ಪ್ರಧಾನ ಸುದ್ದಿ

ಸಿದ್ದು ಘೋಷಣೆಗೆ ಬೆಚ್ಚಿಬಿದ್ದ ಅಧಿಕಾರಿಗಳು

Published On :

- ಪ್ರದೀಪ್ ಕುಮಾರ್ ಎಂ.
ಕನ್ನಡಪ್ರಭ ವಾರ್ತೆ ಬೆಂಗಳೂರು ಮೇ 22


ಹೊಸ ಬಜೆಟ್ ಮಂಡನೆಗೂ ಸಿದ್ದರಾಗಿರುವ ಮುಖ್ಯಮಂತ್ರಿ
ಸಾವಿರಾರು ಕೋಟಿ ರುಪಾಯಿಯನ್ನು ಹೊಂದಿಸುವುದು ಹೇಗೆ?
ಘೋಷಿತ ಕಾರ್ಯಕ್ರಮಗಳ ಜಾರಿಗೆ 10 ಸಾವಿರ ಕೋಟಿ ಹೊರೆ

ತಮ್ಮ ಬಹು ವರ್ಷಗಳ ಕನಸಾಗಿದ್ದ ಮುಖ್ಯಮಂತ್ರಿ ಹುದ್ದೆ ಸಿಕ್ಕಿದ ಖುಷಿಯಲ್ಲಿ ಸಿದ್ದರಾಮಯ್ಯ ಅವರು ಮಾಡುತ್ತಿರುವ ದಿನಕ್ಕೊಂದು ಘೋಷಣೆ ಹಣಕಾಸು ಇಲಾಖೆ ಅಧಿಕಾರಿಗಳನ್ನು ಚಿಂತೆಗೀಡುಮಾಡಿದೆ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗುತ್ತಿದ್ದಂತೆ ರಾಜ್ಯದ ಅರ್ಥ ವ್ಯವಸ್ಥೆ ತಹಬದಿಗೆ ಬರುತ್ತದೆ. ಕಳೆದ ಏಳೆಂಟು ವರ್ಷಗಳಿಂದ ಕಾಣೆಯಾಗಿದ್ದ ಆರ್ಥಿಕ ಶಿಸ್ತು ಮತ್ತೆ ಕಾಣಸಿಗುತ್ತದೆ ಎಂಬ ನಿರೀಕ್ಷೆ ಹುಸಿಯಾಗಿ ಅಶಿಸ್ತು ಹೆಚ್ಚಾಗುವ ಆತಂಕ ಕಾಣಿಸಿಕೊಂಡಿದೆ.
ಜುಲೈ ತಿಂಗಳಲ್ಲಿ ಹೊಸದಾಗಿ ಬಜೆಟ್ ಮಂಡಿಸುವುದಾಗಿ ಸಿದ್ದರಾಮಯ್ಯ ಈಗಾಗಲೇ ಘೋಷಿಸಿದ್ದಾರೆ. ಅದಕ್ಕಾಗಿ ಸಿದ್ಧತೆ ನಡೆಸುವಂತೆ ಹಣಕಾಸು ಇಲಾಖೆ ಅಧಿಕಾರಿಗಳಿಗೂ ಸೂಚಿಸಿದ್ದಾರೆ.
ಬಜೆಟ್ ಮಂಡನೆಗೆ ಮುನ್ನವೇ ಸಿದ್ದರಾಮಯ್ಯ ಅವರು ಹೊಸ ಕಾರ್ಯಕ್ರಮಗಳನ್ನು ಪ್ರಕಟಿಸುತ್ತಲೇ ಇದ್ದಾರೆ. ಇನ್ನು ಬಜೆಟ್‌ನಲ್ಲೂ ಕೆಲವು ಯೋಜನೆಗಳನ್ನು ಹೊಸದಾಗಿ ಪ್ರಕಟಿಸುವುದು ಖಚಿತ. ಇದಕ್ಕೆ ಬೇಕಾದ ಸಾವಿರಾರು ಕೋಟಿ ರುಪಾಯಿಯನ್ನು ಹೊಂದಿಸುವುದು ಹೇಗೆ ಎಂಬುದು ಹಣಕಾಸು ಇಲಾಖೆ ಅಧಿಕಾರಿಗಳ ಚಿಂತೆ.
ಘೋಷಣೆ ಮಾಡಿರುವ ಬಿಪಿಎಲ್ ಪಡಿತರದಾರರಿಗೆ ಕೆ.ಜಿ.ಗೆ 1ರಂತೆ 30 ಕೆಜಿ ಅಕ್ಕಿ, ಪ್ರತಿ ಲೀಟರ್ ಹಾಲಿಗೆ ನೀಡುತ್ತಿರುವ ಪ್ರೋತ್ಸಾಹಧನ 2ರಿಂದ 4ಕ್ಕೆ ಹೆಚ್ಚಳ, ವಸತಿ ಯೋಜನೆ ಸಹಾಯಧನ ಹೆಚ್ಚಳ, ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರಿಗೆ ವಿವಿಧ ನಿಗಮ- ಮಂಡಳಿಗಳ ಮೂಲಕ ನೀಡಿರುವ ಸಾಲ ಮತ್ತು ಬಡ್ಡಿ ಮನ್ನಾ, ಭಾಗ್ಯಜ್ಯೋತಿ ಬಾಕಿ ಮನ್ನಾ ಯೋಜನೆಗಳಿಗೆ 4409 ಕೋಟಿ ಹೆಚ್ಚುವರಿಯಾಗಿ ಬೇಕಾಗುತ್ತದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದರೂ ವಾಸ್ತವವಾಗಿ ಈ ಎಲ್ಲಾ ಕಾರ್ಯಕ್ರಮಗಳ ಜಾರಿಗೆ ಬೇಕಾದ ಮೊತ್ತ 8 ಸಾವಿರ ಕೋಟಿಯಷ್ಟಾಗುತ್ತದೆ ಎಂಬುದು ಅಧಿಕಾರಿಗಳ ಅಂದಾಜು.
ಇದರ ಜತೆಗೆ ಎಪಿಎಲ್ ಕಾರ್ಡ್‌ದಾರರಿಗೂ ಕಡಿಮೆ ದರದಲ್ಲಿ ಅಕ್ಕಿ ವಿತರಣೆ, ರೈತರಿಗೆ ನೀಡುವ ಬಡ್ಡಿ ರಹಿತ ಕೃಷಿ ಸಾಲದ ಮೊತ್ತವನ್ನು 1ರಿಂದ 2 ಲಕ್ಷಕ್ಕೆ ಏರಿಸುವ ಬಗ್ಗೆಯೂ ಸಿದ್ದರಾಮಯ್ಯ ಪ್ರಸ್ತಾಪಿಸಿದ್ದಾರೆ.

ಹಾಗೇನಾದರೂ ಆದರೆ ಸರ್ಕಾರದ ಮೇಲಿನ ಹೊರೆ 10 ಸಾವಿರ ಕೋಟಿ ಮೀರಬಹುದು ಎನ್ನುವುದು ಅಧಿಕಾರಿಗಳ ಅಭಿಪ್ರಾಯ.
ಪಡಿತರ ವ್ಯವಸ್ಥೆ ಮೊದಲ ಸಮಸ್ಯೆ:  ಸಿದ್ದರಾಮಯ್ಯ ಅವರ ಘೋಷಣೆಗಳ ಪೈಕಿ ಅತಿ ಹೆಚ್ಚು ಆತಂಕಕ್ಕೆ ಕಾರಣವಾಗಿದ್ದು ಅಕ್ಕಿ  ವಿತರಣೆ. ರಾಜ್ಯದಲ್ಲಿ ಸುಮಾರು 98 ಲಕ್ಷ ಬಿಪಿಎಲ್ ಪಡಿತರ ಚೀಟಿಗಳಿದ್ದರೂ ಕೇಂದ್ರ ಸರ್ಕಾರ ರಿಯಾಯಿತಿ ದರದಲ್ಲಿ ಅಕ್ಕಿ ಬಿಡುಗಡೆ ಮಾಡುವುದು ಸುಮಾರು 32 ಲಕ್ಷ ಕಾರ್ಡ್‌ಗಳಿಗೆ ಮಾತ್ರ. ಪ್ರತಿ ಕಾರ್ಡ್‌ಗೆ 35 ಕೆ.ಜಿ. ಅಕ್ಕಿ ನೀಡುತ್ತದೆ. ಈ ಕಾರಣದಿಂದಾಗಿಯೇ ಹೊರೆ ಕಡಿಮೆ ಮಾಡಿಕೊಳ್ಳಲು ಹಿಂದಿನ ಬಿಜೆಪಿ ಸರ್ಕಾರ ಒಬ್ಬ ವ್ಯಕ್ತಿಗೆ 4 ಕೆ.ಜಿ. ಮತ್ತು ಒಂದು ಬಿಪಿಎಲ್ ಕಾರ್ಡ್‌ಗೆ ಗರಿಷ್ಠ 20 ಕೆ.ಜಿ. ಅಕ್ಕಿ ನೀಡುವ ಯೂನಿಟ್ ವ್ಯವಸ್ಥೆ ಜಾರಿಗೆ ತಂದಿತ್ತು.
ಜತೆಗೆ ಎಪಿಎಲ್ ಕಾರ್ಡ್‌ಗಳಿಗೆ ಬರುವ ಅಕ್ಕಿಯನ್ನೂ ಬಿಪಿಎಲ್ ಕಾರ್ಡ್‌ದಾರರಿಗೆ ವಿತರಿಸಲು ಬಳಸುತ್ತಿತ್ತು. ಹಾಗಿದ್ದರೂ ಸರ್ಕಾರಕ್ಕೆ ವಾರ್ಷಿಕ ಸುಮಾರು 250 ಕೋಟಿ ಹೊರೆಯಾಗುತ್ತಿತ್ತು.
ಇದೀಗ ಯೂನಿಟ್ ವ್ಯವಸ್ಥೆ ಸಂಪೂರ್ಣ ತೆಗೆದುಹಾಕಿ ಪ್ರತಿ ಕಾರ್ಡ್‌ಗೆ 1ಕ್ಕೆ 30 ಕೆ.ಜಿ. ಅಕ್ಕಿ ವಿತರಿಸಲು ತೀರ್ಮಾನಿಸಲಾಗಿದೆ. ಅಂದರೆ, ಸುಮಾರು 60 ಲಕ್ಷ ಕಾರ್ಡ್‌ಗಳಿಗೆ ವಿತರಿಸುವ ಪಡಿತರ ಅಕ್ಕಿಯ ಹೊರೆಯನ್ನು ಸರ್ಕಾರವೇ ಭರಿಸಬೇಕು. ಈ ಮೊತ್ತ ಸುಮಾರು 3 ಸಾವಿರ ಕೋಟಿ ಮೀರಬಹುದು ಎಂದು ಅಂದಾಜು ಮಾಡಲಾಗಿದೆ.
ಹಾಲಿನ ಸಹಾಯಧನವೂ ಹೆಚ್ಚಳದ ನಿರೀಕ್ಷೆ: ಈ ಮಧ್ಯೆ ಪ್ರತಿ ಲೀಟರ್ ಹಾಲಿಗೆ ಸರ್ಕಾರ ನೀಡುತ್ತಿದ್ದ 2 ಸಹಾಯಧನವನ್ನು 4ಕ್ಕೆ ಏರಿಸಿರುವುದರಿಂದ ಇದುವರೆಗೆ ಖಾಸಗಿ ಡೈರಿಗಳಿಗೆ ಹಾಲು ಮಾರಾಟ ಮಾಡುತ್ತಿದ್ದವರೂ ಇನ್ನು ನೇರವಾಗಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಮೊರೆ ಹೋಗಲಿದ್ದಾರೆ. ಇದರಿಂದ ಈ ಸಂಘಗಳಿಗೆ ಹೆಚ್ಚುವರಿಯಾಗಿ 8ರಿಂದ 10 ಲಕ್ಷ ಲೀಟರ್ ಹಾಲು ಹರಿದುಬರಲಿದ್ದು, ಆ ಹಾಲಿಗೂ ಸಹಾಯಧನ ನೀಡಬೇಕಾದರೆ ವಾರ್ಷಿಕ 1ಸಾವಿರ ಕೋಟಿ ಹೊರೆಯಾಗುತ್ತದೆ.
ಅದೇ ರೀತಿ ಬಡ್ಡಿ ರಹಿತ ಸಾಲದ ಮೊತ್ತವನ್ನು 1 ಲಕ್ಷದಿಂದ 2 ಲಕ್ಷಕ್ಕೆ ಏರಿಸುವುದರಿಂದ ಸಹಕಾರ ಸಂಘಗಳು ನಷ್ಟವಾಗದಂತೆ ಬಡ್ಡಿಯನ್ನು ಸರ್ಕಾರ ಪಾವತಿಸಬೇಕಾಗುತ್ತದೆ. ಇದು ಕೂಡ ಸರ್ಕಾರಕ್ಕೆ ಹೊರೆಯಾಗಲಿದೆ.
ಹಳೇ ಯೋಜನೆಗಳ ರದ್ದು ಸುಲಭವಲ್ಲ:  ಈ ಮಧ್ಯೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಘೋಷಣೆಯಾಗಿರುವ ಕೆಲವು ಯೋಜನೆಗಳನ್ನು ರದ್ದುಪಡಿಸಿ, ಆ ಅನುದಾನವನ್ನು ತಮ್ಮ ಹೊಸ ಯೋಜನೆಗಳಿಗೆ ಬಳಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಚಿಸುತ್ತಿದ್ದಾರಾದರೂ ಅದು ಅಷ್ಟೊಂದು ಸುಲಭವಲ್ಲ ಎನ್ನುವುದು ಅಧಿಕಾರಿಗಳ ಅಭಿಪ್ರಾಯ.
ಏಕೆಂದರೆ, ಬಿಜೆಪಿ ಸರ್ಕಾರದಲ್ಲಿ ಕೆಲವು ಅನಗತ್ಯ ಯೋಜನೆಗಳನ್ನು ಹಮ್ಮಿಕೊಂಡಿದ್ದರೂ ಅವುಗಳಲ್ಲಿ ಬಹುಪಾಲು ರೈತರು ಮತ್ತು ಕೃಷಿಕರಿಗೆ ಸಂಬಂಧಿಸಿದ್ದು. ಇಂತಹ ಯೋಜನೆಗಳನ್ನು ರದ್ದುಗೊಳಿಸಿದರೆ ರೈತರು ತಿರುಗಿ ಬೀಳಬಹುದು. ಇನ್ನು ಮಠ- ಮಂದಿರಗಳಿಗೆ ನೀಡಿರುವ ಅನುದಾನ ರದ್ದುಗೊಳಿಸಿದರೆ ಅಥವಾ ಕಡಿತ ಮಾಡಿದರೆ ಆಯಾ ಜನಾಂಗದವರು ಸರ್ಕಾರದ ವಿರುದ್ಧ ಎದ್ದುನಿಲ್ಲಬಹುದು.
ಹಣಕಾಸು ಹೊಂದಾಣಿಕೆ ಹೇಗೆ?:  ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಘೋಷಿಸಿರುವ ಮತ್ತು ಬಜೆಟ್‌ನಲ್ಲಿ ಘೋಷಿಸಲಿರುವ ಹೊಸ ಕಾರ್ಯಕ್ರಮಗಳ ಬಗ್ಗೆ ಅಧಿಕಾರಿಗಳು ಆತಂಕಗೊಂಡಿದ್ದಾರೆ. ಈಗಾಗಲೇ ಅಬಕಾರಿ ಇಲಾಖೆಗೆ ನೀಡಿರುವ ಗುರಿ ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲೂ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದೆ. ಅಬಕಾರಿ ಆದಾಯದ ಗುರಿ ಹೆಚ್ಚಿಸಿದರೆ ಸರ್ಕಾರ ಕುಡಿತವನ್ನು ಪ್ರೇರೇಪಿಸುತ್ತದೆ ಎಂಬ ಆರೋಪ ಎದುರಿಸಬೇಕಾಗುತ್ತದೆ.
ಇನ್ನೊಂದೆಡೆ ಇತರೆ ತೆರಿಗೆಗಳು ಹೊರ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಹೆಚ್ಚಾಗಿದ್ದು, ಮತ್ತೆ ತೆರಿಗೆ ಏರಿಸಿದರೆ 'ಬ್ಲಾಕ್ ಮಾರ್ಕೆಟ್‌' ದಂಧೆಗೆ ಅವಕಾಶ ಮಾಡಿಕೊಟ್ಟಂತಾಗಿದೆ ತೆರಿಗೆ ಸೋರಿಕೆಯಾಗುತ್ತದೆ. ಇದೆಲ್ಲದರ ಪರಿಣಾಮ ಸಿದ್ದರಾಮಯ್ಯ ಅವರು ಮಂಡಿಸಲಿರುವ ಬಜೆಟ್‌ನಲ್ಲಿ ಆದಾಯ ಮತ್ತು ಖರ್ಚು ಹೊಂದಾಣಿಕೆ ಮಾಡುವುದು ಹೇಗೆ ಎಂಬ ಆತಂಕದಲ್ಲಿ ಆರ್ಥಿಕ ಇಲಾಖೆ ಅಧಿಕಾರಿಗಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.