ಮನೆಯಲ್ಲಲ್ಲ, ವಿಧಾನಸೌಧದಲ್ಲಿ ಕುಳಿತು ಕೆಲಸ ಮಾಡಿ: ಸಿದ್ದರಾಮಯ್ಯ ತಾಕೀತು
ಕ.ಪ್ರ. ವಾರ್ತೆ ಬೆಂಗಳೂರು ಮೇ 18
ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿದೆ ಎಂದು ಬೀಗಬೇಕಿಲ್ಲ. ಇದು ನಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ವಹಿಸಿದೆ. ಪ್ರತಿಯೊಬ್ಬ ಸಚಿವರೂ ವಿಧಾನಸೌಧದಲ್ಲೇ ಕುಳಿತು ಕೆಲಸ ಮಾಡಬೇಕು. ಮನೆಯಲ್ಲಿ ಕುಳಿತು ಇಲಾಖೆ ಕೆಲಸ ಮಾಡುವುದು ಸರಿಯಲ್ಲ. ಕ್ಲೀನ್ ಇಮೇಜ್ ಅತ್ಯಂತ ಮುಖ್ಯ...
ಸಚಿವ ಸಂಪುಟದ 28 ಸದಸ್ಯರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಥಮ ಹಿತವಚನ ಮಾದರಿಯ ತಾಕೀತು ಇದು.
ಪ್ರತಿಯೊಬ್ಬ ಸಚಿವರೂ ಅವರ ಇಲಾಖೆ ಕಾರ್ಯಗಳನ್ನು ವಿಧಾನಸೌಧದಲ್ಲಿ ಕುಳಿತು ಕೆಲಸ ಮಾಡಬೇಕು. ಇಲಾಖೆಯ ಕೆಲಸಗಳನ್ನು ಮನೆಯಲ್ಲಿ ನಿರ್ವಹಿಸುತ್ತೇನೆ ಎಂಬ ಧೋರಣೆ ಬೇಡ. ಬಿಜೆಪಿ ಸರ್ಕಾರದಲ್ಲಿ ಸಚಿವರು ವಿಧಾನಸೌಧಕ್ಕೇ ಬರುತ್ತಿರಲಿಲ್ಲ. ಅವರ ಸಮಯದಲ್ಲಿ ಸರ್ಕಾರದ ಮೇಲೆ ಜನರಿಗೆ ಸಾಕಷ್ಟು ಅಪನಂಬಿಕೆ ಉಂಟಾಗಿತ್ತು. ಅದನ್ನು ಕಿತ್ತೊಗೆಯಬೇಕಾಗಿರುವುದು ನಮ್ಮೆಲ್ಲರ ಮೇಲಿರುವ ಪ್ರಥಮ ಜವಾಬ್ದಾರಿ. ಇದನ್ನು ಎಲ್ಲರೂ ನಿರ್ವಹಿಸಬೇಕು ಎಂದು ಸಿದ್ದರಾಮಯ್ಯ ಸಚಿವರಿಗೆ ಕಿವಿಮಾತು ಹೇಳಿದ್ದಾರೆ.
ಸಚಿವರು ತಮ್ಮ ಇಲಾಖೆ ಬಗ್ಗೆ ಎಲ್ಲ ರೀತಿಯ ಮಾಹಿತಿಗಳನ್ನು, ಪ್ರಕ್ರಿಯೆಗಳನ್ನು ತೀವ್ರತರವಾಗಿ ಗಮನಿಸಬೇಕು. ಪ್ರತಿಯೊಂದು ಇಲಾಖೆಯ ಬಗ್ಗೆ ವಾರಕ್ಕೊಂದು ಬಾರಿ ಪರಾಮರ್ಶೆ ಮಾಡುತ್ತೇನೆ. ಯಾವ ರೀತಿಯ ಸಹಕಾರ ಅಥವಾ ಆದೇಶವಾಗಬೇಕು ಎಂದು ನನ್ನ ಗಮನಕ್ಕೆ ತಂದರೆ ಅದನ್ನು ಕೂಡಲೇ ಮಾಡಲಾಗುತ್ತದೆ. ಎಲ್ಲರೂ ದಕ್ಷತೆಯಿಂದ ಕಾರ್ಯನಿರ್ವಹಿಸಬೇಕಾದ ಅಗತ್ಯ ಇಲ್ಲಿದೆ ಎಂದಿದ್ದಾರೆ.
ಸಚಿವ ಸಂಪುಟದಲ್ಲಿ 14 ಮಂದಿ ಹೊಸದಾಗಿ ಸದಸ್ಯರಾಗಿರುವ ಅನುಭವವಾಗಿದೆ. ಅವರು ತಮ್ಮ ಖಾತೆಗಳ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ ಮಾಹಿತಿಗಳನ್ನು ಪಡೆಯಬೇಕು. ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಬೇಕು. ಹೈಕಮಾಂಡ್ ನಮ್ಮ ಮೇಲಿಟ್ಟಿರುವ ವಿಶ್ವಾಸಕ್ಕೆ ಧಕ್ಕೆಯುಂಟಾಗದಂತೆ ಕಾರ್ಯನಿರ್ವಹಿಸಬೇಕು. ಅಲ್ಲದೆ ರಾಜ್ಯದ ಜನತೆಗೆ ನಮಗೆ ಅಧಿಕಾರಿ ನೀಡಿರುವುದರಿಂದ ಅವರ ಆಶೋತ್ತರಗಳಿಗೆ ಸ್ಪಂದಿಸುವ ಕಾರ್ಯ ನಮ್ಮಿಂದಾಗಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವರಿಗೆ ಹೇಳಿದರು ಎಂದು ಮೂಲಗಳು ತಿಳಿಸಿವೆ.
ಸಚಿವರು ತಮ್ಮ ಕ್ಷೇತ್ರಗಳನ್ನು ನಿರ್ಲಕ್ಷ್ಯಿಸಬಾರದು. ಪ್ರತಿ ಎರಡು ತಿಂಗಳಿಗೊಮ್ಮೆ ಉಸ್ತುವಾರಿ ವಹಿಸಿಕೊಂಡಿರುವ ಜಿಲ್ಲೆಯಲ್ಲಿ ಅಧಿಕಾರಿಗಳ ಸಭೆ ನಡೆಸಬೇಕು. ಪ್ರತಿನಿತ್ಯವೂ ಆಗು-ಹೋಗುಗಳ ಬಗ್ಗೆ ಮಾಹಿತಿ ಪಡೆದುಕೊಂಡು, ಅಲ್ಲಿನ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಬೇಕು ಎಂದು ಮುಖ್ಯಮಂತ್ರಿ ತಾಕೀತು ಮಾಡಿದ್ದಾರೆ.
29ರಿಂದ ವಿಧಾನಸಭೆ ಅಧಿವೇಶನ
ಬೆಂಗಳೂರು: ಹದಿನಾಲ್ಕನೇ ವಿಧಾನಸಭೆಯ ಚೊಚ್ಚಲ ಅಧಿವೇಶನ ಮೇ 29ರಿಂದ ಜೂನ್ 6ರವರೆಗೆ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಶನಿವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ.
ಮೇ 29, 30ರಂದು ನೂತನ ಸಚಿವರ ಅಧಿಕಾರ ಸ್ವೀಕಾರ ನಡೆಯಲಿದ್ದು, ಮೇ 31ರಂದು ಸ್ಪೀಕರ್ ಆಯ್ಕೆ ನಡೆಯಲಿದೆ. ಜೂನ್ 3ರಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ವಿಧಾನ ಮಂಡಲದ ಉಭಯ ಸದನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದು, ಜೂನ್ 6ರ ವರೆಗೆ ಕಲಾಪ ನಡೆಯಲಿದೆ. ಇದೇ ಸಂದರ್ಭದಲ್ಲಿ ಹದಿಮೂರನೇ ವಿಧಾನಸಭೆ ವಿಸರ್ಜನೆಯಾಗಿದ್ದು, ಹದಿನಾಲ್ಕನೇ ವಿಧಾನಸಭೆ ಅಸ್ತಿತ್ವಕ್ಕೆ ಬಂದಿದೆ ಎಂಬ ಔಪಚಾರಿಕ ನಿರ್ಣಯವನ್ನೂ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

