ಪ್ರಧಾನ ಸುದ್ದಿ

22.76 ಲಕ್ಷ ಟನ್ ಅದಿರಿಗಿಲ್ಲ ಮಾಹಿತಿ

Published On :

ಕ.ಪ್ರ. ವಾರ್ತೆ  ಬಳ್ಳಾರಿ  ಮೇ 11
ಅಕ್ರಮ ಗಣಿಗಾರಿಕೆ ಕುರಿತು ಸಿಬಿಐ ತನಿಖೆ ದಿನದಿಂದ ದಿನಕ್ಕೆ ವಿಸ್ತೃತರೂಪ ಪಡೆದುಕೊಳ್ಳುತ್ತಿದೆ. ಅಕ್ರಮ ಗಣಿಗಾರಿಕೆ, ಅದಿರು ಸಾಗಣೆ, ರಫ್ತಿನಲ್ಲಿ ಬಳ್ಳಾರಿ ಹಾಗೂ ರಾಜ್ಯದಲ್ಲಿ ಮಾತ್ರವಲ್ಲದೆ, ದೆಹಲಿ, ಕೋಲ್ಕತ್ತಾ, ಮುಂಬೈ, ಗೋವಾ ಮುಂತಾದ ಕಡೆಗಳ ಎಕ್ಸ್‌ಪೋರ್ಟ್, ಟ್ರಾನ್ಸ್‌ಪೋರ್ಟ್ ಕಂಪನಿಗಳು ತೊಡಗಿಸಿಕೊಂಡಿರುವುದೂ ಬೆಳಕಿಗೆ ಬಂದಿದೆ.
ಕೆಲವು ಎಕ್ಸ್‌ಪೋರ್ಟ್ ಕಂಪನಿಗಳು ರಫ್ತು ಮಾಡಿರುವ 22.76 ಲಕ್ಷ ಟನ್ ಅದಿರನ್ನು ಎಲ್ಲಿಂದ ತರಲಾಗಿದೆ ಎಂಬ ಮಾಹಿತಿಯೇ ಇಲ್ಲ ಎಂದು ಸಿಬಿಐ ತನಿಖೆಯಿಂದ ಪತ್ತೆಯಾಗಿದೆ. ಅವುಗಳ ವಿರುದ್ಧ ಸಿಬಿಐ ಕೆಲವೇ ದಿನಗಳಲ್ಲಿ ದೋಷಾರೋಪಣ ಪಟ್ಟಿಯನ್ನು ಸಲ್ಲಿಸುವ ಸಾಧ್ಯತೆ ಇದೆ.
ಅಕ್ರಮ ಗಣಿಗಾರಿಕೆ, ಅಕ್ರಮ ಅದಿರು ರಫ್ತಿನ ತನಿಖೆ ಶುರುವಾಗಿದ್ದು, ತನಿಖೆ ನಡೆಸಿದಂತೆಲ್ಲ ಅಕ್ರಮಗಳು ಬಯಲಾಗುತ್ತಲೇ ಇವೆ. ಸಿಬಿಐ ತನಿಖೆಯಲ್ಲಿ ಹೊಸ ಮಾಹಿತಿ ಹೊರಬಂದಿದ್ದು, 38ಕ್ಕೂ ಹೆಚ್ಚು ರಫ್ತು ಕಂಪನಿಗಳು 45,33,277 ಟನ್ ಅದಿರನ್ನು ಅಧಿಕೃತವಾಗಿ ರಫ್ತು ಮಾಡಿವೆ. ಆದರೆ ಇನ್ನೂ 22,76,314 ಟನ್ ರಫ್ತು ಮಾಡಿರುವ ಅದಿರು ಎಲ್ಲಿಂದ ತರಲಾಗಿದೆ ಎಂಬ ಮಾಹಿತಿಯನ್ನು ಈ ಕಂಪನಿಗಳು ಸಿಬಿಐಗೆ ನೀಡಿಲ್ಲ.
ಮಾಹಿತಿ ನೀಡದ ಕಂಪನಿಗಳು: ಸಿಬಿಐ ತನಿಖೆ ವೇಳೆ 38 ಅದಿರು ಸಾಗಣೆ ಕಂಪನಿಗಳಿಗೆ ನೋಟಿಸ್ ನೀಡಿ, ರಫ್ತು ಮಾಡಿರುವ ಅದಿರನ್ನು ಯಾವ ಗಣಿಯಿಂದ ತರಲಾಗಿದೆ ಎಂಬ ಮಾಹಿತಿ ಕೇಳಿದಾಗ, ಅವು 45,33,277 ಟನ್ ಅದಿರಿನ ಮೂಲವನ್ನು ತಿಳಿಸಿವೆ. ಉಳಿದ 22.76 ಲಕ್ಷ ಟನ್ ಅದಿರಿನ ಮೂಲವನ್ನು ಬಹಿರಂಗಪಡಿಸಿಲ್ಲ. ಹೀಗಾಗಿ, ಕಂಪನಿಗಳ ಮೇಲೂ ತನಿಖೆಯ ಕತ್ತಿ ತೂಗುತ್ತಿದೆ.
ಆಯ್ದ ಕಂಪನಿಗಳ ಮಾಹಿತಿ: ಸರಿಯಾದ ಮಾಹಿತಿ ನೀಡದಿರುವ ಕಂಪನಿಗಳ ವಿವರ “OÚ«Ú­sÚ®ÚúڒOæQ ಲಭ್ಯವಾಗಿದೆ. ಬೆಂಗಳೂರಿನ ಗ್ರೀನ್‌ಟೆಕ್ಸ್ ಮೈನಿಂಗ್ ಇಂಡಸ್ಟ್ರೀಸ್ ಲಿ. 1,65,710 ಟನ್ ಅದಿರಿನ ಬಗ್ಗೆ ಮಾಹಿತಿ ನೀಡಿಲ್ಲ. ಬೆಂಗಳೂರಿನ ರಾಜಮಹಲ್ ಸಿಲ್ಕ್ಸ್ ರಫ್ತು ಮಾಡಿದ 2,82,795 ಟನ್ ಅದಿರಿನ ಮೂಲ ಬಹಿರಂಗ ಮಾಡಿಲ್ಲ. ಚಿತ್ರದರ್ಗುದ ಸೇಸಗೋವಾ ಲಿ. 18,991 ಟನ್, ಹೊಸಪೇಟೆಯ ಶ್ರೀ ವೆಂಕಟೇಶ್ವರ ಟ್ರಾನ್ಸ್‌ಪೋರ್ಟ್ 1,09,377 ಟನ್, ಹೊಸಪೇಟೆಯ ಎಂಎಸ್ಪಿಎಲ್ ಲಿ. 1,96,156 ಟನ್ ಅದಿರಿನ ಮೂಲದ ಬಗ್ಗೆ ಮಾಹಿತಿ ನೀಡಿಲ್ಲ.
ವಿಎಸ್‌ಎಲ್ ಕಂಪನಿ ಹೆಸರು: ಬೆಂಗಳೂರಿನ ಅದಾನಿ ಎಂಟರ್‌ಪ್ರೈಸಸ್ ಲಿ. 50,704 ಟನ್, ಬೆಂಗಳೂರಿನ ಟ್ವೆಂಟಿ ಫಸ್ಟ್ ಸೆಂಚುರಿ ವೈರ್ ರೋಡ್ಸ್ ಲಿ. 56,496 ಟನ್, ಬಳ್ಳಾರಿಯ ಭಾರತ್ ಮೈನ್ಸ್ ಮತ್ತು ಮಿನರಲ್ಸ್ 75,075 ಟನ್, ಬೆಂಗಳೂರಿನ ಎಚ್‌ಎಲ್‌ಎಲ್ ಲೈಫ್ ಕೋರ್ ಲಿ. 1,06,739 ಟನ್, ಜಾನ್ಸ್‌ಪೇಟೆಯ ನರ್ಸಸ್ ಕಾಫಿ ಕಂಪನಿ ಪ್ರೈ.ಲಿ. 51,979 ಟನ್, ಹೊಸಪೇಟೆಯ ಎಸ್‌ವಿಎಂ ನೆಟ್ ಪ್ರಾಜೆಕ್ಟ್ ಸೊಲೂಷನ್ ಪ್ರೈ.ಲಿ. 55,800 ಟನ್, ಬಳ್ಳಾರಿಯ ಅಕ್ಷತಾ ಮಿನರಲ್ಸ್ ಪ್ರೈ.ಲಿ. 79,500 ಟನ್, ಹರಿಯಾಣದ ಅಪೈನ್ ಇಂಟರ್ ನ್ಯಾಷನಲ್ 85,023 ಟನ್, ಸಂಡೂರಿನ ಅನಿಲ್ ಲಾಡ್‌ಗೆ ಸಂಬಂಧಿಸಿದ ವಿಎಸ್‌ಎಲ್ ಮೈನಿಂಗ್ ಕಂಪನಿ 57,480 ಟನ್, ಹೊಸಪೇಟೆಯ ಶ್ರೀನಿವಾಸ ಮಿನರಲ್ಸ್ 1,02,803 ಟನ್, ಬೆಂಗಳೂರಿನ ಸ್ವಸ್ತಿಕ್ ಸ್ಟೀಲ್ಸ್ 59,352 ಟನ್, ಮುಂಬೈನ ದಕ್ಷ ಮಿನರಲ್ಸ್ 67,383 ಟನ್, ಕೋಲ್ಕತ್ತಾದ ಸ್ಟೀಲ್ ಓವರ್‌ಸೀಸ್ ಪ್ರೈ.ಲಿ. 54 ಸಾವಿರ ಟನ್, ಹೊಸಪೇಟೆಯ ಹರ್ಷದ್ ಎಕ್ಸ್‌ಪೋರ್ಟ್‌ನ 1,02,325 ಟನ್, ಯಲ್ಲಾಪುರದ ಪ್ರಿಂಟೆಕ್ಸ್ ಎಕ್ಸ್‌ಪೋರ್ಟ್ ಇಂಡಿಯಾ ಪ್ರೈ.ಲಿ. 1,48,653 - ಹೀಗೆ 38 ಕಂಪನಿಗಳು ರಫ್ತು ಮಾಡಿರುವ 22.76 ಲಕ್ಷ ಟನ್ ಅದಿರಿನ ಮೂಲ ಗೊತ್ತಾಗಿಲ್ಲ. ಇದು ಎಲ್ಲ ಕಂಪನಿಗಳ ಕೊರಳಿಗೂ ಸುತ್ತಿಕೊಳ್ಳುವ ಸಾಧ್ಯತೆ ಇದೆ.

 ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.