ಪ್ರಧಾನ ಸುದ್ದಿ

ಬೆಳ್ತಂಗಡಿಯಲ್ಲಿ ನಕ್ಸಲ್ ಭಾನಗಡಿ

Published On :

ಕ.ಪ್ರ.ವಾರ್ತೆ  ಬೆಳ್ತಂಗಡಿ  ನ. 9
ಬೆಳ್ತಂಗಡಿ ತಾಲೂಕಿನಲ್ಲಿ ಶಂಕಿತ ನಕ್ಸಲ್ ತಂಡದ ಸದಸ್ಯರು ಮತ್ತೆ ಕ್ರೌರ್ಯ ಮೆರೆದಿದ್ದಾರೆ. ಕುತ್ಲೂರು ಗ್ರಾಮದ ನಿವಾಸಿ, ನಾರಾವಿ ಗ್ರಾಪಂ ಸದಸ್ಯ ರಾಮಚಂದ್ರ ಭಟ್ಟರ ಮನೆ ಆವರಣಕ್ಕೆ ಶುಕ್ರವಾರ ತಡರಾತ್ರಿ ನುಗ್ಗಿ ಅವರ ಓಮ್ನಿ ವ್ಯಾನ್ ಅನ್ನು ಸುಟ್ಟು ಹಾಕಿದ್ದಲ್ಲದೆ ಬೈಕ್ ಅನ್ನು ಭಸ್ಮಗೊಳಿಸಲು ವಿಫಲ ಯತ್ನ ನಡೆಸಿದ್ದಾರೆ.
 ಸುಮಾರು 10-15 ಜನರಿದ್ದ ನಕ್ಸಲರ ತಂಡದಿಂದಲೇ ಈ ಕೃತ್ಯವೆಸಗಿರುವ ಶಂಕೆ ವ್ಯಕ್ತವಾಗಿದೆ. ತಡರಾತ್ರಿ 2 ಗಂಟೆ ಸುಮಾರಿಗೆ ಆಗಮಿಸಿದ ಈ ತಂಡದ ಒಬ್ಬ 'ಭಟ್ಟರೇ ಬಾಗಿಲು ತೆಗೆಯಿರಿ' ಎಂದು ಕರೆದಿದ್ದಾನೆ. ಹಾಲ್‌ನಲ್ಲಿಯೇ ಮಲಗಿದ್ದ ಭಟ್ಟರು ಕೂಡಲೇ ಎದ್ದು ಬಾಗಿಲು ಬಡಿಯುತ್ತಿರುವುದು ಯಾರೆಂದು ಕಿಟಕಿಯಲ್ಲಿ ನೋಡಿದ್ದಾರೆ. ಅಪರಿಚಿತ ಮುಖಗಳನ್ನು ಕಂಡ ಅವರು ಬಾಗಿಲು ತೆರೆದಿಲ್ಲ. ಹಲವಾರು ಬಾರಿ ಬಡಿದರೂ ಭಟ್ಟರು ಬಾಗಿಲು ತೆರೆಯದಿದ್ದಾಗ ಆಕ್ರೋಶಗೊಂಡ ತಂಡ ಅಂಗಳದ ಶೆಡ್‌ನಲ್ಲಿ ನಿಲ್ಲಿಸಿದ್ದ ಮಾರುತಿ ಓಮ್ನಿ ಕಾರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಗ್ಯಾಸ್ ಹೊಂದಿದ್ದ ವ್ಯಾನ್ ಕೂಡಲೇ ಸ್ಫೋಟಗೊಂಡು ಕರಕಲಾಗಿದೆ. ಇಷ್ಟಕ್ಕೇ ಸಮಾಧಾನಗೊಳ್ಳದ ತಂಡ ಅಂಗಳದಲ್ಲಿ ನಿಲ್ಲಿಸಿದ್ದ ಬೈಕ್‌ಗೆ ಬೆಂಕಿ ಹೊತ್ತಿಸಿ ತೆರಳಿದೆ. ಕೂಡಲೇ ಭಟ್ಟರು ಕಿಟಕಿಯಿಂದಲೇ ನೀರನ್ನು ಹಾಕಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕರಪತ್ರಗಳು, ಬ್ಯಾನರ್ ಪತ್ತೆ: ತಂಡದಲ್ಲಿ 10-15 ಮಂದಿ ಇದ್ದರೂ, ಮನೆಯ ಆವರಣದೊಳಗೆ ಕೇವಲ ಐವರು ಮಾತ್ರ ಪ್ರವೇಶಿಸಿದ್ದರು. ಸುಮಾರು ವಿವಿಧ ಘೋಷಣೆಗಳುಳ್ಳ ಏಳೆಂಟು ಕರಪತ್ರಗಳನ್ನು ಅಲ್ಲಲ್ಲಿ ಬಿಸಾಡಿದ್ದಾರೆ. ಸಮೀಪದಲ್ಲಿಯೇ ಬಟ್ಟೆಯ ಬ್ಯಾನರೊಂದನ್ನು ಕಟ್ಟಿ ಹೋಗಿದ್ದಾರೆ. ಸುಮಾರು ಅರ್ಧ ಗಂಟೆ ಅವಧಿಯಲ್ಲಿ ಈ ಕೃತ್ಯವನ್ನು ಎಸಗಿ ಮರಳಿದ್ದಾರೆ. ಘಟನಾ ಸ್ಥಳಕ್ಕೆ ಐಜಿ ಪ್ರತಾಪ ರೆಡ್ಡಿ, ಎಎಸ್ಪಿ, ವೇಣೂರು ಠಾಣಾ ಎಸ್‌ಐ, ನಕ್ಸಲ್ ನಿಗ್ರಹ ದಳದ ಸಿಬ್ಬಂದಿ ಆಗಮಿಸಿದ್ದು ಮಹಜರು ನಡೆಸಿದ್ದಾರೆ. ಎರಡು ದಿನಗಳಲ್ಲಿ ತಂಡವನ್ನು ಪತ್ತೆ ಹಚ್ಚುವುದಾಗಿ ಪೊಲೀಸರು ಹೇಳಿದ್ದಾರೆ.

ಸ್ಥಳೀಯರೇ ಅಥವಾ ಮಾವೋವಾದಿ ನಕ್ಸಲರೇ?
ಕಾರ್ಕಳ- ನಾರಾವಿ- ಗುರುವಾಯನಕರೆ ರಾಜ್ಯ ಹೆದ್ದಾರಿಯ ಕುತ್ಲೂರುವಿನಿಂದ ಕುದುರೆಮುಖ ರಾಷ್ಟ್ರೀಯ ಉದ್ಯಾನವನಕ್ಕೆ ಪ್ರವೇಶಿಸುವ ತಿರುವು ರಸ್ತೆಯ ಸಮೀಪದಲ್ಲಿಯೇ ರಾಮಚಂದ್ರ ಭಟ್ ಅವರ ಮನೆ ಇದೆ. ಕುತ್ಲೂರು ಪರಿಸರದ ಕಾಡಿನಲ್ಲಿರುವ ಮಂದಿಯ ಪರಿಚಯ ಇರುವ ಭಟ್ಟರಿಗೆ ತಂಡದಲ್ಲಿದ್ದ ಸದಸ್ಯರು ಸ್ಥಳೀಯರಲ್ಲ ಎಂದೆನಿಸಿದೆ. ತಂಡ ಬಿಸಾಡಿ ಹೋಗಿರುವ ಕರಪತ್ರ ಹಾಗೂ ಬ್ಯಾನರ್‌ನಲ್ಲಿ ಸಿಪಿಐ ಮಾವೋವಾದಿ ಹೆಸರಲ್ಲಿ ಘೋಷಣೆಗಳಿವೆ. ತಂಡದಲ್ಲಿ ವಿಕ್ರಮ್ ಗೌಡ ಇದ್ದ ಎಂಬ ಶಂಕೆಯೂ ವ್ಯಕ್ತವಾಗಿದೆ.  ಇನ್ನೊಂದೆಡೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿರುವ ನಿವಾಸಿಗಳು ತಾವಾಗಿಯೇ ಹೊರ ಬರುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಆಗ ನಾರಾವಿ ಗ್ರಾಪಂ ಸದಸ್ಯರಾಗಿರುವ ರಾಮಚಂದ್ರ ಭಟ್, ಉದ್ಯಾನವನದ ನಿವಾಸಿಗಳಿಗೆ ಪರಿಹಾರ ಇತ್ಯಾದಿಗಳ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಿ ಶಾಂತಿಯುತವಾಗಿ ಅಲ್ಲಿಂದ ಹೊರ ಬರುವಂತೆ ಹಲವು ವರ್ಷಗಳಿಂದ ಯತ್ನಿಸುತ್ತಿದ್ದರು. ಇವರ ಪ್ರಯತ್ನದಿಂದಾಗಿ ಬೆಳ್ತಂಗಡಿ, ಶೃಂಗೇರಿ, ಚಿಕ್ಕಮಗಳೂರು, ಕಾರ್ಕಳ ತಾಲೂಕಿನ ಸುಮಾರು 30ಕ್ಕೂ ಹೆಚ್ಚು ಕುಟುಂಬಗಳು ಕಾಡಿನಿಂದ ನಾಡಿಗೆ ಬಂದಿವೆ. ಕಾಡಿನಿಂದ ಹೊರ ಬರಲಿಚ್ಛಿಸದ ಕೆಲವು ಕುಟುಂಬಗಳಲ್ಲಿ ಭಟ್ಟರ ಮೇಲೆ ಅಸಮಾಧಾನವಿದೆ. ಹೀಗಾಗಿ ಹೊರ ತಾಲೂಕಿನವರು ಈ ತಂಡದಲ್ಲಿದ್ದಿರಬಹುದು ಎಂಬ ಅನುಮಾನವೂ ಇದೆ. ಅಲ್ಲದೆ ನಕ್ಸಲರು ಬೆರಳೆಣಿಕೆಯ ಸಂಖ್ಯೆಯಲ್ಲಿ ಮಾತ್ರ ಇದ್ದಾರೆ ಎಂಬ ಮಾಹಿತಿಯೂ ಇರುವುದರಿಂದ ಬಂದ ಅಷ್ಟೂ ಜನರು ನಕ್ಸಲರು ಆಗಿರಲು ಸಾಧ್ಯವಿಲ್ಲ ಎನ್ನಲಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.