ಅತ್ಯಾಚಾರ ಪ್ರಕರಣ ಮುಚ್ಚಿಹಾಕುವ ಹುನ್ನಾರ?
ಉಡುಪಿ: ಮಣಿಪಾಲದಲ್ಲಿ ಗುರುವಾರ ಮಧ್ಯರಾತ್ರಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎನ್ನುವುದು ಇದೀಗ ದೇಶ- ವಿದೇಶಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಆದರೆ, ಈ ಅತ್ಯಾಚಾರ ಘಟನೆಯೇ ನಡೆದಿಲ್ಲವೇ? ಪೊಲೀಸರು ಇದುವರೆಗೆ ಹೇಳಿದ್ದು ಸುಳ್ಳೇ?
ಈ ಪ್ರಶ್ನೆಗಳು ಯಾಕೆ ಹುಟ್ಟಿಕೊಂಡಿವೆಯೆಂದರೆ, ಈ ಘಟನೆ ನಡೆದು 3 ದಿನಗಳಾದರೂ, ಮಾಧ್ಯಮಗಳು ಪರಿಪರಿಯಾಗಿ ಸಂಪರ್ಕಿಸಿದರೂ ಪ್ರತಿಕ್ರಿಯಿಸಲು ಒಪ್ಪದ ಮಣಿಪಾಲ ವಿವಿ ಆಡಳಿತ ಮಂಡಳಿ, ಇದೀಗ ಇಮೇಲ್ ಮೂಲಕ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಅದರಲ್ಲಿ ವಿದ್ಯಾರ್ಥಿನಿ ಮೇಲೆ 'ಲೈಂಗಿಕ ದೌರ್ಜನ್ಯದ ಪ್ರಯತ್ನ ನಡೆದಿದೆ' ಎಂದಷ್ಟೇ ಹೇಳಿದೆ. ಈ ಮೂಲಕ ಮಣಿಪಾಲ ವಿವಿಯು ಈ ನತದೃಷ್ಟ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರದ ಘಟನೆಯನ್ನೇ ನಿರಾಕರಿಸಿ, ತನ್ನ ವಿದ್ಯಾರ್ಥಿಗಳಿಗೆ ಸೂಕ್ತ ಭದ್ರತೆ ಒದಗಿಸುವಲ್ಲಿ ಆಗಿರುವ ಲೋಪ ಮುಚ್ಚಿ ಹಾಕುವ ಪ್ರಯತ್ನ ನಡೆಸುತ್ತಿದೆ ಎನ್ನುವ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. 'ರಾತ್ರಿ 11.15ಕ್ಕೆ ವಿದ್ಯಾರ್ಥಿನಿಯನ್ನು ಮೂರು ಮಂದಿ ಆಟೋದಲ್ಲಿ ಅಪಹರಿಸಿ, ಆಕೆ ಮೇಲೆ ಲೈಂಗಿಕ ದೌರ್ಜನ್ಯದ ಪ್ರಯತ್ನ ಮಾಡಿದ್ದರು. ಈ ಸಂದರ್ಭದಲ್ಲಿ ಆಕೆ ತೀವ್ರವಾಗಿ ಹೋರಾಟ ನಡೆಸಿ ಆಟೋದಿಂದ ಹೊರಗೆ ಹಾರಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಳು. ಇದರಿಂದ ಆಕೆಯ ಕಾಲು ಸೇರಿದಂತೆ ಕೆಲವು ಕಡೆಗಳಲ್ಲಿ ಗಾಯಗಳಾಗಿವೆ' ಎಂದು ಮಣಿಪಾಲ ವಿವಿ ಪ್ರಕಟಣೆ ತಿಳಿಸಿದೆ. ಆದರೆ ಎಲ್ಲಿಯೂ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಹೇಳಿಲ್ಲ.
ವಿವಿ ಘನತೆ ಕಾಪಾಡಲು ಯತ್ನ?: ಸಮಾಜವೇ ತಲೆ ತಗ್ಗಿಸುವ ಈ ಘಟನೆಯಿಂದಾಗಿ ಸಹಜವಾಗಿಯೇ ಮಣಿಪಾಲ ವಿವಿಯ ಪ್ರತಿಷ್ಠೆಗೆ ದೊಡ್ಡ ಪ್ರಮಾಣದಲ್ಲಿ ಧಕ್ಕೆಯಾಗಿದೆ. ವಿಶ್ವದ 50ಕ್ಕೂ ದೇಶಗಳಿಂದ ಹತ್ತಾರು ಸಾವಿರ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಾರೆ. ಇದೀಗ ಈ ಸಾಮೂಹಿಕ ಅತ್ಯಾಚಾರ ಘಟನೆ ನಂತರ ಮಣಿಪಾಲದಲ್ಲಿ ವಿದ್ಯಾರ್ಥಿನಿಯರಿಗಿರುವ ಸುರಕ್ಷತೆ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ. ಈ ಬಗ್ಗೆ ಟ್ವಿಟರ್, ಬ್ಲಾಗ್, ಫೇಸ್ ಬುಕ್, ಮಾಧ್ಯಮಗಳಲ್ಲಿ ಭಾರಿ ಚರ್ಚೆಗಳಾಗುತ್ತಿವೆ. ಪೊಲೀಸರು ಅನೇಕ ಬಾರಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಮಣಿಪಾಲ ವಿವಿಗೆ ಸೂಚನೆ ನೀಡಿದ್ದರೂ, ಅದನ್ನು ವಿವಿ ನಿರ್ಲಕ್ಷ್ಯಿಸಿದೆ. ಇದರಿಂದ ಪೊಲೀಸ್ ಇಲಾಖೆ ಕೂಡ ವಿವಿ ವಿರುದ್ಧ ಗರಂ ಆಗಿದೆ.
ಅತ್ಯಾಚಾರಕ್ಕೆ ಆಧಾರ ಇಲ್ಲವೇ?
ಇದುವರೆಗೆ ವೈದ್ಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಸಾರಿ ಹೇಳಿರುವ ಪೊಲೀಸರ ಬಳಿ ಅದಕ್ಕೆ ಬೇಕಾದ ವೈದ್ಯಕೀಯ ಪ್ರಮಾಣ ಪತ್ರ ಇರಲಿಲ್ಲವೇ? - ಹೀಗೊಂದು ಸಂಶಯ ಕೂಡ ಎದ್ದಿದೆ. ಭಾನುವಾರ ಗೃಹ ಸಚಿವರ ಸಮ್ಮುಖದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪಶ್ಚಿಮ ವಲಯ ಐಜಿಪಿ ಪ್ರತಾಪ್ ರೆಡ್ಡಿ, ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರವನ್ನು ಸಾಬೀತು ಮಾಡುವ ವೈದ್ಯಕೀಯ ಪ್ರಮಾಣ ಪತ್ರ ಇನ್ನೂ ಸಿಕ್ಕಿಲ್ಲ ಎಂದು ಹೇಳಿದ್ದಾರೆ. ಹಾಗಿದ್ದರೆ ಸಾಮೂಹಿಕ ಅತ್ಯಾಚಾರ ನಡೆದಿದೆಯೇ? ಇಲ್ಲವೇ? ಎಂಬ ಸುದ್ದಿಗಾರರ ಪ್ರಶ್ನೆಗೆ, 'ನಾವು ಆಕೆ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದೇವೆ' ಎಂದು ರೆಡ್ಡಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

