ಪ್ರಧಾನ ಸುದ್ದಿ

ಇದು ಪಕ್ಕಾ ತುಘಲಕ್ ದರ್ಬಾರ್, ನನ್ನ ಕೂಗಿಗೆ ಬೆಲೆ ಇಲ್ಲದಿದ್ದರೆ ಬೇಡ ಜನರ ಧ್ವನಿಗಾದರೂ ಮಾನ್ಯತೆ ಬೇಡವೆ?

ಇದು ಪಕ್ಕಾ ತುಘಲಕ್ ದರ್ಬಾರ್, ನನ್ನ ಕೂಗಿಗೆ ಬೆಲೆ ಇಲ್ಲದಿದ್ದರೆ ಬೇಡ ಜನರ ಧ್ವನಿಗಾದರೂ ಮಾನ್ಯತೆ ಬೇಡವೆ?
Published On :

ಕನ್ನಡಪ್ರಭ ವಾರ್ತೆ, ಬೆಂಗಳೂರು, ನ. 21-
ಸರ್ವಾಧಿಕಾರಿ ಧೋರಣೆ ಮುಂದವರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತುಘಲಕ್‌ಗೂ ಮೀರಿದ ದರ್ಬಾರ್ ನಡೆಸುತ್ತಿದ್ದಾರೆ...!
ಒಬ್ಬ ಮಾಜಿ ಮುಖ್ಯಮಂತ್ರಿ ಒಳ್ಳೆಯ ಉದ್ದೇಶಗಳನ್ನಿಟ್ಟುಕೊಂಡು, ಒಡೆದಾಳುವ ನೀತಿ ವಿರುದ್ಧ ಆಹೋರಾತ್ರಿ ಹೋರಾಟ ನಡೆಸುತ್ತಿದ್ದರೆ ಮಾಡಿಕೊಳ್ಳಲಿ ಬಿಡಿ ಎನ್ನುವ ಉದ್ದಟತನದಿಂದ ಮಾತನಾಡುತ್ತಿದ್ದಾರೆ. ನನ್ನ ಕೂಗಿಗೆ ಸ್ಪಂದಿಸದಿದ್ದರೂ ಪರವಾಗಿಲ್ಲ, ಜನರ ಕೂಗಿಗಾದರೂ ಸ್ಪಂದಿಸದಿದ್ದರೆ ಹೇಗೆ?
ಶಾದಿಭಾಗ್ಯ ಯೋಜನೆಯನ್ನು ಎಲ್ಲಾ ವರ್ಗದ ಬಡ ಹೆಣ್ಣು ಮಕ್ಕಳಿಗೂ ವಿಸ್ತರಿಸಬೇಕು ಮತ್ತು ಎಪಿಎಲ್ ಕಾರ್ಡ್‌ಗೂ ಪಡಿತರ ವಿತರಿಸಬೇಕು ಎಂದು ಆಗ್ರಹಿಸಿ 23 ದಿನಗಳಿಂದ ಆನಂದರಾವ್ ವೃತ್ತದ ಗಾಂಧಿ ಪ್ರತಿಮೆ ಎದುರು ಆಹೋರಾತ್ರಿ ಧರಣಿ ನಡೆಸುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಕ್ರೋಶದ ಮಾತುಗಳಿವು. ಸಂದರ್ಶನದಲ್ಲಿ ಹೇಳಿದ್ದಿಷ್ಟು.

ನನ್ನ ಬೇಡಿಕೆ
ನಾನು ಎರಡು ಪ್ರಮುಖ ಬೇಡಿಕೆ ಮುಂದಿಟ್ಟು ಹೋರಾಟ ನಡೆಸುತ್ತಿದ್ದೇನೆ. ಶಾದಿಭಾಗ್ಯ ಯೋಜನೆ ಎಲ್ಲರಿಗೂ ವಿಸ್ತರಿಸಬೇಕು ಎಂಬ ಬಗ್ಗೆ ಮಾತ್ರ ಹೆಚ್ಚು ಪ್ರಚಾರ ನೀಡಲಾಗುತ್ತದೆ. ಆದರೆ, ಎಪಿಎಲ್ ಕಾರ್ಡ್‌ಗೂ ಪಡಿತರ ವಿತರಿಸಬೇಕು ಎಂಬುದು ನನ್ನ ಪ್ರಮುಖ ಬೇಡಿಕೆ. ಅವರಿಗೆ ಪಡಿತರ ಸ್ಥಗಿತಗೊಳಿಸಿರುವುದು ಎಷ್ಟು ಸರಿ?  
ಬಿಪಿಎಲ್ ಕಾರ್ಡ್‌ಗೆ ಸಮರ್ಪಕ ಅಕ್ಕಿ ವಿತರಿಸುವ ಉದ್ದೇಶದಿಂದ ಎಪಿಎಲ್ ಕಾರ್ಡ್‌ಗೆ ಅಕ್ಕಿ ಸ್ಥಗಿತಗೊಳಿಸಲಾಗಿದೆ ಎಂದು ಸಿಎಂ ಹೇಳುತ್ತಾರೆ. ಎಪಿಎಲ್ ಕಾರ್ಡ್‌ದಾರರಲ್ಲೂ ಬಡವರಿದ್ದಾರೆ. ಅವರ ಆದಾಯ ಸ್ವಲ್ಪ ಹೆಚ್ಚಿರಬಹುದಷ್ಟೆ. ಹೀಗಾಗಿ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ, ಒಬ್ಬರಿಗೆ ಅಜೀರ್ಣವಾಗುವಷ್ಟು ಊಟ, ಇನ್ನೊಬ್ಬರು ಹಸಿವಿಂದ ಒದ್ದಾಡಬೇಕು ಎಂಬ ಸರ್ಕಾರದ ನಿಯಮ ಎಷ್ಟು ಸರಿ. ಇದನ್ನು ಏಕೆ ಸಿದ್ದರಾಮಯ್ಯ ಯೋಚಿಸುತ್ತಿಲ್ಲ.
ಬಿಜೆಪಿ ಸರ್ಕಾರದಲ್ಲಿ ಬಿಪಿಎಲ್ ಜತೆಗೆ ಎಪಿಎಲ್ ಕಾರ್ಡ್‌ದಾರರಿಗೂ ಅಕ್ಕಿ ವಿತರಿಸಲಾಗುತ್ತಿತ್ತು. ಆಗ ಕೇಂದ್ರ ಮಲತಾಯಿ ಧೋರಣೆ ಅನುಸರಿಸಿ ರಾಜ್ಯಕ್ಕೆ ಅಕ್ಕಿಯನ್ನೂ ಸರಿಯಾಗಿ ನೀಡುತ್ತಿರಲಿಲ್ಲ. ಆದರೆ, ಈಗ 2 ಕಡೆ ಅವರದ್ದೇ ಸರ್ಕಾರವಿದೆ. ಕೇಂದ್ರ ಬೇಕಾದಷ್ಟು ಅಕ್ಕಿ ನೀಡುತ್ತಿದೆ. ಹೀಗಿದ್ದರೂ ಎಪಿಎಲ್‌ಗೆ  ಅಕ್ಕಿ ಏಕೆ ವಿತರಿಸುತ್ತಿಲ್ಲ ಎಂಬುದಕ್ಕೆ ಸಿಎಂ ಉತ್ತರಿಸಬೇಕಿದೆ.

ತುಪ್ಪ ಸವರುವ ಕಾರ್ಯ
ಇನ್ನು ಶಾದಿಭಾಗ್ಯ ಯೋಜನೆ. ಒಂದು ಕಾರ್ಯಕ್ರಮ ಮಾಡಬೇಕಾದರೆ ಸಾಕಷ್ಟು ಯೋಚನೆ ಮಾಡಿ ನಿರ್ಧಾರ ಕೈಗೊಳ್ಳಬೇಕು. ಆರಂಭದಲ್ಲಿ ಶಾದಿಭಾಗ್ಯ ಎಂದು ಕರೆದು ಮುಸ್ಲಿಂ ಮಹಿಳೆಯರಿಗೆ ಮಾತ್ರ (ಸಾವಿರ ಮಂದಿಗೆ) ಮದುವೆ ವೇಳೆ ರು. 50 ಸಾವಿರ ಕೊಡುವುದಾಗಿ ಹೇಳಿ ರು. 5 ಕೋಟಿ ಇಟ್ಟಿದ್ದರು. ನಂತರ ಎಲ್ಲಾ ಅಲ್ಪಸಂಖ್ಯಾತರಿಗೂ ವಿಸ್ತರಿಸುವುದಾಗಿ ಹೇಳಿದರು. ಆದರೆ, ಸಂಖ್ಯೆಯನ್ನೂ ಹೆಚ್ಚಿಸಲಿಲ್ಲ. ಹಣವನ್ನೂ  ಹೆಚ್ಚುವರಿ  ನೀಡಲಿಲ್ಲ. ಬದಲಾಗಿ 400 ಮಂದಿ ಮುಸ್ಲಿಂ ಹೆಣ್ಣು ಮಕ್ಕಳಿಗೆ ಹಾಗೂ 600 ಇತರೆ ಅಲ್ಪಸಂಖ್ಯಾತ ಹೆಣ್ಣು ಮಕ್ಕಳಿಗೆ ಎಂದು ತೀರ್ಮಾನಿಸಲಾಯಿತು. ಯೋಜನೆಯನ್ನು ಎಲ್ಲಾ ವರ್ಗಕ್ಕೂ ವಿಸ್ತರಿಸಿ ಅದಕ್ಕೆ ರು. 25 ಕೋಟಿ ಅನುದಾನ ನೀಡುವ ಬದಲು ವೋಟ್‌ಬ್ಯಾಂಕ್ ರಾಜಕಾರಣಕ್ಕಾಗಿ ಮುಸ್ಲಿಮರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಾ ನಾವೇನೋ ದೊಡ್ಡ ಸಾಹಸ ಮಾಡುತ್ತಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ.
ಸರ್ಕಾರಕ್ಕೆ ಸಮಸ್ತ ಜನರ ಕಲ್ಯಾಣ ಆಸಕ್ತಿ ಇದ್ದರೆ ಶಾದಿಭಾಗ್ಯ ಎನ್ನುವ ಬದಲು ಮಾಂಗಲ್ಯ ಭಾಗ್ಯ ಇಲ್ಲವೇ ಕಲ್ಯಾಣ ಭಾಗ್ಯ ಎಂದು ಹೆಸರಿಡಬಹುದಿತ್ತು. ಇದು ಕರ್ನಾಟಕ. ಇಲ್ಲಿ ಕನ್ನಡದ ಹೆಸರಿನಲ್ಲಿ ಯೋಜನೆ ಆರಂಭಿಸಬೇಕು ಎಂಬ ಕನಿಷ್ಠ ಯೋಚನೆಯನ್ನೂ ಮಾಡಲಿಲ್ಲ. ಇದನ್ನು ಪ್ರಸ್ತಾಪಿಸಿದರೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಶಾದಿಭಾಗ್ಯ ಏಕೆ ಜಾರಿಗೆ ತರಲಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನಿಸುತ್ತಾರೆ. ಹಾಗಿದ್ದರೆ ಈ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಾರಿಗೆ ತಂದಿದ್ದ ಭಾಗ್ಯಲಕ್ಷ್ಮಿ ಯೋಜನೆ, ಸಂಧ್ಯಾ ಸುರಕ್ಷಾ, ದೇವದಾಸಿಯರಿಗೆ ಮಾಸಾಶನ, ಸುವರ್ಣಭೂಮಿ ಮುಂತಾದ ಯೋಜನೆಗಳನ್ನು ಹಿಂದೆ ಸಿದ್ದರಾಮಯ್ಯ ಹಣಕಾಸು ಸಚಿವರಾಗಿದ್ದಾಗ ಏಕೆ ಜಾರಿಗೆ ತರಲಿಲ್ಲ ಎಂದು ನಾನು ಕೇಳಬೇಕಾಗುತ್ತದೆ.

ಸರ್ವಾಧಿಕಾರಿ ಧೋರಣೆ
ಸಿದ್ದರಾಮಯ್ಯ ಜಾರಿಗೆ ತರುತ್ತಿರುವ ಕಾರ್ಯಕ್ರಮಗಳ ಬಗ್ಗೆ ಸಚಿವ ಸಂಪುಟ ಸದಸ್ಯರಿಗೇ ಗೊತ್ತಿಲ್ಲ. ಏಕೆಂದರೆ, ನಾನು ಎನ್ನುವ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿರುವ ಅವರು ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತಿ ್ತಲ್ಲ. ಪ್ರತಿಪಕ್ಷಗಳ ಬಗ್ಗೆಯೂ ಅವರು ಕಾಳಜಿ ವಹಿಸುತ್ತಿಲ್ಲ. ಒಬ್ಬ ಮಾಜಿ ಮುಖ್ಯಮಂತ್ರಿ ಹೋರಾಟ ನಡೆಸುತ್ತಿದ್ದರೆ ಅವರ ವಿರುದ್ಧ ಠೇಂಕಾರದ ಮಾತುಗಳನ್ನಾಡುತ್ತಾ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಇದನ್ನು ನೋಡಿದಾಗ ತುಘಲಕ್‌ಗೆ ಮೀರಿದ ದರ್ಬಾರ್ ನಡೆಸುವಂತೆ ಕಾಣಿಸುತ್ತಿದೆ. ಕಾಂಗ್ರೆಸ್ ಎರಡು ಭಾಗವಾಗಿದೆ. ಸಿದ್ದರಾಮಯ್ಯ ನೇತೃತ್ವದ ಟೀಂ ಒಂದೆಡೆಯಾದರೆ, ಮೂಲ ಕಾಂಗ್ರೆಸಿಗರದ್ದು ಇನ್ನೊಂದು ಟೀಂ. ಇವರಿಬ್ಬರ ಹೊಯ್ದಾಟದಿಂದ ಜನರ ಪರಿಸ್ಥಿತಿ 'ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು' ಎನ್ನುವಂತಾಗಿದೆ.

ಅಭಿವೃದ್ಧಿಗೆ ಆದ್ಯತೆ ನೀಡಿ

ಜನರ ಆಚಾರ, ವಿಚಾರ, ನಂಬಿಕೆಗಳಿಗೆ ಕೂಡ ತಿಲಾಂಜಲಿ ಇಡಲು ಸರ್ಕಾರ ಮುಂದಾಗಿತ್ತು. ಹೋರಾಟದ ಪರಿಣಾಮ ಅದನ್ನು ಕೈಬಿಡಲಾಯಿತು. ಶಾಲಾ ಪ್ರವಾಸ ವಿಚಾರದಲ್ಲೂ ಇಬ್ಬಗೆ ನೀತಿ ಅನುಸರಿಸಿತು. ಅಭಿವೃದ್ಧಿಪರ ಆಡಳಿತ ಕೊಡುವುದನ್ನು ಬಿಟ್ಟು ಇಂತಹ ಕೀಳು ಮಟ್ಟದ, ಜನರನ್ನು ಜಾತಿ, ಧರ್ಮದ ಮೇಲೆ ವಿಭಜಿಸಿ ಸಾಮರಸ್ಯ ಹಾಳು ಮಾಡುವ ಆಡಳಿತ ನೀಡುವುದು ಸರಿಯೇ? ಇನ್ನು ರಾಜ್ಯಾದ್ಯಂತ ಅಭಿವೃದ್ಧಿ ಸ್ಥಗಿತಗೊಂಡಿದೆ. ಕಳೆದ ಆರು ತಿಂಗಳಲ್ಲಿ ಎಲ್ಲೂ ಐದು ಕಿಲೋಮೀಟರ್ ರಸ್ತೆ ಅಭಿವೃದ್ಧಿಪಡಿಸಿದ್ದು ಕಾಣುತ್ತಿಲ್ಲ. ತೆರಿಗೆ ಸಂಗ್ರಹದಲ್ಲಿ ಸರ್ಕಾರ ವಿಫಲವಾಗಿದೆ. ಹೊಸ ಕಾರ್ಯಕ್ರಮಗಳು ಜಾರಿಯಾಗುತ್ತಿಲ್ಲ. ಹಿಂದಿನ ಸರ್ಕಾರ ಜಾರಿಗೆ ತಂದಿದ್ದ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡದೆ ಎಲ್ಲವೂ ಸ್ಥಗಿತಗೊಂಡಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಇದೆಲ್ಲವೂ ಸಿದ್ದರಾಮಯ್ಯಗೆ ಕಾಣಿಸುತ್ತಿಲ್ಲವೇ?

ಪ್ರಜಾಪ್ರಭುತ್ವದಲ್ಲಿ ಹೋರಾಟದ ಉದ್ದೇಶ ಆಗಿಯೇ ಬಿಡುತ್ತದೆ ಎಂಬುದಲ್ಲ. ಅದು ಪ್ರತಿಪಕ್ಷಗಳ ಕರ್ತವ್ಯ.  ನನ್ನ ಹೋರಾಟಕ್ಕೆ ಮಣಿದು ಸರ್ಕಾರ ಯೋಜನೆ ರದ್ದುಗೊಳಿಸುತ್ತದೆ ಎಂದು ಭಾವಿಸಿಲ್ಲ. ಮುಂದೆ ಸರ್ಕಾರ ಈ ರೀತಿ ಸಮಾಜವನ್ನು ಒಡೆಯುವ ಕಾರ್ಯಕ್ರಮಗಳನ್ನು ಪ್ರಕಟಿಸದಂತೆ ಎಚ್ಚರಿಸಲು ಹೋರಾಡುತ್ತಿದ್ದೇನೆ.

ನ. 24ರವರೆಗೆ ಬೆಂಗಳೂರಿನಲ್ಲೇ ಧರಣಿ ನಡೆಸುತ್ತೇನೆ. ನ. 25ರಿಂದ ಬೆಳಗಾವಿ ಅಧಿವೇಶನದಲ್ಲಿ ಧರಣಿ ಮುಂದುವರಿಸುತ್ತೇನೆ. ಅಷ್ಟಾದರೂ ಸರ್ಕಾರ ನಿರ್ಧಾರ ಬದಲಿಸದಿದ್ದಲ್ಲಿ ಮುಂದೆ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಸರ್ಕಾರದ ಜನವಿರೋಧಿ ನೀತಿಗಳ ಬಗ್ಗೆ ಜನಜಾಗೃತಿ ಮೂಡಿಸುತ್ತೇನೆ. ಜನರನ್ನು ಒಟ್ಟುಗೂಡಿಸಿ ಹೋರಾಟ ಮುಂದುವರಿಸುತ್ತೇನೆ.
- ಬಿಎಸ್ ಯಡಿಯೂರಪ್ಪ, ಕೆಜೆಪಿ ಅಧ್ಯಕ್ಷ

- ಪ್ರದೀಪ್ ಕುಮಾರ್ ಎಂ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.