ಪ್ರಧಾನ ಸುದ್ದಿ

ಅಂತೂ ಬತ್ತಕ್ಕೆ ಬಂತು ಬಂಪರ್ ಬೆಲೆ

Published On :

ಕ.ಪ್ರ.ವಾರ್ತೆ   ಶಿವಮೊಗ್ಗ   ಮೇ 27
ಬರಗಾಲ ನಿರೀಕ್ಷೆಗೆ ಜೈ ಎನ್ನಬೇಕೋ?, ಇಳುವರಿ ಕಡಿಮೆಯಾಗಿದ್ದಕ್ಕೆ ಬೆಲೆ ಬಂತೆಂದು ಖುಷಿ ಪಡಬೇಕೋ?
ಆದರೆ, ಬತ್ತ ಬೆಳೆದ ರೈತರು ಮಾತ್ರ ಈ ಬಾರಿ ಫುಲ್ಖುಷ್. ಏಕೆಂದರೆ ಹಿಂದೆಂದೂ ಕಾಣದಷ್ಟು ಬೆಲೆ ಈ ಬಾರಿ ಬತ್ತಕ್ಕೆ ದಕ್ಕಿದೆ.
ಎಪಿಎಂಸಿಗಳತ್ತ ತಲೆಹಾಕದ ರೈತರು ಗದ್ದೆಯ ಬಳಿಗೇ ಬರುವ ವ್ಯಾಪಾರಸ್ಥರಿಗೆ ಬತ್ತ ಮಾರುತ್ತಿದ್ದಾರೆ. ಮನೆಗೆ ಕೊಂಡೊಯ್ಯುವುದಕ್ಕೂ ಅವರಿಗೆ ಸಾಧ್ಯವಾಗುತ್ತಿಲ್ಲ. ಕೊಯ್ಲು ಮಾಡಿ ರಾಶಿ ಹಾಕುತ್ತಿದ್ದಂತೆ ಬತ್ತ ಮಾರಾಟವಾಗುತ್ತಿದೆ. ಕಳೆದ ಸಾಲಿನಲ್ಲಿ ಒಂದು ಕ್ವಿಂಟಲ್ ಮಾಮೂಲಿ ಸೋನಾ ಬತ್ತಕ್ಕೆ ಗರಿಷ್ಠ 1,500 ಸಿಕ್ಕಿತ್ತು. ಈ ಬಾರಿ ಒಂದು 2,200ಗೆ ತಲುಪಿದೆ. ಇದು ರೈತರಿಗೆ ನೇರವಾಗಿ ಸಿಗುತ್ತಿರುವ ಬೆಲೆ. ಇನ್ನೂ ವ್ಯಾಪಾರಸ್ಥರ ಲಾಭಾಂಶವೂ ಸೇರಿದರೆ ಈ ಬೆಲೆ ರೈಸ್ ಮಿಲ್ನಲ್ಲಿ 2,500 ದಾಟುತ್ತಿದೆ. ಜ್ಯೋತಿ ಬತ್ತಕ್ಕೂ ಸಹ ಸರಿಸುಮಾರು ಇಷ್ಟೇ ದರ ಸಿಗುತ್ತಿದೆ.
ಹಿಂಗಾರು ಹಂಗಾಮಿನಲ್ಲಿ ಮಧ್ಯ ಕರ್ನಾಟಕದಲ್ಲಿ ಮಾತ್ರ ಬತ್ತ ವ್ಯಾಪಕವಾಗಿ ಬಂದಿರುವುದರಿಂದ ರಾಜ್ಯದ ಇತರೆಡೆಯ ರೈಸ್ಮಿಲ್ಗಳು ಸಹ ಇತ್ತಲೇ ಕಣ್ಣಿಟ್ಟಿವೆ. ಸ್ಥಳೀಯ ವ್ಯಾಪಾರಸ್ಥರು ರೈತರ ಜಮೀನಿನ ಬಳಿಯೇ ಬಂದು ಬತ್ತ ಖರೀದಿಸಿ, ಅಲ್ಲಿಯೇ ಲೋಡ್ ಮಾಡಿಕೊಂಡು ರೈಸ್ಮಿಲ್ಗಳಿಗೆ ಸಾಗಿಸುವ ಭರಾಟೆ ಈಗ ಗ್ರಾಮಾಂತರ ಪ್ರದೇಶಗಳಲ್ಲಿ ಎಲ್ಲೆಲ್ಲೂ ಕಂಡುಬರುತ್ತಿದೆ.
ಕಾರಣವೇನು?: ಮುಂಗಾರು ಹಂಗಾಮಿನ ವೇಳೆ ಎಲ್ಲೆಡೆ ಬತ್ತ ಬಂದಿತ್ತು. ಸರಬರಾಜು ಹೆಚ್ಚಾಗಿದ್ದರ ಪರಿಣಾಮ ಬತ್ತಕ್ಕೆ ಹೆಚ್ಚು ಬೆಲೆ ಸಿಕ್ಕಿರಲಿಲ್ಲ. 1,600 ಸಿಕ್ಕರೆ ಹೆಚ್ಚು ಎಂಬ ಪರಿಸ್ಥಿತಿ ಇತ್ತು.
ನಂತರದ ದಿನಗಳಲ್ಲಿ ಮಳೆ ಎಲ್ಲೆಡೆ ಕಡಿಮೆಯಾಯಿತು. ಎಲ್ಲಾ ಜಲಾಶಯಗಳು ಭರ್ತಿಯಾಗಲಿಲ್ಲ. ಹಾಗಾಗಿ ರೈತರು ಹೆಚ್ಚು ನೀರು ಬೇಡುವ ಬತ್ತ ಬಿತ್ತನೆ ಮಾಡುವ ಬದಲು ಇತರೆ ಬೆಳೆಗಳ ಕಡೆ ಕಣ್ಣು ಹಾಯಿಸಿದರು. ರಾಜ್ಯದ ಕೃಷಿ ಆಧಾರಿತ ಅಣೆಕಟ್ಟುಗಳಲ್ಲಿ ನೀರು ಸಂಗ್ರಹ ಕಡಿಮೆಯಾಗಿದ್ದರಿಂದ ಆಯಾ ಅಚ್ಚುಕಟ್ಟು ಪ್ರಾಧಿಕಾರಗಳು ಬತ್ತ ಬೆಳೆಯದಂತೆ ರೈತರಿಗೆ ಸೂಚನೆ ನೀಡಿದ್ದವು. ಆದರೆ, ಭದ್ರಾ ಜಲಾಶಯ ವ್ಯಾಪ್ತಿಯಲ್ಲಿ ನೀರು ಸಂಗ್ರಹ ಸಾಮಾನ್ಯವಾಗಿತ್ತು. ಹಿಂಗಾರು ಹಂಗಾಮಿನ ಬೆಳೆಗಳಿಗೆ ಎಂದಿನಂತೆಯೇ ನೀರು ಕೊಡಲಾಯಿತು. ಭದ್ರಾ ಜಲಾಶಯ ವ್ಯಾಪ್ತಿಯಲ್ಲಿ 1,05,000 ಎಕರೆ ಜಾಗವನ್ನು ಬತ್ತಕ್ಕಾಗಿ ಅಧಿಕೃತವಾಗಿ ನೋಟಿಫೈ ಮಾಡಲಾಗಿದೆ. ಆದರೆ, ವಾಸ್ತವವಾಗಿ ಅದಕ್ಕಿಂತ ಹೆಚ್ಚು ಪ್ರದೇಶದಲ್ಲಿ ಬತ್ತ ಬೆಳೆ ಇದೆ. ನೀರು ಹರಿಸುವ ಕೊನೆಯ ದಿನಗಳಲ್ಲಿ ಆನ್ ಆ್ಯಂಡ್ ಆಫ್ ಮಾಡಿ ನೀರು ಕೊಟ್ಟಿದ್ದರಿಂದ ಇದರಲ್ಲಿ ಶೇ.10ರಷ್ಟು ಪ್ರದೇಶದಲ್ಲಿ ಬೆಳೆ ನಷ್ಟವಾಗಿರಬಹುದು ಎಂದು ಅಂದಾಜಿಸಲಾಗಿದೆ.
ಭದ್ರಾ ಜಲಾಶಯ ವ್ಯಾಪ್ತಿಯಲ್ಲಿ ಮಾತ್ರ ಹಿಂಗಾರು ಹಂಗಾಮಿನ ಬತ್ತ ಬಂದಿರುವುದರಿಂದ ಸಹಜವಾಗಿ ಬತ್ತಕ್ಕೆ ಬೇಡಿಕೆ ಹೆಚ್ಚಾಗಿದ್ದು, ಸರಬರಾಜು ಕಡಿಮೆಯಾಗಿದೆ. ಈ ಬಾರಿ ಬತ್ತ ಬೆಳೆದವರಿಗೆ ಬಂಪರ್ ಬೆಲೆ ಸಿಕ್ಕಿದೆ.
ಅಕ್ಕಿಗೆ ಹೋಲಿಸಿದರೆ?: ಬತ್ತಕ್ಕೆ ಬೆಲೆ ಬಂದಿತೆಂದು ಹೆಚ್ಚು ಖುಷಿಯಾಗುವ ಸ್ಥಿತಿಯಲ್ಲೇನೂ ರೈತರು ಇಲ್ಲ. ಏಕೆಂದರೆ ಅಕ್ಕಿಗೆ ಹೋಲಿಸಿದರೆ ಈಗ ಸಿಕ್ಕಿರುವ ಬೆಲೆ ಅರ್ಧಕ್ಕಿಂತ ಕಡಿಮೆಯೇ. ಭದ್ರಾ ಎಡನಾಲಾ ಅಚ್ಚುಕಟ್ಟುದಾರರ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ವೈ.ಜಿ. ಮಲ್ಲಿಕಾರ್ಜುನ್ ಹೇಳುವಂತೆ, ನಮಗೆ ಈಗ ಉತ್ತಮ ಬೆಲೆ ಸಿಕ್ಕಿದೆ ಎಂದಷ್ಟೇ ಹೇಳಬಹುದು. ಮುಂದೆಯೂ ಈ ದರ ಹೀಗೆಯೇ ಉಳಿದು, ಹೆಚ್ಚಾದರೆ ಒಳ್ಳೆಯದು.

- ಹೊನ್ನಾಳಿ ಚಂದ್ರಶೇಖರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.