ಪ್ರಧಾನ ಸುದ್ದಿ

ಕಾಡಾನೆಗೆ ಕಡಿವಾಣ ಕಷ್ಟಕಷ್ಟ

Published On :

ಬೆಂಗಳೂರು: ಪದೇ ಪದೇ ನಾಡಿಗೆ ನುಗ್ಗುವ ಕಾಡಾನೆಗಳಿಗೆ ಕಡಿವಾಣ ಹಾಕುವುದು ಸದ್ಯದ ಮಟ್ಟಿಗೆ ಕಷ್ಟ. ಏಕೆಂದರೆ, ಕಾಡಾನೆಗಳು ನಾಡಿಗೆ ನುಗ್ಗುವುದನ್ನು ನಿಯಂತ್ರಿಸಲು ಸರ್ಕಾರ ಹಾಕಿಕೊಂಡಿರುವ  ತಡೆಗೋಡೆ ನಿರ್ಮಾಣ, ಸೋಲಾರ್ ತಂತಿ ಅಳವಡಿಕೆ, ಕಂದಕ ತೆಗೆಯುವ ಯೋಜನೆಗಳು ಮಂದಗತಿಯಲ್ಲಿ ಸಾಗಿರುವುದೇ ಇದಕ್ಕೆ ಕಾರಣ.
ಕಾಡಾನೆಗಳು ನಾಡಿಗೆ ಬರುವುದನ್ನು ತಡೆಯಲು ಅರಣ್ಯದ ಸುತ್ತ ಅಂದರೆ, 1500 ಕ್ಕೂ ಹೆಚ್ಚು ಕಿ.ಮೀ.  ವ್ಯಾತ್ಪಿಯಲ್ಲಿ ತಂತಿಬೇಲಿ ಅಳವಡಿಸಲು ಮತ್ತು ಕಂದಕ ತೆಗೆಯಲು ಸರ್ಕಾರ ಮುಂದಾಗಿತ್ತು. ಸದ್ಯ ಸುಮಾರು 700 ಕಿ.ಮೀ.ನಷ್ಟು ತಡೆಗೋಡೆ ಮುಕ್ತಾಯವಾಗಿರಬಹುದು. ಉಳಿದಂತೆ ಅಲ್ಲಲ್ಲಿ ಸೋಲಾರ್ ತಂತಿಗಳನ್ನು ಅಳವಡಿಸಲಾಗುತ್ತಿದೆ.
ಈ ಕೆಲಸ ಮುಕ್ತಾಯವಾಗಲು ಸಮಯ ಬೇಕು. ಈ ನಡುವೆ ಮಳೆ ಅಡ್ಡಿ, ಗೋಡೆ ಹಾಳುಮಾಡುವ ರೈತರು, ಸೇರಿದಂತೆ ಅರಣ್ಯ ಇಲಾಖೆ ಈಗ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೂ ಯೋಜನೆಯನ್ನು  ಬೇಗ ಮುಕ್ತಾಯ ಮಾಡುತ್ತೇವೆ ಎನ್ನುತ್ತಾರೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು.

ಜನರಲ್ಲಿ ಅರಿವಿಲ್ಲ: ಹಿಂದಿನ ಸರ್ಕಾರ ಬಿಡುಗಡೆ ಮಾಡಿದ್ದ ಹಣದಲ್ಲಿ ಕಾಮಗಾರಿ ನಡೆಯುತ್ತಿವೆ. ಹೊಸ ಸರ್ಕಾರದಿಂದ ಹಣ ಸಿಗಬೇಕಿದೆ. ಈ ಬಗ್ಗೆ ಸಂಬಂಧಪಟ್ಟವರ ಗಮನ ಸೆಳೆಯಲಾಗುವುದು. ಆನೆಗಳು ಹೆಚ್ಚು ನುಸುಳುವ ಸಾಧ್ಯತೆ ಇರುವ ಪ್ರದೇಶ ಗುರುತಿಸಿ, ಮೂರು ವಿಭಾಗ ಮಾಡಲಾಗಿದೆ. ಅದರಂತೆ ತಡೆಗೋಡೆ ನಿರ್ಮಿಸಲಾಗುತ್ತಿದೆ.
ಅಲ್ಲಲ್ಲಿ ಗೋಡೆ ಹಾಳಾಗಿವೆ. ಜಮೀನಿಗೆ ಹೊಂದಿಕೊಂಡಂತೆ ಗೋಡೆ ನಿರ್ಮಿಸಿರುವುದರಿಂದ ಜನರು ಗೋಡೆ ಒಡೆದು ಹಾಕಿರುವ ಉದಾಹರಣೆಯಿವೆ. ಕೆಲವೆಡೆ ತಡೆಗೋಡೆ ತಗ್ಗು ಪ್ರದೇಶದಲ್ಲಿವೆ. ಅಂತಹ ಜಾಗದಲ್ಲಿ  ಮಳೆನೀರು ಮೇಲಿನಿಂದ ಹರಿದುಬಂದು ಗೋಡೆಗಳು ಹಾಳಾಗಿವೆ.
ಅಂತಹ ಪ್ರದೇಶಗಳನ್ನು, ಹಾಳಾಗಿರುವ ಗೋಡೆಗಳನ್ನು ಪರಿಶೀಲಿಸಲು ಆಯಾ ವ್ಯಾಪ್ತಿಯ ಅರಣ್ಯ ಸಿಬ್ಬಂದಿಗೆ ತಿಳಿಸಲಾಗಿದೆ. ಒಮ್ಮೆ ತಡೆಗೋಡೆ ಯೋಜನೆ ಸಂಪೂರ್ಣ ಮುಗಿದ ನಂತರ ಮತ್ತೆ ರಿಪೇರಿ ಕೆಲಸ ಮಾಡುತ್ತೇವೆ ಎನ್ನುತ್ತಾರೆ ಹಿರಿಯ ಅಧಿಕಾರಿಗಳು.
ನಿರಂತರ ಸಂಪರ್ಕ: ಬನ್ನೇರುಘಟ್ಟದ ಕೆಲ ಗ್ರಾಮಗಳಿಗೆ ಕಾಡಾನೆ ನುಗ್ಗುತ್ತಿರುವುದು, ಅವು ತಮಿಳುನಾಡಿನಿಂದ ಬರುತ್ತಿರುವುದು ನಿಜ. ಹೀಗೆ ಬಂದ ಆನೆಗಳ ಹಿಂಡು ಕೋಲಾರ, ಮಾಲೂರು, ಬಂಗಾರಪೇಟೆ ಮುಖಾಂತರ ಆಂಧ್ರದ ಕುಪ್ಪಂನ ಕಾಡು ಸೇರುತ್ತವೆ.
ಇಂತಹ ಸಮಸ್ಯೆ ಎದುರಾದಾಗ ಏನು ಮಾಡಬೇಕು, ಆನೆಗಳನ್ನು ಯಾವ ಕಡೆ ಕಳುಹಿಸಬೇಕು ಎಂಬಿತರೆ ವಿಷಯಗಳ ಬಗ್ಗೆ ಆಂಧ್ರಪ್ರದೇಶ, ಮಹಾರಾಷ್ಟ್ರ, ಕೇರಳ ಹಾಗೂ ತಮಿಳುನಾಡಿನ ಅಧಿಕಾರಿಗಳ ಜತೆ ಚರ್ಚಿಸಿ ಅಗತ್ಯಕ್ರಮಕೈಗೊಳ್ಳಲಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.

ದಾಳಿಯಿಂದ ಸಾವು
2010-11 33
2011-12 14
2012-13 37

ಎಲ್ಲೆಲ್ಲಿ ಸಮಸ್ಯೆ?

ಬನ್ನೇರುಘಟ್ಟ, ಕೋಲಾರ, ಮಾಲೂರು, ಕೊಡಗಿನ ವಿವಿಧ ತಾಲೂಕುಗಳು, ಬಂಗಾರಪೇಟೆ, ಬಂಡೀಪುರ, ನಾಗರಹೊಳೆ, ಹೊಸಕೋಟೆ, ಹಾಸನ, ಬೆಂಗಳೂರು ಗ್ರಾಮಾಂತರ, ಚಾಮರಾಜ ನಗರ, ಮೈಸೂರು, ತುಮಕೂರು, ಚಿಕ್ಕಮಗಳೂರು, ರಾಮನಗರ.

ಕೋಟಿ ಖರ್ಚು

ತಡೆಗೋಡೆ, ಸೋಲಾರ್ ತಂತಿ, ಕಂದಕ ತೆಗೆಯುವುದು ಸೇರಿ ಕಾಡಾನೆಗಳು ನಾಡಿಗೆ ಬರುವುದನ್ನು ತಡೆಗಟ್ಟಲು ಸರ್ಕಾರ ಸುಮಾರು ರು. 1 ಕೋಟಿ ಹಣ ವ್ಯಯಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆನೆಗಳ ದಾಳಿ ಪ್ರತಿವರ್ಷ ತಪ್ಪಿದ್ದಲ್ಲ ಎಂದು ಮೂಲಗಳು ತಿಳಿಸಿವೆ.

ಕಳೆದೆರಡು ವರ್ಷಗಳಿಂದ ಫೆನ್ಸ್ ಹಾಕುವ ಕೆಲಸ ನಡೆಯುತ್ತಿದೆ. ಜನರಿಂದ ಸೂಕ್ತ ಸಹಕಾರ ಸಿಗುತ್ತಿಲ್ಲ. ಮತ್ತೊಂದೆಡೆ ಮಳೆಗಾಲದಲ್ಲಿ ಕೆಲಸ ಕಷ್ಟ. ಇನ್ನು ಎರಡು ಅಥವಾ ಮೂರು ವರ್ಷದಲ್ಲಿ ಈ ಯೋಜನೆ ಮುಕ್ತಾಯ ಮಾಡುವ ಗುರಿ ಹೊಂದಲಾಗಿದೆ.
- ಅಜಯ್ ಮಿಶ್ರ, ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ ವಿಭಾಗ)

- ಶಾಂತ ತಮ್ಮಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.