ಸುರಕ್ಷಿತ ವಲಯದತ್ತ ಅಧಿಕಾರಿಗಳ ಚಿತ್ತ!
ಕ.ಪ್ರ. ವಾರ್ತೆ ಹುಬ್ಬಳ್ಳಿ ಮೇ 12-
ಕಾಂಗ್ರೆಸ್ ಹೈಕಮಾಂಡ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರ ಹೆಸರನ್ನು ಪ್ರಸ್ತಾಪಿಸಿದ್ದೆ ತಡ, ರಾಜ್ಯದ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು 'ಸೇಫ್ ಝೋನ್'ಗಳತ್ತ ವರ್ಗಾವಣೆಗೊಳ್ಳಲು ತೆರೆಮರೆಯಲ್ಲಿ ಕಸರತ್ತು ಆರಂಭಿಸಿದ್ದಾರೆ.
ಸ್ವಭಾವತಃ ಮೃದುವಾಗಿದ್ದರೂ ಆಡಳಿತದ ವಿಚಾರದಲ್ಲಿ ಸಿದ್ದರಾಮಯ್ಯ ನಡವಳಿಕೆ ಕಠಿಣ ಎಂಬುದು ಎಲ್ಲರಿಗೂ ಗೊತ್ತು. ಆಡಳಿತ ವ್ಯವಸ್ಥೆಯ ಎಲ್ಲ ಸ್ತರದ ಅನುಭವ ಹೊಂದಿರುವ ಸಿದ್ದರಾಮಯ್ಯ ಅವರ ದಿಕ್ಕು ತಪ್ಪಿಸುವುದು ಸುಲಭದ ಮಾತಲ್ಲ ಎಂಬುದು ಅಧಿಕಾರಿಗಳಿಗೆ ಮನವರಿಕೆಯಾದಂತಿದೆ.
ಐಎಎಸ್ ದರ್ಜೆಯಿಂದ...: ಐಎಎಸ್ ದರ್ಜೆ ಅಧಿಕಾರಿಗಳಿಂದ ಹಿಡಿದು ಕಂದಾಯ ಇಲಾಖೆಯಲ್ಲಿ ನಿರೀಕ್ಷಕರಾಗಿರುವ ಅಧಿಕಾರಿಗಳೂ ಕೂಡ ಸೇಫ್ ಝೋನ್ಗೆ ವರ್ಗಾವಣೆ ಮಾಡಿಸಿಕೊಳ್ಳಲು ಪ್ರಯತ್ನ ಆರಂಭಿಸಿದ್ದಾರೆ. ಆಯ್ಕೆಯಾಗಿರುವ ಶಾಸಕರೆಲ್ಲರೂ ನೂತನ ಸಿಎಂ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಲ್ಲಿ ಮೊಕ್ಕಾಂ ಹೂಡಿದ್ದು, ಅವರು ಮರಳಿ ಬರುವುದನ್ನೇ ಅಧಿಕಾರಿಗಳು ಕಾಯುತ್ತಿರುವುದು ರಾಜ್ಯಾದ್ಯಂತ ಕಂಡು ಬರುತ್ತಿದೆ.
ನೀರಿಳಿಸಿದ್ದ ಸಿದ್ದು: ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾಗಿದ್ದಾಗ ಹುಬ್ಬಳ್ಳಿ ಪ್ರವಾಸಿ ಮಂದಿರದಲ್ಲಿ ನಡೆಸಿದ್ದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬೆಣ್ಣೆಹಳ್ಳ ಪ್ರವಾಹದಿಂದ ಸಂಭವಿಸಿದ ಹಾನಿಗೆ ಸಂಬಂಧಿಸಿದಂತೆ ಸರ್ಕಾರದಿಂದ ವಿತರಿಸಲಾಗಿರುವ ಪರಿಹಾರ ಧನ ಎಷ್ಟು? ಎಷ್ಟು ಜನರಿಗೆ ಇದರಿಂದ ಅನುಕೂಲವಾಗಿದೆ? ಎಷ್ಟು ಮೌಲ್ಯದ ಬೆಳೆ ಹಾನಿ ಸಂಭವಿಸಿದೆ? ಎಂಬುದನ್ನು ಅಂಕಿ-ಸಂಖ್ಯೆ ಸಮೇತ ತಿಳಿಸುವಂತೆ ಸೂಚಿಸಿದ್ದರು.
ಆಗ ಐಎಎಸ್ ದರ್ಜೆ ಅಧಿಕಾರಿಯೊಬ್ಬರು ಬೆಳೆಹಾನಿ ಸಂಭವಿಸಿದ ವಿವರ ನೀಡುವಲ್ಲಿ ತಪ್ಪಿದ್ದರು. ಇದರಿಂದ ಕೆಂಡಾಮಂಡಲರಾದ ಸಿದ್ದು, ಪ್ರವಾಹ ಬಂದಾಗ ಯಾವ ಬೆಳೆ ಬೆಳೆಯಲಾಗಿತ್ತು? ಪ್ರತಿ ಎಕರೆಗೆ ಆ ಬೆಳೆಯಿಂದ ಎಷ್ಟು ಹಾನಿ ಸಂಭವಿಸಿತ್ತು? ಎಂಬುದನ್ನು ಹೇಳಿ ಎಲ್ಲರನ್ನೂ ಬೆರಗಾಗಿಸಿದ್ದರು. ತಪ್ಪು ಮಾಹಿತಿ ನೀಡಿದ್ದ ಐಎಎಸ್ ದರ್ಜೆ ಅಧಿಕಾರಿಯ ನೀರಿಳಿಸಿದ್ದರು. ಇದನ್ನು ಕಣ್ಣಾರೆ ಕಂಡಿದ್ದ ಹುಬ್ಬಳ್ಳಿ ಕಂದಾಯ ಇಲಾಖೆಯ ಕೆಲ ಅಧಿಕಾರಿಗಳು ಈಗಲೂ ಆ ಘಟನೆಯನ್ನು ನೆನಪಿಸಿಕೊಂಡು ಬೆಚ್ಚಿಬೀಳುತ್ತಾರೆ.
ಮತ್ತೆ ಬಿಜೆಪಿಯೇ: ಚುನಾವಣಾ ನೀತಿ ಸಂಹಿತಿಯಿಂದಾಗಿ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ವರ್ಗಾವಣೆಗೊಂಡಿದ್ದ ಅಧಿಕಾರಿಗಳು, ಮತ್ತೊಂದು ಅವಧಿಗೂ ಬಿಜೆಪಿ ಸರ್ಕಾರವೇ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯಲಿದೆ ಎಂದು ಬಲವಾಗಿ ನಂಬಿದ್ದರು. ಚುನಾವಣೆ ನಂತರ ಆಯಾ ಸ್ಥಳಗಳಿಗೆ ತಮ್ಮನ್ನು ವರ್ಗಾವಣೆ ಮಾಡುವಂತೆ ಮೊದಲೇ ಕಮಲ ಪಾಳಯದ ನಾಯಕರಿಗೆ ಕಪ್ಪ ಕಾಣಿಕೆ ಸಲ್ಲಿಸಿದ್ದರೆಂಬ ಮಾತುಗಳೂ ಕೇಳಿಬರುತ್ತಿವೆ.
ಒಟ್ಟಿನಲ್ಲಿ ಬಿಜೆಪಿ ನಾಯಕರ ಲೆಕ್ಕಾಚಾರ ಬುಡಮೇಲಾಗಿದೆ. ಆಯಾ ಜಿಲ್ಲೆ, ತಾಲೂಕುಗಳಿಗೆ ವರ್ಗಾವಣೆ ಮಾಡುವಂತೆ ಅಧಿಕಾರಿಗಳು ಸಲ್ಲಿಸಿದ್ದ ಕಾಣಿಕೆಯೂ ವ್ಯರ್ಥವಾಗಿದೆ. ಹಣವೂ ವಾಪಸ್ ಸಿಗದೆ, ಬೇಕಿದ್ದಲ್ಲಿಗೆ ವರ್ಗಾವಣೆಯೂ ಆಗದೆ ಮನದಲ್ಲೇ ಕೊರಗುವಂತಾಗಿದೆ.
ಸರ್ಕಾರ ದಯಪಾಲಿಸಿದ ಅಧಿಕಾರವನ್ನು ಕೆಲವೇ ಜನರ ಹಿತಕ್ಕಾಗಿ ಉಪಯೋಗಿಸಿದ ಅಧಿಕಾರಿಗಳಿಗೆ ಚಾಟಿ ಏಟು ಬೀಸಲು ಸಿದ್ದರಾಮಯ್ಯ ಮುಂದಾದರೆ ರಾಜ್ಯಾದ್ಯಂತ ಜನರ ಶ್ಲಾಘನೆಗೆ ಪಾತ್ರವಾಗುವುದಂತೂ ಖಂಡಿತ.
ಆಡಳಿತದಲ್ಲಿ ಸುಧಾರಣೆ ತರುವ ಮೂಲಕ ಸರ್ಕಾರಿ ಸೌಲಭ್ಯಗಳು ಎಲ್ಲ ವರ್ಗದ ಜನರ ಮನೆ ಬಾಗಿಲಿಗೆ ಮುಟ್ಟಿಸಬಲ್ಲ ಪ್ರಾಮಾಣಿಕ ಅಧಿಕಾರಿಗಳನ್ನು ಆಯಕಟ್ಟಿನ ಸ್ಥಾನಗಳಲ್ಲಿ ಕೂರಿಸಲು ಕಾಂಗ್ರೆಸ್ ಪ್ರಾಮಾಣಿಕವಾಗಿ ಪ್ರಯತ್ನಿಸಲಿ ಎಂಬ ಆಶಯ ನಾಡಿನ ಜನರದ್ದು.
- ಬಿ.ಕೆ. ಮಹೇಂದ್ರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

