ಕೃಷ್ಣ ಮಠದಲ್ಲಿ ಕುರುಬರು ಪಾಲು ಕೇಳೋದು ಸರಿಯಲ್ಲ
ಕ.ಪ್ರ.ವಾರ್ತೆ, ಉಡುಪಿ, ನ. 1-
ಕುರುಬರು ಕನಕ ಸಿದ್ಧಾಂತ ಅರ್ಥಾತ್ ಮಧ್ವ ಸಿದ್ಧಾಂತ ಸ್ವೀಕರಿಸಿದರೆ ಅವರಿಗೆ ಉಡುಪಿಯಲ್ಲಿಯೇ ಪ್ರತ್ಯೇಕ ಮಠ ಸ್ಥಾಪನೆಗೆ ಅವಕಾಶ ನೀಡಲಾಗುವುದು ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಘೋಷಿಸಿದ್ದಾರೆ.
ಶುಕ್ರವಾರ ಪೇಜಾವರ ಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕನಕದಾಸರೇ ಮಧ್ವ ಸಿದ್ಧಾಂತ ಒಪ್ಪಿ ಮಧ್ವ ದೀಕ್ಷೆಯನ್ನೂ ಪಡೆದಿದ್ದರು. ಅವರು ಒಪ್ಪಿದ ಸಿದ್ಧಾಂತವನ್ನು ಕುರುಬರೂ ಒಪ್ಪಿ ಬಂದರೆ ಉಡುಪಿಯಲ್ಲಿ ಮಠ ಸ್ಥಾಪನೆಗೆ ಅವಕಾಶ ನೀಡಲಾಗುವುದು. ಆದರೆ, ಈ ಹೊಸ ಮಠದವರಿಗೆ ಕೃಷ್ಣ ಮಠದಲ್ಲಿ ಕೃಷ್ಣನನ್ನು ಪೂಜಿಸುವ ಅಧಿಕಾರ ಮಾತ್ರ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕೃಷ್ಣ ಮಠದಲ್ಲಿರುವ ಕೃಷ್ಣನ ವಿಗ್ರಹ ಪೂಜಿಸುವ ಅಧಿಕಾರ ಮೊದಲಿನಿಂದಲೂ ಅಷ್ಟ ಮಠಗಳಿಗೆ ಮಾತ್ರ ಸೀಮಿತ. ಉಡುಪಿಯಲ್ಲಿರುವ ಉತ್ತರಾಧಿ ಮಠ, ರಾಘವೇಂದ್ರ ಮಠಗಳಿಗೂ ಕೃಷ್ಣ ಮಠದಲ್ಲಿ ಪೂಜೆ ಮಾಡುವ ಅಧಿಕಾರ ಇಲ್ಲ. ಹಾಗಿರುವಾಗ ಕುರುಬರಾಗಲಿ ಅಥವಾ ಬೇರೆಯವರಾಗಲಿ ಕೃಷ್ಣ ಮಠದಲ್ಲಿ ಪೂಜೆ ಮಾಡುವ ಅಧಿಕಾರ ನೀಡುವುದಕ್ಕೆ ಸಾಧ್ಯವಿಲ್ಲ. ಕೃಷ್ಣ ಮಠದಲ್ಲಿ ತಮಗೂ ಪಾಲು ನೀಡಬೇಕು ಎಂದು ಕುರುಬರು ಹೇಳುವುದರಲ್ಲಿ ಅರ್ಥ ಇಲ್ಲ. ಕನಕದಾಸರು ತಿರುಪತಿಗೂ ಹೋಗಿದ್ದರು. ಆದರೆ, ತಿರುಪತಿ ದೇವಾಲಯದಲ್ಲಿಯೂ ತಮಗೆ ಪಾಲಿದೆ ಎಂದು ಕುರುಬರು ಕೇಳುವುದಿಲ್ಲ. ಹಾಗಿರುವಾಗ ಕೃಷ್ಣ ಮಠದಲ್ಲಿ ಪಾಲಿದೆ ಎಂದು ಕೇಳುವುದು ಸರಿಯಲ್ಲ ಎಂದರು.
ವಿಗ್ರಹ ಸ್ಥಾಪನೆ ಆಗ್ರಹ ಸರಿಯಲ್ಲ: ಕೃಷ್ಣ ಮಠದಲ್ಲಿ ಕೃಷ್ಣನ ವಿಗ್ರಹದ ಪಕ್ಕದಲ್ಲಿ ಕನಕದಾಸರ ವಿಗ್ರಹ ಸ್ಥಾಪಿಸಬೇಕು ಎಂಬ ಹೊಸ ಬೇಡಿಕೆ ಆರಂಭವಾಗಿದೆ. ಕನಕದಾಸರು ಪಂಡರಾಪುರಕ್ಕೂ ಹೋಗಿದ್ದರು. ಆದರೆ, ಕುರುಬರು ಅಲ್ಲಿಯೂ ದೇವರ ವಿಗ್ರಹದ ಪಕ್ಕದಲ್ಲಿ ಕನಕದಾಸರ ವಿಗ್ರಹ ಸ್ಥಾಪಿಸಬೇಕೆಂದು ಕೇಳುತ್ತಿಲ್ಲ. ಹಾಗಿರುವಾಗ ಕೃಷ್ಣ ಮಠದಲ್ಲಿ ಮಾತ್ರ ಸ್ಥಾಪಿಸಬೇಕು ಎಂಬ ಆಗ್ರಹ ಸರಿಯಲ್ಲ. ಬಸವಣ್ಣನವರೂ ಭಕ್ತಿ ದೀಕ್ಷೆ ನೀಡಿದ್ದರು, ವೀರಶೈವ ಮಠಾಧೀಶರೂ ಲಿಂಗ ದೀಕ್ಷೆ ನೀಡುತ್ತಿದ್ದಾರೆ, ಕ್ರೈಸ್ತ ಧರ್ಮ ಗುರುಗಳೂ ಹಿಂದೂಗಳಿಗೆ ದೀಕ್ಷೆ ನೀಡಿದ ಉದಾಹರಣೆಗಳಿವೆ. ನಾನೂ ಮಧ್ವ ದೀಕ್ಷೆ ನೀಡುತ್ತೇನೆ ಎಂದಿರುವುದರಲ್ಲಿ ತಪ್ಪೇನಿದೆ? ತಾವಾಗಿಯೇ ಮಧ್ವ ಸಿದ್ಧಾಂತ ಒಪ್ಪಿಕೊಂಡು ಬರುವವರಿಗೆ, ಅವರು ಕುರುಬರೂ ಆಗಿರಬಹುದು, ಮಾದಿಗರು ಅಥವಾ ದಲಿತರೂ ಆಗಿರಬಹುದು, ಅವರಿಗೆ ದೀಕ್ಷೆ ನೀಡುವುದು ಧರ್ಮಗುರುವಾಗಿ ನನ್ನ ಕರ್ತವ್ಯ. ಆದ್ದರಿಂದ ನಾನು ಯಾರ ಕ್ಷಮೆಯನ್ನೂ ಕೇಳುವ ಪ್ರಸಂಗವೇ ಇಲ್ಲ ಎಂದರು.
ದೀಕ್ಷೆ ನೀಡಲ್ಲ ಎಂದರೆ ಇನ್ನೂ ದೊಡ್ಡ ವಿವಾದವಾಗುತ್ತಿತ್ತು!
ಬಾಗಲಕೋಟೆಯಲ್ಲಿ ಪತ್ರಿಕಾ ಸಂದರ್ಶನದ ಸಂದರ್ಭದಲ್ಲಿ ಕುರುಬರಿಗೆ ಮಧ್ವ ದೀಕ್ಷೆ ನೀಡುತ್ತೀರಾ ಎಂದು ಮಾಧ್ಯಮದವರು ಕೇಳಿದಾಗ ಅತ್ಯಂತ ಸಹಜವಾಗಿಯೇ ಹೌದು ಎಂದು ಹೇಳಿದ್ದೇನೆ. ಅದರಲ್ಲಿ ವಿವಾದವಾಗುವಂಥದ್ದೇನೂ ಇರಲಿಲ್ಲ. ಆದರೂ, ನನ್ನ ವಿರುದ್ಧ ವಿವಾದ ಮಾಡುವುದಕ್ಕಾಗಿಯೇ ಕಾಯುತ್ತಿರುವ ಎಡಪಂಥೀಯರು ಅದನ್ನು ವಿವಾದ ಮಾಡಿದರು. ಒಂದು ವೇಳೆ ಕುರುಬರಿಗೆ ದೀಕ್ಷೆ ನೀಡುವುದಿಲ್ಲ ಎಂದು ಹೇಳಿದ್ದರೆ ಈಗ ಆಗಿರುವ ವಿವಾದಕ್ಕಿಂತಲೂ ದೊಡ್ಡ ವಿವಾದ ಮಾಡುತ್ತಿದ್ದರು ಎಂದು ಪೇಜಾವರ ಶ್ರೀಗಳು ವಿಶ್ಲೇಷಿಸಿದರು.
ಲಿಂಗಾಯತರು ಹಿಂದೂಗಳಲ್ಲ ಎಂದು ಮಾತೆ ಮಹಾದೇವಿ ಹೇಳಿದ್ದಾರೆ. ಈ ವಾದವನ್ನು ನಾನು ಒಪ್ಪುವುದಿಲ್ಲ. ಶಿವ, ವಿಷ್ಣು ಮುಂತಾದ ಹಿಂದೂ ದೇವತೆಗಳನ್ನು ಆರಾಧಿಸುವವರು ಜಾತಿ ವ್ಯವಸ್ಥೆಯಲ್ಲಿ ಒಪ್ಪಲಿ ಅಥವಾ ಒಪ್ಪದಿರಲಿ, ಅವರೆಲ್ಲಾ ಹಿಂದೂಗಳೇ ಆಗಿದ್ದಾರೆ. ಆರ್ಯ ಸಮಾಜ, ರಾಮಕೃಷ್ಣಾಶ್ರಮ, ಸ್ವಾಮಿನಾರಾಯಣ ಪಂಥ, ಚೈತನ್ಯ ಪಂಥ ಇವರೆಲ್ಲರೂ ಹಿಂದೂಗಳೇ ಆಗಿದ್ದಾರೆ. ಆದ್ದರಿಂದ ಶಿವವನ್ನು ಪೂಜಿಸುವ ಲಿಂಗಾಯತರೂ ಹಿಂದೂಗಳೇ ಆಗಿದ್ದಾರೆ. ಅವರು ಹಿಂದೂ ಧರ್ಮದಿಂದ ಬೇರ್ಪಡುವ ಬಗ್ಗೆ ಆಲೋಚಿಸಬಾರದು.
- ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠಾಧೀಶ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

