ಕಡೇ ಆಟ ಬಾಕಿ
ಕನ್ನಡಪ್ರಭ ವಾರ್ತೆ ಬೆಂಗಳೂರು ಮೇ 3
ರಾಜ್ಯ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಶುಕ್ರವಾರ ಸಂಜೆ ತೆರೆ ಬಿದ್ದಿದ್ದು, ಅಭ್ಯರ್ಥಿಗಳ ಆಬ್ಬರ ತಣ್ಣಗಾಗಿದೆ.
ಬಾಕಿ ಉಳಿದಿರುವ ಒಂದು ದಿನದಲ್ಲಿ ಮತದಾರನ ಬಾಗಿಲ ಕಡೆಗೆ ನಡೆದು, ಮತಯಾಚಿಸುವ ಕಾರ್ಯಕ್ಕೆ ಅಭ್ಯರ್ಥಿಗಳು ಮುಗಿಬಿದ್ದಿದ್ದಾರೆ. ಮತದಾನ ಮುಗಿಯುವ 48 ಗಂಟೆಗಳಿಗೆ ಮುನ್ನ ಬಹಿರಂಗ ಪ್ರಚಾರ ಅಂತ್ಯವಾಗಬೇಕು. ಹೀಗಾಗಿ ಬೈಕ್ ರ್ಯಾಲಿ, ರೋಡ್ಶೋ, ರಥಯಾತ್ರೆ, ಪಾದಯಾತ್ರೆ ಮತ್ತಿತರ ಅಬ್ಬರ ಪ್ರಚಾರ ನಿಗದಿತ ಸಮಯಕ್ಕೆ ಕೊನೆಗೊಂಡಿದೆ.
ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿರುವುದರಿಂದ ಆ ಕ್ಷೇತ್ರಕ್ಕೆ ಸಂಬಂಧಪಡದ ನಾಯಕರು ಅಲ್ಲಿಂದ ನಿರ್ಗಮಿಸಬೇಕು. ಆದ್ದರಿಂದ ಪ್ರಚಾರದಲ್ಲಿ ತೊಡಗಿದ್ದ ಆಯಾ ಪಕ್ಷಗಳ ರಾಷ್ಟ್ರ ಹಾಗೂ ರಾಜ್ಯ ನಾಯಕರು ಶುಕ್ರವಾರ ಸಂಜೆ 5 ಗಂಟೆ ನಂತರ ಕ್ಷೇತ್ರ ತೆರವುಗೊಳಿಸಿದರು.
ಭಾನುವಾರ ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಲಿದೆ. ಶನಿವಾರ ರಾತ್ರಿವರೆಗೆ ಮತದಾರನನ್ನು ಅಭ್ಯರ್ಥಿಗಳು ಮನವೊಲಿಸಬಹುದಾಗಿದೆ. ಆದರೆ ಅಭ್ಯರ್ಥಿಯೊಂದಿಗೆ ಕೆಲವು ಕಾರ್ಯಕರ್ತರು ಮಾತ್ರ ಇರಬೇಕು. ಮತದಾರನ ಬಾಗಿಲ ಬಳಿಗೆ ತೆರಳಬಹುದಾಗಿದೆ. ಈ ಅಂತಿಮ ಸಮಯವನ್ನು ಸದುಪಯೋಗಪಡಿಸಿಕೊಳ್ಳುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಕೆಲವೇ ಕೆಲವು ಕಾರ್ಯಕರ್ತರನ್ನು ತಮ್ಮೊಂದಿಗೆ ಕರೆದುಕೊಂಡು ಮತದಾರ ಬಾಗಿಲಿಗೆ ತೆರಳಿ ಮತಯಾಚಿಸಲು ಸನ್ನದ್ಧರಾಗಿದ್ದಾರೆ.
ಮದ್ಯ ಮಾರಾಟವನ್ನೂ ಮೇ 5ರ ಸಂಜೆ 5ರವರೆಗೆ ಸ್ಥಗಿತಗೊಳಿಸಲಾಗಿದೆ. ಮತದಾರರನ್ನು ಅಂತಿಮ ಗಳಿಗೆಯಲ್ಲಿ ಸೆಳೆಯಲು ಹಣ, ಹೆಂಡ, ಉಡುಗೊರೆ ಹಂಚುವ ತಂತ್ರ-ಪ್ರತಿತಂತ್ರಗಳಿಗೆ ಚಾಲನೆ ದೊರೆತಿದೆ.
ಮತದಾನದ ಹಿಂದಿನ ದಿನ ಮತದಾರರಿಗೆ ಹಣ, ಹೆಂಡ ಹಂಚುವ ಪ್ರಕ್ರಿಯೆಗಳಿಗೇ ಹೆಚ್ಚಿನ ಪ್ರಾತಿನಿಧ್ಯ. ಇದಕ್ಕೆ ಯೋಜನೆಗಳನ್ನು ರೂಪಿಸುವ ಪ್ರಮುಖ ಕಾರ್ಯದಲ್ಲೂ ಅಭ್ಯರ್ಥಿಗಳು ತೊಡಗಿದ್ದಾರೆ. ಆಯೋಗದ ಕಣ್ಣು ತಪ್ಪಿಸಿ ಆಮಿಷಗಳನ್ನು ಮತದಾರರಿಗೆ ತಲುಪಿಸುವ ಪ್ರಯತ್ನ ಶನಿವಾರ ಅತಿಹೆಚ್ಚಾಗುವ ನಿರೀಕ್ಷೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

