೂರ್ಣ ಕುಸಿದು ಹೋಗುವ ಸಾಧ್ಯತೆಯೇ ಹೆಚ್ಚು. ಈವರೆಗೆ 80 ಸಾವಿರ ಮಂದಿ ರಕ್ಷಿಸಿರುವ ಸೇನೆಯ ರಕ್ಷಣಾ ಕಾರ್ಯಕ್ಕೆ ಭಾನುವಾರ ಸುರಿದ ಮಳೆಯಿಂದಾಗಿ ಹಿನ್ನಡೆಯಾಗಿದೆ. ಕೆಳಮಟ್ಟದಲ್ಲಿ ಸಾಗುತ್ತಿರುವ ಮೋಡ ಹಾಗೂ ಭಾರಿ ಮಂಜಿನಿಂದಾಗಿ ಜಂಗಲ್ ಚೆಟ್ಟಿ ಮತ್ತಿತರ ದುರ್ಗಮ ಪ್ರದೇಶಗಳಿಂದ ಕಾಪ್ಟರ್ ಮೂಲಕ ಯಾತ್ರಾರ್ಥಿಗಳನ್ನು ರಕ್ಷಿಸುವ ಕಾರ್ಯವನ್ನು ವಾಯುಸೇನೆ ಕೆಲಕಾಲ ಸ್ಥಗಿತಗೊಳಿಸಬೇಕಾಯಿತು. ಆದರೂ, ವ್ಯತಿರಿಕ್ತ ಹವಾಮಾನದ ನಡುವೆಯೂ 'ಆಪರೇಷನ್ ರಾಹತ್‌' ಮುಂದುವರಿಸಿದ ಭಾರತೀಯ ವಾಯುಪಡೆ 2,100 ಜನರನ್ನು ರಕ್ಷಿಸಿದೆ.

5000ಕ್ಕೂ ಹೆಚ್ಚು ಮಂದಿ ಸಾವು!
ಕೇದಾರನಾಥ ಕಣಿವೆಯ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 5 ಸಾವಿರ ದಾಟಬಹುದು ಎಂದು ಉತ್ತರಾಖಂಡ ಸರ್ಕಾರ ಹೇಳಿದೆ. ಪ್ರವಾಹದಿಂದಾಗಿ ಭಾರಿ ಪ್ರಮಾಣದಲ್ಲಿ ಆಸ್ತಿಪಾಸ್ತಿಗೆ ಹಾನಿಯಾಗಿದೆ. ಅನೇಕರು ಮಣ್ಣಿನಡಿ ಹೂತುಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಾವಿನ ಸಂಖ್ಯೆ 5 ಸಾವಿರ ದಾಟಬಹುದು ಎಂದು ಉತ್ತರಾಖಂಡದ ವಿಪತ್ತು ನಿರ್ವಹಣಾ ಸಚಿವ ಯಶ್ಪಾಲ್ ಆರ್ಯ ಹೇಳಿದ್ದಾರೆ.

ಕೇದಾರನಾಥದಲ್ಲೇ ಅಂತ್ಯ ಸಂಸ್ಕಾರ
ಕೇದಾರನಾಥದಲ್ಲಿ ಚದುರಿಬಿದ್ದಿರುವ ಅನಾಥ ಶವಗಳ ಅಂತ್ಯ ಸಂಸ್ಕಾರವನ್ನು ಸರ್ಕಾರವೇ ನಡೆಸಲು ಉದ್ದೇಶಿಸಿದೆ. ವಾರದಿಂದ ಬಿದ್ದಿರುವ ಶವಗಳು ಕೊಳೆಯುವ ಹಂತಕ್ಕೆ ತಲುಪಿವೆ. ಈ ಹಿನ್ನೆಲೆಯಲ್ಲಿ ಕೇದಾರನಾಥದಲ್ಲೇ ಈ ಶವಗಳ ಸಾಮೂಹಿಕ ಅಂತ್ಯ ಸಂಸ್ಕಾರ ನಡೆಸಲಾಗುವುದು ಎಂದು ಸರ್ಕಾರ ಹೇಳಿದೆ. ಇದಕ್ಕೂ ಮೊದಲು ಮೃತದೇಹದ ಫೋಟೋ ಹಾಗೂ ಡಿಎನ್‌ಎ ಮಾದರಿಯನ್ನು ಸಂಗ್ರಹಿಸಿಡಲು ಸೂಚಿಸಲಾಗಿದೆ. ಇದೇ ವೇಳೆ ದೇಗುಲದ ಆವರಣದಲ್ಲಿ 123 ಶವಗಳು ಪತ್ತೆಯಾಗಿವೆ. ಮೃತರ ಆತ್ಮಕ್ಕೆ ಶಾಂತಿಕೋರಲು ಹರಿದ್ವಾರದಲ್ಲಿ ಮಹಾಯಾಗಕ್ಕೆ ಸಿದ್ಧತೆ ನಡೆದಿದೆ.

ಒಂದೇ ಕುಟುಂಬದ 14 ಮಂದಿ ನಾಪತ್ತೆ
- ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ:
ಬೆಂಗಳೂರು ಎಚ್‌ಎಸ್‌ಆರ್ ಲೇಔಟ್‌ನಿಂದ ಕೇದಾರನಾಥಕ್ಕೆ ಆಗಮಿಸಿದ್ದ ಒಂದೇ ಕುಟುಂಬದ 14 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. ಕಳೆದ ಐದು ದಿನಗಳಿಂದ ಇವರು ಸಂಪರ್ಕಕ್ಕೆ ಸಿಕ್ಕಿಲ್ಲ. ಇದೇ ತಂಡದಲ್ಲಿದ್ದ ಕೀರ್ತಿ, ಅನಂತ್, ನವ್ಯ ಹಾಗೂ ಸೀತಾರಾಮ್ ಅವರನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸಿ ಸಂತ್ರಸ್ತರ ಕೇಂದ್ರಕ್ಕೆ ತರಲಾಗಿದೆ.
ಬೆಂಗಳೂರು ಎಚ್‌ಎಸ್‌ಆರ್ ಲೇಔಟ್‌ನ ಕೀರ್ತಿ- ಅನಂತ್ ದಂಪತಿ. ನ್ಯವ ಹಾಗೂ ಸೀತಾರಾಮ್ ಅವರು ಬಂಧುಗಳು. ನಾಪತ್ತೆ ಆಗಿರುವ 14 ಮಂದಿಯೂ ಅನಂತ್ ಕುಟುಂಬದ ಬಂಧುಗಳಾಗಿದ್ದಾರೆ. ಜೂ.13ರಂದು ಆಗಮಿಸಿದ್ದ ಈ ತಂಡದವರು ಜೂ.16ರಂದು ಕೇದಾರನಾಥ ದರ್ಶನ ಪಡೆದರು. ಅದಾದ ನಂತರ ಕುದುರೆಗಳ ಮೂಲಕ 14 ಮಂದಿ ಯಾತ್ರೆ ಮುಂದುವರಿಸಿದರು.       

ಆದರೆ, ಅನಂತ್ ಸೇರಿದಂತೆ ನಾಲ್ವರು ಅಲ್ಲೇ ಉಳಿದರು. ಧಾರಾಕಾರ ಮಳೆಯಿಂದಾಗಿ ಅನಂತ್, ಕೀರ್ತಿ, ನವ್ಯ ಹಾಗೂ ಸೀತಾರಾಮ್ ಯಾತ್ರೆ ಮುಂದುವರಿಸಲಿಲ್ಲ. ಭಾರಿ ಮಳೆಯಿಂದ ರಕ್ಷಣೆ ಪಡೆಯಲು ಸ್ಥಳೀಯರ ಸಹಾಯದಿಂದ ಸುರಕ್ಷತಾ ಸ್ಥಳಕ್ಕೆ ಧಾವಿಸಿದ್ದರು.
ಆದರೆ, ಯಾತ್ರೆ ಮುಂದುವರಿಸಿದ 14 ಜನರು ಇದುವರೆಗೆ ಸಂಪರ್ಕಕ್ಕೆ ಸಿಕ್ಕಿಲ್ಲ. ಅವರೆಲ್ಲರೂ ಸುರಕ್ಷಿತವಾಗಿದ್ದಾರೋ ಇಲ್ಲವೋ ಎಂಬುದು ಗೊತ್ತಾಗಿಲ್ಲ. ಅವರನ್ನು ಪತ್ತೆ ಹಚ್ಚಲು ಎಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದು ರಕ್ಷಣಾ ಕಾರ್ಯದ ಮೇಲ್ವಿಚಾರಣೆ ನಡೆಸುತ್ತಿರುವ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ. ಕುಮಾರ್, ನಾಗರಾಜ್, ಉಮಾರಾಜ್, ಗುರುರಾಜ್, ಲೀಲಾವತಿ, ಸೀತಾಲಕ್ಷ್ಮಿ, ರಮೇಶ್, ನಾಗಲಕ್ಷ್ಮಿ, ಅನಿರುದ್ಧ, ನಾಗಶ್ರೀ, ಅತುಲ್ ಚಂದ್ರ, ಅಮಿತ್‌ಚಂದ್ರ ಇತರರನ್ನು ಸಂಪರ್ಕಿಸಲು ಪ್ರಯತ್ನಿಸಲಾಗುತ್ತಿದೆ.
ಇನ್ನೂ 500 ಮಂದಿ ಅತಂತ್ರ: ಈ ನಡುವೆ ಕರ್ನಾಟಕಕ್ಕೆ ಸೇರಿದ ಇನ್ನೂ 500 ಮಂದಿ ಕೇದಾರನಾಥ ಹಾಗೂ ಬದ್ರಿನಾಥ ಸುತ್ತಮುತ್ತಲಲ್ಲಿ ಉಳಿದಿರುವ ನಿರೀಕ್ಷೆ ಇದೆ. ಇದುವರೆಗೆ ಸಂಪರ್ಕಕ್ಕೆ ಸಿಕ್ಕ ಇನ್ನೂ 200 ಮಂದಿಯನ್ನು ಸೋಮವಾರ ಸುರಕ್ಷಿತ ಪ್ರದೇಶಕ್ಕೆ ಕರೆತರಲಾಗುತ್ತಿದೆ. ಪ್ರವಾಹ ಪೀಡಿತ ಪ್ರದೇಶದಲ್ಲಿ ಮೊಬೈಲ್ ನೆಟ್‌ವರ್ಕ್ ಸಿಗದೆ, ದಾರಿಯೂ ಕಾಣದೇ ಅತಂತ್ರರಾಗಿರುವ ಸಾಕಷ್ಟು ಜನರು ರಕ್ಷಣಾ ಪಡೆ ಸಹಾಯ ನಿರೀಕ್ಷಿಸುತ್ತಿರುವ ಸಾಧ್ಯತೆ ಇದೆ. ತ್ವರಿತವಾಗಿ ಕಾರ್ಯಾಚರಣೆ ಸಾಗಲು ಕರ್ನಾಟಕ ಸರ್ಕಾರವೇ ಈಗ ಹೆಲಿಕಾಪ್ಟರ್‌ನ್ನು ರವಾನಿಸಿದೆ. ಸೋಮವಾರದಿಂದ ಈ ಹೆಲಿಕಾಪ್ಟರ್ ಕಾರ್ಯಾಚರಣೆ ಆರಂಭಿಸಲಿದೆ.
ಭಾನುವಾರ ಕರ್ನಾಟಕದ 71 ಜನರನ್ನು ರಕ್ಷಿಸಲಾಗಿದೆ. ಮಂಗಳೂರಿನ 55 ಮಂದಿ, ಮೈಸೂರಿನ 12 ಹಾಗೂ ಬೆಂಗಳೂರಿನ 4 ಜನರನ್ನು ಹೆಲಿಕಾಪ್ಟರ್ ಮೂಲಕ ಡೆಹ್ರಾಡೂನ್‌ಗೆ ಕರೆತರಲಾಗಿದ್ದು, ಅವರು ದೆಹಲಿ ತಲುಪಿದ್ದಾರೆ. ಇನ್ನೂ ಸಂಪರ್ಕಕ್ಕೆ ಸಿಗದ ಜನರೆಷ್ಟು ಎಂದು ಅಂದಾಜು ಮಾಡಲಾಗುತ್ತಿದೆ ಮತ್ತು ಸಂಪರ್ಕಕ್ಕೆ ಸಿಗದ, ಆದರೆ, ಬದುಕಿಳಿದಿರುವವರನ್ನು ರಕ್ಷಿಸುವ ಕೆಲಸ ಭರದಿಂದ ಸಾಗಿದೆ. ಭಾನುವಾರ ಹವಾಮಾನ ವೈಪರಿತ್ಯದ  ನಡುವೆಯೂ ರಕ್ಷಣಾ ಕಾರ್ಯ ನಡೆದಿದೆ.
     

ಪರಿಹಾರ ಪಕ್ಷಿ ನೋಟ

ರಕ್ಷಿಸಲಾಗಿರುವವರ ಸಂಖ್ಯೆ
80,000
ಬಾಕಿ ಇರುವವರ ಸಂಖ್ಯೆ
22,000
ಬದರೀನಾಥದಲ್ಲಿ ಸಿಲುಕಿರುವವರು
8,000
40 ಹೆಲಿಕಾಪ್ಟರ್‌ಗಳ ಬಳಕೆ
15 ಕಾರ್ಯಾಚರಣೆಗೆ ಬೇಕಿರುವ ದಿನಗಳು
ಸೇನಾ ಸಿಬ್ಬಂದಿ ಭಾಗಿ
10,000

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.