ನೀರು ಕೊಟ್ಟಿಲ್ಲ; ನಿಮ್ಮ ಪ್ರಾಣಿಗಳಿಗೆ ನೀರು ಕೊಡಲ್ಲ!
ಬೆಂಗಳೂರು: ನೀವು ಕಾವೇರಿ ನೀರು ಬಿಟ್ಟಿಲ್ಲ. ಹೀಗಾಗಿ ನಿಮ್ಮ ವನ್ಯ ಜೀವಿಗಳಿಗೆ ನಾವು ನೀರು ಕೊಡುವುದಿಲ್ಲ..!
'ಮಳೆ ಇಲ್ಲದೆ ಕಾಡಿನಲ್ಲಿರುವ ಕೆರೆ,ಕಟ್ಟೆಗಳು ಒಣಗಿವೆ. ನೀರಿಗಾಗಿ ಕಾಡು ಪ್ರಾಣಿಗಳು ಪರದಾಡುತ್ತಿವೆ. ಪಕ್ಕದಲ್ಲೇ ಇರುವ ನಿಮ್ಮ ಕಿರು ಜಲಾಶಯದಿಂದ ಕೆಲ ದಿನಗಳ ಮಟ್ಟಿಗೆ ಟ್ಯಾಂಕರ್ ಮೂಲಕ ನೀರು ಸಾಗಿಸಲು ಅವಕಾಶ ಕೊಡಿ' ಎಂದು ಕರ್ನಾಟಕದ ಅರಣ್ಯ ಅಧಿಕಾರಿಗಳು ಕೇಳಿದ್ದಕ್ಕೆ ತಮಿಳುನಾಡು ಕೊಟ್ಟ ಉತ್ತರ ಇದು.
ಬಂಡಿಪುರ ಅರಣ್ಯ ಪ್ರದೇಶದಲ್ಲಿ ಈ ಬಾರಿ ಬೇಸಿಗೆ ಸಾಕಷ್ಟು ತೊಂದರೆ ಕೊಟ್ಟಿತ್ತು. ಕೆರೆ, ಕಟ್ಟೆಗಳು ಒಣಗಿ ವನ್ಯ ಜೀವಿಗಳ ಬಾಯಾರಿಕೆ ತಣಿಸಲು ಅಧಿಕಾರಿಗಳು ಹರ ಸಾಹಸ ಮಾಡಬೇಕಾಯಿತು. ಬಂಡಿಪುರದ ಅರಣ್ಯದ ಪಕ್ಕದಲ್ಲೇ ತಮಿಳುನಾಡಿನ ಮಧುಮಲೈ ರಾಷ್ಟ್ರೀಯ ಅರಣ್ಯ ಪ್ರದೇಶವಿದೆ. ಅಲ್ಲಿ ಒಂದು ಸಣ್ಣ ಜಲಾಶಯವಿದೆ. ಆ ನೀರು ಕೇಳಿದ್ದಕ್ಕೆ ಆ ರಾಜ್ಯದ ಅಧಿಕಾರಿಗಳು ಪ್ರಾಣಿಗಳ ವಿಚಾರದಲ್ಲೂ ಮಾನವೀಯತೆ ತೋರಿಸಲಿಲ್ಲ. ಕಾವೇರಿ ನದಿ ನೀರಿನ ವಿವಾದವನ್ನೇ ದೊಡ್ಡದು ಮಾಡಿ ನೀರು ಕೇಳಲು ಹೋದವರನ್ನು ವಾಪಸ್ ಕಳುಹಿಸಿದೆ.
ಇತಿಹಾಸದಲ್ಲಿ ಮೊದಲ ಬಾರಿ ತೀವ್ರ ಮಳೆ ಕೊರತೆ, ಬರ ಎದುರಿಸಿದ ಬಂಡಿಪುರ ರಾಷ್ಟ್ರೀಯ ಉದ್ಯಾನದ ಪಾಲಿಗೆ 2012 ಕರಾಳ ವರ್ಷ. 2011ರವರೆಗೂ ವರ್ಷಕ್ಕೆ ಸರಾಸರಿ 900 ಮಿಲಿ ಮೀಟರ್ಗೂ ಅಧಿಕ ಮಳೆ ಕಾಣುತ್ತಿದ್ದ ಬಂಡಿಪುರ ಅರಣ್ಯದಲ್ಲಿ 2012ರಲ್ಲಿ 260 ಮಿಲಿ ಮೀಟರ್ ಮಾತ್ರ ಮಳೆಯಾಗಿತ್ತು. ಹೀಗಾಗಿ ಶೇ.70 ರಷ್ಟು ಮಳೆ ಕೊರತೆ ಉಂಟಾಯಿತು.
ಈ ಹಿನ್ನೆಲೆಯಲ್ಲಿ 872 ಚದರ ಕಿಲೋ ಮೀಟರ್ ವ್ಯಾಪ್ತಿಯ ಬಂಡಿಪುರ ಅರಣ್ಯದಲ್ಲಿರುವ 300ಕ್ಕೂ ಹೆಚ್ಚು ಸಣ್ಣ ಪುಟ್ಟ ಕೆರೆ, ಕುಂಟೆಗಳು ನೀರಿನ ಮೂಲಗಳು ಬರಿದಾಗಿ ಒಣಗಿ ಹೋಗಿದ್ದವು. ಹುಲಿ ಸೇರಿದಂತೆ ಚಿರತೆ, ಆನೆ, ಜಿಂಕೆ, ಕಾಡೆಮ್ಮೆ, ಕರಡಿ, ನವಿಲು ಸೇರಿದಂತೆ ಅರಣ್ಯದ ಸಾವಿರಾರು ಪ್ರಾಣಿ, ಪಕ್ಷಿಗಳು ನೀರಿನಲ್ಲದೇ ಪರದಾಡಬೇಕಾಯಿತು.
2013ರ ರಲ್ಲಿ ನಾಲ್ಕು ತಿಂಗಳ ಬೇಸಿಗೆ ಕಾಡುಪ್ರಾಣಿಗಳನ್ನು ಇನ್ನಿಲ್ಲದಷ್ಟು ಕಾಡಿತ್ತು. ಸಾವಿರಾರು ಪ್ರಾಣಿಗಳು ನೀರಿಗಾಗಿ ವಾಸಸ್ಥಾನ ಬದಲಿಸಿ ಸಾಕಷ್ಟು ದೂರಕ್ಕೆ ವಲಸೆ ಹೋಗುತ್ತಿದ್ದವು. ಪ್ರಾಣಿಗಳ ರಕ್ಷಣೆಗೆ, ವಲಸೆ ತಡೆಯಲು ನೀರು ಪೂರೈಸಲೇಬೇಕಾದ ಸ್ಥಿತಿಯಲ್ಲಿದ್ದ ಬಂಡಿಪುರ ಅರಣ್ಯ ಅಧಿಕಾರಿಗಳು ಗುಂಡ್ಲುಪೇಟೆಯಿಂದ ಪ್ರಾಣಿಗಳಿಗೆ ಕುಡಿಯಲು ಅಗತ್ಯವಾದಷ್ಟು ನೀರು ತಂದು ಕರೆಗಳಿಗೆ ಬಿಡಲು ನಿರ್ಧರಿಸಿದ್ದರು. ಆದರೆ ಪರಿಸರ ಪ್ರೇಮಿಗಳು ಎನಿಸಿಕೊಂಡ ಕೆಲವರು ನಾಡಿನಿಂದ ನೀರು ತಂದು ಕಾಡಿಗೆ ಬಿಡುವುದು ಬೇಡ. ನಾಡಿನ ನೀರು ಕಲುಷಿತವಾಗಿದ್ದು ಕಾಡಿನ ನೈಸರ್ಗಿಕ ನೀರು ಕುಡಿಯುವ ಪ್ರಾಣಿಗಳಿಗೆ ಮಾರಕ ಎಂದು ವಾದಿಸಿದ್ದರು.
ಈ ಹಿನ್ನೆಲೆಯಲ್ಲಿ ಅರಣ್ಯ ಅಧಿಕಾರಿಗಳು ನಾಡಿನ ನೀರಿನ ಬದಲು ಬಂಡಿಪುರದಿಂದ ಸ್ವಲ್ಪ ದೂರದಲ್ಲಿರುವ ತಮಿಳುನಾಡಿನ ಮಧುಮಲೈ ಅರಣ್ಯ ಪ್ರದೇಶದ ಸಣ್ಣ ಜಲಾಶಯವೊಂದರಿಂದ ನೀರು ತರಲು ನಿರ್ಧರಿಸಿದರು.
ಕಾಡುಪ್ರಾಣಿಗಳಿಗೆ ನೀರುಣಿಸಲು ಕೆಲ ದಿನಗಳ ಮಟ್ಟಿಗೆ ಟ್ಯಾಂಕರ್ ನೀರು ಕೊಡಿ ಎಂದು ಬಂಡಿಪುರ ಅರಣ್ಯ ಅಧಿಕಾರಿಗಳು ತಮಿಳುನಾಡು ಅಧಿಕಾರಿಗಳಿಗೆ ಬೇಡಿಕೆ ಇಟ್ಟಿದ್ದರು. ಇದಕ್ಕೆ ತಮಿಳುನಾಡು ಅಧಿಕಾರಿಗಳು ನೀಡಿದ ಉತ್ತರ ಬಂಡಿಪುರ ಅರಣ್ಯ ಅಧಿಕಾರಿಗಳನ್ನು ದಂಗು ಬಡಿಸಿತ್ತು.
'ಕರ್ನಾಟಕ ಕಾವೇರಿ ನದಿಯಿಂದ ತಮಿಳುನಾಡಿಗೆ ನೀರು ಬಿಡುತ್ತಿಲ್ಲ. ಈ ಕಾರಣಕ್ಕಾಗಿ ನಾವು ಕರ್ನಾಟಕ ವ್ಯಾಪ್ತಿಯಲ್ಲಿರುವ ಬಂಡಿಪುರ ಪ್ರಾಣಿಗಳಿಗೆ ನೀರು ನೀಡುವುದಿಲ್ಲ ಎಂದರು.
ಕಾಡುಗಳ ಹೆಸರು ಬೇರೆಯಾದರೂ ಪ್ರಾಣಿಗಳಿಗೆ ಯಾವುದೇ ಗಡಿ ಇರುವುದಿಲ್ಲ. ಇನ್ನು 8 ರಾಷ್ಟ್ರೀಯ ಉದ್ಯಾನಗಳು ಸೇರಿ 'ನೀಲಗಿರಿ ಜೀವವೈವಿಧ್ಯ'ದ ಒಳಗೆ ಬರುವ ಎಲ್ಲಾ ಅರಣ್ಯಗಳು ಒಂದೇ. ಈ ಅಂಶಗಳು ಅಲ್ಲದೇ ಮಾನವೀಯತೆಗೂ ತಮಿಳುನಾಡು ಅಧಿಕಾರಿಗಳು ನೀರು ಕೊಡಲು ನಿರಾಕರಿಸಿದರು.
ನಾಡಿನ ನೀರು ಇಲ್ಲ. ಅರಣ್ಯದ ನೀರು ಇಲ್ಲ. ಕೊನೆಯದಾಗಿ ಅರಣ್ಯ ವ್ಯಾಪ್ತಿಯಲ್ಲಿ ಎರಡು ಕೊಳವೆಬಾವಿಗಳನ್ನು ಕೊರೆಸಿ ಅದರಿಂದ ಟ್ಯಾಂಕರ್ಗಳಿಗೆ ನೀರು ತುಂಬಿ ಕೆರೆ-ಕಟ್ಟೆಗಳಿಗೆ ನೀರು ಬಿಡಲು ಆರಂಭಿಸಿದರು.
ಇನ್ನು ಮೊದಲೇ ಒಣಗಿ ನಿಂತಿದ್ದ ಕೆರೆ ಕಟ್ಟೆಗಳಿಗೆ ನೀರು ಬಿಟ್ಟರೆ ನೆಲವೇ ಇಂಗಿಕೊಳ್ಳುತ್ತದೆ. ಹೀಗಾಗಿ ನೆಲಸಮತಟ್ಟಾಗಿಯೇ ಸಿಮೆಂಟ್ ಮಾಡುವುದು ಹಾಗೂ ಸಿಮೆಂಟ್ ರಿಂಗ್ಗಳನ್ನು ನೀರು ತುಂಬಲು ಯೋಚಿಸಿದರು. ಆದರೆ ಅದಕ್ಕೂ ಆಕ್ಷೇಪ ವ್ಯಕ್ತಪಡಿಸಿದ ಪರಿಸರ ಪ್ರೇಮಿಗಳು ಎನಿಸಿಕೊಂಡವರು ಹುಲಿ ಸಂರಕ್ಷಿತ ಪ್ರದೇಶದಲ್ಲಿ ಯಾವುದೇ ಚಟುವಟಿಕೆಗಳು ನಡೆಸಬಾರದೆಂದು ವಾದಿಸಿದರು. ಹೀಗಾಗಿ ಅಧಿಕಾರಿಗಳು ಅನಿವಾರ್ಯವಾಗಿ ಕೆರೆಗಳಿಗೆ ನೀರು ಬಿಟ್ಟು ಪ್ರಾಣಿಗಳ ದಾಹ ತಣಿಸಿದರು.
ಈ ವರ್ಷವೂ ಬಂಡಿಪುರ ರಾಷ್ಟ್ರೀಯ ಉದ್ಯಾನ ಮಳೆ ಕೊತರೆ ಎದುರಿಸುತ್ತಿದೆ. ಮುಂಗಾರು ಆರಂಭದಲ್ಲಿ ಹಾಗೂ ಜೂನ್ ತಿಂಗಳಲ್ಲಿ ಮಳೆ ಚೆನ್ನಾಗಿರಬೇಕಿತ್ತು. ಆದರೆ ಇದುವರೆಗಿನ ಸರಾಸರಿಯ ಅರ್ಧದಷ್ಟು ಮಳೆ ಬಂದಿಲ್ಲ. ಮುಂಗಾರು ಆರಂಭವಾಗಿ ಒಂದು ತಿಂಗಳಾದರೂ ಅರಣ್ಯದಲ್ಲಿರುವ ಕೆರೆ ಕಟ್ಟೆಗಳಲ್ಲಿ ನೀರು ತುಂಬಿಕೊಂಡಿಲ್ಲ.
- ಕಾಂತರಾಜ್, ಅರಣ್ಯ ಸಂರಕ್ಷಣಾಧಿಕಾರಿ, ಬಂಡಿಪುರ
ಕಳೆದ ಮೂರು ವರ್ಷಗಳಿಂದ ಮಳೆ ಕಡಿಮೆಯಾಗಿರುವುದು ಪ್ರಾಣಿಗಳ ಸಂತಾನೋತ್ಪತ್ತಿ ಪ್ರಕ್ರಿಯೆ, ಮರ ಗಿಡಗಳ ಬೆಳವಣಿಗೆಗೆ ಮಾರಕವಾಗಿದೆ. ಬಂಡಿಪುರ ಕಾಡು ಮಳೆಗಾಲದಲ್ಲೂ ಒಣಗಿದೆ. ಈ ವರ್ಷ ಉತ್ತಮ ಮಳೆ ಬಾರದಿದ್ದರೆ ಪ್ರಾಣಿಗಳಿಗೆ ಸಂಕಷ್ಟ ತಪ್ಪಿದ್ದಲ್ಲ.
- ರಾಜಕುಮಾರ್, ವಾರ್ಡನ್
- ಮಂಜುನಾಥ ನಾಗಲೀಕರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

