ಪ್ರಧಾನ ಸುದ್ದಿ

ಮಂಗಳದ ಈ ಸುದಿನ ಮಧುರವಾಗಲಿ..

ಮಂಗಳದ ಈ ಸುದಿನ ಮಧುರವಾಗಲಿ..
Published On :

ನವದೆಹಲಿ: ಟಿಕ್ ಟಿಕ್ ಟಿಕ್...!
ಆಂಧ್ರದ ಶ್ರೀಹರಿಕೋಟಾದ ಸತೀಶ್‌ಧವನ್ ಬಾಹ್ಯಾಕಾಶ ಉಡ್ಡಯನ ಕೇಂದ್ರದಲ್ಲೀಗ ಕೇವಲ ಗಡಿಯಾರದ ಟಿಕ್‌ಟಿಕ್... ಸದ್ದಷ್ಟೇ ಕೇಳಿಸುತ್ತಿದೆ. ಇಲ್ಲಿ ಬೀಡುಬಿಟ್ಟಿರುವ ನೂರಾರು ತಂತ್ರಜ್ಞರು, ವಿಜ್ಞಾನಿಗಳ ಕಳೆದ 18 ತಿಂಗಳ ಪರಿಶ್ರಮ ಈಗ ಕೊನೆಯ ಹಂತ ತಲುಪಿದೆ. ನಭಕ್ಕೇರಲು ರಾಕೆಟ್ ಸಿದ್ಧವಾಗಿದೆ. ಉಪಗ್ರಹ ಕೂಡ ರಾಕೆಟ್‌ನ ಬೆನ್ನೇರಿ ಕುಳಿತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮಧ್ಯಾಹ್ನ 2.38ರ ವೇಳೆಗೆ ಭಾರತದ ಮಹತ್ವಾಕಾಂಕ್ಷೆಯ 'ಮಂಗಳಯಾನ'ಕ್ಕೆ ಚಾಲನೆ ಸಿಗಲಿದೆ. 1350 ಕೆ.ಜಿ. ತೂಕದ ಉಪಗ್ರಹವನ್ನು ಹೊತ್ತ ಪಿಎಸ್‌ಎಲ್‌ವಿ- 25ಸಿ ರಾಕೆಟ್ ನಭಕ್ಕೇರಲಿದೆ. 9 ತಿಂಗಳಷ್ಟು ದೀರ್ಘ ಪ್ರಯಾಣ ಆರಂಭಿಸಲಿದೆ. ಇಡೀ ವಿಶ್ವವೇ ಬೆರಗಿನಿಂದ ನೋಡುವಂಥ ಸಾಹಸಕ್ಕೆ ಕೈಹಾಕಿರುವ ಇಸ್ರೋದ ಪ್ರಯತ್ನಕ್ಕೆ ಮಂಗಳವಾಗಲಿ ಎಂದು ಇಡೀ ದೇಶ ಹಾರೈಸುತ್ತಿದೆ.

15 ತಿಂಗಳಲ್ಲಿ ರೆಡಿಯಾಯ್ತು ಉಪಗ್ರಹ: ಭಾರತದ ಪಾಲಿನ ಹೆಮ್ಮೆಯ ಯೋಜನೆಯಾದ ಮಂಗಳಯಾನ ಉಪಗ್ರಹವು ನ್ಯಾನೋ ಕಾರಿನ ಗಾತ್ರ ಹೊಂದಿದೆ. 150 ಕೋಟಿ ವೆಚ್ಚದ ಈ ಉಪಗ್ರಹವನ್ನು ಸಿದ್ಧಪಡಿಸಿದ್ದು ಕೇವಲ 15 ತಿಂಗಳಲ್ಲಿ. ಇಸ್ರೋದ ಇತಿಹಾಸದಲ್ಲೇ ಉಪಗ್ರಹವೊಂದನ್ನು ಇಷ್ಟೊಂದು ಕಡಿಮೆ ಅವಧಿಯಲ್ಲಿ ಸಿದ್ಧಪಡಿಸಿದ್ದು ಇದೇ ಮೊದಲು.  ಈ ಉಪಗ್ರಹ ಆಘ್ರಾಣಿಸುವ, ರುಚಿಹಿಡಿಯುವ ಮತ್ತು ಮಂಗಳ ವಾತಾವರಣವನ್ನು ಗಮನಿಸುವ ಸಾಧನಗಳನ್ನು ಒಳಗೊಂಡಿದೆ. ದೇಶೀಯವಾಗಿ ನಿರ್ಮಿತ 5 ಪೇಲೋಡ್‌ಗಳನ್ನು ಈ ಉಪಗ್ರಹ ಹೊಂದಿದೆ. ಇದು ಮಂಗಳಗ್ರಹದಲ್ಲಿ ಜೀವಿಗಳಿರುವ ಸಾಧ್ಯತೆ ಕುರಿತು ಪರೀಕ್ಷೆ ನಡೆಸಲಿದೆ. ಒಮ್ಮೆ ಈ ಉಪಗ್ರಹ ಮಂಗಳನನ್ನು ಸಮೀಪಿಸಿದ ಬಳಿಕ ಆರು ತಿಂಗಳ ಕಾಲ ಕಕ್ಷೆಯಲ್ಲಿ ಸುತ್ತುಹಾಕಲಿದೆ.

ಏಷ್ಯಾದ ಬಾಹ್ಯಾಕಾಶ ರೇಸ್?: ಅಮೆರಿಕ, ರಷ್ಯಾ, ಯುರೋಪ್ ಮಾತ್ರವಲ್ಲ ಏಷ್ಯಾದ ಪ್ರಮುಖ ರಾಷ್ಟ್ರಗಳಾದ ಚೀನಾ ಮತ್ತು ಜಪಾನ್ ಕೂಡ ಈ ಹಿಂದೆ ಮಂಗಳಗ್ರಹಯಾನಕ್ಕೆ ಪ್ರಯತ್ನ ನಡೆಸಿದ್ದವು. ಆದರೆ, ಅವುಗಳು ವಿಫಲವಾಗಿದ್ದವು. ಈ ಹಿನ್ನೆಲೆಯಲ್ಲಿ ಚಂದ್ರಯಾನ-1 ಯೋಜನೆಯ ಯಶಸ್ಸಿನಿಂದ ಬೀಗುತ್ತಿರುವ  ಇಸ್ರೋ ತಾನು ಕೂಡ ಮಂಗಳಯಾನಕ್ಕೆ ಕೈಹಾಕಿದೆ. ಮಂಗಳಯಾನಕ್ಕೆ ಕೈಹಾಕಿದ ಏಷ್ಯಾದ ಮೊದಲ ರಾಷ್ಟ್ರ ಎನ್ನುವ ಹೆಗ್ಗಳಿಕೆ ಪಡೆಯುವ ಹುಮ್ಮಸ್ಸಿನಲ್ಲಿ ಇಸ್ರೋ ತರಾತುರಿಯಲ್ಲಿ ಈ ಯೋಜನೆಗೆ ಸಿದ್ಧತೆ ನಡೆಸಿದೆ ಎಂದು ಹೇಳಲಾಗಿದೆ.  ಇಸ್ರೋ ಅಧ್ಯಕ್ಷ ಡಾ.ಕೆ. ರಾಧಾಕೃಷ್ಣನ್ ಇಂತಹ ಅಭಿಪ್ರಾಯವನ್ನು ತಳ್ಳಿಹಾಕಿದ್ದಾರೆ.

ಮಾರ್ಸ್ ಆರ್ಬಿಟರ್ ತಂಡ
ಮಾರ್ಸ್ ಆರ್ಬಿಟರ್ ಪ್ರಾಜೆಕ್ಟ್‌ನ ನಿರ್ದೇಶಕ ಡಾ. ಎಂ. ಅಣ್ಣಾದೊರೈ, ಎಸ್.ಕೆ. ಶಿವಕುಮಾರ್ ಅವರು ಉಪಗ್ರಹದ ವಿನ್ಯಾಸ ಮತ್ತು ಅಭಿವೃದ್ಧಿಯ ಮೇಲುಸ್ತುವಾರಿ ನೋಡಿಕೊಳ್ಳಲಿದ್ದಾರೆ.

ಉಡಾವಣಾ ಸಮಯ- ಮಧ್ಯಾಹ್ನ  2.38
ಮಂಗಳಯಾನ  9 ತಿಂಗಳ ಪ್ರಯಾಣ
ಉಪಗ್ರಹ ವೆಚ್ಚ  ರು.150 ಕೋಟಿ

ಮಂಗಳನ ಸುತ್ತ
ಮಂಗಳಯಾನ ಭಾರತದ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಯೋಜನೆ. ಇದು ಇಸ್ರೋದ ತಾಂತ್ರಿಕ ಶಕ್ತಿ ಪ್ರದರ್ಶನಕ್ಕೆ ಅತ್ಯುತ್ತಮ ವೇದಿಕೆಯೂ ಹೌದು. ನ.5ರಂದು ನಭಕ್ಕೆ ನೆಗೆಯಲಿರುವ 1350 ಕೆ.ಜಿ. ತೂಕದ ಮಾರ್ಸ್ ಆರ್ಬಿಟರ್ ಮಂಗಳಗ್ರಹ ತಲುಪುವ ಮುನ್ನ 9 ತಿಂಗಳ ಪಯಣ ನಡೆಸಲಿದೆ. ನಂತರ ಮಂಗಳಗ್ರಹದ ಕಕ್ಷೆಯಲ್ಲಿ ಸುತ್ತುಹಾಕಲಿರುವ ಈ ಆರ್ಬಿಟರ್ ಅನೇಕ ವೈಜ್ಞಾನಿಕ ಪರೀಕ್ಷೆಗಳನ್ನು ನಡೆಸಲಿದೆ.

ಉಪಗ್ರಹ ಕ್ರಮಿಸುವ ದೂರ- 78000  ಲಕ್ಷ ಕಿ.ಮೀ.
ಮಂಗಳಕ್ಕೆ ಸುತ್ತು 6 ತಿಂಗಳು  
ಅಂಗಾರಕನ ಬಳಿ ಉಳಿವ ಸಮಯ

ಪಯಣ- 300ದಿನಗಳು
ಮಂಗಳಯಾನ ಯೋಜನೆಯು ಭವಿಷ್ಯದಲ್ಲಿ ಅಂತಾರಾಷ್ಟ್ರೀಯ ಸಹಭಾಗಿತ್ವದೊಂದಿಗೆ ಇನ್ನಷ್ಟು ಕ್ಲಿಷ್ಟಕರ ಬಾಹ್ಯಾಕಾಶ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಅವಕಾಶ ಮಾಡಿಕೊಡಲಿದೆ. ಈ ಯೋಜನೆ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಪಾಲಿಗೆ ಪ್ರಮುಖ ಮೈಲಿಗಲ್ಲಾಗಲಿದೆ.
- ಕಸ್ತೂರಿ ರಂಗನ್, ಇಸ್ರೋ ಮಾಜಿ ಅಧ್ಯಕ್ಷ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.