ಬಳ್ಳಾರಿ: ಕೊಲೆ, ಅಪಹರಣದ ವಿಚಾರಣಾಧೀನ ಕೈದಿಗಳು ಪರಾರಿ
ಬಳ್ಳಾರಿ: ಕೊಲೆ ಹಾಗೂ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವಿಚಾರಣಾಧೀನ ಕೈದಿಗಳು ಬಳ್ಳಾರಿ ಕೇಂದ್ರ ಕಾರಾಗೃಹದಿಂದ ಗುರುವಾರ ಮಧ್ಯರಾತ್ರಿ ಪರಾರಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕಾರಾಗೃಹದ ಇಬ್ಬರು ವೀಕ್ಷಕರನ್ನು ಅಮಾನತು ಮಾಡಲಾಗಿದ್ದು, ಒಬ್ಬ ಜೈಲರ್ ಮೇಲೆ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.
ಬಿಜಾಪುರ ಜಿಲ್ಲೆಯ, ಸಿಂದಗಿ ತಾಲೂಕಿನ ಗುಂದಗಿ ಗ್ರಾಮದ ರೇವಣ್ಣ (22) ಮತ್ತು ಅಯ್ಯಾಳಪ್ಪ(23) ಪರಾರಿಯಾದವರು. ಇವರು ಎರಡು ಕೊಲೆ ಮತ್ತು ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸುತ್ತಿದ್ದು, ಆ.26, 2012ರಿಂದ ಜೈಲ್‌ನಲ್ಲಿದ್ದರು. ಗುರುವಾರ ವಿಚಾರಣೆಗೆಂದು ಐವರು ಆರೋಪಿಗಳೊಂದಿಗೆ ಈ ಇಬ್ಬರನ್ನೂ ಹೊಸಪೇಟೆಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು.
ನಡೆದಿದ್ದೇನು?: ಜೈಲಿನ 'ಡಿ' ಬ್ಲಾಕ್‌ನಲ್ಲಿದ್ದ ಈ ಇಬ್ಬರಿದ್ದ ಕೋಣೆಯಲ್ಲಿ ಒಟ್ಟು 51 ಕೈದಿಗಳಿದ್ದರು. ಪರಾರಿಯಾಗಿರುವ ಈ ಇಬ್ಬರು ಜೈಲ್‌ನ ಕಬ್ಬಿಣದ ಸರಳನ್ನು ಮುರಿದು ಹೊರಗೆ ಹೋಗಿ ಟವಲ್, ಲುಂಗಿ ಇತರೆ ಬಟ್ಟೆಗಳಿಂದ ಹಗ್ಗದ ಮಾದರಿಯನ್ನು ತಯಾರಿಸಿದ್ದಾರೆ. ಜೈಲಿನ ಉತ್ತರ ಭಾಗದಲ್ಲಿರುವ ಗೋಡೆಯ ಮೇಲ್ಭಾಗದಲ್ಲಿ ವಿದ್ಯುತ್ ತಂತಿಗಳಿಗೆ ಅಳವಡಿಸಲು ಇಟ್ಟಿದ್ದ ಕಬ್ಬಿಣದ ರಾಡಿಗೆ ಉಕ್ಕಿನ ಕೊಂಡಿ ಹಾಕಿ, ಮೇಲೇರಿ ಪರಾರಿಯಾಗಿದ್ದಾರೆ.
ವಿದ್ಯುತ್ ತಂತಿಗಳು ಕಳೆದ 3 ವರ್ಷಗಳಿಂದ ಕೆಲಸ ಮಾಡುತ್ತಿರಲಿಲ್ಲ. ಶುಕ್ರವಾರ ಬೆಳಗ್ಗೆ ಜೈಲಿನ ಸಿಬ್ಬಂದಿ ಕೈದಿಗಳನ್ನು ಎಣಿಸಿದಾಗ ಈ ಇಬ್ಬರು ಪರಾರಿಯಾಗಿರುವುದು ಬೆಳಕಿಗೆ ಬಂದಿದೆ. ಬಂಧೀಖಾನೆ ಡಿಐಜಿ ಎಂ.ಸಿ. ವಿಶ್ವನಾಥಯ್ಯ ಕಾರಾಗೃಹವನ್ನು ಪರಿಶೀಲಿಸಿ ಜೈಲ್ ವೀಕ್ಷಕನ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುತ್ತದೆ ಎಂದು ತಿಳಿಸಿದರು. ಎಸ್ಪಿ ಚೇತನ್‌ಸಿಂಗ್ ರಾಥೋರ್, ಡಿವೈಎಸ್ಪಿ ಮುರುಗಣ್ಣನವರ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಹಚರ ಕೈದಿಗಳಿಂದ ಮಾಹಿತಿ ಪಡೆದಿದ್ದಾರೆ. ಸುಮಾರು ದಿನಗಳಿಂದ ಸರಳನ್ನು ಮುರಿಯಲು ಯತ್ನಿಸುತ್ತಿದ್ದು, ಕಟ್ ಮಾಡಿರುವುದು ಗೊತ್ತಾಗಬಾರದೆಂದು ಸರಳಿಗೆ ಬಟ್ಟೆ ಕಟ್ಟುತ್ತಿದ್ದರು. ಇನ್ನು ಪರಾರಿಯಾಗಿರುವ ಕೈದಿಗಳು ಬಟ್ಟೆ ಹಾಗೂ ಸರಳನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

