ಪ್ರಧಾನ ಸುದ್ದಿ

ಕಾವೇರಿ ನಷ್ಟ ತುಂಬಿಕೊಡಬೇಕಂತೆ

Published On :

ನವದೆಹಲಿ: ಕರ್ನಾಟಕದಲ್ಲಿ ಜಲಾಶಯಗಳು ಬತ್ತಿ ಹೋಗಿ ಜನರು ಕುಡಿಯುವ ನೀರಿಲ್ಲದೇ ತತ್ತರಿಸುತ್ತಿದ್ದರೆ, ಇತ್ತ ತಮಿಳುನಾಡು ಸುಪ್ರೀಂ ಕೋರ್ಟ್‌ನಲ್ಲಿ ಮತ್ತೊಂದು ತಕರಾರು ಅರ್ಜಿ ಸಲ್ಲಿಸಿದೆ.
ಈ ಬಾರಿ ತಮಿಳುನಾಡಿನದ್ದು ವಿಚಿತ್ರ ಬೇಡಿಕೆ. ಕರ್ನಾಟಕ ತನಗೆ ಸಕಾಲದಲ್ಲಿ ನೀರು ಹರಿಸದೇ ಇರುವುದರಿಂದ 2500 ಕೋಟಿ ಆರ್ಥಿಕ ನಷ್ಟವಾಗಿದ್ದು, ಅದನ್ನು ತುಂಬಿಕೊಡುವಂತೆ ಕರ್ನಾಟಕಕ್ಕೆ ಆದೇಶ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಮೇಲ್ಮನವಿಯಲ್ಲಿ ಬೇಡಿಕೆ ಇಟ್ಟಿದೆ.
ಕರ್ನಾಟಕ ಕಾವೇರಿ ನ್ಯಾಯಾಧಿಕರಣದ ಮಧ್ಯಂತರ ತೀರ್ಪಿಗನುಗುಣವಾಗಿ ನೀರು ಹರಿಸಿಲ್ಲ. ಇದರಿಂದಾಗಿ ಬೆಳೆ ನಷ್ಟವಾಗಿದೆ. ಈ ಮೊತ್ತ 1500 ಕೋಟಿ ಮತ್ತು ಜಲ ವಿದ್ಯುತ್ ಉತ್ಪಾದನೆ ಮಾಡದೇ ಇದ್ದುದರಿಂದಾಗಿರುವ ನಷ್ಟ 1000 ಕೋಟಿ, ಒಟ್ಟು 2500 ಕೋಟಿ ನಷ್ಟ ತುಂಬಿಕೊಡಬೇಕು ಎಂಬು ಕೋರಿದೆ.
ಒತ್ತಡ ಹೇರುವ ತಂತ್ರ: ಪ್ರಸಕ್ತ ಜಲ ವರ್ಷ ಮೇ 31ಕ್ಕೆ ಕೊನೆಯಾಗಲಿದೆ. ವರ್ಷಾಂತ್ಯದೊಳಗೆ ಮತ್ತೊಂದು ಅರ್ಜಿ ಹಾಕಿ ಕರ್ನಾಟಕದ ಮೇಲೆ ಒತ್ತಡ ಹೇರುವ ತಂತ್ರವನ್ನು ತಮಿಳುನಾಡು ಅನುಸರಿಸುತ್ತಿದೆ. ಪ್ರಸ್ತುತ ಕರ್ನಾಟಕದಲ್ಲಿ ಕಾವೇರಿ ನದಿ ಪಾತ್ರದ ಎಲ್ಲಾ ಜಲಾಶಯಗಳು ಬತ್ತಿ ಹೋಗಿವೆ. ಕೇಂದ್ರ ಜಲ ಆಯೋಗ ಕೂಡ ವರದಿಯಲ್ಲಿ ಈ ಅಂಶವನ್ನು ತಿಳಿಸಿದೆ.
ಕಾವೇರಿ ನ್ಯಾಯಾಧಿಕರಣ ಅಂತಿಮ ಐತೀರ್ಪಿನ ಅಧಿಸೂಚನೆ ಪ್ರಕಟಣೆಯಾದ ನಂತರ, ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡುವಂತೆ ತಮಿಳುನಾಡು ಮನವಿ ಮಾಡಿತ್ತು. ಸುಪ್ರೀಂ ಆದೇಶದಂತೆ ಕೇಂದ್ರ ಸರ್ಕಾರ ಈಗ ಕಾವೇರಿ ಮೇಲ್ವಿಚಾರಣಾ ಸಮಿತಿ ರಚಿಸಿದೆ. ಈ ಸಮಿತಿ ಜೂನ್ 1ರಿಂದ ಆರಂಭವಾಗುವ ಜಲವರ್ಷದಲ್ಲಿ ಕಾವೇರಿ ಮೇಲ್ವಿಚಾರಣಾ ಸಮಿತಿ ತಕರಾರುಗಳನ್ನು ಇತ್ಯರ್ಥ ಪಡಿಸಲಿದೆ.

ಹೊಗೇನಕಲ್ ನೀರು ಪೂರೈಕೆ ಯೋಜನೆಗೆ ಜಯಾ ಚಾಲನೆ

ಚೆನ್ನೈ: 1928 ಕೋಟಿ ವೆಚ್ಚದ ವಿವಾದಿತ ಹೊಗೇನಕಲ್ ನೀರು ಪೂರೈಕೆ ಯೋಜನೆಯನ್ನು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಬುಧವಾರ ಉದ್ಘಾಟಿಸಿದ್ದಾರೆ.
ಜಪಾನ್‌ನ ಅಂತಾರಾಷ್ಟ್ರೀಯ ಸಹಕಾರ ಏಜೆನ್ಸಿ ಸಹಭಾಗಿತ್ವದಲ್ಲಿ ಕೈಗೆತ್ತಿಕೊಂಡಿರುವ ಈ ಯೋಜನೆ ಮೂಲಕ ಕೃಷ್ಣಗಿರಿ ಹಾಗೂ ಧರ್ಮಪುರಿ ಜಿಲ್ಲೆಗೆ ನೀರು ಪೂರೈಕೆಯಾಗಲಿದೆ. ಈ ಎರಡು ಜಿಲ್ಲೆಯ 40 ಲಕ್ಷ ಮಂದಿಗೆ ಇದರಿಂದ ಪ್ರಯೋಜನವಾಗಲಿದೆ ಎಂದು ಹೇಳಲಾಗಿದೆ.
ಈ ಯೋಜನೆಯು ವಿವಾದಿತ ಹೊಗೇನಕಲ್ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಹಿನ್ನಲೆಯಲ್ಲಿ ಕರ್ನಾಟಕ ತೀವ್ರ ವಿರೋಧ ವ್ಯಕ್ತಪಡಿಸಿತ್ತು. 2008ರಲ್ಲಿ ಕನ್ನಡಪರ ಸಂಘಟನೆಗಳು ಯೋಜನೆ ವಿರುದ್ಧ ಬೀದಿಗಿಳಿದು ಪ್ರತಿಭಟಿಸಿದ್ದವು.

--
ತಮಿಳುನಾಡು ಸರ್ಕಾರ ಇಂತಹ ಬೇಡಿಕೆ ಇಡಬಾರದು. ನಾವು ನಮ್ಮ ಕಾನೂನು ತಜ್ಞರೊಂದಿಗೆ ಚರ್ಚಿಸಿ ಸೂಕ್ತ ಉತ್ತರ ನೀಡುತ್ತೇವೆ.
- ಎಂ.ಬಿ.ಪಾಟೀಲ್ ಜಲಸಂಪನ್ಮೂಲ ಸಚಿವ

- ಕನ್ನಡಪ್ರಭ ಪ್ರತಿನಿಧಿಯಿಂದ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.