ಪ್ರಧಾನ ಸುದ್ದಿ

ಅರಣ್ಯ ಚೆಕ್ ಪೋಸ್ಟ್ ಮೇಲೆ ನಕ್ಸಲರ ದಾಳಿ

Published On :

ಕ.ಪ್ರ. ವಾರ್ತೆ, ಶೃಂಗೇರಿ, ನ.18-
ಮಲೆನಾಡ ವ್ಯಾಪ್ತಿಯಲ್ಲಿ ಕಳೆದ ಬಹಳ ದಿನಗಳಿಂದ ಮೌನವಾಗಿದ್ದ ಕೆಂಪು ಉಗ್ರರು ಸಮೀಪದ ತನಿಕೋಡು ಅರಣ್ಯ ತಪಾಸಣೆ ಕೇಂದ್ರದ ಮೇಲೆ ಭಾನುವಾರ ರಾತ್ರಿ ದಾಳಿ ನಡೆಸಿ, ತಮ್ಮ ಚಟುವಟಿಕೆಗಳನ್ನು ಮುಂದುವರಿಸಿದ್ದಾರೆ.
ಎಂಟು ಮಂದಿ ಇದ್ದ ನಕ್ಸಲರ ತಂಡ ತಪಾಸಣಾ ಕೇಂದ್ರದ ದಾಳಿ ನಡೆಸಿ ಪೀಠೋಪಕರಣ ಧ್ವಂಸಗೊಳಿಸಿ, ಬ್ಯಾನರ್, ಕರಪತ್ರ ಅಂಟಿಸಿ ಪರಾರಿಯಾಗಿದ್ದಾರೆ.  ಇತ್ತೀಚೆಗೆ ಕೆರೆಕಟ್ಟೆಯಲ್ಲಿ ಜನಸ್ಪಂದನ ಸಭೆ ನಡೆದಿದ್ದು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಜಿಲ್ಲಾಧಿಕಾರಿಗಳು ಸೇರಿದಂತೆ ಉನ್ನತ ಅಧಿಕಾರಿಗಳು ಪಾಲ್ಗೊಂಡಿದ್ದರು. ಸ್ಥಳೀಯರು ಅರಣ್ಯ ಇಲಾಖೆ  ಅಧಿಕಾರಿಗಳ ದೌರ್ಜನ್ಯದ ವಿರುದ್ಧ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಸಭೆ ನಡೆದ ಬೆನ್ನಲ್ಲೇ ಈ ಘಟನೆಯೂ ನಡೆದಿರುವುದು ಸ್ಥಳೀಯರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ.

ಘಟನೆ ವಿವರ: ಭಾನುವಾರ ರಾತ್ರಿ ಸುಮಾರು 2 ಗಂಟೆಯ ವೇಳೆ ಏಳೆಂಟು ಮಂದಿಯ ನಕ್ಸಲರ ತಂಡ ಇಲ್ಲಿ ಬಂದಿದ್ದು, ತಪಾಸಣಾ ಕೇಂದ್ರದ ಮೇಲೆ 3 ಸುತ್ತು ಗುಂಡು ಹಾರಿಸಿದೆ. ಮೂವರು ಯುವತಿ, ಒಬ್ಬ  ಯುವಕ ತಪಾಸಣೆ ಕೇಂದ್ರಕ್ಕೆ ಬಂದರೆ ಉಳಿದವರು ಸಮೀಪದ ಕಾಡಿನಲ್ಲಿದ್ದರು ಎನ್ನಲಾಗಿದೆ. ಗುಂಡು ಹಾರಿಸಿದ್ದರಿಂದ ಹೆಂಚುಗಳೆಲ್ಲ ಒಡೆದಿವೆ. ಕೊಠಡಿಯೊಳಗೆ ನುಗ್ಗಿ ದಾಖಲೆ ಪತ್ರಗಳಿಗೆ ಬೆಂಕಿ ಹಚ್ಚಿದ್ದು, ಬ್ಯಾನರ್, ಕರಪತ್ರ ಅಂಟಿಸಿದ್ದಾರೆ. ಕಿಟಕಿ ಗಾಜು, ಸಿಸಿ ಕ್ಯಾಮೆರಾಗಳನ್ನು ಒಡೆದು ಹಾಕಿದ್ದು, ಟೇಬಲ್, ಕುರ್ಚಿಗಳನ್ನೂ ಧ್ವಂಸಗೊಳಿಸಿದ್ದಾರೆ.

ಶಸ್ತ್ರ ಸಜ್ಜಿತ ಯುವತಿ
ಸಿಬ್ಬಂದಿ ಬಳಿ ಶಸ್ತ್ರಸಜ್ಜಿತ ಯುವತಿ ಕಾವಲು ನಿಂತಿದ್ದಳು. ತಂಡದಲ್ಲಿದ್ದವರು ಕನ್ನಡ, ತುಳು ಮಾತನಾಡುತ್ತಿದ್ದರು. ನಂತರ ಘೋಷಣೆ ಕೂಗುತ್ತಾ ಕ್ರಾಂತಿಗೀತೆ ಹಾಡುತ್ತ ಕಾಡಿನೊಳಕ್ಕೆ ಪರಾರಿಯಾಗಿದ್ದಾರೆ. ಸುಮಾರು ಮೂರ್ನಾಲ್ಕು ಪುಟಗಳುಳ್ಳ ಕರಪತ್ರದಲ್ಲಿ ಅರಣ್ಯ, ಪೋಲೀಸ್ ಇಲಾಖೆ, ಸರ್ಕಾರ, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.