ಪ್ರಧಾನ ಸುದ್ದಿ

ಶಾದಿಭಾಗ್ಯಕ್ಕೆ ಮುಸ್ಲಿಮರಿಂದಲೇ ತೀವ್ರ ವಿರೋಧ

ಶಾದಿಭಾಗ್ಯಕ್ಕೆ ಮುಸ್ಲಿಮರಿಂದಲೇ ತೀವ್ರ ವಿರೋಧ
Published On :

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಶಾದಿಭಾಗ್ಯ ಯೋಜನೆಗೆ ಮುಸ್ಲಿಂ ಸಮುದಾಯದ ಗಣ್ಯರಿಂದಲೇ ತೀವ್ರ ವಿರೋಧ ವ್ಯಕ್ತವಾಗಿದೆ.  ಸರ್ಕಾರದ ಈ ಯೋಜನೆ ಅಲ್ಪಸಂಖ್ಯಾತರನ್ನು ತುಷ್ಟೀಕರಿಸುವಂಥದ್ದು. ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುವಂತಹದ್ದು. ಈ ಮೂಲಕ ಸರ್ಕಾರ ಮುಸ್ಲಿಮರನ್ನು ಮುಖ್ಯವಾಹಿನಿಯಿಂದ ದೂರ ಮಾಡುವ ಪ್ರಯತ್ನವಾಗುತ್ತಿದೆ ಎಂಬ ಆರೋಪ ಕೇಳಿ ಬಂದಿವೆ.

ನಿಮಗೇಕೆ ಉಸಾಬರಿ?

ಶಾದಿ ಭಾಗ್ಯ ಯೋಜನೆಯಿಂದ ಸಮಾಜದ ಇತರೆ ಧರ್ಮದವರು ನಮ್ಮನ್ನು ತುಚ್ಛವಾಗಿ ಕಾಣಲು ಆರಂಭಿಸಿದ್ದಾರೆ. ಮುಸ್ಲಿಂ ಸಮುದಾಯದವರು ಸರ್ಕಾರದಿಂದ ಇಂಥ ಸೌಲಭ್ಯವನ್ನು ಎಂದೂ ಬಯಸಿರಲಿಲ್ಲ. ನಮಗೆ ಗೌರವ ಮತ್ತು ಸಮಾನತೆಯಿಂದ ಬಾಳುವುದಕ್ಕೆ ಅವಕಾಶ ಕಲ್ಪಿಸಿ ಎಂಬುದು ಮಾತ್ರ ಬೇಡಿಕೆಯಾಗಿತ್ತು. ನಮ್ಮ ಸಮುದಾಯದ ಬಡ ಹೆಣ್ಣುಮಕ್ಕಳಿಗೆ ಮದುವೆ ಮಾಡಿಸುವ ಜವಾಬ್ದಾರಿ ಸರ್ಕಾರಕ್ಕೆ ಬೇಡ. ಆ ಜವಾಬ್ದಾರಿಯನ್ನು ನಮ್ಮ ಜಮಾತ್‌ಗಳು ನೋಡಿಕೊಳ್ಳುತ್ತವೆ. ಈ ಯೋಜನೆ ಜಾರಿಗೆ ಬಂದ ನಂತರ ಬೇರೆ ಸಮುದಾಯದರು ನಮ್ಮನ್ನು ಕೆಟ್ಟದಾಗಿ ನೋಡುತ್ತಿದ್ದಾರೆ, ಚುಡಾಯಿಸುತ್ತಿದ್ದಾರೆ. ಸರ್ಕಾರದ ಯೋಜನೆಗಳಿಂದ ನಮಗೆ ಮುಜುಗರವುಂಟಾಗಿದೆ. ಈ ಯೋಜನೆಯನ್ನು ಜಾರಿಗೆ ತರುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಮ್ಮ ಸಮುದಾಯದ ಜತೆ ಚರ್ಚೆ ನಡೆಸಿಲ್ಲ. ನಾವು ಯಾರಾದರೂ ನಿಮ್ಮ ಬಳಿ ಬಂದು ನಮ್ಮ ಬಡ ಹೆಣ್ಣು ಮಕ್ಕಳ ಮದುವೆ ಮಾಡಿಸಿ ಎಂದು ಕೇಳಿದ್ದೇವೆಯೇ? ಈ ಬಗ್ಗೆ ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸುತ್ತೇನೆ.
-ಹಸನಬ್ಬ, ಕಾಂಗ್ರೆಸ್ ಮುಖಂಡ

ಕುರಾನ್‌ನಲ್ಲಿ ಹೇಳಿಲ್ಲ

ಶಾದಿಭಾಗ್ಯ ಯೋಜನೆ ಜಾರಿಗೆ ತನ್ನಿ ಎಂದು ನಮ್ಮ ಸಮುದಾಯದವರ್ಯಾರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿರಲಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ಸರ್ಕಾರದಿಂದ ದುಡ್ಡು ಪಡೆದು ಹೆಣ್ಣುಮಕ್ಕಳ ಮದುವೆ ಮಾಡುವುದಕ್ಕೆ ನಮ್ಮ ಧರ್ಮದಲ್ಲಿ ಅವಕಾಶವಿಲ್ಲ. ರಾಜಕೀಯ ಲಾಭಕ್ಕಾಗಿ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ ಎಂಬ ಅಸಮಾಧಾನ ಇತರೆ ಧರ್ಮದವರಲ್ಲಿ ಹೊಗೆಯಾಡುವುದಕ್ಕೆ ಇದರಿಂದ ಕಾರಣವಾಗಿದೆ. ಒಂದೆಡೆ ಬಿಜೆಪಿಯ ಘೋಷಿತ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರು ರಾಷ್ಟ್ರಮಟ್ಟದಲ್ಲಿ ಮುಸ್ಲಿಂ ಒಲೈಕೆಗೆ ಮುಂದಾಗಿರುವ ಸಂದರ್ಭದಲ್ಲಿ ನಮ್ಮ ರಾಜ್ಯ ಸರ್ಕಾರ ಇಂಥ ಯೋಜನೆ ಜಾರಿಗೆ ತಂದು ಸಮಾಜದ ಬಗ್ಗೆ ಹಗುರ ಭಾವನೆ ಮೂಡಿಸುವಂತ ವಾತಾವರಣ ನಿರ್ಮಿಸುವ ಅಗತ್ಯವಿತ್ತೇ?  ಸಮಾಜವನ್ನು ಒಡೆಯುವ ಇಂಥ ಯೋಜನೆ ಬೇಡ.
-ಸಗೀರ್ ಅಹ್ಮದ್, ಕಾಂಗ್ರೆಸ್ ನಾಯಕ

ಸಂವಿಧಾನ ವಿರೋಧಿ

ಯಾವುದೇ ಒಂದು ಜಾತಿ, ಪಂಗಡಕ್ಕೆ ಮಾತ್ರ ಸರ್ಕಾರಿ ಯೋಜನೆ ಜಾರಿಗೆ ತರುವಂತಿಲ್ಲ ಎಂದು ಸಂವಿಧಾನವೇ ಹೇಳಿರುವುದರಿಂದ ಸರ್ಕಾರದ ಶಾದಿಭಾಗ್ಯ ಯೋಜನೆ ಸಂವಿಧಾನ ವಿರೋಧಿಯಾಗುತ್ತದೆ. ಮೇಲಾಗಿ ಇದು ಅಲ್ಪಸಂಖ್ಯಾತರ ತುಷ್ಠೀಕರಣದ ಪರಮಾವಧಿ. ಜಾತಿ, ಧರ್ಮಗಳ ಮಧ್ಯೆ ವಿಷಬೀಜ ಬಿತ್ತುವ ಇಂತಹ ಯೋಜನೆಗಳನ್ನು ಜಾರಿಗೆ ತರುವುದು ಸರಿಯಲ್ಲ. ಮೇಲಾಗಿ ಹಣ ಕೊಟ್ಟು ಮದುವೆ ಮಾಡುವುದರಿಂದ ಸರ್ಕಾರವೇ ವರದಕ್ಷಿಣೆಯನ್ನು ಪೋಷಿಸಿದಂತಾಗುತ್ತದೆ. ಅದರಲ್ಲೂ ಯೋಜನೆಯನ್ನು ಜಿಲ್ಲೆಗೆ 20 ಮಂದಿಗೆ ಮಾತ್ರ ಎಂದು ನಿಗದಿಪಡಿಸಿರುವುದರಿಂದ ಇದು ಭ್ರಷ್ಟಾಚಾರಕ್ಕೆ ಕಾರಣವಾಗುತ್ತದೆಯೇ ಹೊರತು ನಿಜವಾದ ಫಲಾನುಭವಿಗಳಿಗೆ ತಲುಪಲು ಸಾಧ್ಯವಿಲ್ಲ. ಇದು ಸರ್ಕಾರದಲ್ಲಿ ದುಡ್ಡು ಹೊಡೆಯುವವರ ಪಾಲಿಗೆ ಮಾತ್ರ ಕಲ್ಯಾಣವಾಗಲಿದೆ ಅಷ್ಟೆ.
-ಅನ್ವರ್ ಮಾಣಿಪ್ಪಾಡಿ,  ಬಿಜೆಪಿ ಮುಖಂಡ

ಪ್ರತ್ಯೇಕತೆ ಹುಟ್ಟುಹಾಕಿದಂತೆ  

ಕೇವಲ ಮುಸ್ಲಿಂ ಹೆಣ್ಣು ಮಕ್ಕಳಿಗೆ ಮಾತ್ರ ಶಾದಿಭಾಗ್ಯ ಯೋಜನೆ ಜಾರಿಗೆ ತಂದಿರುವುದು ಸರ್ಕಾರವೇ ಪ್ರತ್ಯೇಕತೆಯನ್ನು ಹುಟ್ಟುಹಾಕಿದಂತೆ ಆಗಿದೆ. ಸರಿಯಾದ ಶಿಕ್ಷಣ ಕೊಡದೆ ಕೇವಲ ಹಣ ಕೊಟ್ಟು ಮದುವೆ ಮಾಡುವುದರಿಂದ ಅಪಾಯವೇ ಹೆಚ್ಚು. ಅವರನ್ನು ಸ್ವಾವಲಂಬಿಗಳಾಗಿ ಬದುಕುವ ವಾತಾವರಣ ನಿರ್ಮಾಣ ಮಾಡಬೇಕೇ ಹೊರತು ಮಂಚ, ಹಾಸಿಗೆ ಕೊಟ್ಟು ಮದುವೆ ಮಾಡಿದರೆ ಅವರ ಜೀವನ ಉದ್ಧಾರವಾಗುವುದಿಲ್ಲ.
-ಸಾರಾ ಅಬೂಬಕ್ಕರ್, ಸಾಹಿತಿ

ನಿಮಗಿಂತ ಟಿಪ್ಪುನೇ ವಾಸಿ

ಹಿಂದೆ ಟಿಪ್ಪೂ ಸುಲ್ತಾನ್ ಆಳ್ವಿಕೆಯಲ್ಲಿ ಬಡತನದ ಕಾರಣದಿಂದ ಯಾವ ಹೆಣ್ಣು ಮಗಳಿಗಾದರೂ ಮದುವೆಯಾಗದೇ ಇದ್ದರೆ ಸರ್ಕಾರದಿಂದಲೇ ಮದುವೆ ಮಾಡಿಸುವ ಆದೇಶ ಹೊರಡಿಸಿದ್ದ. ಇದು ಎಲ್ಲಾ ವರ್ಗದ ಹೆಣ್ಣು ಮಕ್ಕಳಿಗೂ ಅನ್ವಯವಾಗುತ್ತಿತ್ತು. ಹೀಗಾಗಿ ರಾಜ್ಯ ಸರ್ಕಾರ ಅಲ್ಪಸಂಖ್ಯಾತ ಹೆಣ್ಣು ಮಕ್ಕಳಿಗೆ ಮಾತ್ರ ಶಾದಿಭಾಗ್ಯ ಯೋಜನೆ ಜಾರಿಗೆ ತಂದಿರುವುದು ಸರಿಯಲ್ಲ. ಎಲ್ಲಾ ವರ್ಗದ ಬಡ ಹೆಣ್ಣು ಮಕ್ಕಳಿಗೂ ಯೋಜನೆ ವಿಸ್ತರಿಸಬೇಕು.
-ಡಾ. ಮುಮ್ತಾಜ್ ಅಲಿ ಖಾನ್ , ಮಾಜಿ ಸಚಿವ

ಇದು ವೋಟ್ ಬ್ಯಾಂಕ್ ರಾಜಕಾರಣವಲ್ಲದೇ ಮತ್ತೇನೂ ಅಲ್ಲ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಅಲ್ಪಸಂಖ್ಯಾತರ ಮತಗಳ ಮೇಲೆ ಕಣ್ಣಿಟ್ಟು ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ. ಅಲ್ಪಸಂಖ್ಯಾತರಿಗೆ ಬೇರೆ ರೀತಿ ಸೌಲಭ್ಯವನ್ನು ಕೊಡಬಹುದಾಗಿತ್ತು. ಅದನ್ನು ಬಿಟ್ಟು ಶಾದಿಭಾಗ್ಯ ಯೋಜನೆ ಜಾರಿಗೆ ತಂದಿರುವುದು ಸರಿಯಲ್ಲ.
-ಖುಸ್ರೋ ಖುರೇಶಿ, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ

ಶಾದಿಭಾಗ್ಯ ಸಮುದಾಯದ ಎಲ್ಲ ವರ್ಗದವರಿಗೆ ತಲುಪುವಂತದಲ್ಲ. ಅಲ್ಪಸಂಖ್ಯಾತರಿಗೆ ಅಭಿವೃದ್ಧಿಗೆ ಯೋಜನೆಗಳು ಅಗತ್ಯ. ಆದರೆ ಸಮಾಜದ ಎಲ್ಲ ವರ್ಗದಲ್ಲೂ ಬಡವರಿದ್ದಾರೆ. ಅವರಿಗೂ ಇದು ತಲುಪಲಿ. ಆಗ ಪ್ರತ್ಯೇಕತೆ ಅವಕಾಶ ಇರುವುದಿಲ್ಲ.
-ಜಿ.ಎ.ಬಾವಾ, ಕಾಂಗ್ರೆಸ್ ಮುಖಂಡ

ಇದು ಅಲ್ಪಸಂಖ್ಯಾತರನ್ನು ಬಹುಸಂಖ್ಯಾತರಿಂದ ಬೇರ್ಪಡಿಸುವುದಕ್ಕೆ ಕಾರಣವಾಗುತ್ತದೆ. ಇಂಥ ಯೋಜನೆಗಳಿಂದ ಏನು ಸುಧಾರಣೆ ಸಾಧ್ಯ ? ಸಿದ್ದರಾಮಯ್ಯನವರಿಗೆ ಇಂಥ ವಿಚಾರದಲ್ಲಿ ಬುದ್ಧಿ ಹೇಳುವವರು ಯಾರು ಇಲ್ಲವೇ ? ನನ್ನ ಪ್ರತಿಕ್ರಿಯೆ ಏನು ಹೇಳುವುದು. ಸುಮ್ಮನೆ ನಕ್ಕರು ಎಂದು ಬರೆದು ಬಿಡಿ.
-ಬೋಳುವಾರು ಮಹ್ಮದ್ ಕುಂಞ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.