ಸತ್ಯದ ಹೆಸರಲ್ಲಿ ಸಿದ್ದು ಪ್ರಮಾಣ
ಕನ್ನಡಪ್ರಭವಾರ್ತೆ ಬೆಂಗಳೂರು ಮೇ 13
ರಾಜ್ಯದ 22ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಸತ್ಯದ ಹೆಸರಿನಲ್ಲಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಜಯಘೋಷದ ನಡುವೆ ಬಸವ ಜಯಂತಿ-ಅಕ್ಷಯ ತೃತೀಯ ಸುಮೂಹರ್ತದಲ್ಲಿ ಸಿದ್ದರಾಮಯ್ಯ ಅಧಿಕಾರ ಗೌಪ್ಯತೆ ಹಾಗೂ ಆಡಳಿತ ಬದ್ಧತೆಯ ಪ್ರಮಾಣ ವಚನ ಸ್ವೀಕರಿಸಿದರು.
ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಕಾಂಗ್ರೆಸ್ನ ಗಣ್ಯರ ದಂಡೇ ನೆರೆದಿತ್ತು. ಕೇಂದ್ರ ಸಚಿವರಾದ ಮಲ್ಲಿಕಾರ್ಜುನ ಖರ್ಗೆ, ಎಂ.ವೀರಪ್ಪ ಮೊಯ್ಲಿ, ಕೆ.ಎಚ್. ಮುನಿಯಪ್ಪ, ಕೆ. ರೆಹಮಾನ್ಖಾನ್, ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಮಧುಸೂದನ ಮಿಸ್ತ್ರಿ, ಹನುಮಂತರಾವ್, ಎಐಸಿಸಿ ಪ್ರತಿನಿಧಿಗಳಾದ ಆಸ್ಕರ್ ಫರ್ನಾಂಡಿಸ್, ಬಿ.ಕೆ.ಹರಿಪ್ರಸಾದ್, ಸಾಹಿತಿಗಳಾದ ಡಾ.ಜಿ.ಎಸ್.ಶಿವರುದ್ರಪ್ಪ, ಗಿರೀಶ್ ಕಾರ್ನಾಡ್, ಶತಾಯುಷಿ ಪ್ರೊ.ಜಿ.ವೆಂಕಟಸುಬ್ಬಯ್ಯ, ಸಂಸದ ಡಿ.ಬಿ.ಚಂದ್ರೇಗೌಡ, ಮಾಜಿ ಸಚಿವ ರಾಮಚಂದ್ರಗೌಡ, ಕಾಂಗ್ರೆಸ್ನ ಮಾಜಿ ಸಚಿವರು, ಶಾಸಕರು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಾಕ್ಷಿಯಾದರು.
ರಾಗ-ದ್ವೇಷವಿಲ್ಲ: ಸರಿಯಾಗಿ 11.40ಕ್ಕೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಸಿದ್ದರಾಮಯ್ಯನವರಿಗೆ ಅಧಿಕಾರ ಗೌಪ್ಯತೆ ಪ್ರಮಾಣ ವಚನ ಬೋಧಿಸಿದರು.
ಭಾರತದ ಸಾರ್ವಭೌಮತ್ವ ಎತ್ತಿ ಹಿಡಿಯಲು, ಸಂವಿಧಾನದ ಆಶೋತ್ತರಗಳಿಗೆ ಬದ್ಧವಾಗಿ, ಶ್ರದ್ಧೆ ಮತ್ತು ಭಕ್ತಿಯಿಂದ ರಾಜ್ಯದ ಮುಖ್ಯಮಂತ್ರಿಯಾಗಿ ಕರ್ತವ್ಯ ನಿರ್ವಹಿಸುತ್ತೇನೆ ಎಂಬ ಭರವಸೆಯೊಂದಿಗೆ ಪ್ರಮಾಣ ವಚನ ಪತ್ರ ವಾಚಿಸಿದ ಅವರು, ರಾಗ-ದ್ವೇಷಗಳಿಗೆ ಒಳಗಾಗದೇ, ಯಾವುದೇ ಜಾತಿ-ವರ್ಗದ ಪರವಾಗಿಲ್ಲದೇ ಮುಕ್ತವಾಗಿ ಕಾರ್ಯ ನಿರ್ವಹಿಸಲು ಸತ್ಯದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತೇನೆ ಎಂದು ಹೇಳಿದರು.
ಚುಟುಕು ಸಮಾರಂಭ: ಪ್ರಮಾಣ ವಚನ ಅತ್ಯಂತ ಕಡಿಮೆ ಅವಧಿಯಲ್ಲಿ ಮುಕ್ತಾಯವಾಯಿತು. ಜತೆಯಲ್ಲಿ ಸಂಪುಟ ಸದಸ್ಯರು ಇಲ್ಲದೇ ಇದ್ದುದರಿಂದ, ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಐದೇ ನಿಮಿಷಗಳಲ್ಲಿ ಮುಕ್ತಾಯವಾಯಿತು.
ಖುದ್ದು ಸ್ವಾಗತ ಕೋರಿದ ಸಿದ್ದು: ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದ ಸಿದ್ದರಾಮಯ್ಯ ಕ್ರೀಮ್ ಬಣ್ಣದ ರೇಷ್ಮೆ ನಿಲುವಂಗಿ, ರೇಷ್ಮೆ ಪಂಚೆ ಹಾಗೂ ಶಾಲು ಧರಿಸಿದ್ದರು. ರಾಜ್ಯಪಾಲರ ಆಗಮನಕ್ಕೆ ಮುನ್ನ ವೇದಿಕೆಗೆ ಬಂದ ಅವರು, ಮೊದಲೇ ಆಗಮಿಸಿದ್ದ ಪ್ರತಿಯೊಬ್ಬರ ಬಳಿ ಹೋಗಿ ಮಾತಾಡಿಸಿ ಆಲಂಗಿಸಿಕೊಂಡರು. ನಂತರ ವೇದಿಕೆಗೆ ಬಂದ ಎಸ್.ಎಂ. ಕೃಷ್ಣ ಹಾಗೂ ಜಾಫರ್ ಷರೀಫ್ ಅವರನ್ನು ಖುದ್ದಾಗಿ ಸ್ವಾಗತಿಸಿ ಆಸನಕ್ಕೆ ಕರೆ ತಂದು ಕುಳ್ಳಿರಿಸಿದರು. ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಅವರನ್ನು ಗಾಢವಾಗಿ ಆಲಂಗಿಸಿಕೊಂಡು ಕೆಲ ಹೊತ್ತು ಮಾತನಾಡಿದರು.
ಕೈ ಬೀಸಿದ ರಾಜ್ಯಪಾಲ..!
ಪ್ರಮಾಣ ವಚನ ಬೋಧಿಸಲು ಬಂದಿದ್ದ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಪಕ್ಕಾ ರಾಜಕಾರಣಿ ಶೈಲಿಯಲ್ಲಿ ನೆರೆದಿದ್ದ ಸಹಸ್ರಾರು ಜನರತ್ತ ಕೈ ಬೀಸಿದ್ದೇ ಸಮಾರಂಭದ ವಿಶೇಷ. ತಕ್ಷಣ ತಮ್ಮ ಅಚಾತುರ್ಯದ ಬಗ್ಗೆ ಎಚ್ಚೆತ್ತುಕೊಂಡ ಅವರು, ನಂತರ ಸಭಾಸದರತ್ತ ಕೈ ಮುಗಿದು ಆಸೀನರಾದರು.
ಸಮಾರಂಭದಿಂದ ದೂರವುಳಿದ ಎಚ್ಡಿಕೆ
ಸಿದ್ದರಾಮಯ್ಯ ಪ್ರಮಾಣವಚನ ಸಮಾರಂಭಕ್ಕೆ ಬಿಎಸ್ಆರ್ ಕಾಂಗ್ರೆಸ್ನ ಬಿ. ಶ್ರೀರಾಮುಲು ಹಾಗೂ ಅವರ ಬೆಂಬಲಿಗರು, ಬಿಜೆಪಿಯಿಂದ ಸಂಸದ ಡಿ.ಬಿ. ಚಂದ್ರೇಗೌಡ ಮೊದಲಾದವರು ಆಗಮಿಸಿದ್ದರು. ಆದರೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಾಗಲಿ, ಜಾತ್ಯತೀತ ಜನತಾದಳದ ಯಾವುದೇ ಸದಸ್ಯರಾಗಲಿ ಬಂದಿರಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

