ಕ.ಪ್ರ.ವಾರ್ತೆ ಉಡುಪಿ ಮೇ 4
ಉಡುಪಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸತೀಶ್ ಕುಮಾರ್ ಮೇಲೆ ಶುಕ್ರವಾರ ಮಧ್ಯರಾತ್ರಿ ಮಲ್ಪೆ ಸಮೀಪದ ಕಲ್ಮಾಡಿ ಎಂಬಲ್ಲಿ ಹಲ್ಲೆ ನಡೆದಿದ್ದು, ಅವರು ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಚುನಾವಣೆ ಹಿನ್ನೆಲೆಯಲ್ಲಿ ಈ ಹಲ್ಲೆ ನಡೆದಿದೆ ಎಂದು ಸತೀಶ್ ಆರೋಪಿಸಿದ್ದಾರೆ. ಬೈಕ್ನಲ್ಲಿ ಗೆಳೆಯರೊಬ್ಬರನ್ನು ಮಲ್ಪೆಗೆ ಬಿಟ್ಟು ಹಿಂದಿರಿಗುವಾಗ ಸುಮಾರು 12 ಗಂಟೆಗೆ ನಾಲ್ವರು ಯುವಕರು ನನ್ನನ್ನು ಅಡ್ಡಗಟ್ಟಿ ನಿಂದಿಸಿದ್ದಲ್ಲದೆ ಚೂರಿಯಿಂದ ಹಲ್ಲೆ ನಡೆಸಿದ್ದಾರೆ. ಮೊದಲೇ ಅನಾರೋಗ್ಯ ಪೀಡಿತನಾದ ನಾನು ನಂತರ ಆಸ್ಪತ್ರೆಗೆ ದಾಖಲಾದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕೈ ಮತ್ತು ಹೊಟ್ಟೆಯ ಮೇಲೆ ಸಣ್ಣ ಗೀರುಗಳಾವೆ ಎಂದು ಹೇಳಿದರು.
ಆಸ್ಪತ್ರೆಯಲ್ಲಿರುವ ಸತೀಶ್ ಅವರನ್ನು ಜೆಡಿಎಸ್ ಜಿಲ್ಲಾದ್ಯಕ್ಷ ದೇವಿಪ್ರಸಾದ್ ಶೆಟ್ಟಿ ಮತ್ತು ಕಾಪು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ವಸಂತ ವಿ. ಸಾಲ್ಯಾನ್ ಅವರು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಇದು ಪ್ರಜಾಪ್ರಭುತ್ವದ ಕಗ್ಗೊಲೆಯಗಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಹತಾಶರಾಗಿದ್ದು, ಹಿಂದುಳಿದ ವರ್ಗದ ಒಬ್ಬ ಹೋರಾಟಗಾರ ನಾಯಕನ ಜನಪ್ರಿಯತೆಯನ್ನು ಸಹಿಸದೆ, ಈ ರೀತಿಯ ಹೇಯ ಕೃತ್ಯ ಮಾಡಿದ್ದಾರೆ ಎಂದು ದೇವಿಪ್ರಸಾದ್ ಒತ್ತಾಯಿಸಿದ್ದಾರೆ.
ಬಿಜೆಪಿ ಆಗ್ರಹ: ಆಸ್ಪತ್ರೆಗೆ ಭೇಟಿ ನೀಡಿದ ಬಿಜೆಪಿ ಶಾಸಕ ಕೆ. ರಘುಪತಿ ಭಟ್, ಉಡುಪಿ ಬಿಜೆಪಿ ಅಭ್ಯರ್ಥಿ ಬಿ. ಸುಧಾಕರ ಶೆಟ್ಟಿ ಈ ಹಲ್ಲೆ ಘಟನೆಯ ಬಗ್ಗೆ ತನಿಖೆ ನಡೆದು ಹಲ್ಲೆಕೋರರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.