ಪ್ರಧಾನ ಸುದ್ದಿ

ಮಂತ್ರಿ, ಶಾಸಕರು ಶುದ್ಧ ಇದ್ದರೆ ಸರ್ಕಾರವೂ ಶುದ್ಧ

ಮಂತ್ರಿ, ಶಾಸಕರು ಶುದ್ಧ ಇದ್ದರೆ ಸರ್ಕಾರವೂ ಶುದ್ಧ
Published On :

ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದ ಬಳಿಕ ಮಾಧ್ಯಮಕ್ಕೆ ನೀಡಿದ ಪ್ರಪ್ರಥಮ ಸಂದರ್ಶನ

ಬೆಂಗಳೂರು:
ಮುಖ್ಯಮಂತ್ರಿ, ಸಚಿವರು ಹಾಗೂ ಶಾಸಕರ ಕೈ ಶುದ್ಧವಾಗಿದ್ದರೆ ಭ್ರಷ್ಟಾಚಾರ ಅರ್ಧ ಕಡಿಮೆಯಾಗುತ್ತದೆ. ಯಾವುದನ್ನೇ ಆಗಲಿ ಸರಿಪಡಿಸಲು ಮಂತ್ರದಂಡ ಬೇಕಿಲ್ಲ. ಮಾಡುವ ಕೆಲಸದಲ್ಲಿ ಪ್ರಾಮಾಣಿಕರಾಗಿದ್ದರೆ ಬದಲಾವಣೆ ಸಾಧ್ಯ. ರಾಜಿ ಇಲ್ಲದ ರಾಜಕಾರಣ ಇಲ್ಲ, ನನ್ನ ಮೇಲೆ ಯಾವುದೇ ಲಾಬಿ ಒತ್ತಡ ಹಾಕಲು ಸಾಧ್ಯ ಇಲ್ಲ. ಈವರೆಗೆ ನಾನು ಹೇಗೆ ಇರುವೆನೋ ಮುಖ್ಯಮಂತ್ರಿಯಾಗಿಯೂ ಅದೇ ರೀತಿ ಇರುತ್ತೇನೆ. ಸ್ವಭಾವ ಬದಲಾಗೊಲ್ಲ...
ರಾಜ್ಯದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ಪಷ್ಟ ನುಡಿಗಳಿವು. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಸಿದ್ದರಾಮಯ್ಯ ಅವರು ಮೊಟ್ಟ ಮೊದಲ ಮಾಧ್ಯಮ ಸಂದರ್ಶನ ನೀಡಿದ್ದು ಸುವರ್ಣ ಸುದ್ದಿವಾಹಿನಿ ಹಾಗೂ ಕನ್ನಡಪ್ರಭಕ್ಕೆ.
ಶೇ.100ರಷ್ಟು ಭ್ರಷ್ಟಾಚಾರ ರಹಿತ ಸರ್ಕಾರ ನೀಡುತ್ತೇನೆ ಎಂದು ನಾನು ಹೇಳುವುದಿಲ್ಲ. ಆದರೆ, ಅಧಿಕಾರಿಗಳು ಸೇರಿದಂತೆ ತಪ್ಪು ಮಾಡಿದವರ ಮೇಲೆ ಕ್ರಮ ಕೈಗೊಂಡರೆ ಮತ್ತಷ್ಟು ಭ್ರಷ್ಟಾಚಾರ ಕಡಿತವಾಗುತ್ತದೆ. ಶಾಸಕರು ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಪರಿಣಾಮಕಾರಿ ಕೆಲಸ ಮಾಡಿದರೆ ಸುಧಾರಣೆ ಸಾಧ್ಯ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಹೈಕಮಾಂಡ್, ಜನರ ನಿರೀಕ್ಷೆಯ ಸರ್ಕಾರವನ್ನು ನೀಡುವಲ್ಲಿ ಯಾವುದೇ ರೀತಿಯ ಹಿಂಜರಿಕೆ ಇಲ್ಲ. ಬದಲಾವಣೆಯ ನಿರೀಕ್ಷೆ ಸುಳ್ಳಾಗದ ರೀತಿಯಲ್ಲಿ ಜನರಿಗೆ ಒಳ್ಳೆಯ ಸರ್ಕಾರ ನೀಡುತ್ತೇನೆ. ಪ್ರತ್ಯೇಕ ಕೃಷಿ ಬಜೆಟ್ ಎಂಬ ಢೋಂಗಿತನ ಇರುವುದಿಲ್ಲ. ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುವುದಿಲ್ಲ. ಹಣಕಾಸು ಪರಿಸ್ಥಿತಿ ಸರಿಯಾಗಿಲ್ಲ. ಆರ್ಥಿಕ ಶಿಸ್ತು ತತ್‌ಕ್ಷಣದ ಅಗತ್ಯವಾಗಿದ್ದು, ಆಡಳಿತದಲ್ಲಿ ಸುಧಾರಣೆಗೆ ಪ್ರಥಮ ಪ್ರಾಶಸ್ತ್ಯ ನೀಡಲಾಗುತ್ತದೆ. ಎಲ್ಲರ ಸಲಹೆ ಪಡೆಯುತ್ತೇನೆ. ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಸಿದ್ದರಾಮಯ್ಯ ಸಂದರ್ಶನದ ಪೂರ್ಣಪಾಠ: ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್‌ಗಾಂಧಿ ರಾಜ್ಯವನ್ನು ಮುನ್ನಡೆಸಬೇಕಾದ ಜವಾಬ್ದಾರಿ ವಹಿಸಿದ್ದಾರೆ.     

ರಾಜ್ಯದಲ್ಲಿ ಸ್ಥಿರ ಹಾಗೂ ಸುಸ್ಥಿರ ಸರ್ಕಾರವನ್ನು ನೀಡಬೇಕಾದ ಜವಾಬ್ದಾರಿ ನನ್ನ ಮೇಲಿದೆ. ಅವರ ನಿರೀಕ್ಷೆಯಂತೆ ನಾನು ಕೆಲಸ ಮಾಡುತ್ತೇನೆ. ಕಾಂಗ್ರೆಸ್‌ನಲ್ಲಿ ಹತ್ತಾರು ವರ್ಷಗಳಿಂದ ಕೆಲಸ ಮಾಡಿದವರು ಇದ್ದಾರೆ. ಸೋನಿಯಾಗಾಂಧಿ ಅವರ ಕೃಪಾಕಟಾಕ್ಷದಿಂದ ನಾನು ಮುಖ್ಯಮಂತ್ರಿಯಾದೆ. ಶಾಸಕರು ಸರ್ವಾನುಮತದಿಂದ ನನ್ನನ್ನು ಆಯ್ಕೆ ಮಾಡಿದರು. ಮಲ್ಲಿಕಾರ್ಜುನ ಖರ್ಗೆ ಕೇಂದ್ರದಲ್ಲಿ ಮಂತ್ರಿಯಾಗಿದ್ದಾರೆ. ನಮ್ಮ ಕೆಪಿಸಿಸಿ ಅಧ್ಯಕ್ಷರು ದುರಾದೃಷ್ಟವಾಗಿ ಚುನಾವಣೆಯಲ್ಲಿ ಸೋತುಹೋದರು. ಈ ಸಂದರ್ಭದಲ್ಲಿ ನಾನು ಮುಖ್ಯಮಂತ್ರಿಯಾಗುತ್ತೇನೆ ಎಂದು ನಾನು ನಿರೀಕ್ಷಿಸಿದ್ದೆ. ಈ ನಿರೀಕ್ಷೆ ಸ್ವಾಭಾವಿಕವಾಗಿದ್ದು, ನನ್ನನ್ನು ಅದೇ ರೀತಿಯ ಸ್ವಾಭಾವಿಕ ಪ್ರಕ್ರಿಯೆಯಲ್ಲಿ ಹೈಕಮಾಂಡ್ ಮುಖ್ಯಮಂತ್ರಿಯನ್ನಾಗಿ ಮಾಡಿತು.
ನನ್ನ ಸ್ವಭಾವದಲ್ಲಿ ಯಾವುದೇ ರೀತಿ ಬದಲಾವಣೆ ಆಗೊಲ್ಲ. ಹಳ್ಳಿ ಸೊಗಡು ಹೋಗಲು ಸಾಧ್ಯ ಇಲ್ಲ. 65 ವರ್ಷಗಳಿಂದ ಅದು ನನ್ನಲ್ಲಿ 'ಬಿಲ್ಟ್ ಅಪ್‌' ಆಗಿದೆ. ಸುಲಭವಾಗಿ ಹೋಗಲ್ಲ. ರಾಜ್ಯದಲ್ಲಿ ಬದಲಾವಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಈವರೆಗೆ ಹೇಗೆ ಇದ್ದೆನೋ ಸಿಎಂ ಆದ ಮೇಲೂ ಹಾಗೆಯೇ ಇರುತ್ತೇನೆ. ಅಧಿಕಾರ ಶಾಶ್ವತ ಅಲ್ಲ. ಪ್ರತಿಯೊಬ್ಬ ರಾಜಕಾರಣಿಯೂ ಇದನ್ನು ಅರ್ಥ ಮಾಡಿಕೊಳ್ಳಬೇಕು. ಜನ ಪರ ಅಧಿಕಾರ ಚಲಾಯಿಸಬೇಕು. ಆಗ ಹೆಸರು ಬರುತ್ತದೆ. ಸಮಾಜದಲ್ಲಿ ಸೌಲಭ್ಯ ವಂಚಿತರಾಗಿರುವವರ ಪರವಾಗಿ ಕೆಲಸ ಮಾಡಬೇಕು.

ಅರ್ಹರು ಸಾಕಷ್ಟಿದ್ದಾರೆ:
ಮಂತ್ರಿಮಂಡಲಕ್ಕೆ ಸೇರಿಕೊಳ್ಳಲು ಅರ್ಹತೆ ಇರುವ ಬಹಳ ಜನ ಇದ್ದಾರೆ. ನಾಯಕತ್ವದ ಗುಣ ಇರುವವರಿದ್ದಾರೆ. ಇದು ದೊಡ್ಡ ಸಮಸ್ಯೆಯೂ ಹೌದು. ಎಲ್ಲರಿಗೂ ಸಮಾಧಾನಪಡಿಸೊದು ಕಷ್ಟ. ಇರೋದು 33 ಅಷ್ಟೇ. ಕನಿಷ್ಠ 50ರಿಂದ 60 ಜನರು ಅರ್ಹತೆ ಇರೋರೇ ಇದ್ದಾರೆ. ಹೈಕಮಾಂಡ್ ಒಪ್ಪಿಗೆ ಪಡೆದು ಸಮತೋಲನ ಕಾಪಾಡಿಕೊಳ್ಳುವ ಸಚಿವ ಸಂಪುಟ ರಚಿಸುತ್ತೇನೆ. ಕಾರಣ ಹಾಗೂ ಜಾತಿಯನ್ನು ನೋಡಿಕೊಂಡು ಆಯ್ಕೆ ಮಾಡಬೇಕಾಗುತ್ತದೆ. ಒಂದು ಕೆಜಿಗೆ ಒಂದು ರುಪಾಯಿಯಂತೆ 30 ಕೆಜಿ ಅಕ್ಕಿ ನೀಡಲು ಬಜೆಟ್‌ಗೇ ಕಾಯಬೇಕಿಲ್ಲ. ಜೂನ್ ಒಂದರಿಂದಲೇ ಇದು ಲಭ್ಯ. ಹಾಲು ಉತ್ಪಾದಕರು ಪ್ರತಿ ಲೀಟರ್ 4 ರುಪಾಯಿ ಪ್ರೋತ್ಸಾಹ ಧನ ಪಡೆಯಲೂ ಬಜೆಟ್ ಬೇಕಾಗಿಲ್ಲ. ಪರಿಶಿಷ್ಟ ಜಾತಿ ಮತ್ತು ಪಂಗಡ, ಅಲ್ಪಸಂಖ್ಯಾತರು ಪಡೆದಿರುವ ಸಾಲ ಮನ್ನಾ ಮಾಡಲಾಗಿದೆ. ಮನೆ ಕಟ್ಟಿಕೊಳ್ಳಲು ನೀಡಲಾಗುತ್ತಿದ್ದ 75 ಸಾವಿರ ರುಪಾಯಿಯನ್ನು 1.25 ಲಕ್ಷ ರುಪಾಯಿಗೆ ಹೆಚ್ಚಿಸಲಾಗಿದೆ.
ಕೇಂದ್ರದ ಇಂದಿರಾ ಆವಾಜ್ ಜತೆಗೆ ಈ ಯೋಜನೆ ಇರುವುದರಿಂದ 45 ಸಾವಿರ ಮಾತ್ರ ರಾಜ್ಯ ಸರ್ಕಾರ ಪಾವತಿಸಬೇಕು. ಇದರಿಂದ 1960 ಕೋಟಿ ಹೆಚ್ಚು ಹೊರೆಯಾಗಲಿದೆ. ನಮ್ಮ ಕೃತಿಗಳಲ್ಲಿ, ಆಚರಣೆಯಲ್ಲಿ ಪ್ರಾಮಾಣಿಕರಾಗಿದ್ದರೆ ಬದಲಾವಣೆಗೆ ಕಾರಣವಾಗುತ್ತದೆ. ನಾನು ಪ್ರಾಮಾಣಿಕನಾಗಿದ್ದರೆ ಅಧಿಕಾರಿಗಳೂ ಪ್ರಾಮಾಣಿಕರಾಗಿರುತ್ತಾರೆ. ನಾನು ದುಡ್ಡು ತಗೊಂಡ್ರೆ, ಅವರೂ ತಗೊತಾರೆ.
ಆರ್ಥಿಕ ಶಿಸ್ತು ಇರಲೇಬೇಕು. ಇಲ್ಲದಿದ್ದರೆ ನಾವು ಅಂದುಕೊಂಡ ಯೋಜನೆಗಳು ಜಾರಿ ಆಗೊಲ್ಲ. ಫಲಾನುಭವಿಗಳಿಗೆ ಸೌಲಭ್ಯ ತಲುಪುವುದಿಲ್ಲ. ಇಂದು ನಾನು ಮಾಡಿರುವ ಪ್ರಕಟಣೆಗಳು ನೇರವಾಗಿ ಫಲಾನುಭವಿಗಳಿಗೇ ತಲುಪುತ್ತದೆ. ಹೈಕಮಾಂಡ್ ಕೇಳದೆ ಈ ಪ್ರಕಟಣೆಗಳನ್ನು ಮಾಡಿದ್ದೇನೆ ಎಂಬುದಕ್ಕೆ ಅವರೇನೂ ತಪ್ಪು ತಿಳಿಯುವುದಿಲ್ಲ. ಇದನ್ನೆಲ್ಲ ಅವರು ಮೆಚ್ಚುತ್ತಾರೆ ಎಂದೇ ಭಾವಿಸುತ್ತೇನೆ. ಪಕ್ಷಕ್ಕೆ ಹಾನಿ ಮಾಡಿದರೆ, ಭ್ರಷ್ಟಾಚಾರ ಮಾಡಿದರೆ ಅವರು ಕೇಳಬಹುದು. ಬಡವರ ಪರ ಕೆಲಸ ಮಾಡಿದರೆ ಅವರು ಉತ್ತೇಜನವನ್ನೇ ನೀಡುತ್ತಾರೆ.

ಕೃಷಿ ಭೂಮಿ ಸ್ವಾಧೀನ ಸರಿಯಲ್ಲ:
ಕೃಷಿಗೆ ಯೋಗ್ಯವಾದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಸರಿ ಅಲ್ಲ. ಇದರಿಂದ ಆಹಾರ ಉತ್ಪಾದನೆ ತೊಂದರೆಯಾಗುತ್ತದೆ. ಸಿಕ್ಕಸಿಕ್ಕ ಕಡೆಯಲ್ಲ ಭೂಮಿ ಸ್ವಾಧೀನ ಮಾಡಬಾರದು. ಅಗತ್ಯವಿದ್ದರೆ ಮಾತ್ರ ಸ್ವಾಧೀನವಾಗಬೇಕು. ಭೂಮಿ ಡಿನೋಟಿಫಿಕೇಷನ್ ಹಾಗೂ ಸ್ವಾಧೀನದಲ್ಲಿ ಪಾರದರ್ಶಕತೆ ಇರಬೇಕು. ಇಲ್ಲದಿದ್ದರೆ ಲಂಚ ಯದ್ವಾತದ್ವಾ ನಡೆಯುತ್ತದೆ.
ವಿದ್ಯುತ್ ಕೊರತೆ ತತ್‌ಕ್ಷಣ ನೀಗಲ್ಲ. ರಾಜ್ಯದಲ್ಲಿ ಶೇ.30ರಷ್ಟು ವಿದ್ಯುತ್ ಕೊರತೆ ಇದೆ. ಕಳೆದ ಐದು ವರ್ಷಗಳಿಂದ ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗಿಲ್ಲ. ಹೊರ ರಾಜ್ಯದಿಂದ ವಿದ್ಯುತ್ ಖರೀದಿಸಿ ತರಲಾಗಿದೆ. ಕಾರಿಡಾರ್ ಸಮಸ್ಯೆ ಇರುವುದರಿಂದ ವ್ಯವಸ್ಥೆಯಲ್ಲಿ ಸುಧಾರಣೆ ಆಗಬೇಕಿದೆ. ಗುಣಮಟ್ಟದ ವಿದ್ಯುತ್ ನೀಡಬೇಕಿದೆ. ರೈತರಿಗೆ ಆರು ಗಂಟೆ ಥ್ರೀಫೇಸ್ ವಿದ್ಯುತ್ ನೀಡುತ್ತೇವೆ ಎಂದು ಹೇಳಿದ್ದರು. ಆದರೆ ಮೂರು ಗಂಟೆ ಮಾತ್ರ ಸಿಗುತ್ತಿದೆ. ಕನಿಷ್ಠ 6ರಿಂದ 8 ಗಂಟೆ ಥ್ರೀ ಫೇಸ್ ವಿದ್ಯುತ್ ಅವರಿಗೆ ಸಿಗಬೇಕು. ಹಗಲಿನ ವೇಳೆ 5ರಿಂದ 6 ಗಂಟೆ ವಿದ್ಯುತ್ ಸಿಕ್ಕರೆ ಕುಡಿಯುವ ನೀರಿನ ಸಮಸ್ಯೆಯೂ ನಿವಾರಣೆಯಾಗುತ್ತದೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಧರ್ಮಸ್ಥಳದ ಧರ್ಮಾಧಿಕಾರಿಗಳು 25 ವರ್ಷದಿಂದ ಗ್ರಾಮೀಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಕೃಷಿಕರಿಗೆ ಉತ್ಪಾದನೆ ವೆಚ್ಚಕ್ಕಿಂತ ಹೆಚ್ಚಿನ ಹಣ ಸಿಗಬೇಕು ಎಂಬುದೇ ಆಶಯ. ರೈತರು-ಪರಿಣಿತರನ್ನು ಸೇರಿಸಿ ಒಂದು ಕೃಷಿ ಆಯೋಗ ರಚಿಸಲಾಗುತ್ತದೆ. ಖರ್ಚಿಗಿಂತ ಹೆಚ್ಚಿನ ಹಣ ಸಿಗಬೇಕು. ಉದಾಹರಣೆಗೆ ಟೊಮ್ಯಾಟೊ ಮಾರಾಟದಲ್ಲಿ ತೊಂದರೆಯಾಗುತ್ತಿದೆ. ಅವರಿಗೆ ಶೀಥಲ ಘಟಕದ ಅಗತ್ಯವಿದೆ. ರೈತರ ಆರ್ಥಿಕ ಸ್ಥಿತಿ ಬಗ್ಗೆಯೂ ಗಮನಕೊಡಬೇಕಾಗಿದೆ.
ರಾಜ್ಯದಲ್ಲಿ ಪ್ರತಿನಿತ್ಯ 50 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಸಹಕಾರಿ ಸಂಘಗಳು ಹೆಚ್ಚಿನ ಕಾರ್ಯ ನಿರ್ವಹಿಸಬೇಕು. ಕೆಎಂಎಫ್‌ನಲ್ಲಿರುವ ರಾಜಕಾರಣ ಎಲ್ಲವನ್ನೂ ಹಾಳು ಮಾಡುತ್ತಿದೆ. ಪ್ರತಿ ನಿತ್ಯ 20 ಲಕ್ಷ ಲೀಟರ್ ಹಾಲು ಪೌಡರ್ ಆಗಬೇಕಿದೆ. ಇದಕ್ಕೆಲ್ಲ ಕ್ರಮವಾಗುತ್ತದೆ. ಮೋಟಮ್ಮ ಅವರು ಸಚಿವರಾಗಿದ್ದಾಗ ಮಹಿಳಾ ಸ್ವಸಹಾಯ ಸಂಘಗಳನ್ನು ರಚಿಸಿದ್ದರು. ಅವುಗಳಿಗೆ ಇದೀಗ ಪುನಶ್ಚೇತನದ ಅಗತ್ಯ ಇದೆ. ಮಹಿಳೆಯರಿಗೆ ಸಮಾನ ಅವಕಾಶ ನೀಡಬೇಕಾಗಿದೆ. ರಾಜಕಾರಣದಲ್ಲೂ ಅವರಿಗೆ ಸಮಾನ ಮೀಸಲಿನ ಅಗತ್ಯ ಇದೆ. ಸ್ಥಳೀಯ ಸಂಸ್ಥೆಗಳಲ್ಲಿರುವ ಮೀಸಲಿನಂತೆ ಎಂಎಲ್‌ಎ- ಎಂಪಿಯಲ್ಲೂ ಅವ ರಿಗೆ ಮೀಸಲು ಬರಬೇಕು. ಲೋಕಸಭೆಯಲ್ಲಿ ವಿಧೇಯಕ ಅನುಮೋದನೆಯಾಗಬೇಕು.

ನೀರಾವರಿಯತ್ತ ಗಮನ:
ಅವಕಾಶ ವಂಚಿತರ ಪರವಾಗಿಯೇ ಮಾತನಾಡಿದರೆ ಬ್ರ್ಯಾಂಡ್ ಮಾಡುತ್ತಾರೆ. ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕು. ಮುಂದುವರಿದವರು- ಹಿಂದುಳಿದವರನ್ನು ಸಮಾನಾಗಿ ನೋಡಬೇಕು. ಸಾಮಾಜಿಕ ನ್ಯಾಯ ವಂಚಿತರಿಗೆ ಅನ್ಯಾಯ ಆಗಬಾರದು. ಅವರಿಗೆ ಕಾರ್ಯಕ್ರಮಗಳನ್ನು ರೂಪಿಸಬೇಕು.  ರಾಜ್ಯದಲ್ಲಿ ನೀರಾವರಿಗೆ ಬಗ್ಗೆ ಹೆಚ್ಚಿನ ಗಮನ ನೀಡಬೇಕಿದೆ. ರಾಜ್ಯದಲ್ಲಿ ಸುಮಾರು 3500 ಕೆರೆಗಳಿವೆ. ಕೆರೆಗಳು, ನಾಲೆಗಳು ಹೂಳಿನಿಂದ ತುಂಬಿಹೋಗಿವೆ. ಅವಗಳನ್ನೆಲ್ಲ ಪುನಶ್ಚೇತನಗೊಳಿಸಿ ನೀರು ತುಂಬಿಸುವ ಕಾರ್ಯ ಮಾಡಬೇಕು. ಇದರಿಂದ ಅಂತರ್ಜಲ ಮೇಲೇರುತ್ತದೆ. ಇದಕ್ಕೆಲ್ಲ ಕೆರೆ ಅಭಿವೃದ್ಧಿ ಪ್ರಾಧಿಕಾರ ಕಾರ್ಯನಿರ್ವಹಿಸಬೇಕಿದೆ.
ಆಡಳಿತದಲ್ಲಿ ಕನ್ನಡ ಇರಬೇಕು ಎಂಬುದೇ ನನ್ನ ಆಶಯ. ಕನ್ನಡ ಕಾವಲು ಸಮಿತಿಯ ಪ್ರಥಮ ಅಧ್ಯಕ್ಷ ನಾನು. ರಾಮಕೃಷ್ಣ ಹೆಗಡೆ ಅವರು ನನ್ನನ್ನು ಅಧ್ಯಕ್ಷನನ್ನಾಗಿ ಮಾಡಿದ್ದರು. ಆಡಳಿತದಲ್ಲಿ ಮೇಲಿರುವವರು ಕನ್ನಡ ಬಳಸಬೇಕು. ಕೆಳಹಂತದಲ್ಲಿರುವವರು ಕನ್ನಡವನ್ನೇ ಬಳಸುತ್ತಾರೆ. ಪ್ರಧಾನ ಕಾರ್ಯದರ್ಶಿಯವರಿಂದ ಮಂತ್ರಿಗಳು ಇದನ್ನು ಅನುಸರಿಸಬೇಕು. ಎಲ್ಲರೊಂದಿಗೆ ಚರ್ಚೆ ನಡೆಸಿ ಕನ್ನಡ ಅನುಷ್ಠಾನಗೊಳಿಸಲಾಗುತ್ತದೆ. ಗ್ರಾಮಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಗಳಿಗೆ ಅನುದಾನ ಸಾಕಾಗುತ್ತಿಲ್ಲ. ಈ ವ್ಯವಸ್ಥೆಯಲ್ಲಿ ನೀಡಲಾಗುತ್ತಿರುವ ಹಣ ಉಪಯೋಗಕ್ಕೆ ಸಾಲುವುದಿಲ್ಲ. ಈ ಬಗ್ಗೆ ಕಾನೂನಿಗೆ ತಿದ್ದುಪಡಿ ತಂದು ವ್ಯವಸ್ಥೆ ಬಲಪಡಿಸಬೇಕಾದ ಅಗತ್ಯ ಇದೆ. 73- 74ನೇ ತಿದ್ದುಪಡಿ ಬಗ್ಗೆ ಆಲೋಚಿಸಲಾಗುತ್ತಿದೆ. ಏನು ಸಾಧ್ಯವಿದೆಯೋ ಅದನ್ನೆಲ್ಲ ಮಾಡಲಾಗುತ್ತದೆ. ಕಾವೇರಿ ನದಿ ನೀರಿನ ವಿಚಾರ ಸುಪ್ರೀಂ ಕೋರ್ಟ್ ಮತ್ತು ನ್ಯಾಯಾಧಿಕರಣದ ಮುಂದಿದೆ. ಅಂತಿಮ ತೀರ್ಪು ಪ್ರಶ್ನಿಸಿರುವ ಅರ್ಜಿ ಸುಪ್ರೀಂ ಕೋರ್ಟ್ ಮುಂದಿದ್ದು, ಪುನರ್‌ವಿಮರ್ಶೆ ಅರ್ಜಿ ನ್ಯಾಯಾಧಿಕರಣ ಮುಂದಿದೆ. ಈ ಬಗ್ಗೆ ಚರ್ಚೆಗೆ ಸಾಧ್ಯ ಇದೆಯೋ ಇಲ್ಲವೋ ಗೊತ್ತಿಲ್ಲ. ತಮಿಳುನಾಡಿಗೆ ಉಪಯೋಗವಾಗಿದ್ದು, ರಾಜ್ಯಕ್ಕೆ ಅನ್ಯಾಯವಾಗಿದೆ. ತಮಿಳುನಾಡಿನವರು ಮಾತುಕತೆಗೆ ಬರುತ್ತಾರೋ ಇಲ್ಲವೋ ಗೊತ್ತಿಲ್ಲ. ಕಾನೂನು ಹಾಗೂ ನೀರಾವರಿ ತಜ್ಞರ ಸಲಹೆ ಪಡೆದುಕೊಂಡು ರಾಜ್ಯಕ್ಕೆ ಅನ್ಯಾಯವಾಗದಂತೆ ಕಾರ್ಯನಿರ್ವಹಿಸಲಾಗುತ್ತದೆ. ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ 7 ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ ಜಾರಿ ಮಾಡಲು ಪ್ರಕ್ರಿಯೆ ಪ್ರಾರಂಭವಾಗಿದೆ. ಅದನ್ನು ಕಾರ್ಯಗತ ಮಾಡಲಾಗುತ್ತದೆ. ಕ್ರೀಡಾ ಕೋಟಾದಡಿ ಉದ್ಯೋಗ ನೀಡುವ ವ್ಯವಸ್ಥೆ ಮರು ಜಾರಿಗೆ ಪ್ರಯತ್ನಿಸಲಾಗುತ್ತದೆ. ಕೃಷ್ಣಾ ನದಿ ಯೋಜನೆಗಳನ್ನು ಮುಗಿಸಿ ರೈತರಿಗೆ ನೀರು ಒದಗಿಸಲಾಗುತ್ತದೆ. ಪ್ರತಿ ವರ್ಷ ನೀರಾವರಿಗೇ ಹತ್ತು ಸಾವಿರ ಕೋಟಿ ವೆಚ್ಚ ಮಾಡಲಾಗುತ್ತದೆ. ವಿದ್ಯುತ್ ಉತ್ಪಾದನೆಗೆ ಕ್ರಮ ಕೈಗೊಳ್ಳಲಾಗುತ್ತದೆ. ರಾಯಚೂರಿನ ಆರೂ ಘಟಕಗಳು ಒಟ್ಟಿಗೆ ಕೆಲಸ ಮಾಡಿಲ್ಲ. ಎಲ್ಲದ್ದಕ್ಕೂ ಚಿಕಿತ್ಸೆ ನೀಡಲಾಗುತ್ತದೆ.

ಆಸ್ತಿಕನೂ ಅಲ್ಲ, ನಾಸ್ತಿಕನೂ ಅಲ್ಲ
ನಾನು ಆಸ್ತಿಕನೂ ಅಲ್ಲ, ನಾಸ್ತಿಕನೂ ಅಲ್ಲ. ದೇವಸ್ಥಾನಕ್ಕೆ ಹೋಗುತ್ತೇನೆ. ಆದರೆ ಅಂಧಶ್ರದ್ಧೆ ಇಲ್ಲ. ಮಹದೇಶ್ವರ ಬೆಟ್ಟಕ್ಕೆ ಹೋಗಿ ಬಹಳ ವರ್ಷ ಆದವು. ಮೊನ್ನೆ ಚಾಮುಂಡೇಶ್ವರಿ ಬೆಟ್ಟಕ್ಕೆ ಹೋಗಿ ಪೂಜೆ ಸಲ್ಲಿಸಿ ಬಂದೆ. ಇನ್ನೊಬ್ಬರಿಗೆ ಕೆಟ್ಟದ್ದು ಬಯಸದಿದ್ದರೆ ದೇವರು ನಮಗೆ ಒಳ್ಳೆಯದ್ದನ್ನು ಮಾಡುತ್ತಾನೆ ಎಂದು ನಾನು ನಂಬಿದ್ದೇನೆ. ನನ್ನ ಹೆಂಡತಿಗೆ ನಾಚಿಕೆ ಸ್ವಭಾವ. ಪ್ರಾರಂಭದಿಂದಲೂ ಇದು ಹೀಗೆಯೇ. ಯಾವುದೇ ಸಭೆ-ಸಮಾರಂಭಕ್ಕೆ ಬರುವುದಿಲ್ಲ. ನನ್ನ ಹೆಂಡತಿ ಅಥವಾ ಮಕ್ಕಳು ನನ್ನ ಅಧಿಕಾರದಲ್ಲಿ ಮಧ್ಯಸ್ಥಿಕೆ ವಹಿಸುವುದಿಲ್ಲ. ಅಣ್ಣ- ತಮ್ಮಂದಿರೂ ನನ್ನ ನಿರ್ಧಾರವನ್ನು ಕೇಳೋದಿಲ್ಲ, ಬರೋದಿಲ್ಲ.

ಲೋಕಾಯುಕ್ತಕ್ಕೆ ಪರಮಾಧಿಕಾರ, ಪರಿಶೀಲನೆ
ಲೋಕಾಯುಕ್ತಕ್ಕೆ ಪರಮಾಧಿಕಾರ ನೀಡುವ ಬಗ್ಗೆ ಚಿಂತನೆ ನಡೆಸಲಾಗುತ್ತದೆ. ಆಡಳಿತ ಪಕ್ಷದ ಶಾಸಕರಾಗಲಿ, ಪ್ರತಿಪಕ್ಷದ ಶಾಸಕರಾಗಲಿ ಯಾರು ಮಾಡಿದರೂ ತಪ್ಪು ತಪ್ಪೇ. ನಮ್ಮವರು ಮಾಡಿದರೆ ಅದು ತಪ್ಪಾಗುವುದಿಲ್ಲ ಎಂದೇನೂ ಇಲ್ಲ. ಗಣಿ ಹಗರಣದ ಬಗ್ಗೆ ಲೋಕಾಯುಕ್ತ ವರದಿ ಪರಿಶೀಲನೆ ಮಾಡುತ್ತೇನೆ. ನಮ್ಮ ಪಕ್ಷದವರ ಮೇಲೆ ಆರೋಪ ನೇರವಾಗಿದೆಯೋ ಪರೋಕ್ಷವಾಗಿದೆಯೋ ನೋಡುತ್ತೇನೆ. ಲೋಕಾಯುಕ್ತ, ಸಿಬಿಐ ವರದಿ ಪರಿಶೀಲಿಸಿ ಮುಂದಿನ 'ಆಕ್ಷನ್‌' ತಗೊತೀನಿ.

ಖರ್ಗೆಗೆ ಬೇಸರ ಇಲ್ಲ
ಕಾಂಗ್ರೆಸ್‌ನಲ್ಲಿ ಬೇರೆಯವರಿಗೆ ಸಿಕ್ಕದ ಅವಕಾಶ ನನಗೆ ಸಿಕ್ಕಿದೆ. ಅವರಿಗೆ ಸಿಕ್ಕಿಲ್ಲ ಎಂಬ ಮಾತಿದೆ. ಆದರೆ ಹೈಕಮಾಂಡ್ ಇದನ್ನು ನೀಡಿದೆ. ಮಲ್ಲಿಕಾರ್ಜುನ ಖರ್ಗೆ ಕೇಂದ್ರದಲ್ಲಿ ಮಂತ್ರಿಯಾಗಿದ್ದಾರೆ. ಇಲ್ಲಿ ಶಾಸಕಾಂಗ ಪಕ್ಷದಲ್ಲಿ ಇರುವವರೇ ಸಿಎಂ ಆಗಬೇಕು ಎಂಬ ಒಲವು ವ್ಯಕ್ತವಾಯಿತು. ಹೀಗಾಗಿ ದೊಡ್ಡ ಸಮಸ್ಯೆ ಆಗಲಿಲ್ಲ. ಮಲ್ಲಿಕಾರ್ಜುನ ಖರ್ಗೆ ಹಾಗೂ ಪರಮೇಶ್ವರ್ ಅವರಿಗೆ ಬೇಸರ ಇಲ್ಲ. ಅವರು ನನ್ನೊಂದಿಗೆ ಸಂತಸವಾಗಿದ್ದಾರೆ. ಅವರೆಲ್ಲ ಸೇರಿಕೊಂಡೇ ತೀರ್ಮಾನ ಮಾಡಿದ್ದಾರೆ. ಕೆಲವರಿಗೆ ತಪ್ಪು ಮಾಹಿತಿ ಇದೆ. ಅವರಿಗೆ ಸೂಕ್ತ ಮಾಹಿತಿ ಸಿಕ್ಕ ನಂತರ ಎಲ್ಲವೂ ಸರಿಹೋಗುತ್ತದೆ. ಖರ್ಗೆ, ಪರಮೇಶ್ವರ್ 'ಹ್ಯಾಪಿ ವಿಥ್ ಮಿ'.

ಸಿಎಂ ಎಂದು ಅನಿಸುತ್ತಿಲ್ಲ
ಸಿದ್ದರಾಮಯ್ಯ ಅವರು ಸುವರ್ಣ ಸ್ಟುಡಿಯೋಗೆ ಬರುತ್ತಿದ್ದಂತೆ ಅವರನ್ನು ನೋಡಿ ವಿಶೇಷ ವರದಿಗಾರರಾದ ವಿಜಯಲಕ್ಷ್ಮಿ ಮುಗುಳ್ನಕ್ಕರು. 'ಯಾಕಮ್ಮಾ ನನ್ನನ್ನು ನೋಡಿ ನಗ್ತಾ ಇದ್ದೀಯ. ನಾನು ಸಿಎಂ ಅಂತ ನಿನಗೆ ಅನಿಸುತ್ತಿಲ್ಲವೇ? ನನಗೂ ಅಷ್ಟೇ. ಮುಖ್ಯಮಂತ್ರಿಯಾಗಿದ್ದೇನೆ ಎಂದು ಅನಿಸುತ್ತಿಲ್ಲ' ಎಂದರು ಸಿದ್ದರಾಮಯ್ಯ.

ದೇವೇಗೌಡರು ಸಿಎಂ ಮಾಡಬಹುದಿತ್ತು
ನಾನು ಎರಡು ಬಾರಿ ಸಿಎಂ ಆಗಬಹುದಿತ್ತು. ಒಂದು ಬಾರಿ 1996ರಲ್ಲಿ ಆಗಬಹುದಿತ್ತು. ರಾಮಕೃಷ್ಣ ಹೆಗಡೆ, ಎಸ್.ಆರ್. ಬೊಮ್ಮಾಯಿ, ದೇವೇಗೌಡ ಎಲ್ಲರೂ ಸೇರಿಕೊಂಡು ಅಂದು ಜೆ.ಎಚ್. ಪಟೇಲ್ ಅವರನ್ನು ಮುಖ್ಯಮಂತ್ರಿ ಮಾಡಿದರು. ಆಗ ನಾನು ಉಪಮುಖ್ಯಮಂತ್ರಿಯಾದೆ. ಮತ್ತೆ 2004ರಲ್ಲಿ ಎಚ್.ಡಿ. ದೇವೇಗೌಡರು ಮನಸ್ಸು ಮಾಡಿದ್ದರೆ ನನ್ನನ್ನು ಸಿಎಂ ಮಾಡಬಹುದಿತ್ತು.
ಕಾಂಗ್ರೆಸ್‌ನವರಿಗೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಬೇಕು ಎಂದು ದೇವೇಗೌಡರು ಹೇಳಿದ್ದರೆ ಅದು ಸಾಧ್ಯವಾಗುತ್ತಿತ್ತು. ಆದರೆ ಹೇಳಲಿಲ್ಲ. ಆಗ ಮತ್ತೆ ಉಪಮುಖ್ಯಮಂತ್ರಿಯಾದೆ. ಈ ಬಾರಿ ಸೋನಿಯಾಗಾಂಧಿ ಅವಕಾಶ ನೀಡಿದ್ದಾರೆ. ಸಾಕಷ್ಟು ಅವಕಾಶಗಳು ಬರುತ್ತವೆ, ಪಕ್ಷ ಕಟ್ಟಿ ಎಂದು ಹೇಳಿದ್ದರು. ಬಿಜೆಪಿ ರಾಜ್ಯವನ್ನು ಹಾಳು ಮಾಡಿದ್ದಾರೆ. ಜನರಿಗೆ ಅವರಲ್ಲಿ ವಿಶ್ವಾಸ ಇಲ್ಲ. ಕೋಮುವಾದ ಬಿತ್ತುತ್ತಿದ್ದಾರೆ. ಕಾಂಗ್ರೆಸ್ ಅನ್ನು ಮತ್ತೆ ಅಧಿಕಾರಕ್ಕೆ ತನ್ನಿ ಎಂದಿದ್ದರು. ಅದಕ್ಕೇ ಈಗ ಸಿಎಂ ಆಗಿದ್ದೇನೆ.

 ನೇರ 5ನೇ ಕ್ಲಾಸಿಗೆ ಸೇರಿದ್ದೆ
ನಾನು ಪ್ರಾಥಮಿಕ ಶಾಲೆಗೆ ಹೋಗೇ ಇಲ್ಲ, ನೇರವಾಗಿ 5ನೇ ಕ್ಲಾಸ್‌ಗೆ ಸೇರಿಕೊಂಡೆ. ಆಗ ಕನ್ನಡ ಸರಿಯಾಗಿ ಓದಲು, ಬರೆಯಲು ಬರುತ್ತಿದ್ದರೆ ಇದು ಸಾಧ್ಯ ಇತ್ತು. ನಮ್ಮ ಊರಲ್ಲಿ ದೇವರ ಒಕ್ಕಲು ಎಂದಿತ್ತು. ಅದು ಸಿದ್ದರಾಮೇಶ್ವರನ ಒಕ್ಕಲು. ಪ್ರತಿಯೊಂದು ಮನೆಯಿಂದ ಒಬ್ಬರು ವೀರ ಮಕ್ಕಳು ಇರಬೇಕಿತ್ತು. ಅವರಿಗೆ ಡ್ಯಾನ್ಸ್ ಕಲಿಸಲಾಗುತ್ತಿತ್ತು. ನಂಜೇಗೌಡ ಎಂಬುವ ನನಗೆ ನೃತ್ಯ ಕಲಿಸಿದ. ಅವನು ಕೇವಲ ಡ್ಯಾನ್ಸ್ ಕಲಿಸುತ್ತಿರಲಿಲ್ಲ. ಮರಳಿನಲ್ಲಿ ಕಲಿಕೆಯನ್ನೂ ಮಾಡಿಸುತ್ತಿದ್ದ. ಎರಡು- ಎರಡೂವರೆ ವರ್ಷ ಕುಣಿತ- ಕಲಿತ ಕಲಿತೆ. ಅಲ್ಲಿಂದ ನೇರವಾಗಿ 5ನೇ ಕ್ಲಾಸ್‌ಗೆ ಸೇರಿಕೊಂಡೆ.

ಚುನಾವಣೆಗೆ ನಿಲ್ಲೋಲ್ಲ
ಇಲ್ಲ, ಯಾರು ಹೇಳಿದರು ಇನ್ನು ನಾನು ಚುನಾವಣೆಗೆ ನಿಲ್ಲೊಲ್ಲ. ಇದೇ ನನ್ನ ಕೊನೆಯ ಚುನಾವಣೆ. ನನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಚುನಾವಣೆ ವ್ಯವಸ್ಥೆ ಕೆಟ್ಟುಹೋಗಿದೆ. ಹಣದ ಪ್ರಭಾವ, ಜಾತಿ ಪ್ರಭಾವ ಹೆಚ್ಚಾಗಿ ಹೋಗಿದೆ. ಇದನ್ನೆಲ್ಲ ನಿಭಾಯಿಸೋದು ಬಹಳ ಕಷ್ಟ. ನಾನು ಮಾನಸಿಕವಾಗಿ ಈಗಾಗಲೇ ಸಿದ್ಧವಾಗಿದ್ದೇನೆ. ಯಾರು ಏನೇ ಹೇಳಿದರು, ಎಷ್ಟೇ ಒತ್ತಡ ಹಾಕಿದರೂ ಚುನಾವಣೆಗೆ ನಿಲ್ಲೊಲ್ಲ. ಆದರೆ ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ.

ಸಿಂಹಾಸನ ಏರಿದ ಕನಸು

ನನ್ನ ಅಜ್ಜಿಗೆ ನಾನು ಸಿಂಹಾಸನ ಏರಿದ ಕನಸು ಬಿದ್ದಿತ್ತಂತೆ. ಆ ಕನಸು ಕಂಡ ಮೇಲೆ ನೀನೇನಾದ್ರು ಆಗುತ್ತೀಯಾ ಎಂದು ನನಗೆ ಹೇಳಿದ್ದರು. ನನ್ನ ತಂದೆ ನೀನು ಚುನಾವಣೆಗೆ ನಿಲ್ಲೊದಾದ್ರೇ ಮನೆಗೇ ಬರೊದು ಬೇಡ ಅಂದಿದ್ರು. ನಾನು ತಾಲೂಕು ಪಂಚಾಯಿತಿ ಚುನಾವಣೆಗೆ ನಿಲ್ಲುತ್ತೇನೆ ಎಂದಿದ್ದೆ. ಈ ಬಗ್ಗೆ ನಾನು ತಂದೆ ಹತ್ತಿರ ಸಾಕಷ್ಟು ಮಾತನಾಡಿದ್ದೆ. ಬೇಡ ಅಂದ್ರು. ಕೊನೆಗೆ ಊರ ಯಜಮಾನರೆಲ್ಲ ನನ್ನ ತಂದೆ ಮನವೊಲಿಸಿದ್ರು. ನನ್ನ ತಂದೆ ಪಂಚಾಯಿತಿ ಚುನಾವಣೆಗೆ ನಿಂತು, ಸೋತಿದ್ರು. ಚುನಾವಣೆಯಲ್ಲಿ ಜನ ಸೋಲಿಸ್ತಾರೆ ಎನ್ನೋ ಭಯದಿಂದ ನನ್ನ ತಂದೆ ಚುನಾವಣೆಗೆ ನಿಲ್ಲಬೇಡ ಎಂದಿದ್ರು.

ಸಾಯ್ತೀನಿ ಅಂತ ಸಿಗರೇಟ್ ಬಿಟ್ಟೆ
ಹೌದು, ನಾನು ಚೈನ್ ಸ್ಮೋಕರ್. ತುಂಬಾ ಸಿಗರೇಟ್ ಸೇದುತ್ತಿದ್ದೆ. 1987ರ ಆಗಸ್ಟ್‌ವರೆಗೆ ಸಿಗರೇಟ್ ಸೇದುತ್ತಿದ್ದೆ. ನನ್ನ ಸ್ನೇಹಿತರು ನನಗೆ ಇಸ್ರೇಲ್‌ನಿಂದ ಒಂದು  ಬಾಕ್ಸ್ ಸಿಗರೇಟ್ ತಂದುಕೊಟ್ಟರು. ಅಷ್ಟೂ ಸಿಗರೇಟ್ ಸೇದಿದೆ. ಕೊನೆಯ ಪ್ಯಾಕ್ ಸಿಗರೇಟ್ ಸೇದುತ್ತಿದ್ದಾಗ, ಇಷ್ಟೊಂದು ಸಿಗರೇಟು ಸೇದಿದ್ದೇನೆ, ಏನಾದ್ರೂ ಅಪಾಯ ಆಗುತ್ತಾ ಎಂದುಕೊಂಡು, ಸಾಯ್ತೀನಾ ಎಂಬ ಭಯದಿಂದ ಮರುದಿನದಿಂದ ಸಿಗರೇಟ್ ಬಿಟ್ಟುಬಿಟ್ಟೆ.

ಸಾಲ ಇಟ್ಟಿದ್ದೆ
ಒಬ್ಬರು ವಯಸ್ಸಾದವವರು ಕಡ್ಲೆಕಾಯಿ- ಸಿಗರೇಟ್ ಮಾರುತ್ತಿದ್ದರು. ಏಳೆಂಟು ವರ್ಷ ಆಕೆಯಿಂದ ಸಿಗರೇಟ್ ತೆಗೆದುಕೊಳ್ಳುತ್ತಿದ್ದೆ. ಲೆಕ್ಕ ಬರೆಸೋದು ಸಹಜ. ಕೊನೆಗೆ ಎಷ್ಟೋ ಬಾಕಿ ಉಳಿದಿತ್ತು 83ರಲ್ಲಿ ಶಾಸಕನಾದ ಮೇಲೆ ಬಡ್ಡಿ ಸೇರಿಸಿ ಬಾಕಿ ತೀರಿಸಿದೆ.
ಸಿನಿಮಾ ಸಾಕಷ್ಟು ನೋಡ್ತಿದ್ದೆ. ನನ್ನ ಕಾಲದಲ್ಲಿ ಇದ್ದೋರೆ ಕಡಿಮೆ. ರಾಜ್‌ಕುಮಾರ್ ಚಿತ್ರ ನೋಡ್ತಿದ್ದೆ. ಹಿಂದಿ ಚಿತ್ರರಂಗದಲ್ಲಿ ನಾಲ್ಕಾರು ಮಂದಿ ಇದ್ದರು. ಅವರ ಚಿತ್ರ ನೋಡುತ್ತಿದ್ದೆ. ನನಗೆ ಎಲ್ಲ ಆಟಗಳು ಇಷ್ಟ. ನನಗೆ ಆಟ ಬರದಿದ್ದರೂ ನನ್ನನ್ನು ಸೇರಿಸಿಕೊಳ್ಳಬೇಕೆಂದು ಶಾಲೆಯಲ್ಲಿ ಹಠ ಮಾಡುತ್ತಿದ್ದೆ. ಕ್ರಿಕೆಟ್, ಫುಟ್ಬಾಲ್ ಬರದಿದ್ದರೂ ನಾನು ತಂಡದಲ್ಲಿರಬೇಕಿತ್ತು.
ಸಾಕಷ್ಟು ತಿಂದಿದ್ದೇನೆ ಎಂದು ನಾಟಿ ಕೋಳಿ ತಿನ್ನೊದ್ದನ್ನು ಬಿಟ್ಟಿದ್ದೇನೆ. ಮೂರು ತಿಂಗಳಲ್ಲ ಆರು ತಿಂಗಳಾಯ್ತು ನಾಟಿಕೋಳಿ ತಿಂದು.

ಮೊಂಡ ಅಲ್ಲ, ದ್ವೇಷ ಇಲ್ಲ

ನನಗೆ ರಾಜಿ ಮನೋಭಾವ ಇಲ್ಲವೇ ಇಲ್ಲ ಎಂದೇನೂ ಇಲ್ಲ. ರಾಜಕಾರಣದಲ್ಲಿ ರಾಜಿ ಮಾಡಕೊಳ್ಳಬೇಕು. ನಾನು ಮೊಂಡ ಅಲ್ಲ, ಹೇಳಿದ್ದೆ ಸರಿ, ಅದೇ ಆಗಬೇಕು ಎಂದೇನು ಇಲ್ಲ. ಸರಿ ಇದ್ದರೆ ಆಗಬೇಕು ಅಷ್ಟೇ. ಅಧಿಕಾರಿಗಳಿಗೆ ಭಯ ಇರಬಹುದು. ಕೆಲವರಿಗೆ ಪ್ರೀತಿಯೂ ಇದೆ. ಕೆಟ್ಟ ಅಧಿಕಾರಿಗಳಿಗೆ ಭಯ ಇದೆ. ಹಾಗಂತ ನಾನು ಯಾರಿಗೂ ತೊಂದರೆ ಕೊಡುವುದಿಲ್ಲ. ಕೆಲಸ ಸರಿಯಾಗಿ ಮಾಡಬೇಕು. ಕೆಲಸವಾಗಲು ಕೆಲವು ಬಾರಿ ಕಠಿಣವಾಗಿ ಮಾತನಾಡುತ್ತೇನೆ. ಉತ್ತಮ ಕೆಲಸ ಮಾಡಿದರೆ ಬೆನ್ನು ತಟ್ಟುತ್ತೇನೆ. ಎಲ್ಲಕ್ಕೂ ಸ್ಪಷ್ಟತೆ ಇರಬೇಕು. ನಾನು ಯಾವಾಗಲೂ ಸಿಟ್ಟು- ಸಿಡುಕಿನಿಂದ ಇರುವುದಿಲ್ಲ ಅಸಂಬದ್ಧ ಮಾತು ಹಾಗೂ ಅನಗತ್ಯ ಟೀಕೆಗಳು ಬಂದಾಗ ಸಿಟ್ಟು- ಸಿಡುಕು ಎರಡೂ ಬರುತ್ತದೆ. ನಾನು ಮನುಷ್ಯ ಅಲ್ವಾ. ನೋಡೋಕೆ ಒರಟ ಅನ್ನೋ ರೀತಿ ಇದ್ದೀನಿ. ಆಂತರಿಕವಾಗಿ ಆ ರೀತಿ ಇಲ್ಲ. ಸಾಮಾನ್ಯ ಮನುಷ್ಯನಿಗೆ ಇರುವ ಎಲ್ಲ ಗುಣಗಳೂ ನನ್ನಲ್ಲೂ ಇವೆ. ಕಷ್ಟಕ್ಕೆ ಸ್ಪಂದಿಸುತ್ತೇನೆ. ಮಾನವೀಯತೆಗೆ ಗೌರವವನ್ನೂ ನೀಡುತ್ತೇನೆ. ದ್ವೇಷ ರಾಜಕಾರಣದಲ್ಲಿ ನನಗೆ ನಂಬಿಕೆ ಇಲ್ಲ. ಅಧಿಕಾರ ದುರುಪಯೋಗ, ಕಾನೂನುಬಾಹಿರ ಕೆಲಸ ಮಾಡಿದ್ದರೆ ಕಾನೂನು ಕ್ರಮವಾಗುತ್ತದೆ. ಅದು ದ್ವೇಷ ರಾಜಕಾರಣ ಅಲ್ಲ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು.

ಬಿಬಿಎಂಪಿಗೆ ಸ್ಪಷ್ಟ ಸೂಚನೆ
ಬೆಂಗಳೂರು ಸಿಲಿಕಾನ್ ಸಿಟಿಯಲ್ಲಿ ಗಾರ್ಬೇಜ್ ಸಿಟಿಯಾಗಿರುವ ಬಗ್ಗೆ ಎಲ್ಲ ಮಾಹಿತಿ ಇದೆ. ಈ ಬಗ್ಗೆ ಬಿಬಿಎಂಪಿ ಆಯುಕ್ತ ಸಿದ್ದಯ್ಯ ಅವರಿಗೆ ಸ್ಪಷ್ಟ ಸೂಚನೆ ನೀಡಿದ್ದೇನೆ. ಈ ಕಳಂಕವನ್ನು ನಿವಾರಿಸಬೇಕು. ಅದಕ್ಕೆ ಅಗತ್ಯವಿರುವ ಎಲ್ಲ ಕ್ರಮ ಕೈಗೊಳ್ಳಬೇಕು. ನಾನು ಎಲ್ಲ ರೀತಿಯ ಸಹಕಾರ ನೀಡುತ್ತೇನೆ ಎಂದು ಹೇಳಿದ್ದೇನೆ. 'ಟೈಮ್ ಬೌಂಡ್‌'ನಲ್ಲಿ ಈ ಕೆಲಸ ಆಗಬೇಕು. ಸಿಲಿಕಾನ್ ಸಿಟಿ ಎಂದು ಹೆಸರು ಏಕೆ ಬಂದಿದೆ ಎಂದರೆ ಇಲ್ಲಿ ಸಾಫ್ಟ್‌ವೇರ್ ಕಂಪನಿಗಳು ಹೆಚ್ಚಾಗಿವೆ. ಆದರೆ ಇಲ್ಲಿ ಮೂಲಸೌಕರ್ಯ ಇಲ್ಲ ಎಂದೇ ಕುಖ್ಯಾತಿ ಬಂದಿದೆ. ಆದ್ದರೆ ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕಿದೆ. ಬೆಂಗಳೂರಿನಲ್ಲಿ ಈಗಿರುವ ಬಡಾವಣೆ ಯೋಜನೆಗಳನ್ನು ಪೂರ್ಣಗಳಿಸಿ, ಅಗತ್ಯ ಮೂಲಸೌಕರ್ಯ ಕಲ್ಪಿಸಲು ಆದ್ಯತೆ ನೀಡಲಾಗುತ್ತದೆ. ಬೆಂಗಳೂರಿನಲ್ಲಿ ನಿವೇಶನ ಆಕಾಂಕ್ಷಿಗಳಿಗಾಗಿ ಉಪ ನಗರಗಳನ್ನು ನಿರ್ಮಿಸಿ ಅದನ್ನು ಪೂರೈಸಲು ಗಮನಹರಿಸಲಾಗುತ್ತದೆ.

ಮಠಗಳ ವಿರುದ್ಧ ಇಲ್ಲ
ಯಾವುದೇ ಮಠದವರು ಅನುದಾನ ಕೇಳೊಲ್ಲ. ಇವರೇ ಪ್ರಾರಂಭ ಮಾಡಿದರು. ಸಹಾಯ ಮಾಡುತ್ತೇವೆ ಎಂದರೆ ಯಾರಾದರು ಬೇಡ ಅಂತಾರೆಯೇ? ಅವರ ವಿಶ್ವಾಸ ಗಳಿಸಲು ಇವರು ಸಾಕಷ್ಟು ರೀತಿಯಲ್ಲಿ ಅನುದಾನ ನೀಡಿದ್ದಾರೆ. ಅದು ಒಳ್ಳೆಯ ವಿಚಾರ ಅಲ್ಲ. ಮಠಗಳಿಗೆ ಹಣ ನೀಡುವುದು ಸರಿ ಅಲ್ಲ. ಎಲ್ಲವೂ ಲೆಕ್ಕಕ್ಕೆ ಇರಲೇಬೇಕು. ನಾನು ಯಾವುದೇ ಮಠಗಳಿಗೆ ವಿರುದ್ಧ ಇಲ್ಲ.

ಒಳ್ಳೆಯ ಸರ್ಕಾರ ನೀಡುತ್ತೇನೆ. ಪ್ರತ್ಯೇಕ ಕೃಷಿ ಬಜೆಟ್ ಎಂಬ ಢೋಂಗಿತನ ಇರುವುದಿಲ್ಲ. ಆರ್ಥಿಕ ಶಿಸ್ತು ತಕ್ಷಣದ ಅಗತ್ಯವಾಗಿದ್ದು, ಆಡಳಿತದಲ್ಲಿ ಸುಧಾರಣೆಗೆ ಪ್ರಥಮ ಪ್ರಾಶಸ್ತ್ಯ ನೀಡುವೆ. ಭೂಮಿ ಡಿನೋಟಿಫಿಕೇಷನ್ ಮತ್ತು ಸ್ವಾಧೀನದಲ್ಲಿ ಪಾರದರ್ಶಕತೆ ಇರಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.