ನವದೆಹಲಿ: ಕೇಂದ್ರ ಕಾನೂನು ಸಚಿವರ ಆದೇಶದ ಮೇರೆಗೆ ಕಲ್ಲಿದ್ದಲು ಹಗರಣದ ತನಿಖೆಯ ವರದಿಯಲ್ಲಿ ಬದಲಾವಣೆ ಮಾಡಲಾಯಿತು. ಹೀಗೆಂದು ಸಿಬಿಐ ಮುಖ್ಯಸ್ಥ ರಂಜಿತ್ ಸಿನ್ಹಾ ಸೋಮವಾರ ಸುಪ್ರೀಂಕೋರ್ಟ್‌ಗೆ ಹೊಸತಾಗಿ ಅಫಿಡವಿಟ್ ಸಲ್ಲಿಸಿದರು. ಈ ಹಿನ್ನೆಲೆಯಲ್ಲಿ ಪದತ್ಯಾಗ ಮಾಡಲು ಕೇಂದ್ರ ಕಾನೂನು ಸಚಿವ ಅಶ್ವಿನಿಕುಮಾರ್ ಮೇಲೆ ಮತ್ತಷ್ಟು ಒತ್ತಡ ಹೆಚ್ಚುವುದು ಖಚಿತವಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿ ಸಂಸತ್‌ನ ಉಭಯ ಸದನಗಳಲ್ಲಿ ಗದ್ದಲ ಉಂಟಾಗಿ ದಿನದ ಮಟ್ಟಿಗೆ ಕಲಾಪ ಮುಂದೂಡಲಾಯಿತು.
ಸುಪ್ರೀಂ ಮುಂದೆ ಸಿಬಿಐ ಸಲ್ಲಿಸಿದ 9 ಪುಟಗಳ ಅಫಿಡವಿಟ್‌ನಲ್ಲಿ ಕಾನೂನು ಸಚಿವರು ತನಿಖಾ ವರದಿಯಲ್ಲಿ ಕೆಲ ಬದಲಾವಣೆ ಮಾಡುವಂತೆ ಸೂಚಿಸಿದರು ಎಂದು ಸಂಸ್ಥೆ ಮುಖ್ಯಸ್ಥ ಸಿನ್ಹ ತಿಳಿಸಿದ್ದಾರೆ. ಕಾನೂನು ಸಚಿವ ಅಶ್ವಿನಿಕುಮಾರ್, ಎಜಿ ಜಿ.ಇ.ವಾಹನ್ವತಿ, ಹೆಚ್ಚುವರಿ ಸಾಲಿಸಿಟರ್ ಜನರಲ್ ಹರೇನ್ ರಾವಲ್, ಪ್ರಧಾನಮಂತ್ರಿ ಕಾರ್ಯಾಲಯ ಮತ್ತು ಕಲ್ಲಿದ್ದಲು ಖಾತೆಯ ಜಂಟಿ ಕಾರ್ಯದರ್ಶಿಗಳು ವರದಿಯಲ್ಲಿ ಕೆಲ ಬದಲಾವಣೆ ಸೂಚಿಸಿದ್ದರು ಎಂದಿದ್ದಾರೆ.
ಸಿಬಿಐ ಅಫಿಡವಿಟ್ ಹಿನ್ನೆಲೆಯಲ್ಲಿ ಕೇಂದ್ರ ಕಾನೂನು ಸಚಿವರು ರಾಜಿನಾಮೆ ಕೊಡಬೇಕೆಂದು ಬಿಜೆಪಿ ಒತ್ತಾಯಿಸಿದೆ.