ಗದಗ ಯಾತ್ರಾರ್ಥಿಗಳ ಸುಳಿವೇ ಇಲ್ಲ!
ಕ.ಪ್ರ.ವಾರ್ತೆ ಗದಗ ಜೂ. 24-
ಬದರಿನಾಥ, ಕೇದಾರನಾಥ, ಸೇರಿದಂತೆ ಉತ್ತರ ಭಾರತದ 42 ಪ್ರಮುಖ ಯಾತ್ರಾ ಸ್ಥಳಗಳಿಗೆ ಸಂಸ್ಥೆಯೊಂದರ ವತಿಯಿಂದ ಪ್ಯಾಕೇಜ್ ಟೂರ್ಗೆ ತೆರಳಿದ್ದ ಗದಗ ಭಾಗದ 40 ಯಾತ್ರಾರ್ಥಿಗಳ ಸುಳಿವು ಈವರೆಗೂ ಸಿಕ್ಕಿಲ್ಲ.
ಅಲ್ಲದೇ ಈ ಯಾತ್ರಾರ್ಥಿಗಳನ್ನು ಕರೆದುಕೊಂಡು ಹೋಗಿದ್ದ ಕೊಪ್ಪಳದ ಗವಿಸಿದ್ಧೇಶ್ವರ ಟೂರಿಸ್ಟ್ ಸಂಸ್ಥೆಗೆ ಸಂಬಂಧಿಸಿದ ಯಾರೋಬ್ಬರೂ ಸಂಪರ್ಕಕ್ಕೆ ಸಿಗುತ್ತಿಲ್ಲ. ಇದು ಯಾತ್ರಾರ್ಥಿಗಳನ್ನು ಸಂಬಂಧಿಕರನ್ನು ಮತ್ತಷ್ಟು ಆತಂಕಕ್ಕೆ ತಳ್ಳಿದೆ.
ಈ ಪ್ಯಾಕೇಜ್ ಟೂರ್ನಲ್ಲಿ ಗದಗ ಸೇರಿದಂತೆ ಅಕ್ಕ ಪಕ್ಕದ ಜಿಲ್ಲೆಗಳ 40ಕ್ಕೂ ಹೆಚ್ಚು ಮಂದಿ 40 ದಿನಗಳ ಟೂರ್ಗೆ ಮೇ 31ರಂದೇ ತೆರಳಿದ್ದರು. ಈ ಪ್ರವಾಸಕ್ಕೆ ಗದಗ ನಗರದ ಹೊರವಲಯದಲ್ಲಿರುವ ನೀಲಮ್ಮ ತಾಯಿ ಆಶ್ರಮ ಮುಖ್ಯ ಪ್ರೇರಣೆ. ಪ್ರವಾಸಕ್ಕೆ ತೆರಳಿರುವ ಬಹುತೇಕರು ಈ ಆಶ್ರಮದ ಭಕ್ತರು. ಈ ಆಶ್ರಮದ ಗೋಡೆಗಳಲ್ಲಿಯೂ ಈ ಉತ್ತರ ಭಾರತ ಯಾತ್ರೆಯ ಟೂರ್ ಬಗ್ಗೆ ಕರಪತ್ರ ಅಂಟಿಸಲಾಗಿದೆ. ಈ ಯಾತ್ರೆಗೆ ಆಶ್ರಮದ ರೂವಾರಿ ನೀಲಮ್ಮತಾಯಿ ಹಾಗೂ ಅವರೊಟ್ಟಿಗೆ ಕೆಲವು ಮಹಿಳೆಯರೂ ತೆರಳಿದ್ದಾರೆ.
ಎಲ್ಲಿಯೂ ಮಾಹಿತಿ ಸಿಗುತ್ತಿಲ್ಲ: ಈ ಕುರಿತು 'ಕನ್ನಡಪ್ರಭ' ಆಶ್ರಮಕ್ಕೆ ಭೇಟಿ ನೀಡಿ, ಯಾತ್ರೆಗೆ ತೆರಳಿದವರ ಮಾಹಿತಿ ಸಂಗ್ರಹಿಸಲು ಸಾಕಷ್ಟು ಯತ್ನಿಸಿದರೂ ಫಲ ಸಿಕ್ಕಿಲ್ಲ. ನೀಲಮ್ಮ ತಾಯಿಯೊಂದಿಗೆ, ಆಕೆಯ ಪ್ರಮುಖ ನಾಲ್ಕು ಶಿಷ್ಯರೂ ಯಾತ್ರೆ ತೆರಳಿರುವುಪದರಿಂದ ಆಶ್ರಮದಲ್ಲಿಯೂ ಮಾಹಿತಿ ನೀಡುವಂಥವರು ಯಾರೂ ಇಲ್ಲವಾಗಿದೆ. ಇದರಿಂದ ಈ ತಂಡದಲ್ಲಿ ನಿಖರವಾಗಿ ಎಷ್ಟು ಜನ ಯಾತ್ರೆಗೆ ತೆರಳಿದ್ದಾರೆ ಎನ್ನುವ ಬಗ್ಗೆಯೂ ಮಾಹಿತಿ ಸಿಗುತ್ತಿಲ್ಲ. ಇನ್ನು ಯಾತ್ರೆಗೆ ತೆರಳಿದವರ ಸಂಬಂಧಿಗಳಾದರೂ ಆಶ್ರಮಕ್ಕೆ ಬರುತ್ತಾರೆ. ಅವರನ್ನಾದರೂ ಸಂಪರ್ಕಿಸಿದರೆ ಮಾಹಿತಿ ಸಿಗಬಹುದು ನೋಡಿದರೆ, ಆ ರೀತಿ ಆಶ್ರಮಕ್ಕೆ ಭೇಟಿ ನೀಡುತ್ತಿಲ್ಲ.
ತಕ್ಷಣ ಮಾಹಿತಿ ನೀಡಲಿ
ಕಳೆದ ವಾರದ ಹಿಂದೆ ಉತ್ತರ ಭಾರತದಲ್ಲಿ ಅತಿಯಾದ ಮಳೆಯಾಗಿದೆ ಎಂದು ಯಾತ್ರೆಗೆ ತೆರಳಿದವರೇ ದೂರವಾಣಿ ಮೂಲಕ ಕರೆ ಮಾಡಿ ನಾವು ಆರಾಮವಾಗಿದ್ದೇವೆ ಚಿಂತಿಸಬೇಡಿ ಎಂದು ಹೇಳಿದ್ದರಂತೆ. ಆದರೆ, ಒಂದು ವಾರದಿಂದ ಅವರ ಮೊಬೈಲ್ಗಳು ಸ್ವಿಚ್ ಆಫ್ ಆಗಿವೆ. ಅವರು ಎಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ ಎನ್ನುವುದೂ ತಿಳಿಯುತ್ತಿಲ್ಲ. ಈ ಬಗ್ಗೆ ಪ್ಯಾಕೇಜ್ ಟೂರ್ ಆಯೋಜನೆ ಮಾಡಿದವರಾದರೂ ತಕ್ಷಣವೇ ಜಿಲ್ಲಾಡಳಿತ, ರಾಜ್ಯ ಸರ್ಕಾರವನ್ನು ಸಂಪರ್ಕಿಸಿ, ಯಾತ್ರೆಗೆ ತೆರಳಿರುವ ಭಕ್ತರ ಕುರಿತು ಅಗತ್ಯ ಮಾಹಿತಿ ನೀಡಬೇಕಾಗಿದೆ.
ನಮ್ಮ ಆಶ್ರಮದ ಅವ್ವಾರು ಹೋಗ್ಯಾರಿ. ಅವ್ರಗೂಡ್... ಒಂದಿಷ್ಟ್ ಮಂದಿನೂ ಹೋಗ್ಯಾರಿ... ಒಂದು ವಾರದ್ ಹಿಂದ್ ಅವ್ರು ಎಲ್ಲಿ ಅದಾರ ಅನ್ನುದ್ರು ಬಗ್ಗೆ, ಯಾರಾರ ಬಂದ್ ಹೇಳ್ತಿದ್ರ... ಆದ್ರ ಈಗ ಅವ್ರ ಬಗ್ಗೆ ಏನು ಮಾಹ್ತಿ ಯಾರೂ ಹೇಳವಲ್ರು... ಅಲ್ಲಿಗೆ ಹ್ವಾದಾರು ನಮ್ಗ ಪೋನ್ ಮಾಡಿಲ್ರೀ.
- ನೀಲಮ್ಮ, ತಾಯಿ ಆಶ್ರಮಯದಲ್ಲಿರುವ ವೃದ್ಧೆ.
ಗದಗ ಜಿಲ್ಲೆಯಿಂದ ಯಾತ್ರೆಗೆ ತೆರಳಿದ ಬಗ್ಗೆ ಇಲ್ಲಿಯವರೆಗೂ ಯಾರೂ ಇಲಾಖೆಯನ್ನು ಸಂಪರ್ಕಿಸಿಲ್ಲ. ಅಲ್ಲದೆ ಕೊಪ್ಪಳದ ಗವಿಸಿದ್ಧೇಶ್ವರ ಟೂರಿಸ್ಟ್ ಸಂಸ್ಥೆಯ ಯಾರೊಬ್ಬರೂ ಸಂಪರ್ಕಕ್ಕೆ ಸಿಗುತ್ತಿಲ್ಲ. ನಾವು ಈ ಬಗ್ಗೆ ಪರಿಶೀಲಿಸುತ್ತಿದ್ದೇವೆ.
- ಡಾ. ಎಸ್.ಡಿ. ಶರಣಪ್ಪ ಎಸ್ಪಿ ಗದಗ
- ಶಿವಕುಮಾರ ಕುಷ್ಟಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

