ಪ್ರಧಾನ ಸುದ್ದಿ

ಶಾಲೆ ಹತ್ತಿರವಾದರೂ ವಿದ್ಯಾರ್ಥಿಗಳು ದೂರ!

Published On :

ಕನ್ನಡಪ್ರಭ ವಾರ್ತೆ ಬೆಂಗಳೂರು ಮೇ 20-
ಸರ್ಕಾರ ಏನೇ ಕಾರ್ಯಕ್ರಮ ರೂಪಿಸಿದರೂ, ಯಾವುದೇ ಯೋಜನೆ ಜಾರಿಗೆ ತಂದರೂ ಶಾಲೆಯಿಂದ ಹೊರಗೆ ಉಳಿಯುವ ಮಕ್ಕಳ ಪ್ರಮಾಣ ಮಾತ್ರ ಕಡಿಮೆ ಆಗುತ್ತಿಲ್ಲ. ಅದು ದಿನೇ ದಿನೇ ಹೆಚ್ಚುತ್ತಲೇ ಇದೆ.
ಕಳೆದ 7 ವರ್ಷಗಳಲ್ಲಿ ಒಂದನೇ ತರಗತಿಯಿಂದ 7ನೇ ತರಗತಿಗೆ ಬರುವಷ್ಟರಲ್ಲಿ 2,73,449 ಮಕ್ಕಳು ಶಾಲೆಯಿಂದ ದೂರವಾಗಿದ್ದಾರೆ!
2006-07ನೇ ಶೈಕ್ಷಣಿಕ ಸಾಲಿನಲ್ಲಿ 12,89,635 ವಿದ್ಯಾರ್ಥಿಗಳು ದಾಖಲಾಗಿದ್ದರೆ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 7ನೇ ತರಗತಿಗೆ ದಾಖಲಾದ ವಿದ್ಯಾರ್ಥಿಗಳ ಸಂಖ್ಯೆ ಕೇವಲ 10,16,186. ಈ ಪ್ರಕಾರ ಶೇ.21.29 ವಿದ್ಯಾರ್ಥಿಗಳು ಶಾಲೆಯಿಂದ ವಿಮುಖರಾಗಿದ್ದಾರೆ. ಅದರಲ್ಲಿ ವಿದ್ಯಾರ್ಥಿನಿಯರು ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿಗಳ ಪ್ರಮಾಣವೇ ಹೆಚ್ಚಿದೆ.
ಶಿಕ್ಷಣಕ್ಕೆ ಸಂಬಂಧಿಸಿದ ಯಾವುದೇ ಅಭಿಯಾನ ನಡೆದರೂ ಕರ್ನಾಟಕ ಹಾಗೂ ದೇಶದಲ್ಲಿ ಶಾಲೆ ಬಿಡುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಆದರೆ ಉತ್ತರ ಭಾರತ ಹಾಗೂ ಈಶಾನ್ಯ ಭಾರತದ ಕೆಲ ರಾಜ್ಯಗಳಲ್ಲಿ ಈ ಪ್ರಮಾಣ ಶೇ.50ಕ್ಕೂ ಅಧಿಕವಾಗಿದೆ. ಸರ್ವ ಶಿಕ್ಷಣ ಅಭಿಯಾನ ಹಾಗೂ ಆರ್‌ಟಿಇ ಜಾರಿ ಬಳಿಕವೂ ಶಾಲೆ ಬಿಡುವವರ ಪ್ರಮಾಣ ಶೇ.20ಕ್ಕೂ ಹೆಚ್ಚಿರುವುದು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸುತ್ತಿದೆ.
ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯು ಈ ಸಂಬಂಧ ಪ್ರಯತ್ನ ಮುಂದುವರಿಸಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಸರ್ಕಾರಿ ಶಾಲೆಯಲ್ಲಿ ಓದುತ್ತಿರುವವರ ವಿದ್ಯಾರ್ಥಿಗಳೇ ವಿಮುಖರಾಗುತ್ತಿದ್ದಾರೆ. ಸಂಚಾರಿ ಶಾಲೆ ಅಥವಾ ಉಚಿತ ಶಿಕ್ಷಣವೂ ಪ್ರಯೋಜನವಾಗುತ್ತಿಲ್ಲ. ಈ ಬಗ್ಗೆ ಶೀಘ್ರದಲ್ಲಿಯೇ ಕೇಂದ್ರ ಸರ್ಕಾರ ಪರಿಹಾರ ಮಾರ್ಗೋಪಾಯಗಳ ಸೂತ್ರ ರಚಿಸುವ ಸಾಧ್ಯತೆಯಿದೆ.

ಹೆಚ್ಚುತ್ತಲೇ ಇದೆ!: ಶಾಲೆಗಳಿಗೆ ದಾಖಲಾಗುವವರ ಸಂಖ್ಯೆಯೂ ರಾಜ್ಯದಲ್ಲಿ ಏರುತ್ತಿದೆ, ಮತ್ತೊಂದೆಡೆ ಶಾಲೆಯಿಂದ ವಿಮುಖರಾಗುತ್ತಿರುವವರ ಸಂಖ್ಯೆಯೂ ಅದೇ ಪ್ರಮಾಣದಲ್ಲಿ ಹೆಚ್ಚುತ್ತಿದೆ. ರಾಜ್ಯ ಸರ್ಕಾರ ಪ್ರತಿ ವರ್ಷ ಬಿಡುಗಡೆ ಮಾಡುವ  ಈ ಮಾಹಿತಿಗಳೇ ಈ ಅಂಶವನ್ನು ಪರೋಕ್ಷವಾಗಿ ಬಹಿರಂಗ ಮಾಡಿವೆ. ಆದರೆ ಸರ್ಕಾರದಲ್ಲಿನ ಅಧಿಕಾರಿಗಳು ಕೇವಲ ಒಂದನೇ ತರಗತಿಯಿಂದ ದೂರವಿರುವ ಮಕ್ಕಳ ಮಾಹಿತಿಯನ್ನು ಸಾರ್ವಜನಿಕವಾಗಿ ನೀಡಿ ಶಾಲೆ ಬಿಡುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಹೇಳುತ್ತಿದೆ.         
ಏಕೆಂದರೆ ಕೇವಲ ಮೊದಲನೇ ತರಗತಿಯ ವಿದ್ಯಾರ್ಥಿಗಳ ಸಂಖ್ಯೆ ನೀಡುವಾಗ ಇದರ ಪ್ರಮಾಣ 25 ಸಾವಿರದಿಂದ 40 ಸಾವಿರದೊಳಗೆ ಬರುತ್ತದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕೃತ ಮಾಹಿತಿಯ ಪ್ರಕಾರ ಪ್ರತಿ 5 ವಿದ್ಯಾರ್ಥಿಗಳಲ್ಲಿ ಒಬ್ಬ ವಿದ್ಯಾರ್ಥಿ ಶಾಲೆಯಿಂದ ವಿಮುಖನಾಗುತ್ತಿದ್ದಾನೆ. ಕಳೆದ 2006-07 ನೇ ಶೈಕ್ಷಣಿಕ ವರ್ಷದಲ್ಲಿ 6,16,923 ವಿದ್ಯಾರ್ಥಿಗಳು ಹಾಗೂ 5,72,712 ವಿದ್ಯಾರ್ಥಿನಿಯರು ಒಂದನೇ ತರಗತಿಗೆ ದಾಖಲಾಗಿದ್ದರು. ಆದರೆ ಇದೇ ವಿದ್ಯಾರ್ಥಿಗಳು 7ನೇ ತರಗತಿಗೆ ಬರುವಷ್ಟರಲ್ಲಿ 5,27,283 ವಿದ್ಯಾರ್ಥಿಗಳು ಹಾಗೂ 4,88,903 ವಿದ್ಯಾರ್ಥಿನಿಯರು ಮಾತ್ರ ಉಳಿದಿದ್ದಾರೆ. ಕಳೆದ 5 ವರ್ಷಗಳ ಮಾಹಿತಿಗಳನ್ನು ಅವಲೋಕಿಸಿದಾಗ ಮತ್ತಷ್ಟು ಅಂಶಗಳು ಬೆಳಕಿಗೆ ಬರುತ್ತವೆ. ಇದೇ ಸಂಖ್ಯೆ ಎಸ್‌ಎಸ್‌ಎಲ್‌ಸಿಗೆ ಬರುವಷ್ಟರಲ್ಲಿ 1 ಲಕ್ಷ ಹಾಗೂ ಪಿಯುಸಿ ಮುಗಿಯುವಷ್ಟರಲ್ಲಿ 2 ಲಕ್ಷ ಕಡಿಮೆಯಾಗುತ್ತದೆ. ಇನ್ನು ಪದವಿಗೆ ಸೇರುವವರ ಸಂಖ್ಯೆ ಶೇ.16ನ್ನು ದಾಟುತ್ತಿಲ್ಲ.
ಇನ್ನು 2007-08ನೇ ಸಾಲಿನಲ್ಲಿ ಒಂದನೇ ತರಗತಿಗೆ 11.64 ಲಕ್ಷ ವಿದ್ಯಾರ್ಥಿಗಳು ದಾಖಲಾಗಿದ್ದರೆ 2012-13ನೇ ಸಾಲಿನಲ್ಲಿ 6ನೇ ತರಗತಿಗೆ ಬರುವಷ್ಟರಲ್ಲಿ ಈ ಪ್ರಮಾಣ 10.32 ಲಕ್ಷಕ್ಕೆ ಇಳಿದಿದೆ. 2010-11ರಲ್ಲಿ ಒಂದನೇ ತರಗತಿಯಲ್ಲಿ ದಾಖಲಾಗಿ ಪ್ರಸ್ತುತ 3ನೇ ತರಗತಿಗೆ ಬರುವಷ್ಟರಲ್ಲಿ 61 ಸಾವಿರ ವಿದ್ಯಾರ್ಥಿಗಳು ವಿಮುಖರಾಗಿದ್ದಾರೆ. ರಾಜ್ಯದಲ್ಲಿ ಕಳೆದ 4 ವರ್ಷಗಳಿಂದ ಒಂದು ಅಲಿಖಿತ ನಿಯಮ ಜಾರಿಯಲ್ಲಿದೆ. ಯಾವುದೇ ಕಾರಣಕ್ಕೂ ಒಂದನೇ ತರಗತಿಯಿಂದ 7ನೇ ತರಗತಿಯವರೆಗೆ ಯಾವುದೇ ವಿದ್ಯಾರ್ಥಿಯನ್ನು ಅನುತ್ತೀರ್ಣಗೊಳಿಸಬಾರದು ಹಾಗೂ ಶಿಕ್ಷಿಸಬಾರದು. ಇದೇ ಕಾರಣದಿಂದ 7ನೇ ತರಗತಿಯ ಮಂಡಳಿ ಪರೀಕ್ಷೆಯನ್ನು ರದ್ದುಗೊಳಿಸಲಾಯಿತು. ಇದಾದ ಮೇಲೆ 2009ರಲ್ಲಿ ದೇಶದಲ್ಲಿ ಆರ್‌ಟಿಇ ಕೂಡ ಜಾರಿಗೆ ಬಂತು. ಆದಾಗ್ಯೂ ಈ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಶಾಲೆಯಿಂದ ವಿಮುಖರಾಗುತ್ತಿದ್ದಾರೆ. ಇದರರ್ಥ ಶಾಲೆಯಲ್ಲಿ ನೀಡುತ್ತಿರುವ ಮಧ್ಯಾಹ್ನದ ಊಟ, ಉಚಿತ ಶಿಕ್ಷಣ ಹಾಗೂ ಶಾಲೆಗಳ ಸ್ಥಾಪನೆ ಮಾತ್ರ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣವನ್ನು ಹೆಚ್ಚಿಸುವುದಿಲ್ಲ ಎನ್ನುವುದು ಸಾಬೀತಾಗಿದೆ. ಸರ್ಕಾರ ಹಾಗೂ ಸಂಘಸಂಸ್ಥೆಗಳು ಇದಕ್ಕೆ ನಿಖರವಾದ ಕಾರಣಗಳನ್ನು ಹುಡುಕಬೇಕಿದೆ.

-ರಾಜೀವ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.